ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ ತಲ್ಲಣ: 10 ಜನರಿಗೆ ಕೋವಿಡ್–19 ಸೋಂಕು ದೃಢ, ವೃದ್ಧ ಸಾವು

ರೆಡ್‌ ಅಲರ್ಟ್‌ ಘೋಷಣೆ * ದೆಹಲಿಯ ಧಾರ್ಮಿಕ ಸಭೆಯಲ್ಲಿ ಜಿಲ್ಲೆಯ 26 ಮಂದಿ ಭಾಗಿ
Last Updated 2 ಏಪ್ರಿಲ್ 2020, 20:12 IST
ಅಕ್ಷರ ಗಾತ್ರ

ಬೀದರ್:ದೆಹಲಿಯ ನಿಜಾಮುದ್ದೀನ್‌ ತಬ್ಲೀಗ್‌ ಜಮಾತ್ ಮಸೀದಿಯಲ್ಲಿಯ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ 26 ಜನರ ಪೈಕಿ 10 ಜನರಿಗೆ ಕೋವಿಡ್–19 ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರೊಟ್ಟಿಗೆ ಹೋಗಿದ್ದ ಇಲ್ಲಿಯ ಸಿಂಗಾರ್‌ಬಾಗದ ವೃದ್ಧರೊಬ್ಬರು ಹೈದರಾಬಾದ್‌ನಲ್ಲಿ ಮೃತಪಟ್ಟಿದ್ದು, ಕೋವಿಡ್‌–19ರಿಂದಲೇ ಅವರು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

‘ಜಿಲ್ಲೆಯ ಒಟ್ಟು 26 ಜನರು ಮಾರ್ಚ್ 10ಕ್ಕೆ ದೆಹಲಿಗೆ ತೆರಳಿ, ತಬ್ಲೀಗ್‌ ಜಮಾತ್ ಕೇಂದ್ರ ಕಚೇರಿಯಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆ
ಯಲ್ಲಿ ಭಾಗವಹಿಸಿ ಮಾರ್ಚ್ 18ರಂದು ಮರಳಿದ್ದಾರೆ. ಬೀದರ್‌ ನಗರದ 8, ಬಸವಕಲ್ಯಾಣ ಹಾಗೂ ಚಿಟಗುಪ್ಪ ತಾಲ್ಲೂಕಿನ ಮನ್ನಾಎಖ್ಖೆಳ್ಳಿಯ ತಲಾ ಒಬ್ಬರಿಗೆ ಕೋವಿಡ್–19 ಸೋಂಕು ತಗುಲಿರುವುದು ದೃಢಪಟ್ಟಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಚ್‌.ಆರ್‌.ಮಹಾದೇವ ತಿಳಿಸಿದ್ದಾರೆ.

ಒಂದೇ ದಿನ ಇಷ್ಟೊಂದು ಪ್ರಕರಣಗಳು ಒಂದೇ ಊರಿನಲ್ಲಿ ಪತ್ತೆಯಾಗಿರುವುದು ಆತಂಕ ಹೆಚ್ಚಿಸಿದೆ. ಜಿಲ್ಲಾ ಆಡಳಿತ ಇಡೀ ಜಿಲ್ಲೆಯಲ್ಲಿ ರೆಡ್‌ ಅಲರ್ಟ್‌ ಘೋಷಿಸಿದೆ.

ವೃದ್ಧ ಸಾವು: ‘62 ವರ್ಷದ ವೃದ್ಧರೊಬ್ಬರನ್ನು ಹೈದರಾಬಾದ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಬುಧವಾರ ಮೃತಪಟ್ಟಿದ್ದು, ರಾತ್ರಿಯೇ ಅವರ ಶವವನ್ನು ತಂದು ತಾಲ್ಲೂಕಿನ ಅಷ್ಟೂರ್‌ ಬಳಿ ಆಳವಾದ ಗುಂಡಿ ತೆಗೆದು ಹೂಳಲಾಗಿದೆ. ಈ ವೇಳೆ ಸ್ಥಳದಲ್ಲಿದ್ದ ಹಿರಿಯ ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕೆ ವಹಿಸಿದ್ದರು. ಈ ವೃದ್ಧ ಸಾವಿಗೆ ಮುನ್ನ ಬೀದರ್‌ನಲ್ಲಿ ಗಂಟಲು ದ್ರವದ ಮಾದರಿ ಪಡೆದು ಪರೀಕ್ಷೆ ನಡೆಸಿದಾಗ ವರದಿ ನೆಗೆಟಿವ್‌ ಬಂದಿತ್ತು. ತೆಲಂಗಾಣದ ವೈದ್ಯರಿಂದ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

63 ಜನ ಪತ್ತೆ:ಕಲಬುರ್ಗಿ–26, ಬೀದರ್‌–28, ಯಾದಗಿರಿ–5, ರಾಯಚೂರು–2, ಕೊಪ್ಪಳ–13 ಹೀಗೆ ಕಲ್ಯಾಣ ಕರ್ನಾಟಕದ ಈ ಜಿಲ್ಲೆಗಳ 74 ಜನ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಆ ಪೈಕಿ 62 ಜನರನ್ನು ಪತ್ತೆ ಹಚ್ಚಲಾಗಿದೆ.

ಮಹಿಳೆಗೆ ಸೋಂಕು: ಕಲಬುರ್ಗಿ ಜಿಲ್ಲೆ ಶಹಾಬಾದ್‌ನ ವ್ಯಕ್ತಿಯೊಬ್ಬರುದೆಹಲಿಯ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಬಂದಿದ್ದು, ಅವರ 54 ವರ್ಷದಪತ್ನಿಗೆ ಕೋವಿಡ್‌–19 ಸೋಂಕು ತಗುಲಿರುವುದು ದೃಢಪಟ್ಟಿದೆ.

ಸರ್ಕಾರಿ ನೌಕರರಿಂದ ₹200 ಕೋಟಿ ಸಂದಾಯ
ಬೆಂಗಳೂರು: ಕೊರೊನಾ ಪರಿಹಾರ ಕಾರ್ಯಗಳಿಗಾಗಿ ರಾಜ್ಯ ಸರ್ಕಾರಿ ನೌಕರರ ಮಾರ್ಚ್‌ ತಿಂಗಳ ಒಂದು ದಿನದ ವೇತನವನ್ನು ಕಡಿತ ಮಾಡಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಂದಾಯ ಮಾಡಲು ಸರ್ಕಾರ ಸುತ್ತೋಲೆ ಹೊರಡಿಸಿದೆ.

ಒಂದು ದಿನದ ವೇತನವನ್ನು ನೀಡಲು ಸರ್ಕಾರಿ ನೌಕರರು ಒಪ್ಪಿಕೊಂಡಿರುವುದಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮುಖ್ಯಮಂತ್ರಿಗೆ ಪತ್ರ ಸಲ್ಲಿಸಿತ್ತು. ಈ ಮೊತ್ತವು ಸುಮಾರು ₹200 ಕೋಟಿಯಷ್ಟಾಗಲಿದೆ.

ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಹಣಕಾಸು ಇಲಾಖೆ, ಆಯಾ ಇಲಾಖೆಯ ನೌಕರರ ಬಟವಾಡೆ ಅಧಿಕಾರಿಗಳು ಮಾರ್ಚ್ ತಿಂಗಳ ವೇತನದಲ್ಲಿ ಒಂದು ದಿನದ ವೇತನ ಕಟಾವು ಮಾಡಿ ಖಜಾನೆ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿ ಶಾಖೆಗೆ ವಿವರವನ್ನು ಸಲ್ಲಿಸಬೇಕು ಎಂದು ಸೂಚಿಸಿದೆ.

ಬಾಗಲಕೋಟೆಯಲ್ಲಿ ಮೊದಲ ಪ್ರಕರಣ
ಬಾಗಲಕೋಟೆ: ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ಮೂರು ದಿನಗಳ ಹಿಂದೆ ಅನಾರೊಗ್ಯದಿಂದ ಚಿಕಿತ್ಸೆಗೆ ದಾಖಲಾಗಿದ್ದ 71 ವರ್ಷದ ವೃದ್ಧರೊಬ್ಬರಿಗೆ ಕೋವಿಡ್–19 ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟರ್ ಡಾ.ಆರ್.ರಾಜೇಂದ್ರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮೊದಲ ಕೋವಿಡ್–19 ಪ್ರಕರಣ ಇದಾಗಿದೆ. ವೃದ್ಧ ಸೇರಿದಂತೆ ಮೂವರ ಗಂಟಲು ದ್ರವ ಮಾದರಿಯನ್ನು ಬುಧವಾರ ಬೆಂಗಳೂರಿನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿತ್ತು.

ವೃದ್ಧ ಬಾಗಲಕೋಟೆಯ ಮಾರುಕಟ್ಟೆ ಪ್ರದೇಶದಲ್ಲಿ ಸಗಟು ದರದಲ್ಲಿ ಖಾದ್ಯ ತೈಲ ಮಾರಾಟದ ಅಂಗಡಿ ಇಟ್ಟುಕೊಂಡಿದ್ದಾರೆ. ಅವರು ಇತ್ತೀಚೆಗೆ ಎಲ್ಲಿಗೂ ಪ್ರಯಾಣ ಮಾಡಿಲ್ಲ. ಆದರೆ ಅವರ ಮಗ ಸಾಫ್ಟ್‌ವೇರ್ ಎಂಜಿನಿಯರ್ ಇದ್ದು, ಲಾಕ್‌ಡೌನ್ ಆದೇಶದ ನಂತರ ಬೆಂಗಳೂರಿನಿಂದ ಊರಿಗೆ ಮರಳಿದ್ದರು. ಮಗ ಬಂದ ನಂತರವೇ ವೃದ್ಧನ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ತಿಳಿದುಬಂದಿದೆ.

ಸದ್ಯ ಸೋಂಕಿತರ ಸ್ಥಿತಿ ಗಂಭೀರವಾಗಿದೆ. ಜಿಲ್ಲಾ ಆಸ್ಪತ್ರೆಯ ಐಸೊಲೇಶನ್ ವಾರ್ಡ್‌ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ವೃದ್ಧನ ಕುಟುಂಬದ ಉಳಿದ ಸದಸ್ಯರನ್ನು ಕ್ವಾರಂಟೈನ್‌ನಲ್ಲಿ ಇಡಲು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು.

ಬಳ್ಳಾರಿ: ನಾಲ್ಕನೇ ಪ್ರಕರಣ ದೃಢ
ಬಳ್ಳಾರಿ: ಜಿಲ್ಲೆಯಲ್ಲಿ ಕೋವಿಡ್‌ -19 ನಾಲ್ಕನೇ ಪ್ರಕರಣ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ತಿಳಿಸಿದ್ದಾರೆ.

‘ನಂಜನಗೂಡು ಕಾರ್ಖಾನೆಯಿಂದ ಬಂದ ಸಿರುಗುಪ್ಪ ಮೂಲದ 14 ವರ್ಷ ವಯಸ್ಸಿನ ಬಾಲಕನಿಗೆ ಸೋಂಕಿರುವುದು ದೃಢಪಟ್ಟಿದೆ. ಮೂರು ದಿನದ ಹಿಂದೆ ಜಿಲ್ಲೆಗೆ ಬಂದಿದ್ದ ಆತನನ್ನು ‘ಕೋವಿಡ್‌–19’ ಆಸ್ಪತ್ರೆಯಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

₹ 100 ಕೋಟಿ ನಿಧಿ ಸ್ಥಾಪನೆ
ಚಿತ್ರದುರ್ಗ:
ಕೊರೊನಾ ವೈರಸ್ ಸೋಂಕಿನ ಪರಿಣಾಮ ಸೃಷ್ಟಿಯಾಗಿರುವ ಸವಾಲುಗಳನ್ನು ಎದುರಿಸಲು ಹಾಗೂ ದುರ್ಬಲ ಸಮುದಾಯಗಳ ಬದುಕಿನ ರಕ್ಷಣೆಗೆ ₹ 100 ಕೋಟಿ ನಿಧಿ ಸ್ಥಾಪಿಸಲು ವೇದಾಂತ ಸೆಸಾ ಗೋವಾ ಕಬ್ಬಿಣದ ಅದಿರು ಕಂಪನಿ ನಿರ್ಧರಿಸಿದೆ. ಕಂಪನಿಯ ನೌಕರರು ಹಾಗೂ ಸಿಬ್ಬಂದಿಯ ಒಂದು ದಿನದ ವೇತನವನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ನೀಡಲು ಸಂಸ್ಥೆ ತೀರ್ಮಾನಿಸಿದೆ.

ಕರ್ನಾಟಕ, ಗೋವಾ, ಮಹಾರಾಷ್ಟ್ರ ಹಾಗೂ ಜಾರ್ಖಂಡ್ ರಾಜ್ಯಗಳ ವಿವಿಧೆಡೆಯ ಸರ್ಕಾರಿ ಆಸ್ಪತ್ರೆಗಳಿಗೆ ಮಾಸ್ಕ್, ಸ್ಯಾನಿಟೈಸರ್‌, ಐಇಸಿ ಸಾಮಗ್ರಿ ವಿತರಿಸಲಾಗಿದೆ. ಗಣಿ ಕಾರ್ಮಿಕರಿಗಾಗಿ ವಸತಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಲಕ್ಷ್ಮಿ ಮಿತ್ತಲ್‌ರಿಂದ ₹100 ಕೋಟಿ ದೇಣಿಗೆ
ಬೆಂಗಳೂರು: ಕೋವಿಡ್‌–19 ವಿರುದ್ಧ ಪರಿಹಾರ ಕಾರ್ಯ ಕೈಗೊಳ್ಳಲು ಕೈಗಾರಿಕೋದ್ಯಮಿ ಲಕ್ಷ್ಮಿ ಮಿತ್ತಲ್‌ ₹100 ಕೋಟಿ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ. ಪಿಎಂ ಕೇರ್ಸ್‌ಗೆ ಈ ಹಣ ನೀಡುವುದಾಗಿ ಅವರು ತಿಳಿಸಿದ್ದಾರೆ.

‘ಆರ್ಸೆಲರ್‌ ಮಿತ್ತಲ್, ನಿಪ್ಪಾನ್‌ ಸ್ಟೀಲ್‌, ಎಚ್‌ಎಂಇಎಲ್‌ ವತಿಯಿಂದ ಈ ದೇಣಿಗೆ ನೀಡುತ್ತಿದ್ದು, ಈಗಾಗಲೇ ನಮ್ಮ ಸಂಸ್ಥೆಯು ನಿತ್ಯ 35 ಸಾವಿರ ಮಂದಿಗೆ ಉಚಿತವಾಗಿ ಆಹಾರ ಪೂರೈಸುತ್ತಿದೆ’ ಎಂದು ತಿಳಿಸಿದ್ದಾರೆ.

‘ಇಂತಹ ಕಠಿಣ ಸಂದರ್ಭದಲ್ಲಿ ದೇಶದ ಬೆಂಬಲಕ್ಕೆ ನಿಲ್ಲುವುದು ಪ್ರತಿಯೊಬ್ಬರ ಕರ್ತವ್ಯ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT