ಮಂಗಳವಾರ, ಮೇ 24, 2022
27 °C

‘ಚಂದ್ರಯಾನ– 2’ ಜುಲೈನಲ್ಲಿ ಉಡಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಚಂದ್ರನ ಅಂಗಳದಲ್ಲಿ ವೈಜ್ಞಾನಿಕ ಅಧ್ಯಯನಕ್ಕಾಗಿ ಸಿದ್ಧಗೊಂಡಿರುವ ‘ಚಂದ್ರಯಾನ–2’ ಬಾಹ್ಯಾಕಾಶ ನೌಕೆಯ ಉಡಾವಣೆಗೆ ಮುಹೂರ್ತ ನಿಗದಿಯಾಗಿದೆ.

ಜುಲೈ 9 ರಿಂದ ಜುಲೈ 16 ರೊಳಗೆ ಉಡಾವಣೆಯಾಗಲಿದ್ದು, ಸೆಪ್ಟೆಂಬರ್‌ 6 ರಂದು ಚಂದ್ರನ ಅಂಗಳಕ್ಕೆ ಇಸ್ರೊ ನಿರ್ಮಿತ ಲ್ಯಾಂಡರ್‌ ಇಳಿಯಲಿದೆ. ಅಲ್ಲಿನ ದಕ್ಷಿಣ ಧ್ರುವದ ಸಮೀಪ ಬಾಹ್ಯಾಕಾಶ ನೌಕೆಯು ರೋವರ್‌ ಅನ್ನು ಹೊತ್ತ ಲ್ಯಾಂಡರ್‌ ನೆಲ ಸ್ಪರ್ಶ ಮಾಡಿದ ಬಳಿಕ ಕಲ್ಲು, ಮಣ್ಣು ಸಂಗ್ರಹಿಸಿ ವೈಜ್ಞಾನಿಕ ಪ್ರಯೋಗ ನಡೆಸುತ್ತದೆ ಎಂದು ಇಸ್ರೊ ತಿಳಿಸಿದೆ.

ಭಾರತವು ಚಂದ್ರನ ಅಂಗಳಕ್ಕೆ ಕಳುಹಿಸುತ್ತಿರುವ ಎರಡನೇ ಬಾಹ್ಯಾಕಾಶ ನೌಕೆ ಇದಾಗಿದೆ. ಈ ಹಿಂದೆ ಚಂದ್ರಯಾನ–1 ರಲ್ಲಿ ಚಂದ್ರನ ಕಕ್ಷೆಯಲ್ಲಿ ವೀಕ್ಷಣಾ ಉಪಗ್ರಹವು ಪರಿಭ್ರಮಣ ನಡೆಸಿ, ವೈಜ್ಞಾನಿಕ ಅಧ್ಯಯನ ನಡೆಸಿತ್ತು. ಚಂದ್ರನಲ್ಲಿ ನೀರು ಇರುವ ಮಹತ್ವದ ಅಂಶವನ್ನೂ ಪತ್ತೆ ಮಾಡಿತ್ತು.

ವಿಕ್ರಮ್‌ ಮತ್ತು ಪ್ರಗ್ಯಾನ್‌: ಈ ಬಾರಿ ಚಂದ್ರನ ಅಂಗಳದ ಮೇಲೆ ಇಳಿಯುವ ಲ್ಯಾಂಡರ್‌ಗೆ ‘ವಿಕ್ರಮ್‌’ ಮತ್ತು ರೋವರ್‌ಗೆ ‘ಪ್ರಗ್ಯಾನ್‌’ ಎಂದು ಹೆಸರಿಸಲಾಗಿದೆ. ಜಿಎಸ್‌ಎಲ್‌ವಿ ಮಾರ್ಕ್‌–3 ರಾಕೆಟ್‌ನಲ್ಲಿ ಲ್ಯಾಂಡರ್‌ ಮತ್ತು ರೋವರ್‌ ಅನ್ನು ಏಕೀಕೃತಗೊಳಿಸಿ ಇರಿಸಲಾಗುವುದು. ಲ್ಯಾಂಡರ್‌ ಒಳಗೆ ರೋವರ್‌ ಜೋಡಣೆಗೊಂಡಿರುತ್ತದೆ.

ಜಿಎಸ್‌ಎಲ್‌ವಿ ಮಾರ್ಕ್‌–3 ಚಂದ್ರ ಉಪಗ್ರಹದ ಕಕ್ಷೆಗೆ ಸೇರಿದಾಗ ಪ್ರಧಾನ ನೌಕೆಯಿಂದ ಪ್ರತ್ಯೇಕಗೊಳ್ಳುವ ಲ್ಯಾಂಡರ್‌ ಚಂದ್ರನ ನೆಲ ಸ್ಪರ್ಶಿಸುತ್ತದೆ. ನಂತರ ರೋವರ್‌ ಚಂದ್ರನ ಮೇಲ್ಮೈ ಮೇಲೆ ನಿಗದಿತ ವೈಜ್ಞಾನಿಕ ಪ್ರಯೋಗದ ಕಾರ್ಯಗಳನ್ನು ಆರಂಭಿಸುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು