ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಕಲಾಪ ಬಹಿಷ್ಕರಿಸಿದ ಕಾಂಗ್ರೆಸ್‌

ಸರ್ಕಾರದಿಂದ ಸರ್ವಾಧಿಕಾರಿ ನೀತಿ-: ಸಿದ್ದರಾಮಯ್ಯ ಆರೋಪ
Last Updated 24 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: 'ಕಲಾಪ ಸಲಹಾ ಸಮಿತಿ (ಬಿಎಸಿ) ಸಭೆಯಲ್ಲಿ ಚರ್ಚಿಸಿದ್ದರೂ ಸದನದಲ್ಲಿ ಮಸೂದೆಗಳನ್ನು ಮಂಡಿಸುವ ವಿಷಯದಲ್ಲಿ ರಾಜ್ಯ ಸರ್ಕಾರ ಭಂಡತನ ಪ್ರದರ್ಶಿಸಿದೆ. ಇದು ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಡೆ. ಈ ಕಾರಣಕ್ಕೆ ಸದನ ಕಲಾಪ ಬಹಿಷ್ಕರಿಸಿದ್ದೇವೆ' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, 'ಸಭಾಧ್ಯಕ್ಷರು ಸ್ವತಂತ್ರವಾಗಿ ಕೆಲಸಮಾಡುತ್ತಿದ್ದಾರಾ ಅಥವಾ ಪಕ್ಷಪಾತಿ ಆಗಿದ್ದಾರಾ ಎನ್ನುವ ಅನುಮಾನ ಬರುತ್ತದೆ‘ ಎಂದೂ ಹೇಳಿದರು. 'ಮಾರ್ಚ್ 27, 28ರವರೆಗೆ ಸದನ ನಡೆಸಬೇಕು. ಬಜೆಟ್ ಮೇಲೆ ಚರ್ಚೆ, ಮಸೂದೆಗಳನ್ನು ಅನುಮೋದಿಸುವುದು ಸರ್ಕಾರದ ಇರಾದೆ ಆಗಿತ್ತು. ಆದರೆ, ಬಜೆಟ್ ಮೇಲೆ ಚರ್ಚೆ ಅಪೂರ್ಣ
ವಾಗಿದೆ. ಜೂನ್ ಅಥವಾ ಜುಲೈನಲ್ಲಿ ಚರ್ಚಿಸೋಣ, ಜನರ ತೆರಿಗೆ ಹಣ ಸದ್ಬಳಕೆ ಆಗುತ್ತಿದೆಯೊ ಇಲ್ಲವೊ ಎಂಬ ಬಗ್ಗೆ ಚರ್ಚೆಯಾಗಬೇಕು ಎಂದೆವು. ಆದರೆ, ಇದಕ್ಕೆ ಒಪ್ಪದ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್‌ಗೆ ಅನುಮೋದನೆ ಪಡೆದಿದೆ‘ ಎಂದು ದೂರಿದರು.

‘ಧನ ವಿನಿಯೋಗ ಮಸೂದೆ ಬಿಟ್ಟು ಬೇರೆ ಯಾವುದೇ ಮಸೂದೆಗಳನ್ನು ತರಬೇಡಿ. ಪ್ರಮುಖ ಮಸೂದೆಗಳು ಚರ್ಚೆ ಆಗದೆ ಅನುಮೋದಿಸುವುದು ಸರಿಯಲ್ಲವೆಂದರೂ ಒಪ್ಪಲಿಲ್ಲ. ಪಂಚಾಯತ್ ರಾಜ್ ವ್ಯವಸ್ಥೆ ದುರ್ಬಲಗೊಳಿಸುವ ಮಸೂದೆಗೆ ನಮ್ಮ ವಿರೋಧವಿದೆ. ಬಿಜೆಪಿಯವರಿಗೆ ಅಧಿಕಾರ ವಿಕೇಂದ್ರೀಕರಣದಲ್ಲಿ ನಂಬಿಕೆಯಿಲ್ಲ. ಸರ್ವಾಧಿಕಾರದಲ್ಲಿ ನಂಬಿಕೆ ಇಟ್ಟವರು ಅವರು’ ಎಂದರು.

‘ಕೊರೊನಾ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ಆರೋಗ್ಯ ಸಚಿವ ಮತ್ತು ವೈದ್ಯಕೀಯ ಶಿಕ್ಷಣ ಸಚಿವರ ಮಧ್ಯೆ ಸಮನ್ವಯತೆ ಇಲ್ಲ. ಮುಂದಾಗುವುದಕ್ಕೆಲ್ಲ ರಾಜ್ಯ ಸರ್ಕಾರವೇ ಹೊಣೆ. ಆರ್ಥಿಕವಾಗಿ ರಾಜ್ಯ ದಿವಾಳಿಯಾಗಿದೆ. ಬಹುಮತ ಇಲ್ಲದ ಅನೈತಿಕ ಸರ್ಕಾರ’ ಎಂದು ದೂರಿದರು.

‘15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಇಂಥ ಕೆಟ್ಟ ಪರಿಸ್ಥಿತಿಯಲ್ಲಿ ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ರಾಜ್ಯ ಹಾಳು ಮಾಡಲೆಂದೇ ಅಧಿಕಾರಕ್ಕೆ ಬಂದಿದ್ದಾರೆ. ಮೂರು ವರ್ಷದಲ್ಲಿ ಕರ್ನಾಟಕವು 20 ವರ್ಷ ಹಿಂದಕ್ಕೆ ಹೋಗಲಿದೆ ‌‘ ಎಂದು ಹರಿಹಾಯ್ದರು.

ಶಾಸಕರಾದ ಈಶ್ವರ ಖಂಡ್ರೆ, ಎಚ್.ಕೆ. ಪಾಟೀಲ, ದಿನೇಶ್ ಗುಂಡೂರಾವ್, ಜಿ. ಪರಮೇಶ್ವರ, ಅಜಯ್ ಸಿಂಗ್, ರಾಮಲಿಂಗಾರೆಡ್ಡಿ, ಕೆ.ಆರ್. ರಮೇಶಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT