ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಂತಕುಮಾರ ಹೆಗಡೆಗೆ ಹುಚ್ಚು ಹಿಡಿದಿದ್ದರೆ ಚಿಕಿತ್ಸೆ ಕೊಡಿಸಿ: ಬ್ರಿಜೇಶ್ ಕಾಳಪ್ಪ

ಕಾಂಗ್ರೆಸ್ ವಕ್ತಾರ ಸೇರಿ ಹಲವು ನಾಯಕರಿಂದ ಹೆಗಡೆ ಹೇಳಿಕೆಗೆ ಆಕ್ಷೇಪ
Last Updated 3 ಫೆಬ್ರುವರಿ 2020, 17:50 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾರವಾರ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಹುಚ್ಚು ಹಿಡಿದಿದ್ದರೆ ಮನೋವೈದ್ಯರ ಬಳಿ ಚಿಕಿತ್ಸೆ ಕೊಡಿಸಬೇಕು’ ಎಂದು ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಒತ್ತಾಯಿಸಿದ್ದಾರೆ.

ಲೋಕಸಭಾಧ್ಯಕ್ಷರಿಗೆ ಈ ಸಂಬಂಧ ಪತ್ರ ಬರೆದಿದ್ದು, ಹೆಗಡೆ ಅವರು ಮಹಾತ್ಮ ಗಾಂಧಿ, ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ ನೀಡಿರುವ ವಿವಾದಾತ್ಮಕ ಹೇಳಿಕೆಗಳನ್ನು ಉಲ್ಲೇಖಿಸಿದ್ದಾರೆ.

‘ಹೆಗಡೆ ಅವರ ಮಾತುಗಳನ್ನು ಗಮನಿಸಿದರೆ ಮಾನಸಿಕ ಆರೋಗ್ಯ ಸಮಸ್ಯೆ ಇದ್ದಂತೆ ಕಾಣುತ್ತಿದೆ. ಅದು ನಿಜವಾಗಿದ್ದರೆ ಸಂವಿಧಾನದ ನಿಯಮಾ
ನುಸಾರ ಅವರು ಸಂಸತ್ ಸದಸ್ಯರಾಗಿ ಮುಂದುವರಿಯುವಂತಿಲ್ಲ’ ಎಂದಿದ್ದಾರೆ.

ಸಭಾಧ್ಯಕ್ಷರು ಆಸಕ್ತಿ ವಹಿಸಿ ಹೆಗಡೆ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕು. ಅವರ ಮಾನಸಿಕ ಆರೋಗ್ಯ ಸ್ಥಿಮಿತವಾಗಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಹುಚ್ಚು ಹಿಡಿದಿರುವುದು ಕಂಡುಬಂದರೆ ತಜ್ಞ ಮನೋವೈದ್ಯರ ಬಳಿ ಚಿಕಿತ್ಸೆ ಕೊಡಿಸಬೇಕು. ನಂತರ ಕಾರವಾರ ಸಂಸತ್ ಸದಸ್ಯ ಸ್ಥಾನ ಖಾಲಿಯಾಗಿದೆ ಎಂದು ಘೋಷಿಸಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

‘ಸ್ವಾತಂತ್ರ್ಯ ಹೋರಾಟ ಒಂದು ರೀತಿಯಲ್ಲಿ ದೊಡ್ಡ ನಾಟಕದಂತೆ ಕಂಡುಬರುತ್ತದೆ. ಬ್ರಿಟಿಷರನ್ನು ಬೆಂಬಲಿಸಿದಂತೆ ಹೋರಾಟ ನಡೆದಿತ್ತು. ಮಹಾತ್ಮ ಗಾಂಧೀಜಿ ನಡೆಸಿದ ಹೋರಾಟ, ಉಪವಾಸ ಸತ್ಯಾಗ್ರಹ ಸಹ ಒಂದು ನಾಟಕ’ ಎಂದು ಹೆಗಡೆ ಇತ್ತೀಚೆಗೆ ಹೇಳಿದ್ದರು.

ವಿವಿಧ ಸಂದರ್ಭಗಳಲ್ಲಿ ನೀಡಿದ ವಿವಾದಾತ್ಮಕ ಹೇಳಿಕೆಗಳು, ಟ್ವೀಟ್‌ ಮಾಡಿದ್ದ ವಿವರಗಳನ್ನು ಪತ್ರದಲ್ಲಿ ನಮೂದಿಸಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ.

‘ಹೆಗಡೆಗೆ ಮಾನ, ಮರ್ಯಾದೆ ಇಲ್ಲ’

ಹುಬ್ಬಳ್ಳಿ: ‘ಅನಂತಕುಮಾರ ಹೆಗಡೆಗೆ ಮಾನ, ಮರ್ಯಾದೆ ಇಲ್ಲ. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ಸಂವಿಧಾನದ ಬಗ್ಗೆ ಅವರಿಗೆ ಕನಿಷ್ಠ ಗೌರವ ಇಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಸಂವಿಧಾನ ಓದಿ, ಅರ್ಥ ಮಾಡಿಕೊಳ್ಳದ ಇಂಥವರು ಹೇಗಾದರೂ ಸಂಸದರಾಗುತ್ತಾರೋ ತಿಳಿಯದಾಗಿದೆ. ಸಂವಿಧಾನ ಇಲ್ಲದಿದ್ದರೆ ಇವರು ಸಂಸದರಾಗಲು ಸಾಧ್ಯವಿತ್ತಾ’ ಎಂದು ಪ್ರಶ್ನಿಸಿದ ಅವರು‘ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿದ್ದಾಗಲೇ ಅವರ ವಿರುದ್ಧ ಕ್ರಮಕೈಗೊಳ್ಳಬೇಕಾಗಿತ್ತು’ ಎಂದರು.

‘ಉಪವಾಸಕ್ಕೆ ಹೆದರಿ ಬ್ರಿಟಿಷರು ಓಡಿಹೋಗಿಲ್ಲ’ ಎಂಬ ಹೇಳಿಕೆಯನ್ನು ಖಂಡಿಸಿದ ಅವರು, ‘ಗಾಂಧಿ, ನೆಹರೂ, ಪಟೇಲ್‌ ಜೊತೆ ಹೆಗಡೆ ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾಗಿದ್ರಲ್ಲಾ ಹೀಗಾಗಿ ತಮ್ಮ ಅನುಭವವನ್ನು ಹೇಳುತ್ತಿದ್ದಾರೆ’ ಎಂದು ಗೇಲಿ ಮಾಡಿದರು.

ದೇಶದ್ರೋಹ ಪ್ರಕರಣ ದಾಖಲಿಸಲು ಒತ್ತಾಯ

ನವದೆಹಲಿ ವರದಿ: ಮಹಾತ್ಮ ಗಾಂಧಿ ನೇತೃತ್ವದ ಸ್ವಾತಂತ್ರ್ಯ ಚಳವಳಿಯ ಕುರಿತು ಬಿಜೆಪಿ ನಾಯಕ ಅನಂತ್‌ಕುಮಾರ್ ಹೆಗಡೆ ನೀಡಿರುವ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಮತ್ತು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ಪ್ರಧಾನಿ ಅವರು ಸಂಸತ್ತಿಗೆ ಬಂದು ಹೆಗಡೆ ಅವರ ಆಕ್ಷೇಪಾರ್ಹ ಹೇಳಿಕೆಗಳ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದ್ದು, ಮೋದಿ ಅವರ ನಿಷ್ಠೆ ಮಹಾತ್ಮ ಗಾಂಧಿಯ ಪರವೋ ಅಥವಾ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಪರವೋ ಎಂಬುದನ್ನು ಸಾಬೀತುಪಡಿಸುವ ಸಮಯ ಇದಾಗಿದೆ ಎಂದೂ ಕಾಂಗ್ರೆಸ್ ಪ್ರತಿಪಾದಿಸಿದೆ.

‘ಬಿಜೆಪಿಯವರು ರಾಷ್ಟ್ರೀಯ ಚಳವಳಿಯನ್ನು ಅವಮಾನಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಪ್ರಾಮಾಣಿಕವಾಗಿದ್ದರೆ, ಪ್ರಧಾನಿ ಸಂಸತ್ತಿಗೆ ಬಂದು ತಮ್ಮ ನಿಲುವು ಸ್ಪಷ್ಟಪಡಿಸಲಿ’ ಎಂದು ಕಾಂಗ್ರೆಸ್ ಹಿರಿಯ ವಕ್ತಾರ ಆನಂದ್ ಶರ್ಮಾ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT