ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: 71 ಜನರ ಮೇಲೆ ನಿಗಾ

ನಾಲ್ವರು ಇಎಸ್‌ಐ ಆಸ್ಪತ್ರೆಯಲ್ಲಿ, ಉಳಿದವರು ಮನೆಯಲ್ಲೇ ಇರಲು ಸೂಚನೆ: ಜಿಲ್ಲಾಧಿಕಾರಿ ಶರತ್
Last Updated 14 ಮಾರ್ಚ್ 2020, 19:58 IST
ಅಕ್ಷರ ಗಾತ್ರ
ADVERTISEMENT
""

ಕಲಬುರ್ಗಿ:ಕೊರೊನಾ ವೈರಸ್ ತಗುಲಿ ಮೃತಪಟ್ಟ ನಗರದ ನಿವಾಸಿ ಮೊಹ್ಮದ್ ಹುಸೇನ್ ಸಿದ್ದಿಕಿ (76) ಅವರೊಂದಿಗೆ ಒಡನಾಟ ಹೊಂದಿದ್ದ 46 ಜನ ಸೇರಿದಂತೆ ಅವರ ಅಂತ್ಯಕ್ರಿಯೆಯಲ್ಲಿ‌ ಭಾಗವಹಿಸಿದ್ದ 71 ಜನರ ಮೇಲೆ ಜಿಲ್ಲಾಡಳಿತ ‌ನಿಗಾ ವಹಿಸಿದೆ.

‘ಮೃತ ಸಿದ್ದಿಕಿ ಅವರೊಂದಿಗೆ ಒಡನಾಟ ಹೊಂದಿದ್ದ ಮತ್ತುಅಂತ್ಯಕ್ರಿಯೆಯಲ್ಲಿ‌ ಭಾಗವಹಿಸಿದ್ದ ಒಟ್ಟಾರೆ 71 ಜನರನ್ನು ಅವರವರ ‌ಮನೆಗಳ ಲ್ಲಿಯೇ ಪ್ರತ್ಯೇಕವಾಗಿ ಇರಿಸಲಾಗಿದೆ. ಜಿಲ್ಲಾ ಆಡಳಿತದಿಂದಲೇ ಅವರ ಮನೆಗೆ ಊಟ ತಲುಪಿಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಶರತ್‌ ಬಿ. ಹೇಳಿದ್ದಾರೆ.

‘ಸಿದ್ದಿಕಿ ಕುಟುಂಬದ ನಾಲ್ವರು ಸದಸ್ಯರನ್ನು ಇಲ್ಲಿಯ ಇಎಸ್‌ಐಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಇಬ್ಬರು ಮಹಿಳೆಯರು, ಬಾಲಕ ಮತ್ತು ವ್ಯಕ್ತಿ ಸೇರಿದ್ದಾರೆ. ಅವರಕಫ ಹಾಗೂ ರಕ್ತದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಈ ಪೈಕಿ ಮೂವರಿಗೆ ಸೋಂಕು ತಗುಲಿಲ್ಲ ಎಂಬ ವರದಿ ಬಂದಿದೆ. ಇನ್ನೊಬ್ಬರ ವರದಿ ಭಾನುವಾರ ಬರಲಿದೆ’ ಎಂದು ಶನಿವಾರ ಸಂಜೆ ಕಲಬುರ್ಗಿಗೆ ಬಂದು ಅಧಿಕಾರಿಗಳ ಸಭೆ ನಡೆಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ಬಂದ್ ಸ್ಥಿತಿ ನಿರ್ಮಾಣ: ಏತನ್ಮಧ್ಯೆ, ಕಲಬುರ್ಗಿ ನಗರದಲ್ಲಿ ಅಘೋಷಿತ ಬಂದ್‌ನಂತಹ ಸ್ಥಿತಿ ನಿರ್ಮಾಣವಾಗಿದ್ದು,ಕಲಬುರ್ಗಿಗೆ ಬರುವವರ ಸಂಖ್ಯೆ ಗಣನೀಯವಾಗಿ ಇಳಿದಿದೆ.

ಬೇರೆಡೆಯಿಂದ ಕಲಬುರ್ಗಿಗೆ ಜನರು ಬರುವುದನ್ನು ಕಡಿಮೆಗೊಳಿಸಲು ಸಾರಿಗೆ ಸಂಸ್ಥೆಯ‌ ಬಸ್‌ಗಳ ಸಂಚಾರವನ್ನು ‌ಕಡಿತಗೊಳಿಸ
ಲಾಗಿದೆ.

ಜಿಲ್ಲಾ ಆಡಳಿತ ಸೂಚನೆ ಮೇರೆಗೆ ಈಶಾನ್ಯ ಸಾರಿಗೆ ಸಂಸ್ಥೆಯು ಕಲಬುರ್ಗಿ 1 ಮತ್ತು 2ನೇ ವಿಭಾಗಗಳಿಂದ ಕಾರ್ಯಾಚರಣೆ ಮಾಡುವ 849 ಟ್ರಿಪ್‌ಗಳ ಪೈಕಿ ಶನಿವಾರ 110 ಟ್ರಿಪ್‌ ಕಡಿತೊಳಿಸಿದ್ದು, ಭಾನುವಾರ 90 ಟ್ರಿಪ್‌ ಕಡಿತಗೊಳಿಸಲಿದೆ.

ಮಧ್ಯ ರೈಲ್ವೆಯು ಕಲಬುರ್ಗಿಯಿಂದ ರಾಯಚೂರು ಮತ್ತು ಸೊಲ್ಲಾಪುರ ಮಧ್ಯೆ ಸಂಚರಿಸುವ ಕೆಲ ಪ್ಯಾಸೆಂಜರ್‌ ರೈಲುಗಳನ್ನು ಕಾಮಗಾರಿಯ ಕಾರಣ ನೀಡಿ ಮಾರ್ಚ್‌ 31ರವರೆಗೆ ರದ್ದುಪಡಿಸಿದೆ. ರೈಲು ಪ್ರಯಾಣಿಕರ ಸಂಖ್ಯೆ ಶೇಕಡ 60ರಷ್ಟು ಇಳಿಕೆಯಾಗಿದೆ. ಹವಾನಿಯಂತ್ರಿತ ಬೋಗಿಗಳಂತೂ ಖಾಲಿ ಖಾಲಿಯಾಗಿವೆ.

ಸಹಾಯವಾಣಿ: ಹೆಚ್ಚು ಜನ ಸೇರುವುದನ್ನು ತಪ್ಪಿಸಲು ಉಪನೋಂದಣಾಧಿಕಾರಿ ಕಚೇರಿ, ಪ್ರಾದೇಶಿಕ ಸಾರಿಗೆ ‌ಕಚೇರಿ ಹಾಗೂ ಕಂದಾಯ ಇಲಾಖೆಯಲ್ಲಿ ಪಹಣಿ, ಜಾತಿ ಪ್ರಮಾಣಪತ್ರ, ಎಪಿಎಂಸಿ, ಆಧಾರ್ ಕಾರ್ಡ್ ನೀಡುವಂತಹ ಸರ್ಕಾರಿ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಮುಂದಾಗಿರುವ ಜಿಲ್ಲಾ ಆಡಳಿತ, ಸೋಂಕಿತರ ಬಗ್ಗೆ ಮಾಹಿತಿ ನೀಡಲು ಸಹಾಯವಾಣಿಯನ್ನೂ ತೆರೆದಿದೆ.

14 ದಿನಗಳವರೆಗೆ ಪ್ರತ್ಯೇಕವಾಗಿರಲು ಮೂವರು ‌ಪತ್ರಕರ್ತರಿಗೆ ಸೂಚನೆ
‘ಕೊರೊನಾ ಸೋಂಕಿನಿಂದ ಮೃತಪಟ್ಟ ಸಿದ್ದಿಕಿ ಅವರ ಪುತ್ರನೊಂದಿಗೆ ಸಂದರ್ಶನ ನಡೆಸಿದ ಕಲಬುರ್ಗಿಯ ಉರ್ದು ಚಾನೆಲ್ ವರದಿಗಾರ, ಕನ್ನಡದರಾಜ್ಯಮಟ್ಟದ ಚಾನೆಲ್‌ನ ಜಿಲ್ಲಾ ವರದಿಗಾರ ‌ಹಾಗೂ ಕ್ಯಾಮೆರಾಮನ್ ಅವರೂ ಜಿಲ್ಲಾಧಿಕಾರಿ ಕರೆದಿದ್ದ ಸುದ್ದಿಗೋಷ್ಠಿಗೆ ಬಂದಿದ್ದರು. ಸುದ್ದಿಗೋಷ್ಠಿಯಲ್ಲಿ ಅವರನ್ನುಪ್ರತ್ಯೇಕವಾಗಿ ಕೂರಿಸಿದ ಜಿಲ್ಲಾಧಿಕಾರಿ, ‘14 ದಿನಗಳವರೆಗೆ ಹೊರಹೋಗದೆ ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಬೇಕು. ಆರೋಗ್ಯ ವ್ಯತ್ಯಯವಾದರೆ ತಕ್ಷಣ ಚಿಕಿತ್ಸೆ ಪಡೆಯಬೇಕು’ ಎಂದು ಸೂಚಿಸಿದರು.

ವಿದೇಶದಿಂದ ಬಂದ 30 ಜನರ ಮೇಲೆ ಕಣ್ಗಾವಲು
ಕಲಬುರ್ಗಿ: ವಿದೇಶಗಳಿಂದ ವಾಪಸ್ಸಾಗಿರುವ ಯಾದಗಿರಿ,‌ ಕಲಬುರ್ಗಿ, ರಾಯಚೂರು, ಬೀದರ್‌ ಜಿಲ್ಲೆಗಳ ಒಟ್ಟು 30 ಜನರ ಮೇಲೆ ಆಯಾ ಜಿಲ್ಲಾ ಆಡಳಿತಗಳು ನಿಗಾ ವಹಿಸಿವೆ.

ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ ಬೀದರ್‌ ಜಿಲ್ಲೆಕಿಟ್ಟಾ ಗ್ರಾಮದ ಜಗನ್ನಾಥ ಅವರು ಹೃದಯಾಘಾತದಿಂದ ಅಲ್ಲಿ ಮೃತಪಟ್ಟಿದ್ದು, ಅವರ ದೇಹ ತರಲಾಗುತ್ತಿದೆ. ಅವರ ಅಂತ್ಯಸಂಸ್ಕಾರದಲ್ಲಿಪಾಲ್ಗೊಳ್ಳಲು ಅದೇ ಗ್ರಾಮದ ಇಬ್ಬರು ಹಾಗೂ ಮಂಠಾಳ ಗ್ರಾಮದ ಒಬ್ಬರು ಬಂದಿದ್ದಾರೆ. ಅವರಲ್ಲಿ ಒಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮೂವರನ್ನೂಆಸ್ಪತ್ರೆಗೆ ದಾಖಲಿಸಲಾಗಿದೆ.

‘ಮೂವರು ಯುವಕರು ಒಮನ್ ಹಾಗೂ ಸೌದಿ ಅರೇಬಿಯಾ ಪ್ರವಾಸ ಮಾಡಿ ಬಂದಿರುವ ಮಾಹಿತಿ ಇದೆ. ಮೂವರ ರಕ್ತದ ಮಾದರಿ ಪಡೆದು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಲಬುರ್ಗಿ ಜಿಲ್ಲೆ ಚಿತ್ತಾಪುರದ ತಲಾ ಇಬ್ಬರು ದುಬೈ ಮತ್ತು ಅಬುಧಾಬಿಯಿಂದ ವಾಪಸಾಗಿದ್ದಾರೆ. ಚಿಂಚೋಳಿ ಒಬ್ಬರು ವಿದೇಶದಿಂದ ಮರಳಿದ್ದಾರೆ. ಯಾದಗಿರಿ ಜಿಲ್ಲೆಸೈದಾಪುರದ ಇಬ್ಬರು ಚಿನ್ನದ ವ್ಯಾಪಾರಿಗಳು ಹಾಗೂ ಶಹಾಪುರದ ಮೂವರು, ಮದ್ರಕಿ ಗ್ರಾಮದ ಒಬ್ಬರುದುಬೈ ಪ್ರವಾಸ ಮುಗಿಸಿ ಬಂದಿದ್ದಾರೆ. ಇವರೆಲ್ಲರೂ ಆರೋಗ್ಯವಾಗಿದ್ದು, ಅವರ ಮೇಲೆ ನಿಗಾ ಇಡಲಾಗಿದೆ.

‘ರಾಯಚೂರು ಜಿಲ್ಲೆಯಲ್ಲಿ ವಿದೇಶದಿಂದ ಮರಳಿದವರ ಸಂಖ್ಯೆ 15ರಷ್ಟಿದೆ. ಎಲ್ಲರ ಆರೋಗ್ಯ ತಪಾಸಣೆ ಮಾಡಿದ್ದು, ಇಬ್ಬರನ್ನು ರಿಮ್ಸ್‌ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಗಂಭೀರ ಸಮಸ್ಯೆ ಕಂಡುಬಂದಿಲ್ಲ. ಆದರೂ ನಿಗಾ ವಹಿಸಲಾಗಿದೆ. ಇಟಲಿಯಿಂದ ಮರ ಳಿದ್ದವರ ಗಂಟಲು ದ್ರವ ಪರೀಕ್ಷೆಯ ವರದಿ ಇನ್ನೂ ಬಂದಿಲ್ಲ’ ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶ ಕುಮಾರ್‌ ತಿಳಿಸಿದರು.

ಭಕ್ತರ ಸಂಖ್ಯೆ ಇಳಿಮುಖ: ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕಾಗಿ ವಿವಿಧ ಜಿಲ್ಲೆಗಳಿಂದ ರಾಯಚೂರಿನ ಮೂಲಕ ಪಾದಯಾತ್ರೆ ತೆರಳುವ ಭಕ್ತರ ಸಂಖ್ಯೆ ಈ ವರ್ಷ ಗಣನೀಯ ಕುಸಿತವಾಗಿದೆ.

ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಮಾತನಾಡಿದರು –ಪ್ರಜಾವಾಣಿ ಚಿತ್ರ

'ಕಲಬುರ್ಗಿಯಲ್ಲಿ ಮೂರು ದಿನಗಳಲ್ಲಿಪ್ರಯೋಗಾಲಯ'
ಕಲಬುರ್ಗಿ: ಕೊರೊನಾ ಸೋಂಕು ಶಂಕಿತರ ಕಫ, ಗಂಟಲು ದ್ರವದ ಮಾದರಿಗಳ ವರದಿಯನ್ನು ಶೀಘ್ರವಾಗಿ ಪಡೆಯಲು ನಗರದ ಜಿಮ್ಸ್‌ ಆಸ್ಪತ್ರೆಯಲ್ಲಿಯೇ ಮೂರು ದಿನಗಳ ಒಳಗಾಗಿ ಪ್ರಯೋಗಾಲಯ ಆರಂಭಿಸಲಾಗುವುದು. ಇದಕ್ಕೆ ಕೇಂದ್ರ ಸರ್ಕಾರದ ಒಪ್ಪಿಗೆಯೂ ಸಿಕ್ಕಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಪ್ರಕಟಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸಂಜೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಲ್ಲಿನ ಕೊರೊನಾ ಶಂಕಿತರ ಮಾದರಿಗಳನ್ನು ಬೆಂಗಳೂರಿಗೆ ಕಳಿಸಿ ವರದಿ ಪಡೆಯುವುದು ವಿಳಂಬವಾಗುತ್ತದೆ ಎಂಬ ಉದ್ದೇಶದಿಂದ ಜಿಲ್ಲಾಡಳಿದ ಪ್ರಸ್ತಾವದ ಮೇರೆಗೆ ಪ್ರಯೋಗಾಲಯ ಆರಂಭಕ್ಕೆ ನಿರ್ಧರಿಸಿದ್ದೇವೆ’ ಎಂದರು.

‘ಕೊಲ್ಲೂರು ಪ್ರವಾಸ ಮುಂದೂಡಿ’
ಉಡುಪಿ: ಕೊರೊನಾ ಸೋಂಕು ಹರಡುತ್ತಿರುವುದರಿಂದ ಭಕ್ತರು ಒಂದು ವಾರ ಕಾಲ ಕೊಲ್ಲೂರು ದೇವಸ್ಥಾನ ಪ್ರವಾಸ ಮುಂದೂಡಬೇಕು ಎಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಮನವಿ ಮಾಡಿದ್ದಾರೆ.

ದೇವಸ್ಥಾನಕ್ಕೆ ನಿತ್ಯ ರಾಜ್ಯ, ಹೊರ ರಾಜ್ಯ ಹಾಗೂ ವಿದೇಶಗಳಿಂದ ಭಕ್ತರು ಭೇಟಿ ನೀಡುತ್ತಾರೆ. ದೇಶ ದೆಲ್ಲೆಡೆ ಕೋವಿಡ್ ಸೋಂಕು ವ್ಯಾಪಿಸಿರುವುದರಿಂದ ಭಕ್ತರು ಪ್ರವಾಸ ಮುಂದೂಡಬೇಕು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT