ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆ: ಅಥಣಿ, ಗೋಕಾಕ: ಬಿಜೆಪಿಗೆ ಭಿನ್ನಮತದ ‘ಬಿಸಿ’

ಉಪಮುಖ್ಯಮಂತ್ರಿ ಸವದಿ ಬೆಂಬಲಿಗರಿಂದ ಬಿಜೆಪಿಗೆ ಸವಾಲು!
Last Updated 1 ಡಿಸೆಂಬರ್ 2019, 11:30 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಅಥಣಿ ಮತ್ತು ಗೋಕಾಕ ಮತ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಭಿನ್ನಮತದ‌ ‘ಕಾವು’ ತಟ್ಟಿದೆ.

ಅಥಣಿಯಲ್ಲಿ ಉಪಮುಖ್ಯಮಂತ್ರಿಯೂ ಆಗಿರುವ ಲಕ್ಷ್ಮಣ ಸವದಿಗೆ ಅವರಿಗೆ ಟಿಕೆಟ್‌ ಕೊಡದಿರುವುದಕ್ಕೆ ಅವರ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ಸಿಟ್ಟಾಗಿದ್ದಾರೆ. ‘ಸವದಿಯಲ್ಲದೇ ಬೇರಾರನ್ನೂ ನಾವು ಬೆಂಬಲಿಸುವುದಿಲ್ಲ’ ಎಂದು ಅವರು ಘೋಷಿಸಿರುವುದು ಅನರ್ಹ ಶಾಸಕ ಮತ್ತು ಅಲ್ಲಿನ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಸೇರಿದಂತೆ ಪಕ್ಷದ ವರಿಷ್ಠರ ತಲೆನೋವಿಗೆ ಕಾರಣವಾಗಿದೆ. ಸವದಿ ಬೆಂಬಲಿಗರಲ್ಲಿ ಕೆಲವರು ಕುಮಠಳ್ಳಿ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲೂ ಕಿಡಿಕಾರುತ್ತಿದ್ದಾರೆ.

ತಮ್ಮ ವಿರುದ್ಧದ ಬೆಳವಣಿಗೆಗಳಿಂದ ಬೆದರಿದ ಕುಮಠಳ್ಳಿ ಭಾನುವಾರ ಕರೆದಿದ್ದ ಚುನಾವಣಾ ಪೂರ್ವಭಾವಿ ಸಭೆಯಲ್ಲೂ ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಗುರಿಯಾಗಬೇಕಾಯಿತು. ನಾಮಪತ್ರ ಸಲ್ಲಿಕೆಗೆ ಮುನ್ನಾದಿನ ನಡೆದ ಈ ‘ಅಹಿತಕರ’ ಘಟನೆಯಿಂದಾಗಿ ಉಸ್ತುವಾರಿಗಳಾದ ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿ, ವಿಧಾನಪರಿಷತ್‌ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ತಾಂಡಾ ಅಭಿವೃದ್ಧಿ ನಿಗಮದ ಆಧ್ಯಕ್ಷ ಪಿ. ರಾಜೀವ್‌, ರಾಯಬಾಗ ಶಾಸಕ ಡಿ.ಎಂ. ಐಹೊಳೆ ಮೊದಲಾದವರು ಮುಜುಗರ ಅನುಭವಿಸಬೇಕಾಯಿತು. ಇದರೊಂದಿಗೆ, ಕ್ಷೇತ್ರದಲ್ಲಿ ಭಿನ್ನಮತದ ‘ಬಿಸಿ’ ಇನ್ನೂ ಆರಿಲ್ಲ ಎನ್ನುವ ಸಂದೇಶ ವ್ಯಕ್ತವಾಗಿದೆ.

ಸವದಿ ಮನೆಗೆ ಮುತ್ತಿಗೆ

ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳದಂತೆ ಆಗ್ರಹಿಸಿ ಬೆಂಬಲಿಗರು ಅಥಣಿಯಲ್ಲಿನ ಸವದಿ ಮನೆಗೆ ಮುತ್ತಿಗೆ ಹಾಕಿದ್ದರು. ಸವದಿ ಅವರನ್ನು ಕರೆತರಲು ಬಂದಿದ್ದ ಶೆಟ್ಟರ್‌, ಕವಟಗಿಮಠ, ಪಿ. ರಾಜೀವ್ ಅವರನ್ನು ಕೂಡ ಆಕ್ರೋಶಕ್ಕೆ ತುತ್ತಾದರು. ಬಳಿಕ ನಡೆದ ಸಭೆಯಲ್ಲೂ ಬೆಂಬಲಿಗರು ಸವದಿಗೇ ಟಿಕೆಟ್‌ ಕೊಡುವಂತೆ ಆಗ್ರಹ ಮಂಡಿಸಿದರು.

‘ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬಾಯಿಗೆ ಬಂದಂತೆ ಬೈದವರಿಗೆ ನಾವು ಹೇಗೆ ಮತ ಹಾಕೋಣ. ಸವದಿ ಅವರಿಗಷ್ಟೇ ನಮ್ಮ ಬೆಂಬಲವಿದೆ. ಮಹೇಶ ಕುಮಠಳ್ಳಿ ಅವರನ್ನು ಯಾವುದೇ ಕಾರಣಕ್ಕೂ ಬೆಂಬಲಿಸುವುದಿಲ್ಲ. ಮುಂದಿನ ಬೆಳವಣಿಗೆಗಳಿಗೆ ವರಿಷ್ಠರೇ ಹೊಣೆ ಆಗಬೇಕಾಗುತ್ತದೆ’ ಎಂದೂ ಸವದಿ ಬೆಂಬಲಿಗರು ಎಚ್ಚರಿಕೆ ನೀಡಿದರು.

ಶಮನವಾಗದ ಭಿನ್ನಮತ

ನನ್ನ ಮೇಲೆ ಗೌರವವಿದ್ದರೆ ಸುಮ್ಮನಿರಿ’ ಎಂಬ ಸವದಿ ಮನವಿಗೂ ಜಗ್ಗದ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಕೆಲವು ಕಾರ್ಯಕರ್ತರು ಅವರ ಕಾಲಿಗೆ ಬಿದ್ದು ಸ್ಪರ್ಧಿಸುವಂತೆ ಕೋರಿ ಸಭೆಯಿಂದ ಹೊರನಡೆದಿದ್ದಾರೆ. ಬಳಿಕ ಮಹೇಶ ಕುಮಠಳ್ಳಿ ತಮ್ಮ ಬೆಂಬಲಿಗರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಚರ್ಚಿಸಿದ್ದಾರೆ. ಹೀಗಾಗಿ, ಭಿನ್ನಮತ ಶಮನಕ್ಕೆ ಮುಖಂಡರು ಹರಸಾಹಸಪಡಬೇಕಾಗಿದೆ. ಉಪಮುಖ್ಯಮಂತ್ರಿಗೂ ಇದು ಸವಾಲಾಗಿ ಪರಿಗಣಮಿಸಿದೆ.

ಗೋಕಾಕದಲ್ಲಿಪಕ್ಷದ ಮುಖಂಡ ಅಶೋಕ ಪೂಜಾರಿ ಬಂಡಾಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಬಿಜೆಪಿ ಮುಖಂಡರಲ್ಲಿ ತಲೆನೋವು ತರಿಸಿದೆ. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಅಭ್ಯರ್ಥಿ ರಮೇಶ ಜಾರಕಿಹೊಳಿ, ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮೊದಲಾದವರ ಮನವೊಲಿಕೆ ಕಸರತ್ತು ಫಲ ನೀಡಿಲ್ಲ. ಯಡಿಯೂರಪ್ಪ ಮನವಿಗೂ ಸ್ಪಂದಿಸಿಲ್ಲ. ‘ನೀವು ಸ್ಪರ್ಧಿಸಲೇ ಬೇಕು’ ಎಂದು ಆಗ್ರಹಿಸಿ ಬೆಂಬಲಿಗರು ಅವರ ಮನೆ ಆವರಣದಲ್ಲಿ ಧರಣಿಯನ್ನೂ ನಡೆಸಿದ್ದಾರೆ. ಪೂಜಾರಿ ಕೊನೆ ಕ್ಷಣದಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

ನಮ್ಮ ಗೇಮ್‌ಪ್ಲಾನ್‌ ಕಣದಲ್ಲೇ ನೋಡಿ: ಲಖನ್‌

‘ಗೋಕಾಕ ಕ್ಷೇತ್ರದ ರಾಜಕಾರಣವೇ ಬೇರೆ. ಇದು ಪರೀಕ್ಷೆ ಇದ್ದಂತೆ. 25 ವರ್ಷಗಳಿಂದ ರಮೇಶ ಜೊತೆ ಇಲ್ಲಿ ರಾಜಕಾರಣ ಮಾಡುತ್ತಿದ್ದೆ. ನಮ್ಮ ತಂತ್ರಗಳು ಅವರಿಗೆ ಗೊತ್ತಿವೆ. ಹೀಗಾಗಿ, ಎಲ್ಲವನ್ನೂ ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಲಖನ್‌ ಜಾರಕಿಹೊಳಿ ತಿಳಿಸಿದರು.

ಗೋಕಾಕದಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಇಲ್ಲಿನದು ತಾಂತ್ರಿಕ ರಾಜಕಾರಣ. ಬೇರೆಯವರು ಬಂದು ಇಲ್ಲಿ ರಾಜಕಾರಣ ಮಾಡಲಾಗದು. ಹೊಂದಾಣಿಕೆ ರಾಜಕಾರಣ ಇಲ್ಲಿಲ್ಲ. ಹೇಗೆ ನಡೆಸಬೇಕು ಎನ್ನುವುದು ನನಗೂ, ಸತೀಶ ಜಾರಕಿಹೊಳಿಗೂ ಗೊತ್ತಿದೆ’ ಎಂದರು.

‘ನಮ್ಮಿಂದ ‍ಪ್ರಚೋದನಾಕಾರಿ ಹೇಳಿಕೆ ಕೊಡಿಸಿ ವಿರೋಧಪಕ್ಷದವರು ಅದನ್ನೇ ಬಳಸಿಕೊಳ್ಳುತ್ತಾರೆ. ಹೀಗಾಗಿ, ನಮ್ಮ ಗೇಮ್‌ಪ್ಲಾನ್‌ ಏನು ಎನ್ನುವುದನ್ನು ಹೇಳುವುದಿಲ್ಲ; ಕಣದಲ್ಲೇ ನೋಡಿ’ ಎಂದು ಹೇಳಿದರು.

‘ಮಾರುಕಟ್ಟೆಗೆ ತಕ್ಕಂತೆ ಬಣ್ಣ ಬದಲಿಸಿದ’

‘ರಮೇಶ, ಡಿ.ಕೆ. ಶಿವಕುಮಾರ್‌ ಹಾಗೂ ಲಕ್ಷ್ಮಿ ಒಂದೇ ಗುಂಪಿನಲ್ಲಿದ್ದರು. ಆಂತರಿಕ ಜಗಳದಿಂದ ರಮೇಶ ಹೊರಬಂದ. ಈಗಿನ ಮಾರುಕಟ್ಟೆಗೆ ತಕ್ಕಂತೆ ಎಚ್. ವಿಶ್ವನಾಥ್ ನನ್ನ ಗುರು ಎನ್ನುತ್ತಿದ್ದಾನೆ’ ಎಂದು ಶಾಸಕ ಸತೀಶ್‌ ಜಾರಕಿಹೊಳಿ ವ್ಯಂಗ್ಯವಾಡಿದರು.

ಗೋಕಾಕದಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿ, ‘ಹಿಂದೆ ಎಚ್‌.ಕೆ. ಪಾಟೀಲ, ಎಸ್‌.ಎಂ. ಕೃಷ್ಣ, ಸಿದ್ದರಾಮಯ್ಯ ಎಂದಿದ್ದ. ಬಳಿಕ ಡಿಕೆಶಿ ಆಪ್ತ ನಾಯಕ ಎಂದು ಹೇಳಿದ್ದ. 2–3 ವರ್ಷಗಳ ಹಿಂದೆ ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿ ಮಾಡಲು ಹೊರಟಿದ್ದರು’ ಎಂದು ತಿಳಿಸಿದರು.

‘ರಮೇಶನ ಮಿದುಳು ಖಾಲಿಯಾಗಿದೆ. ಮೊಬೈಲ್‌ನಂತೆ ಹ್ಯಾಂಗ್ ಆಗುತ್ತಿರುತ್ತದೆ. 25 ವರ್ಷ ಆತನೂ ಕೈಚೀಲ ಹಿಡಿದಿದ್ದಾನೆ. ರಾಜಕೀಯವಾಗಿ ಬೆಳೆಯಲು ಗಾಡ್ ಫಾದರ್ ಬೇಕೇ ಬೇಕು. ಎಲ್ಲ ಪಕ್ಷಗಳಲ್ಲೂ ಸ್ವಾಮಿ ನಿಷ್ಠೆ ಬೇಕು. ಇದು ಚಮಚಾಗಿರಿ ಅಲ್ಲ. ರಮೇಶ ಕೂಡ ಶಂಕರಾನಂದರ ಕೈಚೀಲ ಹಿಡಿದು ಓಡಾಡಿದ್ದ’ ಎಂದು ತಿರುಗೇಟು ನೀಡಿದರು.

‘ಲಕ್ಷ್ಮಿಯನ್ನು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಮಾಡುವಂತೆ ಲಾಬಿ ನಡೆಸಿದ್ದು, ಶಿಫಾರಸು ಮಾಡಿದ್ದೇ ರಮೇಶ. ಈಗ ನನ್ನ ಮೇಲೆ ಹಾಕುತ್ತಿದ್ದಾನೆ. ಸುಳ್ಳು ಹೇಳುವುದರಲ್ಲಿ ಪಿಎಚ್‌.ಡಿ ಮಾಡಿದ್ದಾನೆ’ ಎಂದರು.

ಇನ್ಮುಂದೆ ಲಕ್ಷ್ಮಿ ಮನೆಗೆ ಹೋಗುತ್ತೇನೆ: ‘ಲಕ್ಷ್ಮಿ ಮನೆಗೆ ಹಿಂದೆ ಚಹಾ ಕುಡಿಯಲು ಹೋಗುತ್ತಿದ್ದುದು ನಿಜ. ಇತ್ತೀಚೆಗೆ ಹೋಗಿಲ್ಲ. ಅವರು ಗೋಕಾಕ ಕ್ಷೇತ್ರದ ಉಸ್ತುವಾರಿ ಇದ್ದಾರೆ. ಚಹಾ, ಊಟ ಸೇರಿ ಎಲ್ಲದಕ್ಕೂ ಅವರ ಮನೆಗೆ ಇನ್ಮುಂದೆ ಹೋಗುತ್ತೇನೆ. ಲಕ್ಷ್ಮಿ ಮತ್ತು ಡಿಕೆಶಿ ಜೊತೆಗೆ ವೈಯಕ್ತಿಕವಾಗಿ ವಿರೋಧ ಇರಲಿಲ್ಲ. ಆದರೆ, ಈ ಹುಚ್ಚನನ್ನು (ರಮೇಶ) ಮಂತ್ರಿ ಮಾಡಿದ್ದಕ್ಕೆ ಜಗಳವಾಡುತ್ತಿದ್ದೆ’ ಎಂದರು.

‘ಕಾಲೇಜಿನಲ್ಲಿದ್ದಾಗಿನಿಂದಲೂ ರಮೇಶ ಸ್ವಾರ್ಥಿ. ಈಗ ಬೇರೆ ಪಕ್ಷವಾದ್ದರಿಂದ ಇನ್ನೂ ಹೆಚ್ಚು ವಿರೋಧಿಸುತ್ತೇನೆ. ಪ್ರಚಾರಕ್ಕೆ ಲಕ್ಷ್ಮಿ, ಡಿ.ಕೆ. ಶಿವಕುಮಾರ್ ಕರೆಸುತ್ತೇನೆ. ರಮೇಶ ಮಾಡಿದ್ದೆಲ್ಲ ಅವರಿಂದಲೂ
ಹೇಳಿಸಬೇಕಲ್ಲವೇ?’ ಎಂದು ಕೇಳಿದರು.

ಯಡಿಯೂರಪ್ಪ ಅವರನ್ನು ಯಾವ ಗುಂಡಿಗೆ ಹಾಕುತ್ತಾನೋ?: ‘ಕಾಂಗ್ರೆಸ್‌ ಪಕ್ಷ, ಮತದಾರರು ಹಾಗೂ ಲಖನ್‌ ಬೆನ್ನಿಗೆ ಚೂರಿ ಹಾಕಿದ್ದು ರಮೇಶನೇ ಹೊರತು ನಾವಲ್ಲ. ಈಗ ಯಡಿಯೂರಪ್ಪ ಅವರನ್ನು ಯಾವ
ಗುಂಡಿಗೆ ಹಾಕುತ್ತಾನೋ ಗೊತ್ತಿಲ್ಲ. ಗೋಕಾಕವೆಂದರೆ ಬಿಹಾರ ಎನ್ನುತ್ತಿದ್ದ ರೈಲ್ವೆ ಖಾತೆ ರಾಜ್ಯ ಸಚಿವ
ಸುರೇಶ ಅಂಗಡಿ, ಈಗ ರಮೇಶ ಪರ ಪ್ರಚಾರಕ್ಕೆ ಬಂದಿದ್ದಾರೆ. ಈಗ ಗೋಕಾಕ ಬದಲಾಯಿತೇ?’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT