ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಮತ ಯಾಚಿಸಲು ಅಭಿನಂದನ್ ಚಿತ್ರ ಬಳಸಿದ ಸೂಲಿಬೆಲೆ; ತೀವ್ರ ಆಕ್ಷೇಪ

ವಿಂಗ್‌ ಕಮಾಂಡರ್ ಚಿತ್ರ ಬಳಸಿ ಫೇಸ್‌ಬುಕ್‌ನಲ್ಲಿ ಮತಯಾಚನೆ
Last Updated 10 ಮಾರ್ಚ್ 2019, 14:17 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣಾ ಪ್ರಚಾರಕ್ಕೆರಕ್ಷಣಾ ಪಡೆಗಳ ಸಿಬ್ಬಂದಿ ಚಿತ್ರ ಬಳಸುವಂತಿಲ್ಲ ಎಂದು ಚುನಾವಣಾ ಆಯೋಗ ಆದೇಶ ಹೊರಡಿಸಿದ ಬೆನ್ನಲ್ಲೇ ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಆ ಕೆಲಸ ಮಾಡಿದ್ದಾರೆ.ಬಿಜೆಪಿ ಪರ ಮತ ಯಾಚಿಸಲು ಅವರುವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಚಿತ್ರ ಬಳಸಿದ್ದು, ಇದಕ್ಕೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ.

ರಾಜಕೀಯ ಪಕ್ಷಗಳ ಪ್ರಚಾರ ಫಲಕಗಳು ಹಾಗೂ ಫ್ಲೆಕ್ಸ್‌ಗಳಲ್ಲಿ ರಕ್ಷಣಾ ಪಡೆಗಳ ಸಿಬ್ಬಂದಿ ಚಿತ್ರಗಳನ್ನು ಬಳಸುವಂತಿಲ್ಲ ಎಂದು ಆಯೋಗ ಶನಿವಾರ ಆದೇಶ ಹೊರಡಿಸಿತ್ತು.ದೇಶದ ರಕ್ಷಣಾ ಪಡೆ ‘ಆಧುನಿಕ ಪ್ರಜಾಪ್ರಭುತ್ವದಲ್ಲಿ ರಾಜಕೀಯದಲ್ಲಿ ಆಸಕ್ತಿಯಿಲ್ಲದ ಮತ್ತು ತಟಸ್ಥ ಪಾಲುದಾರ’ ಎಂದೂ ಆಯೋಗ ಸ್ಪಷ್ಟಪಡಿಸಿತ್ತು.

ಆದರೆ, ಸೂಲಿಬೆಲೆ ಅವರುಅಭಿನಂದನ್ ವರ್ಧಮಾನ್ ಅವರ ಚಿತ್ರವಿರುವ ಚುನಾವಣಾ ಪ್ರಚಾರದ ಫೇಸ್‌ಬುಕ್‌ ಸ್ಟೇಟಸ್‌ ಅನ್ನುಶನಿವಾರ ಸಂಜೆ (ಸಂಜೆ 4.42) ಶೇರ್ ಮಾಡಿದ್ದಾರೆ.

‘ನೀವೂ ವಿಂಗ್ ಕಮಾಂಡರ್ ಅಭಿನಂದನ್ ಆಗಬೇಕೇ? ವಿದ್ಯುನ್ಮಾನ ಮತಯಂತ್ರದಲ್ಲಿ ಕಮಲದ ಚಿಹ್ನೆ ಒತ್ತಿ ವೈಮಾನಿಕ ದಾಳಿಯ ಅನುಭವ ಪಡೆಯಿರಿ’ ಎಂಬ ಬರಹದ ಜತೆಅಭಿನಂದನ್ ಮತ್ತು ಮತಯಂತ್ರದ ಚಿತ್ರವುಳ್ಳಸಂದೇಶವನ್ನು ‘ನಮೋ ಸುನಾಮಿ’ ಎಂಬ ಫೇಸ್‌ಬುಕ್ ಪುಟದಲ್ಲಿ ಪ್ರಕಟಿಸಲಾಗಿದೆ. ಇದನ್ನೇಚಕ್ರವರ್ತಿಯವರು ಶೇರ್ ಮಾಡಿದ್ದಾರೆ.

‘ಸೇನೆ ದೇಶಕ್ಕೆ ಸೇರಿದ್ದು, ಯಾವ ಪಕ್ಷದ್ದೂ ಅಲ್ಲ. ಸೇನೆಯನ್ನು ರಾಜಕೀಕರಣ ಮಾಡಬೇಡಿ’ ಎಂದು ನಾಗೇಶ್ ನಾಯಕ್ ಆರ್. ನಾಯಕ್ ಎಂಬುವವರು ಪ್ರತಿಕ್ರಿಯಿಸಿದ್ದಾರೆ.

‘ನಮ್ಮ ಒಳಿತಿಗಾಗಿ ಪ್ರಾಣ ತ್ಯಾಗ ಮಾಡುವವರನ್ನು ಒಂದು ಮತಕ್ಕಾಗಿ ದಯಮಾಡಿ ಬಳಸಿಕೊಳ್ಳದಿರಿ’ ಎಂದು ಕಿರಣ್‌ಕುಮಾರ್‌ ಗುಡನೆಪ್ಪನವರ್ ಬರೆದಿದ್ದಾರೆ.

‘ದೇಶದ ಸೈನಿಕರನ್ನು ನಿಮ್ಮ ರಾಜಕೀಯ ತೆವಲಿಗೆ ಬಳಸಿಕೊಳ್ಳಲು ನಾಚಿಕೆಯಾಗುವುದಿಲ್ಲವೇ’ ಎಂದು ಅಜಯ್ ವಿಜಯ್ ಗೌಡ ಎಂಬುವವರು‘ನಮೋ ಸುನಾಮಿ’ ಫೇಸ್‌ಬುಕ್ ಪುಟದಲ್ಲಿ ಪ್ರತಿಕ್ರಿಯಿಸಿದ್ದಾರೆ.ಇನ್ನೂ ಆನೇಕರು ವಿರೋಧ ಸೂಚಿಸಿ ಸಂದೇಶ ಪ್ರಕಟಿಸಿದ್ದಾರೆ.

ದೂರು ದಾಖಲಾಗಿಲ್ಲ

ಫೇಸ್‌ಬುಕ್‌ನಲ್ಲಿ ಚುನಾವಣಾ ಪ್ರಚಾರಕ್ಕಾಗಿ ವಿಂಗ್ ಕಮಾಂಡರ್ ಚಿತ್ರ ಬಳಸಿದ್ದರ ಕುರಿತು ಈವರೆಗೆ ದೂರು ದಾಖಲಾಗಿಲ್ಲ ಎನ್ನಲಾಗಿದೆ.ಈ ಕುರಿತು ಯಾವುದೇ ರಾಜಕೀಯ ಪಕ್ಷಗಳ ಮುಖಂಡರೂ ಪ್ರತಿಕ್ರಿಯೆ ನೀಡಿಲ್ಲ.

ಮೋದಿ ಪರ ಪ್ರಚಾರ ಮಾಡುವ ಸೂಲಿಬೆಲೆ

ಚಕ್ರವರ್ತಿ ಸೂಲಿಬೆಲೆಯವರು ನೇರವಾಗಿ ಯಾವುದೇ ರಾಜಕೀಯ ಪಕ್ಷದ ಸದಸ್ಯ ಎಂದು ಹೇಳಿಕೊಳ್ಳದಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರ ಪರ ಪ್ರಚಾರ ಮಾಡುತ್ತಿರುವುದು ಸ್ಪಷ್ಟ. ಇದನ್ನು ಅವರೇ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಅವರೇ ಹೇಳಿರುವಂತೆ, ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕು ಎಂಬ ಆಶಯದೊಂದಿಗೆ ಅವರು ಯುವ ಬ್ರಿಗೇಡ್ ಆರಂಭಿಸಿದ್ದಾರೆ.

ಕ್ರಮ ಕೈಗೊಳ್ಳಲಿದೆಯೇ ಆಯೋಗ?

ರಾಜಕೀಯ ಪಕ್ಷಗಳ ಪ್ರಚಾರ ಫಲಕಗಳು ಹಾಗೂ ಫ್ಲೆಕ್ಸ್‌ಗಳಲ್ಲಿ ರಕ್ಷಣಾ ಪಡೆಗಳ ಸಿಬ್ಬಂದಿ ಚಿತ್ರಗಳನ್ನು ಬಳಸುವಂತಿಲ್ಲ ಎಂಬುದು ಚುನಾವಣಾ ಆಯೋಗದ ಶನಿವಾರದ ಆದೇಶದಲ್ಲಿ ಉಲ್ಲೇಖವಾಗಿರುವ ವಿಷಯ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಕ್ಕೆ ಯೋಧರ ಚಿತ್ರ ಪ್ರಕಟಿಸಿದರೆ ಏನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ.ಚುನಾವಣಾ ಪ್ರಚಾರದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ನಿಯಂತ್ರಣದ ಕುರಿತು ಕೇಳಲಾದ ಪ್ರಶ್ನೆಗೂ ಆಯೋಗ ಸಮರ್ಪಕ ಉತ್ತರ ನೀಡಿಲ್ಲವಂಬುದು ಗಮನಾರ್ಹ.

ಬಿಜೆಪಿ ಫ್ಲೆಕ್ಸ್‌ಗಳಲ್ಲಿಯೂ ಅಭಿನಂದ್ ಚಿತ್ರ:ದೆಹಲಿಯಲ್ಲಿ ಬಿಜೆಪಿಯ ಕೆಲ ನಾಯಕರು ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಚಿತ್ರಗಳ ಜತೆಗೆ ವಿಂಗ್ ಕಮಾಂಡರ್‌ ಅಭಿನಂದನ್ ಮತ್ತು ವಾಯುಪಡೆಯ ಚಿತ್ರಗಳನ್ನು ಒಳಗೊಂಡ ಫ್ಲೆಕ್ಸ್‌ಗಳನ್ನು ಹಾಕಿದ್ದರು. ಮೋದಿ ಅವರ ಪ್ರಯತ್ನದ ಫಲವಾಗಿ ಭಾರತೀಯ ವಾಯುಪಡೆಯ ಪೈಲಟ್ ಬಿಡುಗಡೆಯಾಗಿದೆ ಎಂದೂ ಫ್ಲೆಕ್ಸ್‌ಗಳಲ್ಲಿ ಮುದ್ರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT