ಸೋಮವಾರ, ಜುಲೈ 26, 2021
26 °C
ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅಭಿಪ್ರಾಯ ಪಡೆಯದೇ ಅಭ್ಯರ್ಥಿ ಘೋಷಣೆ

‘ಕೈ’ ಪಾಳಯಕ್ಕೆ ಅಚ್ಚರಿ ಮೂಡಿಸಿದ ಹೈಕಮಾಂಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯಸಭೆಯ ಒಂದು ಸ್ಥಾನಕ್ಕೆ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದು ರಾಜ್ಯ ಕಾಂಗ್ರೆಸ್‌ ನಾಯಕರ ಅಚ್ಚರಿಗೆ ಕಾರಣವಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅಥವಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಅಭಿಪ್ರಾಯ ಪಡೆಯದೇ ಖರ್ಗೆ ಹೆಸರನ್ನು ಹೈಕಮಾಂಡ್‌ ಘೋಷಿಸಿದೆ.

ಅಭ್ಯರ್ಥಿಗಳ ಸಂಭಾವ್ಯ ಪಟ್ಟಿಯನ್ನು ತಯಾರಿಸಿ ಹೈಕಮಾಂಡ್‌ಗೆ ಕಳಿಸಲು ಶಿವಕುಮಾರ್‌ ಅವರು ಶುಕ್ರವಾರ ಸಂಜೆ ಹಿರಿಯ ನಾಯಕರ ಸಭೆಯನ್ನು ಕರೆದಿದ್ದರು. ಆದರೆ, ಸಭೆ ಸೇರುವ ಮೊದಲೇ ಹೈಕಮಾಂಡ್,‌ ಖರ್ಗೆ ಅವರ ಹೆಸರು ಪ್ರಕಟಿಸಿತು. ರಾಜ್ಯ ನಾಯಕರಿಗೆ ಇದರ ಸುಳಿವೂ ಇರಲಿಲ್ಲ ಎಂದು ಮೂಲಗಳು ಹೇಳಿವೆ.

ಹೈಕಮಾಂಡ್ ತೀರ್ಮಾನ ಪಾಲನೆ: ಖರ್ಗೆ ಆಯ್ಕೆ ಬಗ್ಗೆ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್‌, ‘ಇದು ರಾಷ್ಟ್ರೀಯ ನಾಯಕರು ತೆಗೆದುಕೊಂಡಿರುವ ತೀ‌ರ್ಮಾನ. ಇವತ್ತಿನವರೆಗೂ ಈ ಬಗ್ಗೆ ನನ್ನ ಬಳಿ ಯಾರೂ ಚರ್ಚೆ ಮಾಡಿಲ್ಲ. ರಾಷ್ಟ್ರೀಯ ನಾಯಕರು ನಮಗೆ ನೀಡುವ ಆದೇಶವನ್ನು ಪಾಲಿಸುವುದಷ್ಟೇ ನಮ್ಮ ಕೆಲಸ’ ಎಂದು ಹೇಳಿದ್ದಾರೆ.

ದೇವೇಗೌಡರನ್ನು ಬೆಂಬಲಿಸುವ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ‘ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ನಮಗೆ ನೀಡುವ ಆದೇಶವನ್ನು ಪಾಲಿಸುತ್ತೇನೆ. ಕುಮಾರಸ್ವಾಮಿ ಹಿರಿಯರು ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ’ ಎಂದರು.

ಸಿದ್ದರಾಮಯ್ಯ ಟ್ವೀಟ್‌: ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಪಕ್ಷದ ಅಧ್ಯಕ್ಷೆ ಸೋನಿಯಾ
ಗಾಂಧಿ ಮತ್ತು  ನಾಯಕರಾದ ರಾಹುಲ್‌ ಗಾಂಧಿ ಅವರಿಗೆ ಧನ್ಯವಾದಗಳು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಕೆ.ವಿ.ಕಾಮತ್, ಸುಧಾಮೂರ್ತಿ ಹೆಸರು ಮುಂಚೂಣಿಯಲ್ಲಿ
ಬಿಜೆಪಿಯ ಎರಡು ಸ್ಥಾನಗಳಿಗೆ ಹಲವು ಹೆಸರುಗಳು ಮುಂಚೂಣಿಗೆ ಬಂದಿದ್ದು, ಆ ಪೈಕಿ ಪ್ರಮುಖವಾಗಿ ಐಸಿಐಸಿಐ ಬ್ಯಾಂಕಿನ ಮಾಜಿ ಅಧ್ಯಕ್ಷ ಕೆ.ವಿ.ಕಾಮತ್ ಮತ್ತು ಇನ್ಫೊಸಿಸ್‌ ಪ್ರತಿಷ್ಠಾನದ ಸುಧಾಮೂರ್ತಿ ಅವರ ಹೆಸರು ಪ್ರಧಾನವಾಗಿ ಕೇಳಿ ಬಂದಿದೆ.

ಎರಡು ಸ್ಥಾನಗಳಲ್ಲಿ ಒಂದನ್ನು ರಾಜಕೀಯ ಕ್ಷೇತ್ರದವರಿಗೆ ಇನ್ನೊಂದು ಸಾಮಾಜಿಕ ಕ್ಷೇತ್ರದಲ್ಲಿ ಶ್ರಮಿಸಿದವರಿಗೆ ನೀಡಬಹುದು. ಕೆ.ವಿ.ಕಾಮತ್‌ ಮಂಗಳೂರಿನವರು. ಸದ್ಯಕ್ಕೆ ಅವರು ಬ್ರಿಕ್ಸ್‌ ದೇಶಗಳ ಬ್ಯಾಂಕ್‌ನ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿವಿಧ ಕ್ಷೇತ್ರಗಳ ತಜ್ಞರನ್ನು ರಾಜ್ಯಸಭೆಗೆ ತರಬೇಕು ಎಂಬುದು ಪ್ರಧಾನಿ ಮೋದಿ ಅವರ ಉದ್ದೇಶ. ಈ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರೇ ಈ ಹೆಸರು ಸೂಚಿಸಿರಬಹುದು ಎಂದು ಮೂಲಗಳು ಹೇಳಿವೆ

ಶನಿವಾರ ನಡೆಯುವ ಬಿಜೆಪಿ ಪ್ರಮುಖರ ಸಭೆಯಲ್ಲಿ ಕೆಲವು ಹೆಸರುಗಳನ್ನು ಅಂತಿಮಗೊಳಿಸಿ ವರಿಷ್ಠರಿಗೆ ಕಳುಹಿಸಲಾಗುವುದು. ಅಲ್ಲಿ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳ್ಳಲಿದೆ. ವಿಧಾನಪರಿಷತ್‌ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ಬರುವ ಸಾಧ್ಯತೆ ಇಲ್ಲ ಎಂದು ಮೂಲಗಳು ಹೇಳಿವೆ.

ಈ ಮಧ್ಯೆ ಹಿರಿಯ ಶಾಸಕ ಉಮೇಶ‌ ಕತ್ತಿ ತಮ್ಮ ಸಹೋದರ ರಮೇಶ ಕತ್ತಿ ಪರ ಒತ್ತಡವನ್ನು ಮುಂದುವರಿಸಿದ್ದಾರೆ. ಶುಕ್ರವಾರವೂ ಆಪ್ತರ ಜತೆ ಕತ್ತಿ ಸಹೋದರರು ಚರ್ಚೆ ನಡೆಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು