ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಕೊಟ್ಟ ತಂತ್ರಾಂಶ: ಶಿಕ್ಷಕರ ಕೌನ್ಸೆಲಿಂಗ್ ಮುಂದೂಡಿಕೆ

Last Updated 15 ಅಕ್ಟೋಬರ್ 2018, 11:53 IST
ಅಕ್ಷರ ಗಾತ್ರ

ಕಾರವಾರ:ಶೈಕ್ಷಣಿಕ ಜಿಲ್ಲೆಯ ಹೆಚ್ಚುವರಿ ಸಹಾಯಕ ಶಿಕ್ಷಕರು ಮತ್ತು ಖಾಲಿ ಹುದ್ದೆಗಳಿಗೆ ವರ್ಗಾವಣೆ ಸಂಬಂಧ ಸೋಮವಾರ ಇಲ್ಲಿ ಹಮ್ಮಿಕೊಳ್ಳಲಾಗಿದ್ದ ಕೌನ್ಸೆಲಿಂಗ್ ಪ್ರಕ್ರಿಯೆಯು ತಂತ್ರಾಂಶ ಕೈಕೊಟ್ಟ ಕಾರಣ ಮಂಗಳವಾರಕ್ಕೆ ಮುಂದೂಡಲಾಯಿತು. ನೂರಾರು ಕಿ.ಮೀ ದೂರದಿಂದ ಬಂದಿದ್ದ ಶಿಕ್ಷಕರು ಶಿಕ್ಷಣ ಇಲಾಖೆಗೆ ಹಿಡಿಶಾಪ ಹಾಕಿದರು.

ಶಿಕ್ಷಕರ ಸೇವಾ ಮಾಹಿತಿಯನ್ನು ಇಲಾಖೆಯ ಪೋರ್ಟಲ್‌ನಲ್ಲಿ ಭರ್ತಿ ಮಾಡಿ, ವರ್ಗಾವಣೆಗೆ ಅರ್ಹರಾಗಿರುವ ಶಿಕ್ಷಕರ ಪಟ್ಟಿಯನ್ನೂ ಇದರಲ್ಲಿ ಪ್ರಕಟಿಸಲಾಗಿದೆ. ಅದರಂತೆ, ಅಂತಿಮವಾಗಿ ವರ್ಗಾವಣೆಗೆ ಅರ್ಹರಾಗಿರುವಶಿಕ್ಷಕರು ಹಾಗೂ ಖಾಲಿ ಇರುವ ಹುದ್ದೆಗಳ ವಿವರವನ್ನು ಸೋಮವಾರ ಪ್ರಕಟಿಸಬೇಕಿತ್ತು. ಅದರ ನಂತರ ಕೌನ್ಸೆಲಿಂಗ್‌ ನಡೆಸಿ ಹೆಚ್ಚುವರಿ ಸ್ಥಳ ನಿಯೋಜನೆ ಮಾಡಬೇಕಿತ್ತು. ಆದರೆ, ಸಂಜೆಯವರೆಗೂ ಈ ಪ್ರಕ್ರಿಯೆ ನಡೆಯಲಿಲ್ಲ.

ಪ್ರಾಯೋಗಿಕ ಬಳಕೆ ಮಾಡಲಾಗಿತ್ತು: ‘ಶಿಕ್ಷಕರ ವರ್ಗಾವಣೆಗೆಂದೇ ಅಭಿವೃದ್ಧಿ ಪಡಿಸಲಾದ ‘ಕೌನ್ಸೆಲಿಂಗ್ ಸಾಫ್ಟ್‌ವೇರ್’ ಅನ್ನು ಅ.13ರಂದು ಪ್ರಾಯೋಗಿಕವಾಗಿ ಬಳಕೆ ಮಾಡಲಾಗಿತ್ತು. ಆಗ ಕಂಡುಬಂದ ಕೆಲವು ಲೋಪದೋಷಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಂಜಿನಿಯರ್‌ಗಳ ಗಮನಕ್ಕೆ ತಂದಿದ್ದರು. ಆದರೂ ಅವು ಸರಿಯಾಗಲಿಲ್ಲ. ಸೋಮವಾರವಂತೂ ಆ ತಂತ್ರಾಂಶದ ವೆಬ್ ಪೇಜ್‌ ಕೊಂಡಿಯನ್ನು ತೆರೆಯಲೇ ಇಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಕರೊಬ್ಬರು ತಿಳಿಸಿದರು.

‘ಜಿಲ್ಲಾ ಕೇಂದ್ರ ಕಾರವಾರಕ್ಕೆ ನಾವು 130 ಕಿ.ಮೀ ಪ್ರಯಾಣಿಸಬೇಕು. ಇಲಾಖೆಯೇ ನಿಗದಿ ಮಾಡಿದಂತೆ ಸೋಮವಾರ ಬೆಳಿಗ್ಗೆ 10ಕ್ಕೆ ನಾವು ಹಾಜರಾಗಿದ್ದೇವೆ. ನಮ್ಮ ಇಡೀ ದಿನ ವ್ಯರ್ಥವಾಯಿತು. ಮಂಗಳವಾರ ಪುನಃ ಬರಬೇಕಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎನ್.ಜಿ.ನಾಯ್ಕ, ‘ಕೌನ್ಸೆಲಿಂಗ್‌ಗೆ ಸುಮಾರು 250 ಶಿಕ್ಷಕರು ಬಂದಿದ್ದರು. ಅಂತಿಮ ಪಟ್ಟಿಯು ತಂತ್ರಾಂಶದಲ್ಲಿ ಬಿಡುಗಡೆಯಾಗಿಲ್ಲ. ಹಾಗಾಗಿ ಸೋಮವಾರ ರದ್ದು ಮಾಡಿ ಮಂಗಳವಾರ ಬೆಳಿಗ್ಗೆ ಬರಲು ತಿಳಿಸಲಾಯಿತು’ ಎಂದು ತಿಳಿಸಿದರು.

ಇಡೀ ದಿನ ಕಾದು ಕುಳಿತು ಸುಸ್ತಾಗಿದ್ದ ಹತ್ತಾರು ಶಿಕ್ಷಕರು, ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರಿಗೂ ದೂರಿದರು.

‘ಮೂರು ವರ್ಷಗಳಿಂದ ಮುಂದೂಡುತ್ತಲೇ ಬಂದಿರುವ ಈ ಪ್ರಕ್ರಿಯೆ ಈ ವರ್ಷವೂಪೂರ್ಣಗೊಳ್ಳುವಂತೆಕಾಣುತ್ತಿಲ್ಲ. ಶಿಕ್ಷಣ ಇಲಾಖೆಯ ನಿರ್ಧಾರಗಳಿಂದ ಮತ್ತೆ ಮತ್ತೆ ನಿರಾಶರಾಗುತ್ತಿದ್ದೇವೆ’ ಎಂದು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT