ಶನಿವಾರ, ಸೆಪ್ಟೆಂಬರ್ 18, 2021
28 °C

ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನಿರಾಕರಿಸಿದರೆ ಮೊಕದ್ದಮೆ: ಸಚಿವ ಕೆ. ಸುಧಾಕರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಎಚ್ಚರಿಕೆ ನೀಡಿದರು.

ವಿಧಾನಸೌಧದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ‘ಈಗಾಗಲೇ ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿಗಳ ಜತೆ ಸಕಾ೯ರ ಮಾತುಕತೆ ನಡೆಸಿದೆ. ಸಭೆಯಲ್ಲಿ ತಮ್ಮಲ್ಲಿರುವ ಅರ್ಧದಷ್ಟು ಹಾಸಿಗೆಗಳನ್ನು ಕೋವಿಡ್‌ ಚಿಕಿತ್ಸೆಗೆ ಬಿಟ್ಟುಕೊಡುವುದಾಗಿ ಭರವಸೆ ನೀಡಿದ್ದರು. ತಕ್ಷಣದಿಂದಲೇ 2,734 ಹಾಸಿಗೆ ನೀಡುವುದಾಗಿ ಅವರು ಮಾತುಕೊಟ್ಟಿದ್ದರು. ಆದರೆ, ಇದುವರೆಗೆ ನೀಡಿರುವುದು ಕೇವಲ 116 ಮಾತ್ರ’ ಎಂದರು.

‘ನಮಗೆ ಕೊಟ್ಟಿರುವ ಮಾಹಿತಿ ಪ್ರಕಾರ ಖಾಸಗಿ ಆಸ್ಪತ್ರೆಗಳಲ್ಲಿ ನೇರವಾಗಿ ಬಂದು ದಾಖಲಾಗಿರುವ ಕೋವಿಡ್‌ ರೋಗಿಗಳ ಸಂಖ್ಯೆ 898 ಎಂದು ಗೊತ್ತಾಗಿದೆ. ಮಾತು ಕೊಟ್ಟಂತೆ ಸರ್ಕಾರಕ್ಕೆ ನೀಡಬೇಕಿರುವ ಹಾಸಿಗೆಗಳನ್ನು ಅವರು ಆದಷ್ಟು ಬೇಗ ಹಸ್ತಾಂತರಿಸಬೇಕು. ಇದರ ಉಸ್ತುವಾರಿ ನೋಡಿಕೊಳ್ಳುವ ಸಲುವಾಗಿಯೇ ಮುಖ್ಯಮಂತ್ರಿಯವರು ಕಂದಾಯ ಸಚಿವ ಆರ್‌. ಅಶೋಕ್ ಮತ್ತು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ವಿಶ್ವನಾಥ್‌ ಅವರನ್ನು ನೇಮಕ ಮಾಡಿದ್ದಾರೆ. ಸೋಮವಾರದಿಂದಲೇ ಅವರು ಕಾರ್ಯೋನ್ಮುಖರಾಗಲಿದ್ದಾರೆ’ ಎಂದರು.‌

‘ಅಲ್ಲದೆ, ತಮ್ಮ ಬಳಿ ಚಿಕಿತ್ಸೆಗೆ ಬರುವ ರೋಗಿಗಳನ್ನು ಯಾವುದೇ ಆಸ್ಪತ್ರೆಯವರು ಚಿಕಿತ್ಸೆ ನಿರಾಕರಿಸಿ ಹಿಂದಕ್ಕೆ ಕಳುಹಿಸುವಂತಿಲ್ಲ. ಇದನ್ನು ಈಗಾಗಲೇ ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿಗಳಿಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ಇಷ್ಟರ ಮೇಲೂ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸಿದರೆ ಅಂಥ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕಾಗುತ್ತದೆ. ಇದು ಆರೋಗ್ಯ ತುತು೯ ಪರಿಸ್ಥಿತಿ ಸಂದರ್ಭ ಆಗಿರುವುದರಿಂದ ಈ ವಿಷಯದಲ್ಲಿ ರಾಜಿ ಪ್ರಶ್ನೆಯಿಲ್ಲ’ ಎಂದು ಸ್ಪಷ್ಟಪಡಿಸಿದರು.

ದೂರು ಇದ್ದರೆ ಕರೆ ಮಾಡಿ

'ಹತ್ತು ದಿನಗಳಿಂದ ಬೆಂಗಳೂರಿನಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗಿ ಗೊಂದಲ ಆಗಿರುವುದು ನಿಜ. ಅದನ್ನು ಸರಿಪಡಿಸಲಾಗುತ್ತಿದೆ. ಮುಖ್ಯಮಂತ್ರಿಯವರು ಅದಕ್ಕಾಗಿ ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ. ಸೋಮವಾರದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿದೆ. ಒಂದು ವೇಳೆ ಎಲ್ಲಿಯಾದರೂ ಚಿಕಿತ್ಸೆಯಲ್ಲಿ, ದಾಖಲು ಮಾಡಿಕೊಳ್ಳುವಲ್ಲಿ, ತಪಾಸಣಾ ವರದಿಗಳಿಗೆ ಸಂಬಂಧಿಸಿದ ದೂರು ಇದ್ದಲ್ಲಿ, ಚಿಕಿತ್ಸೆ ನಿರಾಕರಿಸಿದರೆ 1912 ನಂಬರಿಗೆ ಕರೆ ಮಾಡಿದರೆ ತಕ್ಷಣ ಸ್ಪಂದಿಸಲಾಗುತ್ತದೆ. ಇದಕ್ಕಾಗಿಯೇ ದಿನದ 24 ತಾಸು ಕಾರ್ಯ ನಿವ೯ಹಿಸುವ ಕಾಲ್‌ ಸೆಂಟರ್‌ ಆರಂಭಿಸಲಾಗಿದೆ. ಆರಂಭದಲ್ಲಿ ಒಂದೆರಡು ದಿನ ಸಣ್ಣಪುಟ್ಟ ಸಮಸ್ಯೆ ಬರಬಹುದು, ಕ್ರಮೇಣ ಎಲ್ಲವೂ ಸರಿಯಾಗಲಿದೆ’ ಎಂದರು.

‘ನಗರದಲ್ಲಿ ಅಗತ್ಯ ಸಂಖ್ಯೆಯ ಆಂಬುಲೆನ್ಸ್‌ಗಳನ್ನು ನಿಯೋಜಿಸಲಾಗುತ್ತಿದೆ. ಅದಕ್ಕೆ ಪ್ರತ್ಯೇಕವಾಗಿ ಒಬ್ಬ ನೋಡಲ್‌ ಅಧಿಕಾರಿ ನೇಮಕ ಮಾಡಲಾಗಿದೆ. ಹಾಲಿ 108 ಸೇವೆಯಡಿ ಕಾರ್ಯ ನಿರ್ವಹಿಸುತ್ತಿರುವ ಆಂಬುಲೆನ್ಸ್‌ಗಳ ಹೊರತಾಗಿ ನಗರದ ಪ್ರತಿ ವಾರ್ಡಿಗೆ ಎರಡರಂತೆ ಆಂಬುಲೆನ್ಸ್‌ಗಳನ್ನು ನಿಯೋಜಿಸಲಾಗುತ್ತದೆ. ಯಾರಿಗೆ ಆಗಲಿ ಅಗತ್ಯವಿದ್ದಲ್ಲಿ 108 ಸಂಖ್ಯೆಗೆ ಕರೆ ಮಾಡಿ ಸೌಲಭ್ಯ ಬಳಸಿಕೊಳ್ಳಬಹುದು’ ಎಂದು ತಿಳಿಸಿದರು.

ಹೆಚ್ಚು ವಸೂಲಿ ಮಾಡುವಂತಿಲ್ಲ

‘ಕೆಲವು ಮಾಧ್ಯಮಗಳಲ್ಲಿ ಕೋವಿಡ್‌ ಪರೀಕ್ಷೆಗೆ ₹ 4000 ಅಥವಾ ₹4,500 ತೆಗೆದುಕೊಳ್ಳಲಾಗುತ್ತಿದೆ ಎಂಬ ವರದಿಗಳನ್ನು ಗಮನಿಸಿದ್ದೇನೆ. ಸರ್ಕಾರ ಇದುವರೆಗೆ ಆರು ಲಕ್ಷಕ್ಕೂ ಹೆಚ್ಚು ಮಂದಿಗೆ ತಪಾಸಣೆ ಮಾಡಲಾಗಿದೆ. ನಯಾ ಪೈಸೆ ತೆಗೆದುಕೊಂಡಿಲ್ಲ. ಸರ್ಕಾರದ ವತಿಯಿಂದ ಉಚಿತವಾಗಿ ಮಾಡಲಾಗುತ್ತಿದೆ. ಖಾಸಗಿಯವರಿಗೂ ದರ ನಿಗದಿ ಮಾಡಲಾಗಿದೆ, ನಮ್ಮಿಂದ ಕಳುಹಿಸದ ರೋಗಿಗಳಿಗೆ ₹ 2,200 ದರ ಪಡೆಯಬೇಕು ಎಂದು ನಿಗದಿಪಡಿಸಲಾಗಿದೆ. ಒಂದು ವೇಳೆ ಹೆಚ್ಚು ದರ ಪಡೆದರೆ ಕ್ರಮ ಜರುಗಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

‘ನಮ್ಮಲ್ಲಿ ಒಟ್ಟು 80 ಪ್ರಯೋಗಾಲಯಗಳಿವೆ. ಅವುಗಳ ಪೈಕಿ ಕೆಲವು ಲ್ಯಾಬ್‌ಗಳ ಮೇಲೆ ಒತ್ತಡವಿದೆ. ಇದನ್ನು ನಿವಾರಿಸಿ ದಿನದ 24 ತಾಸಿನಲ್ಲಿ ವರದಿ ನೀಡುವ ವ್ಯವಸ್ಥೆ ಜಾರಿಗೊಳಿಸುವ ಸಲುವಾಗಿ ಹಿರಿಯ ಅಧಿಕಾರಿ ಶಾಲಿನಿ ರಜನೀಶ್‌ ಅವರನ್ನು ನೇಮಕ ಮಾಡಲಾಗಿದೆ. ಹಾಗೆಯೇ ಟೆಸ್ಟ್‌ಗಳ ಸಂಖ್ಯೆಯನ್ನು ದಿನವೊಂದಕ್ಕೆ 30 ಸಾವಿರಕ್ಕೆ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ. ಖಾಸಗಿ ಲ್ಯಾಬ್‌ಗಳೂ ಕೂಡ ಪೂರ್ಣ ಪ್ರಮಾಣದಲ್ಲಿ ತಪೊಆಸಣೆಗಳನ್ನು ಮಾಡಲೇ ಬೇಕು. ಒಂದು ವೇಳೆ ನಿರಾಕರಿಸಿದರೆ ಕ್ರಮ ಜರುಗಿಸಲಾಗುವುದು. ಅಂಥ ಖಾಸಗಿ ವೈದ್ಯಕೀಯ ಕಾಲೇಜುಗಳ ಮಾನ್ಯತೆ ನವೀಕರಣ ಮಾಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ಆತಂಕ ಬೇಡ

‘ನಮ್ಮಲ್ಲಿ ಕೋವಿಡ್‌ ಕೇರ್, ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ 819 ಹಾಸಿಗೆಗಳ ಪೈಕಿ 152 ಖಾಲಿಯಿವೆ, ಖಾಸಗಿ ಮೆಡಿಕಲ್‌ ಕಾಲೇಜು ಆಸ್ಪತ್ರೆಗಳಲ್ಲಿ 1899 ಹಾಸಿಗೆ ಪೈಕಿ 779 ಲಭ್ಯವಿವೆ, ಸರ್ಕಾರಿ ಆಸ್ಪತ್ರೆಗಳಲ್ಲಿ 611ಇನ್ನೂ 105 ಖಾಲಿಯಿವೆ ಮತ್ತು ಖಾಸಗಿ ಆಸ್ಪತ್ರೆಗಳ ಹಾಸಿಗೆಗಳಿವೆ. ಖಾಸಗಿ ಆಸ್ಪತ್ರೆಗಳು ನಮಗೆ 2,734 ಹಾಸಿಗೆ ನೀಡಬೇಕಿದ್ದು ಇದುವರೆಗೆ 116 ಮಾತ್ರ ನೀಡಿದ್ದಾರೆ.  ನಮ್ಮಲ್ಲಿ ಹಾಸಿಗೆ ಕೊರತೆ ಇಲ್ಲ. ಹಂಚಿಕೆಯಲ್ಲಿನ ಗೊಂದಲ ನಿವಾರಣೆ ಆಗಿ ಒಂದೆರಡು ದಿನದಲ್ಲಿ ಎಲ್ಲವೂ ಸರಿಯಾಗಲಿದೆ. ಜನರು ಗೊಂದಲಕ್ಕೆ ಒಳಗಾಗುವ, ಆತಂಕಪಡುವ ಅಗತ್ಯವಿಲ್ಲ’ ಎಂದರು.

‘ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದೆ ನಿಜ. ಅದನ್ನು ನಿರೀಕ್ಷಿಸಲಾಗಿತ್ತು, ಇನ್ನೂ ಹೆಚ್ಚಾಗಲಿದೆ. ಅದಕ್ಕೆ ತಕ್ಕಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಮುಖ್ಯಮಂತ್ರಿಯವರು ಇದಕ್ಕಾಗಿ ಹಗಲು ರಾತ್ರಿ ದುಡಿಯುತ್ತಿದ್ದಾರೆ. ನಮ್ಮವೈದ್ಯರು ಮತ್ತು ಸಿಬ್ಬಂದಿ ಕೂಡ ಹೈರಾಣಾಗಿದ್ದಾರೆ. ಅವರು ನಾಲ್ಕು ತಿಂಗಳುಗಳಿಂದ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ವಾಸ್ತವ ಸಂಗತಿ ಅಥ೯ ಮಾಡಿಕೊಂಡು ಸಾವ೯ಜನಿಕರು, ಪ್ರತಿ ಪಕ್ಷನಾಯಕರು ಸರ್ಕಾರದ ಜತೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.‌

ಕಾನೂನು ಜಾರಿಗೆ ಚಿಂತನೆ

‘ಹಿರಿಯ ನಾಗರಿಕರಿಗೆ ಸೋಂಕು ತಗುಲದಂತೆ ನೋಡಿಕೊಳ್ಳುವ ಸವಾಲು ಎಲ್ಲರ ಮೇಲಿದೆ. ಅದಕ್ಕಾಗಿಯೇ ಅವರನ್ನು ಹೊರ ಕಳುಹಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಯುವಜನತೆ ಮೇಲಿದೆ. ಬೇರೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ 60  ವಯಸ್ಸಿಗಿಂತ ಮೇಲ್ಪಟ್ಟವರು, ಜ್ವರ ಲಕ್ಷಣಗಳಿರುವ ಹಿರಿಯ ನಾಗರಿಕರನ್ನು ತಪಾಸಣೆಗೆ ಒಳಪಡಿಸುವಂತೆ ಕಾರ್ಯಪಡೆಗಳಿಗೆ ಸೂಚನೆ ನೀಡಲಾಗಿದೆ. ಹಿರಿಯ ನಾಗರಿಕರನ್ನು ಮನೆಗಳಿಂದ ಹೊರ ಬಿಡಬಾರದು ಎಂಬ ಕಾನೂನು ಜಾರಿಗೂ ಚಿಂತನೆ ನಡೆಸಲಾಗುತ್ತಿದೆ. ತಜ್ಞರು ಮತ್ತು ಪ್ರಮುಖರ ಜತೆ ಈ ಕುರಿತು ಚಚಿ೯ಸಲಾಗುತ್ತಿದೆ ಎಂದು ಸಚಿವ ಸುಧಾಕರ್‌ ತಿಳಿಸಿದರು.

ಪರಿಸ್ಥಿತಿ ನಿಯಂತ್ರಣದಲ್ಲಿದೆ– ಭಯಬೇಡ

'ರಾಜ್ಯ ಮತ್ತು ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್‌ ನಿಯಂತ್ರಣದಲ್ಲಿದ್ದು ಜನರು ಆತಂಕಪಡುವ ಅಗತ್ಯವಿಲ್ಲ’ ಎಂದು ಸುಧಾಕರ್‌ ಹೇಳಿದ್ದಾರೆ.

‘ಕೆಲವು ಮಾಧ್ಯಮಗಳ ವರದಿಗಳಿಂದ ಜನರು ಭಯಬೀತರಾಗಿದ್ದಾರೆ. ಇದೊಂದು ಮಾರಣಾಂತಿಕ ರೋಗ ಎಂಬ ಭೀತಿಯಲ್ಲಿ ಅನೇಕರು ಮಾನಸಿಕ ಒತ್ತಡ ಮತ್ತು ಖಿನ್ನತೆಗೆ ಒಳಗಾಗಿದ್ದಾರೆ. ಅಂತಹ ಆತಂಕಕಾರಿ ಪರಿಸ್ತಿತಿ ಇಲ್ಲ’ ಎಂದರು.

‘ಜಗತ್ತಿನಾದ್ಯಂತ 11,38,7466 ಮಂದಿ ಸೋಂಕಿತರಿದ್ದಾರೆ. ಇದರಲ್ಲಿ 64,45,410 ಮಂದಿ ಗುಣಮುಖರಾಗಿದ್ದಾರೆ, ಶೇಕಡವಾರು ಪ್ರಮಾಣ 56.60 ಇದೆ. ಸಾವಿನ ಶೇಕಡಾವಾರು ಪ್ರಮಾಣ 4.68 ರಷ್ಟಿದೆ. ಭಾರತದಲ್ಲಿ 674313ಸೋಂಕಿತರಿದ್ದು, ಶೇಕಡಾ 60.67 ರಷ್ಟು ಮಂದಿ ಗುಣಮುಖರಾಗಿದ್ದಾರೆ. ಸಾವಿನ ಪ್ರಮಾಣ ಶೇಕಡಾ 2.86 ರಷ್ಟಿದೆ. ಆದರೆ ರಾಜ್ಯದಲ್ಲಿ ಇದು ರಾಷ್ಟ್ರದ ಪ್ರಮಾಣಕ್ಕಿಂತ ಕಡಿಮೆ. ನಮ್ಮಲ್ಲಿ ಸಾವಿನ ಪ್ರಮಾಣ ಶೇಕಡಾ 1.55 ರಷ್ಟಿದೆ. ಇನ್ನೂ ದೇಶದ ಮಹಾನಗರಗಳಾದ ದಿಲ್ಲಿ, ಮುಂಬೈ, ಚೆನ್ನೈಗಳಿಗೆ ಹೋಲಿಕೆ ಮಾಡಿದಾಗ ಬೆಂಗಳೂರು ನಗರದಲ್ಲಿ ಮರಣ ಪ್ರಮಾಣ ಶೇಕಡಾ 1.46 ರಷ್ಟು. ಹೀಗಾಗಿ ಯಾರೊಬ್ಬರು ಭಯ ಪಡಬೇಕಿಲ್ಲ’ ಎಂದು ವಿವರಿಸಿದರು.

‘ಹತ್ತು ದಿನಗಳಿಂದ ಈಚೆಗೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಅವರಿಗೆ ಚಿಕಿತ್ಸೆ ನೀಡಲು ಮತ್ತು ನಿಗಾ ವಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ನಗಗರದ ವಾಡ್‌೯ನಿಂದ ಗ್ರಾಮದ ಹಂತದವರೆಗೆ ಕಾರ್ಯಪಡೆಗಳನ್ನು ರಚಿಸಲಾಗಿದೆ. ಇದರ ಉಸ್ತುವಾರಿಗಾಗಿಯೇ ಹಿರಿಯ ಅಧಿಕಾರಿ ಅತೀಕ್‌ ಅವರನ್ನು ನಿಯೋಜಿಸಲಾಗಿದೆ. ಈ ಸಮಿತಿಗಳು ಹೊಸದಾಗಿ ಹೊರಡಿಸಿರುವ ಮಾರ್ಗಸೂಚಿ ಅನ್ವಯ ರೋಗ ಲಕ್ಷಣ ಇಲ್ಲದ ರೋಗಿಗಳ ಕ್ವಾರಂಟೈನ್‌ ವ್ಯವಸ್ಥೆ, ಜ್ವರ ಲಕ್ಷಣ ಇರುವವರು, ಇತರೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಹಿರಿಯ ನಾಗರೀಕರನ್ನು ಗುರುತಿಸಿ ಟೆಸ್ಟ್‌ಗೆ ಒಳಪಡಿಸುವ ಜವಾಬ್ದಾರಿ ನಿರ್ವಹಿಸಲಿದ್ದಾರೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು