ಸೋಮವಾರ, ಮಾರ್ಚ್ 30, 2020
19 °C
ಕಾಂಗ್ರೆಸ್‌ ನಿರ್ಣಯ: ದೊರೆಸ್ವಾಮಿ ವಿರುದ್ಧ ಟೀಕೆಗೆ ಸಿಡಿಮಿಡಿ l ಶಾಸಕ ಸ್ಥಾನ ರದ್ದುಪಡಿಸಲು ಆಗ್ರಹ

ಯತ್ನಾಳ ಕ್ಷಮೆ ಕೇಳದಿದ್ದರೆ ಅಧಿವೇಶನಕ್ಕೆ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎಚ್.ಎಸ್.ದೊರೆಸ್ವಾಮಿ ಅವರನ್ನು ‘ನಕಲಿ ಸ್ವಾತಂತ್ರ್ಯ ಹೋರಾಟಗಾರ’ ಎಂದು ಟೀಕಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ವಿಧಾನ ಮಂಡಲದ ಅಧಿವೇಶನ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಕಾಂಗ್ರೆಸ್ ಮುಖಂಡರು ಎಚ್ಚರಿಸಿದರು.

ವಿಧಾನಸೌಧ ಆವರಣದಲ್ಲಿ ಇರುವ ಗಾಂಧಿ ಪ್ರತಿಮೆ ಎದುರು ಬುಧವಾರ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರು, ಯತ್ನಾಳ ವಿರುದ್ಧ ದೂರು ದಾಖಲಿಸಿ ಕ್ರಮ ಕೈಗೊಳ್ಳುವವರೆಗೂಹೋರಾಟ ಮುಂದುವರಿಸಲು ನಿರ್ಧರಿಸಿದರು.

‘ದೊರೆಸ್ವಾಮಿ ಅವರ ಪಾದ ಮುಟ್ಟಿ ಯತ್ನಾಳ ಕ್ಷಮೆ ಕೇಳಬೇಕು. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು. ಶಾಸಕ ಸ್ಥಾನ ರದ್ದುಪಡಿಸಲು ಕ್ರಮಕೈಗೊಂಡು, ಪಕ್ಷದಿಂದ ಉಚ್ಚಾಟಿಸಬೇಕು. ಕ್ರಮ ಜರುಗಿಸದಿದ್ದರೆ ವಿಧಾನಸಭೆ ಅಧಿವೇಶನಕ್ಕೂ ಬರಲು ಅವಕಾಶ ನೀಡುವುದಿಲ್ಲ’ ಎಂದು ಎಚ್ಚರಿಸಿದರು.

‘ಯತ್ನಾಳ ಹೇಳಿಕೆ ಹಿಂದೆ ಸಂಘ ಪರಿವಾರ, ಬಿಜೆಪಿಯವರ ಚಿತಾವಣೆ ಇದೆ. ದೊರೆಸ್ವಾಮಿ ಅವರನ್ನು ಟೀಕಿಸುವ ಮೂಲಕ ಇಡೀ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿದ್ದಾರೆ. ಕ್ರಮ ಜರುಗಿಸುವವರೆಗೂ ಹೋರಾಟ ನಿಲ್ಲದು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಶಾಸಕರಾದ ಜಿ.ಪರಮೇಶ್ವರ, ಎಚ್.ಕೆ.ಪಾಟೀಲ, ಕೆ.ಆರ್‌. ರಮೇಶ್ ಕುಮಾರ್, ರಾಮಲಿಂಗಾರೆಡ್ಡಿ, ಈಶ್ವರ ಖಂಡ್ರೆ, ಸಿಪಿಎಂ ಮುಖಂಡ ಜಿ.ಎನ್.ನಾಗರಾಜ್ ಸಹ ಯತ್ನಾಳ ವಿರುದ್ಧ ವಾಗ್ದಾಳಿ ನಡೆಸಿದರು. 

‘ದೊರೆಸ್ವಾಮಿ ನಾಲಿಗೆ ಹಿಡಿತದಲ್ಲಿಟ್ಟುಕೊಳ್ಳಲಿ’( ಕೊಪ್ಪಳ ವರದಿ): ‘ಶಾಸಕಬಸನಗೌಡ ಪಾಟೀಲ ಯತ್ನಾಳ ಆಡಿರುವ ಮಾತಿಗೆ ಎಚ್.ಎಸ್.ದೊರೆಸ್ವಾಮಿ ಅವರೇ ಕಾರಣ. ಶತಾಯುಷಿಯಾಗಿರುವ ದೊರೆಸ್ವಾಮಿತಮ್ಮ ನಾಲಿಗೆಯನ್ನು ಹಿಡಿತದಲ್ಲಿಟ್ಟಕೊಳ್ಳಬೇಕು’ ಎಂದು ವಸತಿ ಸಚಿವ ವಿ.ಸೋಮಣ್ಣ ಹರಿಹಾಯ್ದರು.

‘ಹಿರಿಯರಾದವರು ಅಳೆದು ತೂಗಿ ಮಾತನಾಡಿದರೆ ಯಾವುದೇ ತರಹದ ವಿರೋಧ ಇರಲ್ಲ. ಅವರು ಮಾರ್ಗದರ್ಶನ ಮಾಡಿ, ನಮ್ಮನ್ನು ತಿದ್ದಬೇಕು’ ಎಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.

ಯತ್ನಾಳ ಆರೋಪಕ್ಕೆ ಸಾಣೇಹಳ್ಳಿ ಶ್ರೀ ಅಸಮಾಧಾನ(ಚಿತ್ರದುರ್ಗ ವರದಿ): ಶಾಸಕ ಯತ್ನಾಳ ಮಾಡಿದ ಆರೋಪಕ್ಕೆ ಸಾಣೇಹಳ್ಳಿಯ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸ್ವಾಮೀಜಿ ಆಡಿದ ಮಾತುಗಳ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ
ಹರಿದಾಡುತ್ತಿದೆ. ‘ದೊರೆಸ್ವಾಮಿ ಅವರಂತಹ ಹಿರಿಯ ಜೀವಿಗಳು ಆನೆ ಇದ್ದಂತೆ. ಆನೆ ನಡೆದಾಡುವಾಗ ನಾಯಿ ಬೊಗಳಿದರೆ ಆನೆಗೆ ಯಾವ ತೊಂದರೆಯೂ ಆಗುವುದಿಲ್ಲ ಎಂಬುದನ್ನು ದೊರೆಸ್ವಾಮಿ ಬಗ್ಗೆ ಮಾತನಾಡುವವರು ಗಮನಿಸಬೇಕು’ ಎಂದು ಹೇಳಿದ್ದಾರೆ.

ಯತ್ನಾಳ ಉಚ್ಚಾಟನೆಗೆ ಆಗ್ರಹ: ಯತ್ನಾಳ ಅವರನ್ನು ಬಿಜೆಪಿಯಿಂದ ಉಚ್ಚಾಟಿಸುವಂತೆ ರೈತ ಹಾಗೂ ದಲಿತ ಸಂಘಟನೆಗಳು ಒತ್ತಾಯಿಸಿವೆ. ಯತ್ನಾಳ ಹೇಳಿಕೆಯನ್ನು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌, ದಲಿತ ಮುಖಂಡರಾದ ಲಕ್ಷ್ಮೀನಾರಾಯಣ ನಾಗವಾರ ಹಾಗೂ ಮಾವಳ್ಳಿ ಶಂಕರ್ ಖಂಡಿಸಿದ್ದಾರೆ.

********

ಹೇಳಿಕೆಗೆ ಬದ್ಧ

ವಿಜಯಪುರ: ‘ದೊರೆಸ್ವಾಮಿ ನಕಲಿ ಸ್ವಾತಂತ್ರ್ಯ ಹೋರಾಟಗಾರ, ಅವರು ಪಾಕ್, ಕಾಂಗ್ರೆಸ್ ಮತ್ತು ಜೆಡಿಎಸ್ ಏಜೆಂಟ್‌ ಎಂಬ ನನ್ನ ಹೇಳಿಕೆಗೆ ನಾನು ಈಗಲೂ ಬದ್ಧನಿದ್ದೇನೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ದೊರೆಸ್ವಾಮಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖವಾಣಿ. ದೇಶದ್ರೋಹಿ ಘೋಷಣೆ ಕೂಗಿದ ಅಮೂಲ್ಯಾ ವಿರುದ್ಧ ಅವರೇಕೆ ಮಾತನಾಡಲಿಲ್ಲ. ಕಾಂಗ್ರೆಸ್‌
ನವರು ನನ್ನ ವಿರುದ್ಧ ಹೋರಾಡುವ ಬದಲು ದೇಶ ವಿರೋಧಿ ಚಟುವಟಿಕೆ ಮಾಡುವವರ ವಿರುದ್ಧ ಹೋರಾಡಲಿ. ಗೊಡ್ಡು ಬೆದರಿಕೆಗಳಿಗೆ ನಾನು ಹೆದರುವುದಿಲ್ಲ’ ಎಂದು ಗುಡುಗಿದರು.

‘ದೇಶದ್ರೋಹಿ ಹೇಳಿಕೆ ನೀಡಿದರೆ ಗುಂಡೇಟು ಬೀಳುತ್ತವೆ ಎಂದು ಹೇಳಿದ್ದೆ. ಡೊನಾಲ್ಡ್ ಟ್ರಂಪ್‌ ಭಾರತ ಭೇಟಿ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಸುಮ್ಮನಿದ್ದರು. ಈಗ ಟ್ರಂಪ್‌ ವಾಪಸುಹೋಗಿದ್ದು, ದೆಹಲಿಯಲ್ಲಿ ಕಾರ್ಯಾಚರಣೆ ಆರಂಭವಾಗಿದೆ’ ಎಂದರು.

‘ದೇಶದ್ರೋಹಿಗಳು ನೇರವಾಗಿ ಜನ್ನತ್‌ಗೆ ಹೋಗಬೇಕಿದೆ. ಜನ್ನತ್‌ನಲ್ಲಿರುವ 72 ಕನ್ಯೆಯರು ಭಾರತದಲ್ಲಿರುವ ಪಾಕಿಸ್ತಾನದ ಏಜೆಂಟರ ಸೇವೆಗೆ ಕಾಯುತ್ತಿದ್ದಾರೆ. ಈ ಹಿಂದೆ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ
ಪೊಲೀಸರು ಕಠಿಣ ನಿರ್ಣಯ ಕೈಗೊಳ್ಳದಿದ್ದರೆ ದೆಹಲಿ ಮಾದರಿಯಲ್ಲಿ ಹಿಂಸಾಚಾರವಾಗುತ್ತಿತ್ತು. ದೇಶದಲ್ಲಿ ಇಂತಹದ್ದೊಂದು ಕ್ರಾಂತಿ ಆಗಬೇಕಿತ್ತು. ಇಲ್ಲದಿದ್ದರೆ ದೇಶವೂ ಉಳಿಯುವುದಿಲ್ಲ, ಹಿಂದೂಗಳೂ ಉಳಿಯುವುದಿಲ್ಲ’ ಎಂದರು.

***

ಫೆ.27ರಂದು ಗಾಂಧಿಭವನದಲ್ಲಿ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ. ಯತ್ನಾಳಅವರನ್ನು ಪಕ್ಷದಿಂದ ಉಚ್ಚಾಟಿಸುವವರೆಗೂ ಹೋರಾಟ ನಡೆಸಲಿದ್ದೇವೆ -ಬಿ.ಆರ್.ಪಾಟೀಲ, ಮಾಜಿ ಶಾಸಕ

ಪಾಕ್‌ ಪರ ಘೋಷಣೆ ಕೂಗಿದವರನ್ನು ಜೈಲಿಗೆ ಹಾಕುತ್ತಾರೆ. ದೊರೆಸ್ವಾಮಿ ಅವರನ್ನೇ ‘ಪಾಕ್ ಏಜೆಂಟ್‌’ ಎಂದರೂ ಸರ್ಕಾರ ಏಕೆ ಸುಮ್ಮನಿದೆ?- ಬಿ.ಟಿ.ಲಲಿತಾನಾಯಕ್‌, ಲೇಖಕಿ

ಯತ್ನಾಳರಂತಹ ಅವಿವೇಕಿಗಳನ್ನು ಸರ್ಕಾರವೇ ಪೋಷಿಸುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಈ ಬಗ್ಗೆ ಯಡಿಯೂರಪ್ಪ ಸ್ಪಷ್ಟನೆ ನೀಡಬೇಕು
ಕೋಡಿಹಳ್ಳಿ ಚಂದ್ರಶೇಖರ್‌, ರೈತ ಮುಖಂಡ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು