ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾವೇರಿ– ಆನ್‌ಲೈನ್‌’ ಸೇವೆ ಆರಂಭ

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಂದ ಚಾಲನೆ
Last Updated 16 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಬೆಂಗಳೂರು: ಸ್ಥಿರಾಸ್ತಿಗಳ ನೋಂದಣಿ, ಹಸ್ತಾಂತರ, ಅಡಮಾನ, ಭೋಗ್ಯ ಮತ್ತು ಅಧಿಕಾರ ಪತ್ರ ಮುಂತಾದ ಸೇವೆಗಳನ್ನು ಒದಗಿಸಲು ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ‘ಕಾವೇರಿ ಆನ್‌ಲೈನ್‌’ ಸೇವೆ ಆರಂಭಿಸಿದ್ದು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿಧಾನಸೌಧದಲ್ಲಿ ಶುಕ್ರವಾರ ಚಾಲನೆ ನೀಡಿದರು.

ಕಾವೇರಿ ಆನ್‌ಲೈನ್‌ ತಂತ್ರಾಂಶವನ್ನುನೋಂದಣಿ ಮತ್ತು ಮುದ್ರಾಂಕ ಇಲಾಖೆಯೇ ಅಭಿವೃದ್ಧಿಪಡಿಸಿದೆ. ಸಾರ್ವಜನಿಕರು ಉಪನೋಂದಣಿ ಕಚೇರಿಗೆ ವೃಥಾ ಅಲೆದಾಡುವುದನ್ನು ತಪ್ಪಿಸಲಿದೆ.

ಯಾವ ಸೇವೆಗಳು ಲಭ್ಯ?

*ಸ್ಥಿರಾಸ್ತಿಗಳ ಋಣಭಾರ ಪ್ರಮಾಣ ಪತ್ರ:

ಸ್ಥಿರಾಸ್ತಿಗಳ ಋಣಭಾರ ಪ್ರಮಾಣ ಪತ್ರ ಮತ್ತು ನೋಂದಾಯಿತ ದಸ್ತಾವೇಜುಗಳ ದೃಢೀಕೃತ ನಕಲು ಪ್ರತಿಗಳನ್ನು ಪಡೆಯಬಹುದು. ಒಂದು ವೇಳೆ ನಿರ್ದಿಷ್ಟ ಆಸ್ತಿಗಳ ಕುರಿತು ಋಣಭಾರಗಳನ್ನು ಪರಿಶೀಲಿಸಬೇಕಾದಲ್ಲಿ ಆಸ್ತಿಯ ವಿವರವನ್ನು ನೀಡಿ ನೈಜ ಸಮಯದಲ್ಲಿ ವಿವರಗಳನ್ನು ಪಡೆಯಬಹುದು. ಡಿಜಿಟಲ್ ಸಹಿ ಮಾಡಿದ ಋಣಭಾರ ಪ್ರಮಾಣ ಪತ್ರಗಳನ್ನು ಸಾರ್ವಜನಿಕರು ಶುಲ್ಕವನ್ನು ಪಾವತಿಸಿ
ಪಡೆಯಬಹುದು.

* ಮೌಲ್ಯ ಮತ್ತು ಮುದ್ರಾಂಕ ಶುಲ್ಕಗಳ ಅಂದಾಜು:

ಸಾರ್ವಜನಿಕರು ತಮ್ಮ ಆಸ್ತಿಯ ವಿವರಗಳನ್ನು ತಂತ್ರಾಂಶದಲ್ಲಿ ನಮೂದಿಸಿ, ಆಸ್ತಿಯ ಮಾರ್ಗಸೂಚಿ ಮೌಲ್ಯವನ್ನು ಸ್ವತಃ ಲೆಕ್ಕ ಮಾಡಬಹುದು. ಅಲ್ಲದೆ, ಪಾವತಿಸಬೇಕಾದ ಮುದ್ರಾಂಕ ಶುಲ್ಕವನ್ನು ಸರಳ ಮತ್ತು ಸುಲಭ ಹಂತಗಳಲ್ಲಿ ತಂತ್ರಾಂಶದ ಮೂಲಕವೂ ಲೆಕ್ಕ ಮಾಡಬಹುದು.

* ಸಾರ್ವಜನಿಕರಿಂದಲೇ ನೋಂದಣಿ ಪೂರ್ವ ಡೇಟಾ ಎಂಟ್ರಿ :

ಉಪನೋಂದಣಿ ಕಚೇರಿಗೆ ಹಲವು ಬಾರಿ ಭೇಟಿ ನೀಡುವುದನ್ನು ತಪ್ಪಿಸುತ್ತದೆ. ಆನ್‌ಲೈನ್‌ ಮೂಲಕವೇ ದಸ್ತಾವೇಜುಗಳನ್ನು ನೋಂದಣಿಗೆ ಸಲ್ಲಿಸಬಹುದು. ನೋಂದಾಯಿಸಬೇಕಾದ ಆಸ್ತಿಯ ಎಲ್ಲ ವಿವರಗಳನ್ನು ನೋಂದಣಿ ಪೂರ್ವವೇ ಆನ್‌ಲೈನ್‌ ಮೂಲಕ ನಮೂದಿಸಿಕೊಂಡು, ಮಾಹಿತಿಗಳನ್ನು ವೀಕ್ಷಿಸಿ ಅವಶ್ಯವಿದ್ದರೆ ತಿದ್ದುಪಡಿ ಮಾಡಿದ ನಂತರ ನೋಂದಣಿಗಾಗಿ ಅಪ್‌ಲೋಡ್‌ ಮಾಡಬಹುದು.

ಇಲಾಖೆ ನಿಗದಿಪಡಿಸಿದ ಆಸ್ತಿಯ ಮಾರ್ಗಸೂಚಿ ದರಗಳನ್ನು ತಂತ್ರಾಂಶದಲ್ಲಿ ಪಡೆದು, ದಸ್ತಾವೇಜಿಗೆ ಸಂಬಂಧಿಸಿದ ಆಸ್ತಿಯ ಮಾರುಕಟ್ಟೆ ಮೌಲ್ಯವನ್ನು ನಿರ್ಧರಿಸಬಹುದು. ಬಳಿಕ ಮಾರುಕಟ್ಟೆ ಮೌಲ್ಯದ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಬಹುದು.

* ದಸ್ತಾವೇಜುನೋಂದಣಿಗೆ ಮುಂಗಡವಾಗಿ ಸಮಯ ನಿಗದಿ:

ಉಪನೋಂದಣಾಧಿಕಾರಿಗಳು ಆನ್‌ಲೈನ್‌ ಮೂಲಕ ಅರ್ಜಿ ಮತ್ತು ಮೌಲ್ಯವನ್ನು ಮಾನ್ಯಗೊಳಿಸಿದ ನಂತರ ದಸ್ತಾವೇಜಿಗೆ ತಗಲುವ ಶುಲ್ಕಗಳನ್ನು ಆನ್‌ಲೈನ್ ಮೂಲಕವೇ ಪಾವತಿಸಿ ನೋಂದಣಿ ಪ್ರಕ್ರಿಯೆಗೆ ಮುಂಗಡವಾಗಿ ಸಮಯ ನಿಗದಿ ಮಾಡಿಕೊಳ್ಳಬಹುದು.

* ಉಪನೋಂದಣಿ ಕಚೇರಿ ಗುರುತಿಸುವಿಕೆ:

ರಾಜ್ಯದ ಎಲ್ಲ 250 ಉಪನೋಂದಣಿ ಕಚೇರಿಗಳ ವಿಳಾಸದ ಮಾಹಿತಿ ಆನ್‌ಲೈನ್‌ನಲ್ಲಿ ಲಭ್ಯವಿದೆ.

ವಿವಾಹ ನೋಂದಣಿಗೆ ವಧು ಮತ್ತು ವರನ ವಿಳಾಸ ಹಾಗೂ ವಿವಾಹ ನೆರವೇರಿದ ಸ್ಥಳ ಆಧರಿಸಿ ವಿವಾಹ ನೋಂದಣಿಗೆ ಸಮೀ‍ಪದ ನೋಂದಣಿ ಕಚೇರಿಗಳ ವಿವರಗಳನ್ನು ಪಡೆಯಬಹುದು.

* ಮೌಲ್ಯ ಮೊಬೈಲ್‌ ಆಪ್‌:

ಸಾರ್ವಜನಿಕರು ಯಾವುದೇ ಸ್ಥಿರಾಸ್ತಿಯ ಮಾರ್ಗಸೂಚಿ ಮೌಲ್ಯ ತಿಳಿಯಲು ಸಹಾಯಕವಾಗಲು, ಮೌಲ್ಯ ಹೆಸರಿನ ಮೊಬೈಲ್ ಆಪ್‌ ಅಭಿವೃದ್ಧಿಪಡಿಸಲಾಗಿದೆ.

* ಇ–ಸ್ಟಾಂಪ್‌ ಮುದ್ರಾಂಕ ಕಾಗದ:

ಕರಾತು ಪತ್ರ ಮತ್ತು ಪ್ರಮಾಣ ಪತ್ರಗಳಿಗೆ ಮುದ್ರಾಂಕ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸಿ, ಇ–ಸ್ಟಾಂಪ್‌ ಕಾಗದವನ್ನು ಮನೆಯಲ್ಲೆ ಪ್ರಿಂಟ್‌ ತೆಗೆದುಕೊಳ್ಳಬಹುದು.

**

ಸರ್ಕಾರದ ಸೌಲಭ್ಯಗಳು ಮಧ್ಯವರ್ತಿಗಳ ಪಾಲಾಗಬಾರದು ಎಂಬ ಉದ್ದೇಶದಿಂದ ಇಂತಹ ಸೇವೆಗಳನ್ನು ಆರಂಭಿಸಿದ್ದೇವೆ
- ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT