ಶುಕ್ರವಾರ, ಜುಲೈ 30, 2021
25 °C

ಸೋಂಕು ಸಮುದಾಯಕ್ಕೆ ಹರಡಿಲ್ಲ: ಡಿಸಿಎಂ ಸಿ.ಎನ್‌. ಅಶ್ವತ್ಥನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Ashwath Narayan

ಮಂಡ್ಯ: ‘ನಮ್ಮ ರಾಜ್ಯದಲ್ಲಿ ಕೊರೊನಾ ಸೋಂಕು ಸಮುದಾಯಕ್ಕೆ ಹರಡಿಲ್ಲ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಇದೆ. ಶೇ 90ರಷ್ಟು ಜನರು ಗುಣಮುಖರಾಗುತ್ತಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಸಿ.ಎನ್‌. ಅಶ್ವತ್ಥನಾರಾಯಣ ಸೋಮವಾರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಬೇರೆ ರಾಜ್ಯಗಳಲ್ಲೇ ಸೋಂಕು ಸಮುದಾಯಕ್ಕೆ ಹರಡಿಲ್ಲ, ಹೀಗಾಗಿ ನಮ್ಮಲ್ಲೂ ಹರಡಲು ಸಾಧ್ಯವಿಲ್ಲ. ಕೋವಿಡ್‌–19ನಿಂದ ಸಣ್ಣಪ್ರಮಾಣದ ರೋಗಿಗಳು ಗಂಭೀರ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಮುಂದೆ ಶೇ 5–6ರಷ್ಟು ಸೋಂಕಿತರು ಮಾತ್ರ ಆಸ್ಪತ್ರೆಗೆ ಬರುವ ಅವಶ್ಯಕತೆ ಇದೆ’ ಎಂದರು.

‘ಕೋವಿಡ್‌ ನಿರ್ವಹಣೆಯಲ್ಲಿ ಹಣಕಾಸಿನ ಕೊರತೆ ಇಲ್ಲ. ಬೆಂಗಳೂರಿನಲ್ಲಿ ಬೆಡ್‌ ಸಮಸ್ಯೆಯಾಗಿದ್ದು ನಿಜ, ಒಂದೇ ಬಾರಿಗೆ ಸೋಂಕಿತರ ಸಂಖ್ಯೆ ಹೆಚ್ಚಾದ ಪರಿಣಾಮ ಸಮಸ್ಯೆಯಾಗಿತ್ತು. ಆದರೆ ಈಗ ಅಂತಹ ಸಮಸ್ಯೆ ಇಲ್ಲ, 15 ಸಾವಿರ ಬೆಡ್‌ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹೆಚ್ಚಿನ ಆಂಬುಲೆನ್ಸ್‌ಗಳು ಸಿದ್ಧವಾಗಿವೆ, ಕೋವಿಡ್‌ ಪರೀಕ್ಷೆ ಪ್ರಮಾಣವನ್ನೂ ಹೆಚ್ಚಳ ಮಾಡಲಾಗಿದೆ’ ಎಂದರು.

‘ದುಡಿದು ಬದುಕುವವರಿಗೆ ಲಾಕ್‌ಡೌನ್‌ ಸಮಸ್ಯೆ ಮಾಡುತ್ತದೆ. ಇಂತಹ ಸಂದರ್ಭದಲ್ಲಿ ಲಾಕ್‌ಡೌನ್‌ ಮಾಡಿ ದಿನ ದೂಡುವುದು ಸರಿಯಲ್ಲ. ಸರ್ಕಾರ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದು ಜನರು ಸೋಂಕಿನ ಜೊತೆಯಲ್ಲೇ ಬದುಕಬೇಕಾಗಿದೆ’ ಎಂದರು.

ತಿರುಗೇಟು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದ ಅವರು, ಲೆಕ್ಕ ಕೇಳಲು ಸಾಕಷ್ಟು ಸಮಯಾವಕಾಶವಿದೆ. ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರು, ಅವರು ಸದನದಲ್ಲಿ ಲೆಕ್ಕ ಕೇಳಲಿ. ಪೈಸೆಪೈಸೆಗೂ ಲೆಕ್ಕ ಕೊಡುತ್ತೇವೆ. ಜನರು ಈಗಾಗಲೇ ನೊಂದಿದ್ದಾರೆ. ಇಂತಹ ಸಂದರ್ಭದಲ್ಲಿ ಎಲ್ಲರೂ ಜನರ ಜೊತೆ ನಿಂತು ಕೆಲಸ ಮಾಡಬೇಕು. ಸರ್ಕಾರ ಪರಿಣಾಮಕಾರಿಯಾಗಿ ಪರಿಸ್ಥಿತಿ ಎದುರಿಸುತ್ತಿದ್ದು ಅದನ್ನು ನೋಡಲಾಗದೇ ಆರೋಪ ಮಾಡುತ್ತಿದ್ದಾರೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು