ಬುಧವಾರ, ಮೇ 27, 2020
27 °C

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು: ಕೇಂದ್ರಕ್ಕೆ ಆರ್‌ಎಸ್‌ಎಸ್‌ ಶ್ಲಾಘನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯನ್ವಯ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ್ದನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಶ್ಲಾಘಿಸಿದೆ.

ನಗರದಲ್ಲಿ ಹಮ್ಮಿಕೊಂಡಿದ್ದ ಆರ್‌ಎಸ್‌ಎಸ್‌ ಅಖಿಲ ಭಾರತ ಕಾರ್ಯಕಾರಿ ಮಂಡಲ ಸಭಾದಲ್ಲಿ ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಮೆಚ್ಚುಗೆ ಸೂಚಿಸಿ ನಿರ್ಣಯ ಕೈಗೊಳ್ಳಲಾಗಿದೆ.

ಸಭೆಯ ಪ್ರಮುಖ ನಿರ್ಣಯಗಳ ಕುರಿತು ಸಂಘದ ಸಹ ಕಾರ್ಯವಾಹ ಸುರೇಶ ಜೋಶಿ (ಭಯ್ಯಾಜಿ ಜೋಶಿ) ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

'ಈ ದಿಟ್ಟ ನಿರ್ಧಾರದಿಂದಾಗಿ ಜಮ್ಮು ಮತ್ತು ಕಾಶ್ಮೀರವೂ ‍ಭಾರತದ ಅವಿಭಾಜ್ಯ ಅಂಗವಾಗಿದೆ'. 'ರಾಮನ ಜನ್ಮಸ್ಥಳದಲ್ಲಿ ರಾಮ ಮಂದಿರ ನಿರ್ಮಾಣ ರಾಷ್ಟ್ರೀಯ ಅಭಿಮಾನದ ಸಂಕೇತ. ಈ ಕುರಿತು ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂಕೋರ್ಟ್‌ಗೆ ಅಭಿನಂದನೆ ಸಲ್ಲಿಸಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ' ಎಂದರು.
'ಭಾರತ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) 2019 ರೂಪಿಸಿದ್ದಕ್ಕೂ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿ ನಿರ್ಣಯ ತೆಗೆದುಕೊಂಡಿದ್ದೇವೆ'. 'ದೇಶದಲ್ಲಿ ಸಿಎಎ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಸಿಎಎ ವಿಚಾರದಲ್ಲಿ ರಾಜಕೀಯ ಪಕ್ಷಗಳು ಅನಗತ್ಯ ಗೊಂದಲ ಸೃಷ್ಟಿಸುತ್ತಿವೆ. ದೇಶದ ಹಿತಾಸಕ್ತಿ ಕುರಿತ ವಿಚಾರಗಳಲ್ಲಿ ರಾಜಕೀಯ ಮಾಡಬಾರದು. ಎಲ್ಲ ಪಕ್ಷಗಳು ಸರ್ಕಾರದ ಬೆಂಬಲಕ್ಕೆ ನಿಲ್ಲಬೇಕು ಎಂದರು.

'ಬಾಂಗ್ಲಾ, ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿನ ಅಲ್ಪಸಂಖ್ಯಾತರಾಗಿರುವ ಹಿಂದೂ, ಸಿಖ್, ಕ್ರಿಶ್ಚಿಯನ್ ಮೇಲೆ ದೌರ್ಜನ್ಯ ನಡೆಯುತ್ತಿದೆ. ಹಾಗಾಗಿ ಅಲ್ಲಿನ ಅಲ್ಪಸಂಖ್ಯಾತರು ಭಾರತದಲ್ಲಿ ಬಂದು ನೆಲೆಸಿದ್ದು, ಅವರಿಗೆ ಪೌರತ್ವ ಅವಶ್ಯಕತೆ ಇದೆ' ಎಂದು ಪ್ರತಿಪಾದಿಸಿದರು.

'ಆರ್ ಎಸ್ ಎಸ್ ತರಬೇತಿ ಕೇಂದ್ರಗಳಲ್ಲಿ ಮುಂದಿನ ವರ್ಷ ಮೂರು ವಿಚಾರಗಳ ಬಗ್ಗೆ ತರಬೇತಿಗೆ ಒತ್ತು ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ವ್ಯವಸ್ಥೆ ಶಿಥಿಲವಾಗುತಂತಿದೆ. ಕುಟುಂಬ ವ್ಯವಸ್ಥೆಯನ್ನು ಗಟ್ಟಿಗೊಳಿಸುವುದರ ಬಗ್ಗೆ ಅದ್ಯತೆ ನೀಡಲಾಗುತ್ತದೆ'. 'ಪರಿಸರ ಸಂರಕ್ಷಣೆ, ನೀರಿನ ಸಂರಕ್ಷಣೆ,  ಪ್ಲಾಸ್ಟಿಕ್ ಬಳಸದಿರುವ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆಯೂ ತರಬೇತಿ ಕೊಡಲಾಗುತ್ತದೆ'. 'ಸಮಾಜದಲ್ಲಿರುವ ಜಾತಿ ವ್ಯವಸ್ಥೆ ಹೋಗಲಾಡಿಸಿ ಸಾಮಾಜಿಕ ವ್ಯವಸ್ಥೆಯನ್ನು ಬಲಪಡಿಸುವ ಬಗ್ಗೆಯೂ ತರಬೇತಿ ನೀಡಲಾಗುತ್ತದೆ' ಎಂದರು.

'ಕಳೆದ ವರ್ಷಕ್ಕೆ ಹೋಲಿಸಿದಾಗ ಸಂಘದ ಶಾಖಾ ಕಾರ್ಯ ಚಟುವಟಿಕೆಗಳು ಹೆಚ್ಚಾಗಿವೆ. ನಾವು ಪ್ರಸ್ತುತ ದೇಶದಲ್ಲಿ 8೦ ಸಾವಿರ ಹಳ್ಳಿಗಳನ್ನು ತಲುಪಿದ್ದೇವೆ'. 'ಗ್ರಾಮೀಣಾಭಿವೃದ್ಧಿಗೆ ಆರ್‌ಎಸ್‌ಎಸ್ ಬದ್ಧವಾಗಿದ್ದು ಈ ನಿಟ್ಟಿನಲ್ಲಿ ಕಾರ್ಯಕ್ರಮ ಹಾಕಿಕೊಂಡಿದೆ ಎಂದರು.

ಎನ್‌ಆರ್‌ಸಿ  ಜಾರಿ ವಿರುದ್ಧ ಬಿಹಾರ ಸರ್ಕಾರ ನಿರ್ಣಯ ತೆಗೆದುಕೊಂಡ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಈ ಬಗ್ಗೆ ಇರುವ ಗೊಂದಲಗಳನ್ನು ಕೇಂದ್ರ ಸರ್ಕಾರ ಬಗೆಹರಿಸುತ್ತದೆ' ಎಂದರು.

ಆರ್‌ಎಸ್‌ಎಸ್ ಪ್ರಚಾರ ಪ್ರಮುಖ್  ಅರುಣ್ ಕುಮಾರ್, 'ಕೊರೊನ ವೈರಸ್ ಹಬ್ಬುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ನಿರ್ಬಂಧಗಳನ್ನು ಜಾರಿಗೊಳಿಸಿದ್ದರಿಂದ ಆರ್‌ಎಸ್‌ಎಸ್ ಅಖಿಲ‌ ಭಾರತ ಪ್ರತಿನಿಧಿ ಸಭಾ ರದ್ದು ಮಾಡಿದ್ದೇವೆ. ಆದರೆ ಆರ್ ಎಸ್ ಎಸ್ ಕಾರ್ಯಕಾರಿ ಮಂಡಳಿ ಸಭೆ ನಡೆದಿದೆ'. 'ಆರ್‌ಎಸ್‌ಎಸ್ ಅಖಿಲ ಭಾರತ ಪ್ರತಿನಿಧಿ ಸಭೆಯನ್ನು ಇತಿಹಾಸದಲ್ಲಿ ಇಲ್ಲಿ ತನಕ ರದ್ದು ಮಾಡಿರಲಿಲ್ಲ' ಎಂದು ತಿಳಿಸಿದರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು