ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ವಿ.ವಿಯಲ್ಲಿ 'ಸಿಎಎ' ಪದಕ್ಕೆ ತಕರಾರು

ಬ್ಯಾನರ್‌ನಿಂದ ಪದ ಕೈಬಿಟ್ಟು ವಿಚಾರ ಸಂಕಿರಣ: ವಿ.ವಿ. ವಿರುದ್ಧ ಹರಿಹಾಯ್ದ ಶಾಸಕ ಎನ್‌.ಮಹೇಶ್‌
Last Updated 11 ಜನವರಿ 2020, 19:58 IST
ಅಕ್ಷರ ಗಾತ್ರ

ಮೈಸೂರು:ವಿಚಾರ ಸಂಕಿರಣದ ಶೀರ್ಷಿಕೆಯಿಂದ ‘ಸಿಎಎ’ ಪದ ತೆಗೆದುಹಾಕಿದರೆ ಮಾತ್ರ ಕಾರ್ಯಕ್ರಮಕ್ಕೆ ಅನುಮತಿ ನೀಡುವುದಾಗಿ ಮೈಸೂರು ವಿಶ್ವವಿದ್ಯಾಲಯ ಸೂಚಿಸಿದ್ದರಿಂದ, ಆಯೋಜಕರು ಕೊನೆ ಗಳಿಗೆಯಲ್ಲಿ ಆ ಪದವನ್ನು ಬ್ಯಾನರ್‌ನಿಂದ ಕೈಬಿಟ್ಟು ಶನಿವಾರ ಇಲ್ಲಿ ಕಾರ್ಯಕ್ರಮ ನಡೆಸಿದರು.

ವಿಶ್ವವಿದ್ಯಾಲಯದ ಈ ಕ್ರಮಕ್ಕೆ ತೀವ್ರ ಟೀಕೆ ವ್ಯಕ್ತವಾಗಿದ್ದು, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಶಾಸಕ ಎನ್‌.ಮಹೇಶ್‌ ಆಡಳಿತ ಮಂಡಳಿ ವಿರುದ್ಧ ಹರಿಹಾಯ್ದಿದ್ದಾರೆ.

‘ಭಾರತಕ್ಕೆ ಬೇಕಿರುವುದು ಇಇಇ (ಶಿಕ್ಷಣ, ಉದ್ಯೋಗ, ಸುಭದ್ರ ಆರ್ಥಿಕತೆ); ಸಿಎಎ ಅಲ್ಲ’ ಎಂಬ ವಿಷಯವಾಗಿ, ಬಹುಜನ ವಿದ್ಯಾರ್ಥಿ ಸಂಘ (ಬಿವಿಎಸ್‌)ದ ವತಿಯಿಂದ ವಿಚಾರ ಸಂಕಿರಣ ಆಯೋಜಿಸಲಾಗಿತ್ತು. ‘ಸಿಎಎ ಅಲ್ಲ’ ಎಂಬ ವಾಕ್ಯವನ್ನು ಕೈಬಿಟ್ಟರಷ್ಟೇ ಕಾರ್ಯಕ್ರಮಕ್ಕೆ ಅನುಮತಿ ನೀಡುವುದಾಗಿ ವಿಶ್ವವಿದ್ಯಾಲಯ ತಿಳಿಸಿದ್ದರಿಂದ, ಸಂಘಟಕರು ಅದನ್ನು ಕೈಬಿಟ್ಟಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ ಅಳವಡಿಸಿದ್ದ ಬ್ಯಾನರ್‌ನಲ್ಲಿಯೂ ‘ಭಾರತಕ್ಕೆ ಬೇಕಿರುವುದು ಇಇಇ’ ಎಂದಷ್ಟೇ ಉಳಿಸಿಕೊಳ್ಳಲಾಗಿತ್ತು. ‘ಸಿಎಎ ಅಲ್ಲ’ ಎಂಬ ಸಾಲಿಗೆ ಕಾಗದ ಅಂಟಿಸಿ ಮರೆ ಮಾಚಲಾಗಿತ್ತು.

‘ಜೆಎನ್‌ಯುನಲ್ಲಿ ನಡೆದ ಹಲ್ಲೆ ಘಟನೆ ಖಂಡಿಸಿ ವಿಶ್ವವಿದ್ಯಾಲಯದಲ್ಲಿ ಕೆಲ ದಿನಗಳ ಹಿಂದೆ ನಡೆದ ಪ್ರತಿಭಟನೆಯು ವಿವಾದಕ್ಕೆ ಕಾರಣವಾಗಿತ್ತು. ಇನ್ನಷ್ಟು ವಿವಾದ ಬೇಡ ಎಂದು ಕುಲಸಚಿವರು ಈ ಸೂಚನೆ ನೀಡಿದ್ದಾರೆ. ಕ್ಯಾಂಪಸ್‌ನಲ್ಲಿ ಹಾಕಿದ್ದ ಬ್ಯಾನರ್‌ಗಳನ್ನೂ ತೆಗೆಸಲಾಗಿದೆ’ ಎಂದು ಬಿವಿಎಸ್‌ ಜಿಲ್ಲಾ ಸಂಯೋಜಕ ಗಣೇಶ್‌ ಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಜೋರಾಗಿ ಉಸಿರಾಡದಂತೆ ಬೋರ್ಡ್‌ ಹಾಕಿ:‘ಮಾನಸ ಗಂಗೋತ್ರಿ ಆವರಣದಲ್ಲಿ ವಿದ್ಯಾರ್ಥಿಗಳು ಜೋರಾಗಿ ಉಸಿರಾಡಬಾರದು’ ಎಂದು ಎಲ್ಲ ಕಡೆ ಬೋರ್ಡ್‌ ಹಾಕುವಂತೆ ವಿಶ್ವವಿದ್ಯಾಲಯದ ಕುಲಪತಿ ಮತ್ತು ಕುಲಸಚಿವರಲ್ಲಿ ಹೇಳಬೇಕು ಎಂದು ಶಾಸಕ ಎನ್‌. ಮಹೇಶ್‌ ವ್ಯಂಗ್ಯವಾಡಿದರು.

‘ವಿಶ್ವವಿದ್ಯಾಲಯದ ಆವರಣದಲ್ಲಿ ಏನೋ ಅಹಿತಕರ ಘಟನೆ ನಡೆದಿದ್ದಕ್ಕಾಗಿ, ಈ ರೀತಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಸರಿಯೇ? ನಾವು ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಬದುಕುತ್ತಿದ್ದೇವೆ. ಜನರ ತೆರಿಗೆ ಹಣದಿಂದ ವಿಶ್ವವಿದ್ಯಾಲಯ ನಡೆಯುತ್ತಿದೆ ಎಂಬುದನ್ನು ಆಡಳಿತ ಮಂಡಳಿ ಅರ್ಥಮಾಡಿಕೊಳ್ಳಬೇಕು’ ಎಂದರು.

‘ಸಿಎಎ ಅಥವಾ ಎನ್‌ಆರ್‌ಸಿಗೆ ಸಂಬಂಧಪಟ್ಟಂತೆ ಯಾವುದೇ ದಾಖಲೆ ಕೇಳಿದರೂ ನಾನು ಕೊಡುವುದಿಲ್ಲ. 64 ವರ್ಷಗಳಿಂದಲೂ ಈ ದೇಶದ ಪ್ರಜೆಯಾಗಿದ್ದೇನೆ. ನಾನು ಯಾರಿಗೂ ಪೌರತ್ವ ಸಾಬೀತುಪಡಿಸುವ ಅಗತ್ಯವಿಲ್ಲ’ ಎಂದು ಕಿಡಿಕಾರಿದರು.

*
ಮಾನಸ ಗಂಗೋತ್ರಿ ಆವರಣದಲ್ಲಿ ವಿದ್ಯಾರ್ಥಿಗಳು ಜೋರಾಗಿ ಉಸಿರಾಡಬಾರದು’ ಎಂದು ಎಲ್ಲ ಕಡೆ ಬೋರ್ಡ್‌ ಹಾಕುವಂತೆ ಕುಲಪತಿ ಮತ್ತು ಕುಲಸಚಿವರಲ್ಲಿ ಹೇಳಬೇಕು.
-ಎನ್‌. ಮಹೇಶ್‌, ಶಾಸಕ

*
ಸಂಕಿರಣಕ್ಕೆ ಮೊದಲೇ ಅನುಮತಿ ನೀಡಲಾಗಿತ್ತು. ವಿವಾದ ಉಂಟಾಗದಿರಲಿ ಎಂದು ಸಿಎಎ ಪದ ತೆಗೆಯುವಂತೆ ಸೂಚಿಸಿದ್ದು ಹೌದು.
-ಪ್ರೊ.ಆರ್‌.ಶಿವಪ್ಪ, ಮೈಸೂರು ವಿ.ವಿ. ಕುಲಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT