ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಸಿಸಿ ಪದಾಧಿಕಾರಿ ಸಮಿತಿ ವಿಸರ್ಜನೆ:ಮತ್ತೆ ಬಿಗಿ ಹಿಡಿತ ಸಾಧಿಸಿದ ಸಿದ್ದರಾಮಯ್ಯ

Last Updated 19 ಜೂನ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭೆ ಚುನಾವಣೆ ಸೋಲಿನ ನಂತರ ಎಚ್ಚೆತ್ತಿರುವ ಕಾಂಗ್ರೆಸ್ ವರಿಷ್ಠರು, ಕೆ‍ಪಿಸಿಸಿ ಪದಾಧಿಕಾರಿಗಳ ಸಮಿತಿಯನ್ನು ವಿಸರ್ಜಿಸುವ ಮೂಲಕ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ.

ಶಾಸಕ ರೋಷನ್ ಬೇಗ್ ಅವರನ್ನು ಅಮಾನತು ಮಾಡುವ ನಿರ್ಧಾರ ಹೊರಬಿದ್ದ ಬೆನ್ನಿಗೆ ಬುಧವಾರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರನ್ನು ಹೊರತುಪಡಿಸಿ ಉಳಿದ ಪದಾಧಿಕಾರಿಗಳ ಸಮಿತಿಯನ್ನು ವಿಸರ್ಜಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಆದೇಶಿಸಿದ್ದಾರೆ.

ತಳಮಟ್ಟದಿಂದ ಪಕ್ಷವನ್ನು ಬಲಪಡಿಸುವ ಪ್ರಯತ್ನಕ್ಕೆ ಚಾಲನೆ ನೀಡಿದ್ದು, ಶೀಘ್ರವೇ ಹೊಸ ಪದಾಧಿಕಾರಿಗಳು ನೇಮಕಗೊಳ್ಳಲಿದ್ದಾರೆ. ಲೋಕಸಭೆ ಚುನಾವಣೆಗೆ ಮುನ್ನ ಹಾಗೂ ಚುನಾವಣೆ ನಂತರದ ಬೆಳವಣಿಗೆಗಳನ್ನು ಗಮನಿಸಿರುವ ಹೈಕಮಾಂಡ್, ಸಮಿತಿ ವಿಸರ್ಜನೆಯ ನಿಲುವು ತಾಳಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಹೊಸಮುಖಗಳನ್ನು ನೇಮಿಸಲು ನಿರ್ಧರಿಸಿದೆ.

ಸಾಕಷ್ಟು ಪದಾಧಿಕಾರಿಗಳು ಲೋಕಸಭೆ ಚುನಾವಣೆ ಸಮಯದಲ್ಲೂ ಕೆಲಸ ಮಾಡಿಲ್ಲ. ಕೇವಲ ವಿಸಿಟಿಂಗ್ ಕಾರ್ಡ್ ಹಿಡಿದುಕೊಂಡು ಓಡಾಡುವಷ್ಟಕ್ಕೇ ಸೀಮಿತವಾಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈಚೆಗೆ ನಡೆದ ವಿಧಾನಸಭೆಯ ಎರಡು ಕ್ಷೇತ್ರಗಳ ಉಪಚುನಾವಣೆಗೆ ನಿಯೋಜಿಸಿದ ಹಲವು ಪದಾಧಿಕಾರಿಗಳು ಪ್ರಚಾರಕ್ಕೆ ಹೋಗದಿ
ರುವ ಬಗ್ಗೆ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದರು. ಕ್ರಮ ಕೈಗೊಳ್ಳುವ ಎಚ್ಚರಿಕೆಗೂ ಸೊಪ್ಪು ಹಾಕಿರಲಿಲ್ಲ.

ಮುಂದೆ ಯಾವ ಸಮಯದಲ್ಲಾದರೂ ವಿಧಾನಸಭೆಗೆ ಚುನಾವಣೆ ಎದುರಾಗುವ ಸಾಧ್ಯತೆಗಳಿದ್ದು, ಈಗಿನಿಂದಲೇ ಪಕ್ಷ ಸಂಘಟಿಸಿದರೆ ಚುನಾವಣೆ ಎದುರಿಸಲು ನೆರವಾಗಲಿದೆ ಎಂಬ ಲೆಕ್ಕಾಚಾರದ ಮೇಲೆಪದಾಧಿಕಾರಿಗಳನ್ನು ಬದಲಾವಣೆ ಮಾಡಲು ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದೆ.

ಭೇಟಿ ಫಲಪ್ರದ

ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಮೂರು ದಿನಗಳಿಂದ ಬೀಡುಬಿಟ್ಟಿದ್ದು, ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಭೇಟಿಯ ಪರಿಣಾಮವಾಗಿ ಮೊದಲಿಗೆ ರೋಷನ್‌ ಬೇಗ್ ಅಮಾತುಗೊಂಡಿದ್ದು, ಈಗ ಪದಾಧಿಕಾರಿಗಳ ಸಮಿತಿ ವಿಸರ್ಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ಸಾಕಷ್ಟು ಸಮಯ ಕೆಪಿಸಿಸಿ ಅಧ್ಯಕ್ಷರಾಗಿದ್ದರು.

ಪದಾಧಿಕಾರಿಗಳ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯರು ಹಾಗೂ ಪರಮೇಶ್ವರ ಬೆಂಬಲಿಗರು ಇದ್ದು, ಇದರಿಂದ ಪಕ್ಷ ಸಂಘಟನೆ ಸಾಧ್ಯವಾಗುತ್ತಿಲ್ಲ. ಪ್ರಮುಖ ಪದಾಧಿಕಾರಿಗಳ ಸ್ಥಾನಗಳಲ್ಲಿ 290 ಮುಖಂಡರು ಇದ್ದರೂ ಸಕ್ರಿಯವಾಗಿ ಕೆಲಸ ಮಾಡುತ್ತಿಲ್ಲ, ಪಕ್ಷ ಸಂಘಟನೆಯಿಂದ ದೂರ ಉಳಿದಿದ್ದಾರೆ. ಪದಾಧಿಕಾರಿಗಳು ಸರಿಯಾಗಿ ಕೆಲಸ ಮಾಡದ ಕಾರಣ ಲೋಕಸಭೆ ಚುನಾವಣೆಯಲ್ಲಿ ಸೋಲಬೇಕಾಯಿತು ಎಂದು ಸಿದ್ದರಾಮಯ್ಯ ದೂರು ನೀಡಿದ್ದ ಹಿನ್ನೆಲೆಯಲ್ಲಿ ಸಮಿತಿ ವಿಸರ್ಜನೆಗೆ ವರಿಷ್ಠರು ಆದೇಶಿಸಿದ್ದಾರೆ ಎನ್ನಲಾಗಿದೆ.

ಪಕ್ಷದಲ್ಲಿ ಹಳಬರು–ಹೊಸಬರು ಎಂಬ ತಾಕಲಾಟದ ನಡುವೆ ಸಿದ್ದರಾಮಯ್ಯ ಪಕ್ಷದಲ್ಲಿ ಮೇಲುಗೈ ಸಾಧಿಸಿದ್ದಾರೆ. ಅವರು ನೀಡಿದ್ದ ಎಲ್ಲ ಸಲಹೆಗಳು, ಬೇಡಿಕೆಗಳಿಗೆ ಹೈಕಮಾಂಡ್ ಸ್ಪಂದಿಸಿದೆ. ಮುಂದೆ ಪದಾಧಿಕಾರಿಗಳ ನೇಮಕದಲ್ಲಿ ಸಿದ್ದರಾಮಯ್ಯ ಬೆಂಬಲಿಗರಿಗೆ ಹೆಚ್ಚು ಅವಕಾಶಗಳು ಸಿಗಲಿದ್ದು, ಪಕ್ಷದಲ್ಲಿ ಮತ್ತಷ್ಟು ಹಿಡಿತ ಸಾಧಿಸಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಇಲ್ಲ

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಬದಲಾವಣೆಗೂ ಹೈಕಮಾಂಡ್ ಒಲವು ತೋರಿದ್ದರೂ ಅವರನ್ನೇ ಮುಂದುವರಿಸಲು ಸಿದ್ದರಾಮಯ್ಯ ಸಲಹೆ ನೀಡಿದ್ದು, ಅದಕ್ಕೆ ವರಿಷ್ಠರು ಹಸಿರು ನಿಶಾನೆ ತೋರಿದ್ದಾರೆ.

ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ದಿನೇಶ್ ಗುರುತಿಸಿಕೊಂಡಿರುವುದು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

ಜತೆಗೆ ಸಚಿವ ಡಿ.ಕೆ.ಶಿವಕುಮಾರ್ ಸಹ ದಿನೇಶ್ ಪರ ನಿಂತಿದ್ದಾರೆ. ಸದ್ಯದ ಪರಿಸ್ಥಿಯಲ್ಲಿ ಬದಲಾವಣೆ ಬೇಡ ಎಂದು ಸಲಹೆ ಮಾಡಿದ್ದಾರೆ ಎನ್ನಲಾಗಿದೆ. ಹಾಗಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರನ್ನೇ ಮುಂದುವರಿಸಲು ಹೈಕಮಾಂಡ್ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಪಕ್ಷ ಸಂಘಟನೆಗೆ ಚಾಲನೆ

ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್, ಎ.ಕೆ.ಆ್ಯಂಟನಿ ಅವರ ಜತೆಗೆ ಪಕ್ಷ ಸಂಘಟನೆ, ಪಕ್ಷದ ಆಂತರಿಕ ವಿಚಾರಗಳು, ರಾಜ್ಯದ ಪ್ರಮುಖ ಬೆಳವಣಿಗೆಗಳ ಬಗ್ಗೆ ಸಿದ್ದರಾಮಯ್ಯ ಸುಧೀರ್ಘ ಚರ್ಚೆ ನಡೆಸಿದ್ದಾರೆ.

ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಪಕ್ಷ ಸಜ್ಜುಗೊಳಿಸುವ ಹೊಣೆಯನ್ನು ಸಿದ್ದರಾಮಯ್ಯ ಅವರಿಗೆ ವರಿಷ್ಠರು ವಹಿಸಿದ್ದಾರೆ ಎನ್ನಲಾಗಿದೆ.

ವಿಸರ್ಜಿಸಿದ ಒಟ್ಟು ಸ್ಥಾನಗಳು

19 ಉಪಾಧ್ಯಕ್ಷರು

90 ಪ್ರಧಾನ ಕಾರ್ಯದರ್ಶಿಗಳು

181 ಕಾರ್ಯದರ್ಶಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT