ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ವೈನ್ ಡಿಸ್ಟಲರಿ ಆರಂಭಕ್ಕೆ ಸಿಎಂ ಸೂಚನೆ: ಸಚಿವ ನಾರಾಯಣಗೌಡ

ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರ ಪ್ರಯತ್ನಕ್ಕೆ ಯಶ
Last Updated 17 ಏಪ್ರಿಲ್ 2020, 14:46 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಲಾಕ್‍ಡೌನ್‍ನಿಂದ ಸಂಕಷ್ಟ ಸ್ಥಿತಿಗೆ ಸಿಲುಕಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ದ್ರಾಕ್ಷಿ ಬೆಳೆಗಾರರ ಹಿತ ರಕ್ಷಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದ್ರಾಕ್ಷಿಯಿಂದ ವೈನ್‌ ತಯಾರಿಸುವ ಡಿಸ್ಟಿಲರಿ ಆರಂಭಕ್ಕೆ ಶುಕ್ರವಾರ ಒಪ್ಪಿಗೆ ನೀಡಿದ್ದಾರೆ.

ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದಲ್ಲಿ ಬೆಳೆದಿರುವ ಬೆಂಗಳೂರು ಬ್ಲೂ ದ್ರಾಕ್ಷಿ ಲಾಕ್‌ಡೌನ್‌ ಕಾರಣಕ್ಕೆ ಹೊರ ರಾಜ್ಯಗಳ ಮಾರುಕಟ್ಟೆಗೆ ರವಾನೆಯಾಗದೆ, ಖರೀದಿದಾರರಿಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದರು.

ಬೆಳೆಗಾರರ ಸಮಸ್ಯೆ ಗಮನಕ್ಕೆ ಬರುತ್ತಿದ್ದಂತೆ ಜಿಲ್ಲಾ ಉಸ್ತುವಾರಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ತೋಟಗಾರಿಕೆ ಸಚಿವ ನಾರಾಯಣಗೌಡ ಮತ್ತು ಆ ಇಲಾಖೆ ಹಿರಿಯ ಅಧಿಕಾರಿಗಳ ಜತೆಗೆ ಹಲವು ಸುತ್ತಿನ ಮಾತುಕತೆ ನಡೆಸಿ, ದ್ರಾಕ್ಷಿಗೆ ಮಾರುಕಟ್ಟೆ ಕಲ್ಪಿಸುವ ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ.

ಜತೆಗೆ ಜ್ಯೂಸ್‌ ಮತ್ತು ವೈನ್‌ ತಯಾರಿಕೆಗೆ ಬಳಕೆಯಾಗುವಂತಹ ಬೆಂಗಳೂರು ಬ್ಲೂ ದ್ರಾಕ್ಷಿಯಿಂದವೈನ್‌ ತಯಾರಿಸುವ ಡಿಸ್ಟಿಲರಿಗಳ ಆರಂಭಿಸುವ ನಿಟ್ಟಿನಲ್ಲಿ ಸುಧಾಕರ್ ಅವರು ಸಚಿವ ನಾರಾಯಣಗೌಡ ಅವರೊಂದಿಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಶುಕ್ರವಾರ ಭೇಟಿ ಮಾಡಿ ಸರ್ಕಾರದ ಮೇಲೆ ಒತ್ತಡ ತಂದಿದ್ದರು.

ಅವಳಿ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದಲ್ಲಿ ಬೆಳೆದಿರುವ ದ್ರಾಕ್ಷಿ ಬೆಳೆ ವಿಲೇವಾರಿ ಅಸಾಧ್ಯ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡಿದ ಸಚಿವರು, ವೈನರಿ ಕಾರ್ಯಾರಂಭಕ್ಕೆ ಮತ್ತು ಅವುಗಳಿಗೆ ರೈತರು ದ್ರಾಕ್ಷಿ ಪೂರೈಸಲು ಅನುಮತಿ ನೀಡುವಂತೆ ಮನವಿ ಮಾಡಿದರು ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿ ಭೇಟಿ ಬಳಿಕ ಮಾತನಾಡಿದ ತೋಟಗಾರಿಕೆ ಸಚಿವ ನಾರಾಯಣಗೌಡ, ’ಜ್ಯೂಸ್‌, ವೈನ್‌ ತಯಾರಿಸುವ ಬೆಂಗಳೂರು ಬ್ಲೂ ದ್ರಾಕ್ಷಿ ದ್ರಾಕ್ಷಿ ವಿಲೇವಾರಿಗೆ ಡಿಸ್ಟಿಲರಿ ಸ್ಥಾಪಿಸಲು ಮುಖ್ಯಮಂತ್ರಿ ಅವರಿಗೆ ನಾನು, ಸುಧಾಕರ್ ಅವರು ಮನವಿ ಸಲ್ಲಿಸಿದೆವು. ಅದಕ್ಕೆ ಮುಖ್ಯಮಂತ್ರಿ ಅವರು ಒಪ್ಪಿಗೆ ಸೂಚಿಸಿದ್ದಾರೆ‘ ಎಂದು ಹೇಳಿದರು.

’ಶೀಘ್ರದಲ್ಲಿಯೇ ಡಿಸ್ಟಿಲರಿ ಸ್ಥಾಪನೆಯಾಗಲಿದೆ. ದ್ರಾಕ್ಷಿ ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ. ಧೈರ್ಯವಾಗಿರಬೇಕು‘ ಎಂದು ಸಚಿವರು ತಿಳಿಸಿದರು.

ತೋಟದಲ್ಲಿ ಕೊಯ್ಲಿಗೆ ಬಂದಿದ್ದ ದ್ರಾಕ್ಷಿ ಫಸಲು ಖರೀದಿದಾರರು ಇಲ್ಲದೆ ಕೊಳೆತು ಹೋಗುವುದು ಕಂಡು ಹತಾಶೆಗೆ ಒಳಗಾಗಿದ್ದ ದ್ರಾಕ್ಷಿ ಬೆಳೆಗಾರರಿಗೆ ಸರ್ಕಾರದ ಈ ನಿರ್ಧಾರ ಸಮಾಧಾನ ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT