ಸೋಮವಾರ, ಮೇ 17, 2021
23 °C
ಮತದಾರರ ವಿರುದ್ಧ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅಸಮಾಧಾನ

‘ಅನ್ನಭಾಗ್ಯ ಯೋಜನೆ ತಂದರೂ ಬಿಜೆಪಿಗೆ ಮತ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ/ಬಾಗಲಕೋಟೆ: ‘ಪಂಚಾಯ್ತಿಗಳಿಗೆ ಅನುದಾನ, ಬಡವರಿಗಾಗಿ ಅನ್ನಭಾಗ್ಯ, ವಿದ್ಯಾರ್ಥಿಗಳಿಗೆ ಶೂಭಾಗ್ಯ ತಂದಿದ್ದು ನಾವು. ಆದರೂ, ಜನ ಬಿಜೆಪಿಗೆ ವೋಟ್‌ ಹಾಕಿದರು’ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಬೇಸರ ವ್ಯಕ್ತಪಡಿಸಿದರು.

ಬಾದಾಮಿ ತಾಲ್ಲೂಕಿನ ಆಲೂರ ಎಸ್.ಕೆ. ಗ್ರಾಮದಲ್ಲಿ ಮಾತನಾಡಿದ ಅವರು, ‘ಬಾದಾಮಿ ಶಾಸಕನಾದ ಮೇಲೆ ಕ್ಷೇತ್ರಕ್ಕೆ ₹1,300 ಕೋಟಿ ಅನುದಾನ ತಂದಿದ್ದೇನೆ. ಆದರೂ ಜನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 9 ಸಾವಿರ ಮತಗಳ ಮುನ್ನಡೆ ಕೊಟ್ಟಿದ್ದಾರೆ’ ಎಂದು ಅಸಮಾಧಾನ ಹೊರಹಾಕಿದರು.

ವೋಟ್‌ ಮೋದಿಗೆ, ಕೆಲಸಕ್ಕೆ ನಾನಾ ಎಂಬ ಮುಖ್ಯಮಂತ್ರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಅವರು ಯಾವ ಅರ್ಥದಲ್ಲಿ ಆ ರೀತಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ’ ಎಂದರು.

ಮಧ್ಯಂತರ ಚುನಾವಣೆ ಬರಬಹುದು ಎನ್ನುವ ಬಸವರಾಜ ಹೊರಟ್ಟಿ ಹೇಳಿಕೆಗೆ ‘ಕೆಲವರಿಗೆ ದಿವ್ಯಜ್ಞಾನ ಇರುತ್ತದೆ. ಅದರ ಆಧಾರದ ಮೇಲೆ ಅವರು ಹೇಳಿಕೆ ಕೊಡುತ್ತಾರೆ. ನನಗೆ ಆ ಜ್ಞಾನವಿಲ್ಲ’ ಎಂದು ವ್ಯಂಗ್ಯವಾಡಿದರು.

ಜೆಡಿಎಸ್‌ ಜೊತೆಗಿನ ಮೈತ್ರಿಯಿಂದಲೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲು ಅನುಭವಿಸಿತು ಎಂದು ಯಾರೂ ಹೇಳಲಿಲ್ಲ ಎಂದು  ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಬಾದಾಮಿಗೆ ತೆರಳುವ ಮೊದಲು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ‘ಲೋಕಸಭಾ ಚುನಾವಣೆಯಲ್ಲಿ ನಮ್ಮ ಸೋಲಿಗೆ ಹಲವಾರು ಕಾರಣಗಳಿವೆ. ಇದರ ಬಗ್ಗೆ ಪಕ್ಷದ ಸಭೆಯಲ್ಲಿ ಚರ್ಚೆಯಾಗಿದೆ. ಎಲ್ಲ ವಿಷಯಗಳನ್ನೂ ಬಹಿರಂಗವಾಗಿ ಚರ್ಚಿಸಲು ಆಗುವುದಿಲ್ಲ’ ಎಂದರು.

ಬೆಂಗಳೂರಿನಲ್ಲಿ ಬುಧವಾರ ನಡೆದಿದ್ದ ಕಾಂಗ್ರೆಸ್‌ ನಾಯಕರ ಸಭೆಯಲ್ಲಿ ಮೈತ್ರಿ ಸರ್ಕಾರ ರಚಿಸಿದ್ದೇ ಸೋಲಿಗೆ ಕಾರಣ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ, ಸಿದ್ದರಾಮಯ್ಯ ಅದನ್ನು ಇಲ್ಲಿ ತಳ್ಳಿ ಹಾಕಿದರು.

ಪಕ್ಷ ಸಂಘಟನೆಗೆ ಅಹಿಂದ ಸಮಾವೇಶ ಮಾಡುತ್ತೀರಾ ಎನ್ನುವ ಸುದ್ದಿಗಾರರ ಪ್ರಶ್ನೆಗೆ ‘ಕಾಂಗ್ರೆಸ್ ಯಾವಾಗಲೂ ಸಾಮಾಜಿಕ ನ್ಯಾಯದ ಪರವಾಗಿದೆ. ನಾವು ಅಹಿಂದ ಪರ ಇದ್ದೇವೆ. ಪ್ರತ್ಯೇಕವಾಗಿ ಸಮಾವೇಶ ಮಾಡುವ ಪ್ರಶ್ನೆಯೇ ಬರುವುದಿಲ್ಲ’ ಎಂದರು.

‘ಗ್ರಾಮ ವಾಸ್ತವ್ಯದಿಂದ ಬಿಜೆಪಿಗೆ ಅಸೂಯೆ’

ವಿಜಯಪುರ: ‘ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಗ್ರಾಮವಾಸ್ತವ್ಯದಿಂದ ಬಿಜೆಪಿಯವರಿಗೆ ಅಸೂಯೆ ಉಂಟಾಗಿದೆ. ಹೀಗಾಗಿ ಅಡೆತಡೆ ಮಾಡುತ್ತಿದ್ದಾರೆ’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಆರೋಪಿಸಿದರು.

‘ವೋಟ್ ಮಾಡೋಕೆ ಮೋದಿ ಬೇಕು, ಕೆಲಸ ಮಾಡೋಕೆ ನಾನು ಬೇಕಾ?’ ಎಂಬ ಕುಮಾರಸ್ವಾಮಿ ಹೇಳಿಕೆ ಕುರಿತು ಗುರುವಾರ ಪ್ರತಿಕ್ರಿಯಿಸಿದ ಅವರು, ‘ಅಲ್ಲಿ ಪ್ರತಿಭಟನಾಕಾರರಿಗಿಂತ ರಾಜಕೀಯದವರೇ ಹೆಚ್ಚಾಗಿ ಇದ್ದರು. ಬಿಜೆಪಿಯವರು ಯಾವುದೇ ಕಾರ್ಯಕ್ರಮ ಮಾಡಿದಾಗ ನಾವು ಅಡೆತಡೆ ಮಾಡಿಲ್ಲ. ಅವರು ಕೂಡ ಈ ರೀತಿ ಮಾಡುವುದು ಸರಿಯಲ್ಲ’ ಎಂದರು.

ಸಿಎಂ ಹೇಳಿಕೆ ಸಮರ್ಥಿಸಿಕೊಂಡ ಸಚಿವ ಕೃಷ್ಣ ಬೈರೇಗೌಡ

ಕೊಪ್ಪಳ: ‘ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯವನ್ನು ಯಾರೂ ವಿರೋಧಿಸುವುದಿಲ್ಲ. ಇದು ಜನಪ್ರಿಯ ಕಾರ್ಯಕ್ರಮ. ಇದಕ್ಕೆ ಅಡ್ಡಿಪಡಿಸುವ ಉದ್ದೇಶದಿಂದಲೇ ಬಿಜೆಪಿಯವರು ಕುತಂತ್ರ ನಡೆಸಿದ್ದಾರೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದರು.

‘ಮುಖ್ಯಮಂತ್ರಿ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ರಾಯಚೂರು ಜಿಲ್ಲೆಯ ಗ್ರಾಮ ವಾಸ್ತವ್ಯಕ್ಕೆ ತೆರಳುವಾಗ ವಿಳಂಬವಾಗುತ್ತಿದೆ ಎಂದು ಸಹಜವಾಗಿ ಕೋಪ ಬಂದಿದೆ. ಹೀಗಾಗಿ ‘ಮೋದಿಗೆ ಮತ ಹಾಕಿ, ಸಮಸ್ಯೆ ಬಗೆಹರಿಸುವಂತೆ ನಮ್ಮನ್ನು ಕೇಳುತ್ತೀರಾ’ ಎಂದಿದ್ದಾರೆ.  ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಗ್ರಾಮ ವಾಸ್ತವ್ಯದ ನೈಜ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳಬೇಕು’ ಎಂದು ಗುರುವಾರ ಇಲ್ಲಿ ಪ್ರತಿಕ್ರಿಯಿಸಿದರು.

‘ಜಲಾಮೃತ ಯೋಜನೆ ಜಾರಿ ಮಾಡಿ ರಾಜ್ಯದಲ್ಲಿ 20 ಸಾವಿರ ಚೆಕ್ ಡ್ಯಾಂಗಳನ್ನು ನಿರ್ಮಿಸಿ ಅಂತರ್ಜಲ ಹೆಚ್ಚಿಸಲು ಮುಂದಾಗಿದ್ದೇವೆ. ಈ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಯೋಜನೆ ಅನುಷ್ಠಾನದ ಸಾಧ್ಯತೆಯ ಅಧ್ಯಯನ ನಡೆಸಿದ್ದೇನೆ’ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು