ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ನಿಲ್ದಾಣದಲ್ಲಿ ‘ತಾಯಿಯ ಮಡಿಲು’

Last Updated 18 ಡಿಸೆಂಬರ್ 2019, 12:08 IST
ಅಕ್ಷರ ಗಾತ್ರ

ಬೆಳಗಾವಿ: ಬೇಡವಾದ ಮಗುವನ್ನು ಕಸದ ತೊಟ್ಟಿಯಲ್ಲೋ, ಇನ್ನೆಲ್ಲೋ ಇಟ್ಟು ಹೋಗುವುದನ್ನು ತಪ್ಪಿಸಲು ಹಾಗೂ ಆ ಮಗುವನ್ನು ಆರೈಕೆ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಇಲ್ಲಿನ ರೈಲು ನಿಲ್ದಾಣದಲ್ಲಿ ತೊಟ್ಟಿಲಿನ ವ್ಯವಸ್ಥೆ ಮಾಡಲಾಗಿದೆ. ಅದಕ್ಕೆ ‘ತಾಯಿಯ ಮಡಿಲು’ ಎಂದು ಹೆಸರಿಡಲಾಗಿದೆ.

ನಿಲ್ದಾಣದ ಜನರಲ್ ವೇಟಿಂಗ್ ಹಾಲ್‌ನ ಪ್ಯಾಸೇಜ್‌ನಲ್ಲಿ ರೈಲ್ವೆ ಇಲಾಖೆ ಹಾಗೂ ಚಿಕ್ಕುಂಬಿಮಠದ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನದ ಸಹಯೋಗದಲ್ಲಿ ಈ ತೊಟ್ಟಿಲು ಇಡಲಾಗಿದೆ. ಬೇಡವಾದ ಮಗುವನ್ನು ತೊಟ್ಟಿಲಿಗೆ ಹಾಕಿ, ಪಕ್ಕದ ಗೋಡೆಯಲ್ಲಿರುವ ಬಟನ್‌ ಒತ್ತಿದರೆ ತೊಟ್ಟಿಲಲ್ಲಿ ಮಗು ಇಡಲಾಗಿದೆ ಎನ್ನುವ ಸಂದೇಶ ಸ್ಟೇಷನ್ ಮಾಸ್ಟರ್‌ಗೆ ರವಾನೆಯಾಗುವಂತೆ ವ್ಯವಸ್ಥೆ ಮಾಡಲಾಗಿದೆ.

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಜ್ಯಸಭಾ ಸದಸ್ಯ ಪ್ರಭಾಕರ‌ ಕೋರೆ, ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಅವರು ಖಾಲಿ ತೊಟ್ಟಿಲು ತೂಗುವ ಮೂಲಕ ಸೇವೆಯನ್ನು ಸಮರ್ಪಿಸಿದರು.

ನಂತರ ಮಾತನಾಡಿದ ಅಂಗಡಿ, ‘ಹೆಣ್ಣು ಮಕ್ಕಳು ಕಿತ್ತೂರು ರಾಣಿ ಚನ್ನಮ್ಮನಂತಾಗಬೇಕು. ಗಂಡು ಮಕ್ಕಳು ವಿವೇಕಾನಂದರಾಗಬೇಕು. ದೇಶವನ್ನು ದಮನ ಮಾಡಲು ಮುಂದಾಗಿರುವ ದುಷ್ಟಶಕ್ತಿಗಳ ವಿರುದ್ಧ ಎಲ್ಲರೂ ಹೋರಾಡಬೇಕು’ ಎಂದರು.

‘ರಾಜ್ಯದ ಎಲ್ಲ ರೈಲು ನಿಲ್ದಾಣಗಳಲ್ಲಿ ‘ತಾಯಿಯ ಮಡಿಲು ಕಾರ್ಯಕ್ರಮ’ದಲ್ಲಿ ತೊಟ್ಟಿಲು ಇಡಲಾಗುವುದು. ಮಕ್ಕಳಲ್ಲಿ ಅನಾಥ ಪ್ರಜ್ಞೆ ಮೂಡದಂತೆ ನೋಡಿಕೊಳ್ಳುವುದೇ ಕೇಂದ್ರ ಸರ್ಕಾರದ ಗುರಿಯಾಗಿದೆ’ ಎಂದು ಹೇಳಿದರು.

ಶಶಿಕಲಾ ಜೊಲ್ಲೆ ಮಾತನಾಡಿ, ‘ಭಾರತೀಯ ಸಂಸ್ಕೃತಿಯಲ್ಲಿ ತಾಯಿಗೆ ವಿಶೇಷವಾದ ಗೌರವವಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಆಧುನಿಕತೆ ಹೆಸರಿನಲ್ಲಿ ತಾಯಿಗೆ ನೀಡುವ ಗೌರವ ಕಡಿಮೆಯಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘‌ಅನೈತಿಕ ಸಂಬಂಧದಿಂದ ಹುಟ್ಟಿದ ಮಕ್ಕಳನ್ನು ಬೀದಿಗೆ ಎಸೆಯುವುದು ಕಂಡುಬರುತ್ತಿದೆ. ಇದರಿಂದ ಅನಾಥ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಮಕ್ಕಳನ್ನು ಕಾಳಜಿ ಮಾಡಲು ಸ್ವಾಮಿ ವಿವೇಕಾನಂದ ಪ್ರತಿಷ್ಠಾನದವರು ಮುಂದಾಗಿದ್ದಾರೆ. ಈ ಪ್ರತಿಷ್ಠಾನಕ್ಕೆ ಸರ್ಕಾರದಿಂದ ಸಹಕಾರ ನೀಡಲಾಗುತ್ತಿದೆ’ ಎಂದರು.

ವಿಧಾನಪರಿಷತ್‌ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಸವರಾಜ ವರವಟ್ಟಿ ಮತ್ತು ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT