ಭಾನುವಾರ, ಆಗಸ್ಟ್ 1, 2021
26 °C
ಚಿಕಿತ್ಸಾ ಪ್ಯಾಕೇಜ್ ದರ ನಿಗದಿ ಮಾಡುತ್ತಿರುವ ಸರ್ಕಾರ * ಖಾಸಗಿ ಆಸ್ಪತ್ರೆಗಳಿಂದ ದರ ಪಟ್ಟಿ ಸಲ್ಲಿಕೆ

ಕೋವಿಡ್: ಖಾಸಗಿ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆ

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ಒಂದೇ ಸಮನೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳಿಗೂ ಚಿಕಿತ್ಸೆಗೆ ಅವಕಾಶ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ. ಈ ಸಂಬಂಧ ಚಿಕಿತ್ಸಾ ಪ್ಯಾಕೇಜ್ ದರ ಅಂತಿಮಗೊಳಿಸಲಾಗುತ್ತಿದೆ.

ಈಗಾಗಲೇ ಸರ್ಕಾರ ಕೋವಿಡ್‌ ಪರೀಕ್ಷೆಗೆ ದರ ನಿಗದಿ ಮಾಡಿ, ಖಾಸಗಿ ಪ್ರಯೋಗಾಲಯಗಳಿಗೆ ಅವಕಾಶ ನೀಡಿದೆ. ಇದರಿಂದಾಗಿ ಸರ್ಕಾರಿ ಲ್ಯಾಬ್‌ಗಳ ಮೇಲಿನ ಭಾರ ಸ್ವಲ್ಪಮಟ್ಟಿಗೆ ಇಳಿಕೆಯಾಗಿದೆ. ಅದೇ ರೀತಿ, ವಿದೇಶ ಹಾಗೂ ಅನ್ಯ ರಾಜ್ಯಗಳಿಂದ ಬಂದ ಸೋಂಕು ಶಂಕಿತರಿಗೆ ಹಣ ಪಾವತಿ ಆಧಾರದಲ್ಲಿ ತಮಗಿಷ್ಟದ ಹೋಟೆಲ್‌ಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗಲು ಅವಕಾಶ ನೀಡಿದೆ.

ಇದರಿಂದಾಗಿ ಆರ್ಥಿಕ ಹೊರೆ ಸಹ ತಗ್ಗಿದೆ. ಆರ್ಥಿಕವಾಗಿ ಸಬಲರಾಗಿರುವವರು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಬಯಸಿದವರಿಗೆ ಅವಕಾಶ ಮಾಡಿಕೊಡುವ ಪ್ರಸ್ತಾವ ಇಲಾಖೆ ಮುಂದಿದ್ದು, ಈ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜತೆಗೆ ಮಾತುಕತೆ ನಡೆಸಿದೆ.

ಚಿಕಿತ್ಸೆಗೆ ಸಜ್ಜು: ಈಗಾಗಲೇ ಕೆಲ ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳು ಕೊರೊನಾ ಸೋಂಕಿತರಿಗಾಗಿಯೇ ಪ್ರತ್ಯೇಕ ವಾರ್ಡ್‌ಗಳನ್ನು ಸಿದ್ಧಪಡಿಸಿವೆ. ರೋಗಿಗಳಿಗೆ ಚಿಕಿತ್ಸೆ ನೀಡುವ ವಿಧಾನಗಳ ಬಗ್ಗೆ ವೈದ್ಯಕೀಯ ಸಿಬ್ಬಂದಿಗೆ ಅಗತ್ಯ ತರಬೇತಿಯನ್ನೂ ನೀಡಲಾಗಿದೆ. ಅಗತ್ಯ ಮೂಲಸೌಕರ್ಯ ಹಾಗೂ ಹಾಸಿಗೆ
ಗಳನ್ನು ಒಳಗೊಂಡ ನಿರ್ದಿಷ್ಟ ಖಾಸಗಿ ಆಸ್ಪತ್ರೆಗಳಿಗೆ ಮಾತ್ರ ಸರ್ಕಾರ ಚಿಕಿತ್ಸೆಗೆ ಅವಕಾಶ ನೀಡಲು ಮುಂದಾಗಿದೆ.

‘ಸೋಂಕಿತರಿಗೆ ಸರ್ಕಾರ ಗುಣಮಟ್ಟದ ಚಿಕಿತ್ಸೆ ಒದಗಿಸುತ್ತಿದೆ. ಕೋವಿಡೇತರ ರೋಗಿಗಳಿಗೂ ಸಮಸ್ಯೆ
ಯಾಗದಂತೆ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಒದಗಿಸಲು ಕೆಲ ಆಸ್ಪತ್ರೆಗಳು ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿವೆ. ಸರ್ಕಾರ ಸೂಚಿಸಿದಲ್ಲಿ ಚಿಕಿತ್ಸೆ ನೀಡಲು ಸಿದ್ಧರಿದ್ದು, ದರ ಪಟ್ಟಿ ಸಲ್ಲಿಸಿದ್ದೇವೆ’ ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‍ಗಳ ಅಸೋಸಿಯೇಷನ್ (ಫಾನಾ) ಅಧ್ಯಕ್ಷ ಡಾ.ಆರ್. ರವೀಂದ್ರ ತಿಳಿಸಿದರು. 

ಸರ್ಕಾರಕ್ಕೆ ದರ ಪಟ್ಟಿ ಸಲ್ಲಿಕೆ
ಚಿಕಿತ್ಸೆ ಸಂಬಂಧ ಖಾಸಗಿ ಆಸ್ಪತ್ರೆಗಳು ಪ್ರಸ್ತಾವಿತ ದರ ಪಟ್ಟಿಯನ್ನು ಆರೋಗ್ಯ ಇಲಾಖೆಗೆ ಸಲ್ಲಿಸಿವೆ. ಒಂದು ದಿನಕ್ಕೆ ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲು ಬಿಪಿಎಲ್ ಕುಟುಂಬದ ವ್ಯಕ್ತಿಗೆ ₹ 5,200 ರಿಂದ ₹ 10 ಸಾವಿರ ಹಾಗೂ ಎಪಿಎಲ್ ಕುಟುಂಬದ ವ್ಯಕ್ತಿಗೆ ₹ 10 ಸಾವಿರದಿಂದ ₹  25 ಸಾವಿರದವರೆಗೆ ದರ ಪಟ್ಟಿ ನೀಡಿವೆ. ಇದರಲ್ಲಿ ವ್ಯತ್ಯಾಸವಾಗುವ ಸಾಧ್ಯತೆಯಿದೆ. 

*
ಕೊರೊನಾ ಸೋಂಕಿತರಿಗೆ ಸದ್ಯ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಂಬಂಧ ದರ ನಿಗದಿ ಮಾಡಲಾಗುತ್ತಿದೆ.
-ಜಾವೇದ್ ಅಖ್ತರ್, ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು