ಶುಕ್ರವಾರ, ಫೆಬ್ರವರಿ 21, 2020
27 °C
ಗಡಿ ಭಾಗದಲ್ಲಿ ಮುಂದುವರಿದ ತಪಾಸಣೆ; ಆಸ್ಪತ್ರೆಗಳಲ್ಲಿ ವಿಶೇಷ ವಾರ್ಡ್‌

‘ಕೊರೊನಾ’: ಕೊಡಗಿನಲ್ಲಿ ಹೈಅಲರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೇರಳದಲ್ಲಿ ಮೂವರು ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿರುವುದು ದೃಢಪಟ್ಟಿರುವುದರಿಂದ, ಆ ರಾಜ್ಯಕ್ಕೆ ಹೊಂದಿಕೊಂಡಿರುವ ಮೈಸೂರು, ಚಾಮರಾಜನಗರ, ಕೊಡಗು ಹಾಗೂ ನೆರೆಯ ಜಿಲ್ಲೆಗಳಾದ ಮಂಡ್ಯ ಮತ್ತು ಹಾಸನದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಕೊಡಗಿನಲ್ಲಿ ಹೈಅಲರ್ಟ್‌ ಘೋಷಿಸಲಾಗಿದೆ. ಮುಂದಿನ 15 ದಿನಗಳವರೆಗೆ ಕೇರಳದಿಂದ ಕಾರ್ಮಿಕರನ್ನು ಕರೆತರದಂತೆ ಜಿಲ್ಲೆಯ ಕಾಫಿ ತೋಟಗಳ ಮಾಲೀಕರಿಗೆ ಜಿಲ್ಲಾ ವೈದ್ಯಾಧಿಕಾರಿ ಡಾ. ಮೋಹನ್‌ ಮನವಿ ಮಾಡಿದ್ದಾರೆ. ಕಾರ್ಮಿಕರು ಅಲ್ಲಿಗೂ ತೆರಳದಂತೆ ಎಚ್ಚರಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾ ಆಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ವಿಶೇಷ ವಾರ್ಡ್‌ ತೆರೆಯಲಾಗಿದೆ. ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಜಾಗೃತಿ ಮೂಡಿಸಲಾಗುತ್ತಿದೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ಗಡಿ ಭಾಗಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಮಂಗಳವಾರವೂ ತಪಾಸಣೆ ಮುಂದುವರಿಸಿದ್ದಾರೆ. 

ಕೆಕ್ಕನಹಳ್ಳ ಮತ್ತು ಮೂಲೆಹೊಳೆ ಚೆಕ್‌ಪೋಸ್ಟ್‌ಗಳಲ್ಲಿ ಎರಡು ವೈದ್ಯರ ತಂಡ ಬೀಡು ಬಿಟ್ಟಿದ್ದು, ಕೇರಳ ಮತ್ತು ತಮಿಳುನಾಡಿನಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ಇಟ್ಟಿದೆ. ಸೋಮವಾರ 2,600 ಮತ್ತು ಮಂಗಳವಾರ 2,000ಕ್ಕೂ ಹೆಚ್ಚಿನ ವಾಹನಗಳಲ್ಲಿದ್ದ ಪ್ರಯಾಣಿಕರ ಮಾಹಿತಿ ಸಂಗ್ರಹಿಸಲಾಗಿದೆ. 

‘ಸದ್ಯ, ವೈರಸ್ ಸೋಂಕು ಕಾಣಿಸಿಕೊಂಡ ಸ್ಥಳಗಳಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚು ನಿಗಾವಹಿಸಲಾಗಿದೆ. ಸ್ವಚ್ಛತೆಯ ಬಗ್ಗೆ ಗ್ರಾಮೀಣ ಭಾಗದ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಶಂಕಿತ ಸೋಂಕಿತರ ಆರೋಗ್ಯದ ಮೇಲೆ ನಿಗಾ ಇಡಲು ಗುಂಡ್ಲುಪೇಟೆ ತಾಲ್ಲೂಕು ಆಸ್ಪತ್ರೆ ಹಾಗೂ ಚಾಮರಾಜನಗರದ ಜಿಲ್ಲಾಸ್ಪತ್ರೆ ಯಲ್ಲಿ ಐದು ಹಾಸಿಗೆಗಳ ಪ್ರತ್ಯೇಕ ವಾರ್ಡ್‌ಗಳನ್ನು ಸ್ಥಾಪಿಸಲಾಗಿದೆ. ವೈದ್ಯರ ತಂಡ ರಚಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಸಿ.ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮೈಸೂರಿನ ಕೆ.ಆರ್‌.ಆಸ್ಪತ್ರೆಯಲ್ಲಿ ಐದು ಹಾಸಿಗೆಗಳ ಪ್ರತ್ಯೇಕ ವಾರ್ಡ್‌ ತೆರೆಯಲಾಗಿದೆ.

‘ವೈರಸ್‌ ಸೋಂಕಿನ ಲಕ್ಷಣಗಳಿದ್ದರೆ ತಪಾಸಣೆಗೆ ಸೂಚಿಸಲಾಗಿದೆ. ಅದಕ್ಕಾಗಿ ಮೂವರು ವೈದ್ಯರನ್ನು ನೋಡಲ್‌ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಎನ್‌–95 ಮಾಸ್ಕ್‌ ಹಾಗೂ ಔಷಧಗಳನ್ನು ಸಿದ್ಧವಾಗಿಟ್ಟುಕೊಳ್ಳಲಾಗಿದೆ’ ಎಂದು ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಸಿ.ಪಿ.ನಂಜರಾಜ್‌ ತಿಳಿಸಿದರು.

ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ 10 ಹಾಸಿಗೆಯ ಒಂದು ಕೊಠಡಿ, ವೈದ್ಯರ ತಂಡ ಸಜ್ಜಾಗಿದೆ. ಹಾಸನ ಜಿಲ್ಲಾಸ್ಪತ್ರೆ ಹಾಗೂ ತಾಲ್ಲೂಕು ಮಟ್ಟದ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರತ್ಯೇಕ ವಾರ್ಡ್ ಮೀಸಲಿರಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ತ್ವರಿತ ಕಾರ್ಯಪಡೆಯನ್ನೂ ರಚಿಸಲಾಗಿದೆ.

ಇಬ್ಬರು ಚೀನಿಯರು ವಾಪಸ್‌ (ಗುಂಡ್ಲುಪೇಟೆ): ತಾಲ್ಲೂಕಿನ ತ್ರಿಯಂಬಕಪುರ ಗ್ರಾಮದಲ್ಲಿರುವ ಚೆಂಗ್ವಾಂಗ್‌ ನ್ಯಾಚುರಲ್ಸ್‌ ಎಕ್ಟ್ರಾಕ್ಟ್‌ ಇಂಡಿಯಾ (ಪ್ರೈ) ಲಿಮಿಟೆಡ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚೀನಾದ ಇಬ್ಬರು ಉದ್ಯೋಗಿಗಳು ತಮ್ಮ ದೇಶದಿಂದ ವಾಪಸ್‌ ಆಗಿದ್ದಾರೆ. 

ವಿದ್ಯಾರ್ಥಿನಿ ಆರೋಗ್ಯದ ಮೇಲೆ ನಿಗಾ (ಮಂಡ್ಯ): ಚೀನಾದ ವೈದ್ಯಕೀಯ ಕಾಲೇಜೊಂದರಲ್ಲಿ ಅಧ್ಯಯನ ಮಾಡುತ್ತಿದ್ದ ನಗರದ ಯುವತಿಯೊಬ್ಬರು ನಗರಕ್ಕೆ ಮರಳಿದ್ದು, ಅವರ ಆರೋಗ್ಯದ ಮೇಲೆ ವೈದ್ಯರು ನಿಗಾ ವಹಿಸಿದ್ದಾರೆ. ಭಾನುವಾರ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಸ್ಥಳದಲ್ಲೇ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಯಾವುದೇ ಸೋಂಕು ಪತ್ತೆಯಾಗಿಲ್ಲ.

ಕೇರಳ ಗಡಿಯಲ್ಲಿ ಇಲ್ಲ ತಪಾಸಣೆ

ಮಂಗಳೂರು: ಕೊರೊನಾ ವೈರಸ್‌ ತಗುಲಿರುವ ಮೂರು ಪ್ರಕರಣಗಳು ಕೇರಳದಲ್ಲಿ ಪತ್ತೆಯಾದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕಟ್ಟೆಚ್ಚರಕ್ಕೆ ಆದೇಶಿಸಲಾಗಿದೆ. ಆದರೆ, ಬಸ್‌, ರೈಲು ಖಾಸಗಿ ವಾಹನಗಳಲ್ಲಿ
ನಿತ್ಯ ಕೇರಳದಿಂದ ಜಿಲ್ಲೆಗೆ ಬರುವ ಲಕ್ಷಕ್ಕೂ ಹೆಚ್ಚು ಜನರನ್ನು ಗಡಿಯಲ್ಲಿ ತಪಾಸಣೆಗೆ ಒಳಪಡಿಸಲು ಸಾಧ್ಯ ಆಗುತ್ತಿಲ್ಲ.

ಆರೋಗ್ಯ ಇಲಾಖೆಯ ಸೂಚನೆಯಂತೆ ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನವ ಮಂಗಳೂರು ಬಂದರಿನಲ್ಲಿ ಮಾತ್ರ ವಿದೇಶದಿಂದ ಬರುವವರ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಿದ ಬಳಿಕವೇ ಬಿಡಲಾಗುತ್ತಿದೆ.

ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ವಲಯದ ನೂರಾರು ಬಸ್‌ಗಳು ಕೇರಳದ ವಿವಿಧೆಡೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬಂದು ಹೋಗುತ್ತವೆ. ಮಂಗಳೂರು ಮಾತ್ರವಲ್ಲದೇ ಪುತ್ತೂರು, ಸುಳ್ಯ, ಬಂಟ್ವಾಳ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಜಿಲ್ಲೆಯ ಹಲವು ಸ್ಥಳಗಳಿಗೆ ಕೇರಳದಿಂದ ನೇರ ಬಸ್‌ ಸಂಪರ್ಕವಿದೆ. ಪ್ರತಿ ದಿನ 30,000ದಿಂದ 40,000ದಷ್ಟು ಜನರು ಬಸ್‌ಗಳಲ್ಲೇ ಕೇರಳದಿಂದ ಜಿಲ್ಲೆಗೆ ಬಂದು ಹೋಗುತ್ತಾರೆ ಎಂದು ಅಂದಾಜಿಸಲಾಗಿದೆ.

ತಪಾಸಣೆ ಅಸಾಧ್ಯ: ‘ರೋಗ ಲಕ್ಷಣ ಇರುವ ಶಂಕಿತ ಪ್ರಕರಣಗಳಲ್ಲಿ ಮಾತ್ರವೇ ತಪಾಸಣೆಯ ಅಗತ್ಯವಿದೆ. ಅದರಲ್ಲಿಯೂ ಚೀನಾದಲ್ಲಿದ್ದು ಬಂದವರು ಅಥವಾ ಅಲ್ಲಿಂದ ಬಂದವರ ಜೊತೆ ಸಂಪರ್ಕದಲ್ಲಿದ್ದ ವ್ಯಕ್ತಿಗಳಲ್ಲಿ ರೋಗ ಲಕ್ಷಣ ಕಂಡುಬಂದರೆ ಮಾತ್ರ ತಪಾಸಣೆ ನಡೆಸಬೇಕಾಗುತ್ತದೆ. ಎಲ್ಲರನ್ನೂ ತಪಾಸಣೆ ನಡೆಸುವ ಅಗತ್ಯವಿಲ್ಲ. ಬಸ್‌, ರೈಲು ಅಥವಾ ಖಾಸಗಿ ವಾಹನಗಳಲ್ಲಿ ಜಿಲ್ಲೆಗೆ ಬಂದು ಹೋಗುವವರನ್ನು ತಪಾಸಣೆ ನಡೆಸುವ ಪ್ರಸ್ತಾವವೇ ಇಲ್ಲ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್‌ ತಿಳಿಸಿದರು.

ಸಿಬ್ಬಂದಿಗೆ ಮುಖಗವಸು

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಪಣಂಬೂರಿನ ನವ ಮಂಗಳೂರು ಬಂದರಿನಲ್ಲಿ (ಎನ್‌ಎಂಪಿಟಿ) ವಿದೇಶದಿಂದ ಬರುವ ಪ್ರಯಾಣಿಕರು, ಸರಕನ್ನು ತಪಾಸಣೆ ನಡೆಸುವ ಸಿಬ್ಬಂದಿಗೆ ಮಾಸ್ಕ್‌ ಒದಗಿಸಲಾಗಿದೆ.

ಭದ್ರತಾ ಸಿಬ್ಬಂದಿ ಸೇರಿದಂತೆ ಹಲವು ವಿಭಾಗಗಳ ಸಿಬ್ಬಂದಿಗೆ ಮಾಸ್ಕ್‌ ಧರಿಸಿಯೇ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು