ಶನಿವಾರ, ಜನವರಿ 25, 2020
22 °C
ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ

ಯಡಿಯೂರಪ್ಪಗೆ ಆರ್ಥಿಕ ನಿರ್ವಹಣೆ ಜ್ಞಾನವಿಲ್ಲ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಅಧಿಕಾರದ ಆಸೆ ಬಿಟ್ಟರೆ ಆರ್ಥಿಕ ನಿರ್ವಹಣೆಯ ಜ್ಞಾನವಿಲ್ಲ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಹೊಸಕೋಟೆಯನ್ನು ಮಾದರಿ ತಾಲ್ಲೂಕು ಮಾಡುತ್ತೇನೆ ಎಂದು ಹೇಳುವ ಯಡಿಯೂರಪ್ಪ ಅವರಿಗೆ, ಪ್ರವಾಹದಲ್ಲಿ ಆಸ್ತಿಪಾಸ್ತಿ ಕಳೆದುಕೊಂಡು ಬೀದಿಯಲ್ಲಿ ಬದುಕು ಸಾಗಿಸುತ್ತಿರುವ ಜನರು ಮರೆತು ಹೋಗಿದ್ದಾರೆ. ಅವರ ಬದುಕು ಸರಿ ಮಾಡುವುದು ಯಾವಾಗ, ಹುಸಿ ಭರವಸೆ ಮತ್ತು ಸುಳ್ಳು ಜಾಹಿರಾತು ಜನರ ಹೊಟ್ಟೆ ತುಂಬಿಸುತ್ತದೆಯೇ?’ ಎಂದು ಕೇಳಿದರು.

‘ಚುನಾವಣಾ ಸಮೀಕ್ಷೆಗಳ ಮೇಲೆ ನನಗೆ ನಂಬಿಕೆ ಇಲ್ಲ. ಅವೆಲ್ಲವೂ ಅಂದಾಜಿನ ಮೇಲೆ ನಡೆದಿರುತ್ತದೆ. ಸಚಿವರಾದ ಜಗದೀಶ ಶೆಟ್ಟರ್ ಮತ್ತು ಕೆ.ಎಸ್. ಈಶ್ವರಪ್ಪ ಮೊದಲಾದ ಬಿಜೆಪಿ ನಾಯಕರು ಮಹಾರಾಷ್ಟ್ರ, ಹರಿಯಾಣದ ಚುನಾವಣಾ ಫಲಿತಾಂಶವನ್ನು ಮರೆತು ಭ್ರಮೆಯಲ್ಲಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇನೆ ಎಂದವರೆಲ್ಲಾ ನಿಧಾನವಾಗಿ ಒಂದೊಂದೇ ರಾಜ್ಯಗಳಲ್ಲಿ ಕಣ್ಮರೆಯಾಗುತ್ತಿದ್ದಾರೆ. ನಮ್ಮ ಹಿತ ಕಾಯುವವರು ಯಾರು ಎನ್ನುವುದು ದೇಶದ ಜನಕ್ಕೆ ಕ್ರಮೇಣ ಅರ್ಥವಾಗುತ್ತಿದೆ. ಕಾಂಗ್ರೆಸ್‌ ಮುಕ್ತ ಭಾರತ ಮಾಡುವುದು ಎಂದೆಂದಿಗೂ ಸಾಧ್ಯವಿಲ್ಲ. ಬಿಜೆಪಿಯವರು ಭ್ರಮೆಯನ್ನು ಬಿಡಬೇಕು’ ಎಂದು ತಿರುಗೇಟು ನೀಡಿದರು.

‘ರಾಜ್ಯ ಸರ್ಕಾರವು ಆರ್ಥಿಕ ಪರಿಸ್ಥಿತಿ ನಿರ್ವಹಿಸುವಲ್ಲಿ ವಿಫಲವಾಗಿದೆ. ಕೇಂದ್ರದಿಂದ ಬರಬೇಕಿದ್ದ ಜಿಎಸ್‌ಟಿ ಸಂಗ್ರಹಣೆಯ ರಾಜ್ಯದ ಪಾಲು ₹ 5,600 ಕೋಟಿ ಬಂದಿಲ್ಲ. ಇದರಿಂದಲೂ ತೊಂದರೆಯಾಗಿದೆ. ಇದೇ ರೀತಿಯಾದರೆ ಜನರ ಗತಿ ಅಧೋಗತಿ, ದೇವರೇ ಗತಿ’ ಎಂದು ಹೇಳಿದರು.

‘ಯಡಿಯೂರಪ್ಪ ಅವರು ಕುರ್ಚಿ ಮೇಲೆ ಕುಳಿತು ಅಧಿಕಾರ ಉಳಿಸಿಕೊಳ್ಳಲು ಭಜನೆ ಮಾಡುವ ಬದಲಿಗೆ, ಪ್ರಧಾನಿ ನರೇಂದ್ರ ಮೋದಿ ಅವರ ಬಳಿಗೆ ಹೋಗಿ ಗಟ್ಟಿಯಾಗಿ ಮಾತನಾಡಬೇಕು. ಆಗ, ರಾಜ್ಯದ ಪಾಲಿನ ಅನುದಾನ ಬಂದು ಸರ್ಕಾರಿ ನೌಕರರಿಗೆ ಸಂಬಳವೂ ಸಿಗುತ್ತದೆ, ನೆರೆ ಸಂತ್ರಸ್ತರಿಗೆ ಪರಿಹಾರದ ಹಣವೂ ತಲುಪುತ್ತದೆ’ ಎಂದರು.

‘ಬಿಜೆಪಿ ಮತ್ತು ಜೆಡಿಎಸ್‌ನವರಿಗೆ ನನ್ನನ್ನು ಕಂಡರೆ ಭಯ ಅಥವಾ ಪ್ರೀತಿ ಇರಬೇಕು. ಹೀಗಾಗಿಯೇ, ಪದೇ ಪದೇ ನನ್ನ ಹೆಸರು ಪ್ರಸ್ತಾಪ ಮಾಡುತ್ತಾರೆ’ ಎಂದು ಪ್ರತಿಕ್ರಿಯಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು