ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೋವಿಡ್‌’ ಭಯ: ಬಿಕೊ ಎನ್ನುತ್ತಿವೆ ಪ್ರವಾಸಿ ತಾಣ

ಮತ್ತೆ ನೆಲಕಚ್ಚಿದ ರೆಸಾರ್ಟ್‌, ಹೋಂಸ್ಟೇ ಉದ್ಯಮ
Last Updated 10 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ಗಡಿಭಾಗದಲ್ಲೂ ‘ಕೋವಿಡ್‌–19’ ಭೀತಿ ಎದುರಾಗಿದ್ದು ಜಿಲ್ಲೆಯ ಪ್ರವಾಸಿ ತಾಣಗಳು ಬಿಕೊ ಎನ್ನುತ್ತಿವೆ.

ಪ್ರತಿವರ್ಷ ಬೇಸಿಗೆಯಲ್ಲೂ ಕೊಡಗಿಗೆ ಸ್ವಲ್ಪಮಟ್ಟಿಗೆ ಪ್ರವಾಸಿಗರು ಬರುತ್ತಿದ್ದರು. ಆದರೆ, ಈ ವರ್ಷ ಕೋವಿಡ್‌ ಪರಿಣಾಮದಿಂದ ಪ್ರವಾಸಿಗರು ಸುಳಿವು ಇಲ್ಲವಾಗಿದೆ. ಪ್ರಮುಖ ಪ್ರವಾಸಿ ತಾಣಗಳು ಭಣಗುಡುತ್ತಿವೆ.

ಕೇರಳದಲ್ಲೂ ಮತ್ತೆ ಐವರಲ್ಲಿ ಕೋವಿಡ್‌ ಸೋಂಕು ದೃಢಪಟ್ಟಿದ್ದು ಗಡಿಭಾಗದ ಕರಿಕೆ, ಮಾಕುಟ್ಟ, ಕುಟ್ಟ ಗ್ರಾಮಗಳಲ್ಲಿ ಆತಂಕ ಎದುರಾಗಿದೆ. ಆರೋಗ್ಯ ಇಲಾಖೆಯು ಈ ಭಾಗದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಚೆಕ್‌ಪೋಸ್ಟ್‌ಗಳಲ್ಲಿ ಮತ್ತೆ ಕಟ್ಟೆಚ್ಚರ ವಹಿಸಲಾಗಿದೆ. ವಿದೇಶದಿಂದ ಬರುವವರ ಮೇಲೆ ನಿಗಾ ಇಡಲಾಗಿದೆ.

ದುಬಾರೆಯಲ್ಲಿ ನೀರಿಗೆ ಇಳಿಯುತ್ತಿಲ್ಲ

ರಾಜ್ಯವೂ ಸೇರಿದಂತೆ ಹೊರ ರಾಜ್ಯಗಳ ನವ ಜೋಡಿಗಳುಮಾರ್ಚ್‌, ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ದುಬಾರೆ ಹಾಗೂ ನಿಸರ್ಗಧಾಮಕ್ಕೆ ಬಂದು ವಿಹರಿಸುತ್ತಿದ್ದರು. ಆದರೆ, ನಾಲ್ಕೈದು ದಿನಗಳಿಂದ ಅವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿದಿದೆ ಎಂದು ಹೇಳುತ್ತಾರೆ ವ್ಯಾಪಾರಸ್ಥರು.

ದುಬಾರೆಯಲ್ಲೂ ಯಾರೂ ಸಾಮೂಹಿಕವಾಗಿ ನೀರಿಗೆ ಇಳಿದು ಆಟವಾಡುವ ಮನಸ್ಸು ಮಾಡುತ್ತಿಲ್ಲ. ಮಡಿಕೇರಿಯ ಪ್ರಮುಖ ಪ್ರವಾಸಿ ತಾಣ ರಾಜಾಸೀಟ್‌ ಸಹ ಬಿಕೊ ಎನ್ನುತ್ತಿದೆ. ಓಂಕಾರೇಶ್ವರ ದೇವಸ್ಥಾನದಲ್ಲೂ ಪ್ರವಾಸಿಗರ ಕೊರತೆಯಿದೆ. ಭಾಗಮಂಡಲದ ಭಗಂಡೇಶ್ವರ, ತಲಕಾವೇರಿ ಪುಣ್ಯ ಕ್ಷೇತ್ರಗಳಿಗೂ ಸ್ಥಳೀಯರು ಹಾಗೂ ಪ್ರವಾಸಿಗರು ತೆರಳುತ್ತಿಲ್ಲ.

‘ಮಾರ್ಚ್‌ ಪರೀಕ್ಷಾ ಸಮಯ. ಪ್ರತಿವರ್ಷವೂ ಈ ಸಮಯದಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆ ಇರುತ್ತದೆ. ಈ ವೇಳೆ ನವಜೋಡಿಗಳು, ಟೆಕ್ಕಿಗಳು ಮಾತ್ರ ಕೊಡಗಿನ ಪ್ರವಾಸಕ್ಕೆ ಬರುತ್ತಿದ್ದರು. ಕಳೆದ ಶನಿವಾರ ಹಾಗೂ ಭಾನುವಾರ ಸ್ವಲ್ಪ ಪ್ರವಾಸಿಗರು ಇದ್ದರು. ಕೋವಿಡ್‌ ಪರಿಣಾಮ ಸೋಮವಾರ ಹಾಗೂ ಮಂಗಳವಾರ ಯಾರೂ ಜಿಲ್ಲೆಯತ್ತ ಬಂದಿಲ್ಲ‘ ಎಂದು ಹೇಳುತ್ತಾರೆ ಪ್ರವಾಸೋದ್ಯಮ ಅವಲಂಬಿತರು.

ಹೋಂಸ್ಟೇ, ರೆಸಾರ್ಟ್‌ಗೂ ನಷ್ಟ

ಜಿಲ್ಲೆಯ ರೆಸಾರ್ಟ್‌ ಹಾಗೂ ಹೋಂಸ್ಟೇಗಳು ಪ್ರವಾಸಿಗರನ್ನೇ ನಂಬಿವೆ. ಪ್ರಾಕೃತಿಕ ವಿಕೋಪದ ಬಳಿಕ ಚೇತರಿಕೆ ಹಾದಿಯಲ್ಲಿದ್ದ ಪ್ರವಾಸೋದ್ಯಮಕ್ಕೆ ’ಕೋವಿಡ್‌‘ ಕಂಟಕವಾಗಿ ಪರಿಣಮಿಸಿದೆ. ಒಂದು ತಿಂಗಳು ಇದೇ ಪರಿಸ್ಥಿತಿ ಮುಂದುವರಿದರೆ ಹೋಂಸ್ಟೇ ಹಾಗೂ ರೆಸಾರ್ಟ್‌ಗಳಿಗೆ ಭಾರಿ ನಷ್ಟವಾಗಲಿದೆ.

ಮಾಸ್ಕ್‌ಗೆ ಬಂತುಭಾರಿ ಬೇಡಿಕೆ

ಬೆಂಗಳೂರಿನಲ್ಲಿ ಕೋವಿಡ್‌ ಪ್ರಕರಣಗಳು ದೃಢವಾಗುತ್ತಿದ್ದಂತೆಯೇ ಮಡಿಕೇರಿಯಲ್ಲೂ ಮಾಸ್ಕ್‌ಗೆ ಭಾರಿ ಬೇಡಿಕೆ ಬಂದಿದೆ. ಆಸ್ಪತ್ರೆ, ಖಾಸಗಿ ನರ್ಸಿಂಗ್‌ ಹೋಂ ಹಾಗೂ ಸಾರ್ವಜನಿಕರು ಅಲ್ಲಲ್ಲಿ ಮಾಸ್ಕ್‌ ಧರಿಸಿ ಓಡಾಡುತ್ತಿದ್ದಾರೆ. ಮಂಗಳವಾರ ಮಧ್ಯಾಹ್ನ ಮಡಿಕೇರಿಯ ‘ಮಿಲಿಟರಿ ಕ್ಯಾಂಟೀನ್‌’ ಎದುರಿನ ರಸ್ತೆಯಲ್ಲಿ ಹಲವು ಯುವಕರು ಮಾಸ್ಕ್‌ ಧರಿಸಿಕೊಂಡು ಹೋಗುತ್ತಿದ್ದ ದೃಶ್ಯ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT