ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿ ಅನುಮಾನಿಸುವ ಸ್ಥಿತಿಗೆ ಕಾಂಗ್ರೆಸ್‌: ಸಿ.ಟಿ.ರವಿ

Last Updated 24 ಡಿಸೆಂಬರ್ 2019, 12:22 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಅನುಮಾನ ಪ್ರವೃತ್ತಿ ಕಾಂಗ್ರೆಸ್‌ಗೆ ಹೊಸದೇನಲ್ಲ. ತಾಯಿ ಬಗ್ಗೆಯೂ ಅನುಮಾನಪಡುವ ಮನಸ್ಥಿತಿ ಕೆಲವರಿಗೆ ಇರುತ್ತದೆ, ಆ ಮನಸ್ಥಿತಿಗೆ ಕಾಂಗ್ರೆಸ್‌ ತಲುಪಿರಬಹುದು’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಪ್ರತಿಕ್ರಿಯಿಸಿದರು.

ಬಿಡುಗಡೆಯಾಗಿರುವ ವಿಡಿಯೋ ಅಸಲಿಯತ್ತನ್ನು ಕಾಂಗ್ರೆಸ್‌ ಪ್ರಶ್ನಿಸಿದೆ ಎಂಬುದಕ್ಕೆ ಉತ್ತರಿಸಿದ ಅವರು, ‘ಸೇನೆ, ತಾಯಿ ಬಗ್ಗೆ ಅನುಮಾನಪಡುವಂಥವರು ಇಂಥ ಪ್ರಶ್ನೆಗಳನ್ನು ಎತ್ತುತ್ತಾರೆ. ಈ ಹಿಂದೆ ಮತಯಂತ್ರಗಳ(ಇವಿಎಂ) ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದರು. ಜಾರ್ಖಂಡ್‌ನಲ್ಲಿ ಬಿಜೆಪಿ ಸೋತಿದೆ, ಜನಾದೇಶ ಎಂದು ಒಪ್ಪಿಕೊಂಡಿದ್ದೇವೆ. ಕಾಂಗ್ರೆಸ್‌ ಸೋತಿದ್ದರೆ ಇವಿಎಂ ಮೇಲೆ ಗೂಬೆ ಕೂರಿಸುತ್ತಿದ್ದರು’ ಎಂದು ವ್ಯಂಗ್ಯವಾಡಿದರು.

‘ಸರ್ವಾನುಮತದಿಂದ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ, ಅವರೇ ನಮ್ಮ ನಾಯಕ. ಗಲಭೆ ಎಬ್ಬಿಸಿ ರಾಜಕೀಯ ಪದಚ್ಯುತಿಗೊಳಿಸುವುದು ಕಾಂಗ್ರೆಸ್‌ ಸಂಸ್ಕೃತಿ ಹೀಗೆ ಮಾಡಿಯೇ ವೀರೇಂದ್ರ ಪಾಟೀಲ್‌, ಎಸ್‌.ಬಂಗಾರಪ್ಪ ಅವರನ್ನು ಕೆಳಗಿಳಿಸಿದ್ದರು’ ಎಂದು ಉತ್ತರಿಸಿದರು.

‘ರಾಜಕೀಯವಾಗಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್‌ಗೆ ಈಗ ಗಲಭೆಯ ಅಗತ್ಯ ಇದೆ. ಮಂಗಳೂರಿನಲ್ಲಿ ಗಲಭೆ ಮಾಡಿಸುತ್ತಿರುವುದು ಕಾಂಗ್ರೆಸ್‌ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ. ಈ ಗಲಭೆ ಪೂರ್ವನಿಯೋಜಿತ ಎಂದು ಸಿ.ಸಿ.ಟಿವಿ ಕ್ಯಾಮೆರಾ ದೃಶ್ಯಾವಳಿ ಪ್ರಾಥಮಿಕ ಸಾಕ್ಷ್ಯ ಹೇಳುತ್ತಿವೆ. ಗಲಭೆ ಮಾಡಬೇಕೆಂಬ ಉದ್ದೇಶದಿಂದಲೇ ಅಲ್ಲಿ ಸೆಕ್ಷನ್‌ 144 ಉಲ್ಲಂಘಿಸಿದ್ದಾರೆ. ಪ್ರತಿಭಟನೆ ಯೋಚನೆ ಮಾಡಿದ್ದಾರೆ’ ಎಂದು ವಿಶ್ಲೇಷಿಸಿದರು.

‘ಈಗಾಗಲೇ ಗಲಭೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ನ್ಯಾಯಾಂಗ ವಿಚಾರಣೆ ಮತ್ತು ಸಿಐಡಿ ತನಿಖೆಗೆ ಆದೇಶ ಮಾಡಿದ್ದಾರೆ. ಗಲಭೆ ಹಿಂದಿನ ಪಿತೂರಿ,

ಯಾರ ಕೈವಾಡ ಇದೆ ಎಂಬುದನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸಬೇಕು. ಬೆಂಕಿ ಹಾಕುತ್ತೇವೆ ಎಂದು ಯು.ಟಿ.ಖಾದರ್‌ ಹೇಳಿಕೆ ನೀಡಿದ್ದರು. ಕಾಂಗ್ರೆಸ್‌ನ ಯಾವೊಬ್ಬ ಮುಖಂಡರು ಈ ಹೇಳಿಕೆಯನ್ನು ಖಂಡಿಸಲಿಲ್ಲ’ ಎಂದು ದೂಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT