ಗುರುವಾರ , ಜನವರಿ 23, 2020
29 °C

ಕಾರು–ಬಸ್‌ ನಡುವೆ ಭೀಕರ ಅಪಘಾತ: ಕಾರು ಬೆಂಕಿಗೆ ಆಹುತಿ, ಮೂವರ ಸಜೀವ ದಹನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಬ್ಬಿ: ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದೊಡ್ಡಗುಣಿ ಬಳಿ ಶನಿವಾರ ನಸುಕಿನ 2 ಗಂಟೆ ವೇಳೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಸಜೀವ ದಹನವಾಗಿದ್ದಾರೆ. 

ಖಾಸಗಿ ಬಸ್ಸು ಹಾಗೂ ಮಾರುತಿ ಒಮ್ನಿ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಕಾರಿನಲ್ಲಿದ್ದ ಮೂವರು ನೋಡ ನೋಡುತ್ತಲೇ ಸಜೀವ ದಹನವಾಗಿದ್ದಾರೆ. 

ಗುಬ್ಬಿ ತಾಲ್ಲೂಕಿನ ಎನ್.ಹೊಸಹಳ್ಳಿಯ  ವಸಂತ್ ಕುಮಾರ್ (55), ರಾಮಯ್ಯ (55) ಹಾಗೂ ನರಸಮ್ಮ(65) ಮೃತರು. ಇವರು ಓಮ್ನಿಯಲ್ಲಿ ಇದ್ದರು. ವಸಂತ್ ಕಾರು ಚಾಲನೆ ಮಾಡುತ್ತಿದ್ದರು.

ಓಮ್ನಿಯಲ್ಲಿ ಇದ್ದ ಇನ್ನೂ ನಾಲ್ವರಿಗೆ ಸುಟ್ಟ ಗಾಯಗಳಾಗಿವೆ. ಅವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ನರಸಮ್ಮ ಅವರಿಗೆ ಶುಕ್ರವಾರ ಮಧ್ಯರಾತ್ರಿ ಆರೋಗ್ಯದಲ್ಲಿ ಏರುಪೇರು ಆಗಿತ್ತು. ಚಿಕಿತ್ಸೆ ಕೊಡಿಸಲು ನಿಟ್ಟೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಅಪಘಾತ ಸಂಭವಿಸಿದೆ. ಈಗ ಆ ಹಿರಿಯ ಜೀವವೊಂದಿಗೆ ಮತ್ತೆರಡು ಜೀವಗಳೂ ಹೋಗಿವೆ. ಮೃತ ಶರೀರಗಳನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಸುಟ್ಟು ಕರಕಲಾದ  ಶ್ರೀಶಾ ಟ್ರಾವಲ್ಸ್ ನ ಬಸ್ಸು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊಗುತ್ತಿತ್ತು.

ಅಪಘಾತದಲ್ಲಿ ಗಾಯಗೊಂಡಿರುವ ರವಿಕುಮಾರ್ (23), ರಾಧಾಮಣಿ (30), ನರಸಿಂಹಮೂರ್ತಿ (40) ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೋರ್ವ ಗಾಯಾಳು ಗೌರಮ್ಮ(28) ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ಸ್ಲಿಪರ್ ಕೋಚ್‌ ಬಸ್ಸಿನಲ್ಲಿ 22 ಸೀಟುಗಳ ವ್ಯವಸ್ಥೆ ಇದೆ. ಅವಘಡ ಸಮಯದಲ್ಲಿ ಪ್ರಯಾಣಿಕರು ದಿಕ್ಕಾಪಾಲಾಗಿ ಓಡಿದ್ದಾರೆ. ಹಾಗಾಗಿ ಎಷ್ಟು ಪ್ರಯಾಣಿಕರು ಇದ್ದರು ಎಂದು ನಿಖರವಾಗಿ ಗೊತ್ತಾಗಿಲ್ಲ. ಉರಿ ಹೆಚ್ಚುವ ಮುನ್ನ ಬಸ್ಸಿನಿಂದ ಇಳಿದು ಪ್ರಾಣಾಪಾಯದಿಂದ ಪಾರಾದ 12 ಪ್ರಯಾಣಿಕರನ್ನು ಶಿವಮೊಗ್ಗ ಮಾರ್ಗದ ಬಸ್ಸುಗಳಿಗೆ ಹತ್ತಿಸಿ ಕಳುಹಿಸಿದ್ದೇವೆ ಎಂದು ಗುಬ್ಬಿ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಹರೀಶ್ ಕುಮಾರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸುಟ್ಟು ಕರಕಲಾದ ಬಸ್

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು