ಮಂಗಳವಾರ, ಜನವರಿ 28, 2020
19 °C
ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಪಡುತ್ತಿರುವ ಪೊಲೀಸ್‌ ಇಲಾಖೆ

ಮಂಗಳೂರು: ಇನ್ನೂ ಬೂದಿಮುಚ್ಚಿದ ಕೆಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಗುರುವಾರ ನಡೆದ ಪ್ರತಿಭಟನೆ ವೇಳೆ ಪೊಲೀಸ್‌ ಗೋಲಿ
ಬಾರ್‌ನಲ್ಲಿ ಇಬ್ಬರು ಮೃತಪಟ್ಟ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಂಟರ್‌ನೆಟ್‌ ಸೇವೆ ಸ್ಥಗಿತಗೊಳಿಸಲಾಗಿದೆ. ಶುಕ್ರವಾರ ಕೆಲವೆಡೆ ಬಸ್‌ಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಕರ್ಫ್ಯೂ ಹೇರಿದ್ದು, ಮಂಗಳೂರು ಬೂದಿಮುಚ್ಚಿದ ಕೆಂಡದಂತಾಗಿದೆ.

ನಗರದ ಐದು ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿದ್ದ ಕರ್ಫ್ಯೂವನ್ನು ಮಂಗಳೂರು ನಗರ ಪೊಲೀಸ್‌ ಕಮಿಷ
ನರೇಟ್‌ ವ್ಯಾಪ್ತಿಯ ಎಲ್ಲ ಪ್ರದೇಶಗಳಲ್ಲೂ ಭಾನುವಾರ ಮಧ್ಯರಾತ್ರಿಯವರೆಗೂ ವಿಸ್ತರಿಸಲಾಗಿದೆ. ಕರ್ಫ್ಯೂ ಕಾರಣದಿಂದ ಇಡೀ ನಗರದ ಜನಜೀವನ ಶುಕ್ರವಾರ ಸ್ತಬ್ಧಗೊಂಡಿತ್ತು. ಮೊದಲ ದಿನವೇ ಅಗತ್ಯ ವಸ್ತುಗಳ ಪೂರೈಕೆಯಲ್ಲೂ ವ್ಯತ್ಯಯವಾಗಿದ್ದು, ಜನರು ಭೀತಿಯಲ್ಲೇ ಬದುಕುವಂತಾಗಿದೆ.

ಬೆಳಿಗ್ಗೆಯಿಂದಲೇ ಮಂಗಳೂರಿನ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಬಸ್‌ ಸಂಚಾರ ಸಂಪೂರ್ಣವಾಗಿ ಸ್ಥಗಿತವಾ
ಗಿದೆ. ಆಟೊ ಸಂಚಾರವೂ ಇಲ್ಲ. ಬೆಳಿಗ್ಗೆಯೇ ಕೆಲವರ ಮೇಲೆ ಪೊಲೀಸರು ಲಾಠಿ ಬೀಸಿದ್ದರಿಂದ, ಜನರು ರಸ್ತೆಗೆ ಇಳಿಯಲು ಹೆದರಿದರು.

ಆಸ್ಪತ್ರೆಗಳು ಮತ್ತು ಕೆಲವು ಔಷಧಿ ಮಳಿಗೆಗಳು ತೆರೆದಿದ್ದವು. ಕೆಲವು ಅಂಗಡಿಗಳು ಬೆಳಿಗ್ಗೆ ತೆರೆದಿದ್ದವು. ಆದರೆ, ಗಸ್ತು ತಿರುಗುತ್ತಿದ್ದ ಪೊಲೀಸರು ಬಾಗಿಲು ಮುಚ್ಚಿಸಿದರು.ಹಾಲು ಪೂರೈಕೆಯಲ್ಲೂ ವ್ಯತ್ಯಯ ಉಂಟಾಯಿತು.

ಬೆಳಿಗ್ಗೆ ಹೊರ ಊರುಗಳಿಂದ ಬಸ್‌ ಮತ್ತು ರೈಲಿನಲ್ಲಿ ಬಂದಿಳಿದ ಪ್ರಯಾಣಿಕರು ಕರ್ಫ್ಯೂ ಜಾರಿಯಿಂದಾಗಿ ತೀವ್ರ ತೊಂದರೆ ಅನುಭವಿಸಿದರು. ಬಸ್‌ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಹೊರ ಹೋಗಲು ವಾಹನಗಳಿಲ್ಲದೇ ನಿಂತಿದ್ದ ಜನರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಕೆಲವರು ದಿನವಿಡೀ ಬಸ್‌ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಕುಳಿತೇ ಇದ್ದರು.

ಬಸ್‌ಗಳ ಮೇಲೆ ಕಲ್ಲು: ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿ, ಕುಪ್ಪೆಟ್ಟಿ ಮತ್ತು ಬೆಳ್ತಂಗಡಿ ತಾಲ್ಲೂಕಿನ ಪೂಂಜಾಲಕಟ್ಟೆ ಬಳಿ ಬಸ್‌ಗಳ ಮೇಲೆ ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ. ಉಳಿದಂತೆ ಜಿಲ್ಲೆಯ ಯಾವುದೇ ಪ್ರದೇಶದಲ್ಲೂ ಅಹಿತಕರ ಘಟನೆಗಳು ನಡೆದಿಲ್ಲ. ಜಿಲ್ಲೆಯ ಗಡಿ ಭಾಗಗಳಲ್ಲಿ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.

ಶಾಲೆಗಳಿಗೆ ರಜೆ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಚಿಕ್ಕಮಗಳೂರು ಹಾಗೂ ಕೊಡಗಿನಲ್ಲೂ ಇಂಟರ್‌ನೆಟ್‌ ಸೇವೆಯಲ್ಲಿ ಭಾಗಶಃ ವ್ಯತ್ಯಯ ಉಂಟಾಗಿತ್ತು. ಶನಿವಾರವೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪರಿಸ್ಥಿತಿ ಅವಲೋಕನಕ್ಕಾಗಿ ಶನಿವಾರ ಬೆಳಿಗ್ಗೆ ಮಂಗಳೂರಿಗೆ ಭೇಟಿ ನೀಡಲಿದ್ದಾರೆ.

ಎರಡು ಗಂಟೆ ಸಡಿಲಿಕೆ: ಜುಮಾ ನಮಾಜ್‌ಗಾಗಿ ಮಧ್ಯಾಹ್ನ 12ರಿಂದ 2 ಗಂಟೆಯವರೆಗೆ ಕರ್ಫ್ಯೂ ಸಡಿಲಿಸಲಾಗಿತ್ತು. ಈ ಅವಧಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದು, ಹೋಗುವುದಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಬಿಗಿ ಭದ್ರತೆಯಲ್ಲಿ ಅಂತ್ಯಸಂಸ್ಕಾರ: ಗೋಲಿಬಾರ್‌ನಲ್ಲಿ ಮೃತಪಟ್ಟಿದ್ದ ಅಬ್ದುಲ್‌ ಜಲೀಲ್‌ (47) ಮತ್ತು ನೌಶೀನ್‌ (23) ಅವರ ಮೃತದೇಹಗಳನ್ನು ಬಿಗಿ ಭದ್ರತೆಯಲ್ಲಿ ಬೆಳಿಗ್ಗೆ ವೆನ್ಲಾಕ್‌ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ನಂತರ ಭಾರಿ ಪೊಲೀಸ್‌ ಭದ್ರತೆಯಲ್ಲೇ ಪಾರ್ಥಿವ ಶರೀರಗಳ ಅಂತ್ಯಕ್ರಿಯೆಯನ್ನೂ ನಡೆಸಲಾಯಿತು.

ಇಬ್ಬರ ಸ್ಥಿತಿ ಗಂಭೀರ: ಮಂಗಳೂರು ಉತ್ತರ (ಬಂದರು) ಪೊಲೀಸ್‌ ಠಾಣೆ ಸಮೀಪ ನಡೆದ ಗೋಲಿಬಾರ್‌ನಲ್ಲಿ ಒಟ್ಟು 11 ಮಂದಿಗೆ ಗುಂಡೇಟು ಬಿದ್ದಿತ್ತು. ಈ ಪೈಕಿ ಇಬ್ಬರು ಮೃತಪಟ್ಟಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ. ಏಳು ಮಂದಿ ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕೇರಳದ ಪತ್ರಕರ್ತರು ವಶಕ್ಕೆ: ಗೋಲಿಬಾರ್‌ ಮತ್ತು ನಂತರದ ಘಟನೆಗಳನ್ನು ವರದಿ ಮಾಡಲು ಬೆಳಿಗ್ಗೆಯೇ ನಗರಕ್ಕೆ ಬಂದಿದ್ದ ಕೇರಳದ ಹಲವು ಪತ್ರಕರ್ತರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಇಡೀ ದಿನ ತಮ್ಮ ಸುಪರ್ದಿಯಲ್ಲೇ ಇರಿಸಿಕೊಂಡಿದ್ದರು.

ನಂತರ ಸರ್ಕಾರದಿಂದ ನೀಡುವ ಮಾಧ್ಯಮ ಮಾನ್ಯತಾ ಚೀಟಿ ಹಾಜರುಪಡಿಸುವಂತೆ ಎಲ್ಲರಿಗೂ ಸೂಚಿಸಲಾ
ಯಿತು. ದಾಖಲೆ ಹಾಜರುಪಡಿಸಿದವರನ್ನು ಬಿಡುಗಡೆ ಮಾಡಿದರು.

 ಕಾಂಗ್ರೆಸ್  ಮುಖಂಡರಿಗೆ ದಿಗ್ಬಂಧನ

ಮೃತರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಲು ಶುಕ್ರವಾರ ಬೆಳಿಗ್ಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ್‌ ನೇತೃತ್ವದ ಕಾಂಗ್ರೆಸ್‌ ಮುಖಂಡರ ನಿಯೋಗವನ್ನು ಅಲ್ಲಿಯೇ ತಡೆದ ಪೊಲೀಸರು, ದಿಗ್ಬಂಧನ ವಿಧಿಸಿದರು.

ಬೆಳಿಗ್ಗೆ 11 ಗಂಟೆ ಸುಮಾರಿಗೆ ಬಂದಿಳಿದ ಎಸ್‌.ಆರ್‌.ಪಾಟೀಲ್‌, ಶಾಸಕರಾದ ಕೆ.ಆರ್‌. ರಮೇಶ್‌ಕುಮಾರ್‌, ಎಂ.ಬಿ.ಪಾಟೀಲ್‌, ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ, ಮಾಜಿ ಸಚಿವ ಬಸವರಾಜ ರಾಯರೆಡ್ಡಿ, ವಿಧಾನ ಪರಿಷತ್‌ ಮಾಜಿ ಸದಸ್ಯ ನಜೀರ್‌ ಅಹಮ್ಮದ್‌ ಅವರಿಗೆ ಪೊಲೀಸರು ವಿಮಾನ ನಿಲ್ದಾಣದಲ್ಲೇ ನೋಟಿಸ್‌ ಜಾರಿ ಮಾಡಿದರು. ಬಳಿಕ ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದು, ಮರಳಿ ವಿಮಾನ ನಿಲ್ದಾಣದ ಆವರಣಕ್ಕೆ ಕರೆತಂದು ಇರಿಸ
ಲಾಯಿತು. ಮಧ್ಯಾಹ್ನ 3 ಗಂಟೆಗೆ ಅವರನ್ನು ವಾಪಸ್‌ ಬೆಂಗಳೂರಿಗೆ ಕಳುಹಿಸಲಾಯಿತು.

‘ಫೈರ್‌ ಮಾಡಿದ್ರೆ ಒಬ್ಬರೂ ಸಾಯಲಿಲ್ವಲ್ಲಾ?’: ಗೋಲಿಬಾರ್‌ ವೇಳೆ, ‘ಅಲ್ಲಪ್ಪಾ ಫೈರ್‌ ಮಾಡಿದ್ರೆ ಒಂದು ಗುಂಡು ಕೂಡ ಬೀಳಲಿಲ್ಲ. ಒಬ್ಬರೂ ಸಾಯಲಿಲ್ವಲ್ಲಾ...’ ಎಂದು ಗುಂಡು ಹಾರಿಸುತ್ತಿದ್ದ ಪೊಲೀಸ್‌ ಸಿಬ್ಬಂದಿಗೆ ಅಲ್ಲಿದ್ದ ಅಧಿಕಾರಿಯೊಬ್ಬರು ಪ್ರಶ್ನಿಸುತ್ತಿರುವ ವಿಡಿಯೊ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಘಟನೆ ನಡೆದ ಕೆಲ ಸಮಯದಲ್ಲೇ ವೈರಲ್‌ ಆಗಿದೆ.

9 ಸೆಕೆಂಡ್‌ಗಳ ವಿಡಿಯೊ ತುಣುಕಿನಲ್ಲಿರುವ ಧ್ವನಿ ಮಂಗಳೂರು ಪೂರ್ವ (ಕದ್ರಿ) ಠಾಣೆಯ ಇನ್‌ಸ್ಪೆಕ್ಟರ್‌ ಎಸ್‌.ಶಾಂತಾರಾಮ ಅವರದ್ದು ಎಂಬ ಮಾತು ಕೇಳಿಬಂದಿದೆ. ಆದರೆ, ಶಾಂತಾರಾಮ ಅವರು ಇದನ್ನು ನಿರಾಕರಿಸಿದ್ದಾರೆ.

ಕೇರಳದ ಪತ್ರಕರ್ತರು ವಶಕ್ಕೆ

ಗೋಲಿಬಾರ್‌ ಮತ್ತು ನಂತರದ ಘಟನೆಗಳನ್ನು ವರದಿ ಮಾಡಲು ಬೆಳಿಗ್ಗೆಯೇ ನಗರಕ್ಕೆ ಬಂದಿದ್ದ ಕೇರಳದ ಹಲವು ಪತ್ರಕರ್ತರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಇಡೀ ದಿನ ತಮ್ಮ ಸುಪರ್ದಿಯಲ್ಲೇ ಇರಿಸಿಕೊಂಡಿದ್ದರು.

ವೆನ್ಲಾಕ್‌ ಆಸ್ಪತ್ರೆ ಆವರಣದಲ್ಲಿದ್ದ ಪತ್ರಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಮೀಸಲು ಪೊಲೀಸ್‌ ಪಡೆಯ ಬಸ್‌ನಲ್ಲಿ ಇರಿಸಿದ್ದರು. ‘ಪತ್ರಕರ್ತರ ಸೋಗಿನಲ್ಲಿ ಮಾರಕಾಸ್ತ್ರಗಳೊಂದಿಗೆ ಆಸ್ಪತ್ರೆ ಆವರಣಕ್ಕೆ ಬಂದಿದ್ದ ಕೇರಳದ ಹಲವರನ್ನು ಬಂಧಿಸಲಾಗಿದೆ’ ಎಂದು ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ಹೇಳಿಕೆಯನ್ನೂ ನೀಡಿದ್ದರು.

ಆದರೆ, ಯಾರ ಬಳಿಯೂ ಮಾರಕಾಸ್ತ್ರಗಳಿರಲಿಲ್ಲ ಎಂಬುದು ತಪಾಸಣೆ ವೇಳೆ ಗೊತ್ತಾಯಿತು. ನಂತರ ಸರ್ಕಾರದಿಂದ ನೀಡುವ ಮಾಧ್ಯಮ ಮಾನ್ಯತಾ ಚೀಟಿ ಹಾಜರುಪಡಿಸುವಂತೆ ಎಲ್ಲರಿಗೂ ಸೂಚಿಸಲಾಯಿತು. ದಾಖಲೆ ಹಾಜರುಪಡಿಸಿದವರನ್ನು ಬಿಡುಗಡೆ ಮಾಡಿದರು. ಮಾನ್ಯತಾ ಚೀಟಿ ಹೊಂದಿಲ್ಲದ ಸುಮಾರು ಹತ್ತು ಜನರನ್ನು ಸಂಜೆಯವರೆಗೂ ಪೊಲೀಸರು ವಶದಲ್ಲೇ ಇರಿಸಿಕೊಂಡಿದ್ದರು.

***

ಗುರುವಾರ ನಡೆದ ಹಿಂಸಾಚಾರದಲ್ಲಿ 33 ಮಂದಿ ಪೊಲೀಸರಿಗೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಏಳು ಪ್ರಕರಣಗಳನ್ನು ದಾಖಲಿಸಿದ್ದು, ಏಳು ಮಂದಿಯನ್ನು ಬಂಧಿಸಲಾಗಿದೆ.
– ಡಾ.ಪಿ.ಎಸ್‌.ಹರ್ಷ
ಮಂಗಳೂರು ನಗರ ಪೊಲೀಸ್‌ ಕಮಿಷನರ್‌

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು