ಶನಿವಾರ, ಆಗಸ್ಟ್ 20, 2022
21 °C
ವಾಣಿಜ್ಯ ವಿಭಾಗಕ್ಕೆ ಬೇಡಿಕೆ ಅಧಿಕ

ಪಿಯು: ಕಟ್‌ಆಫ್‌ ಪಟ್ಟಿ ಪ್ರದರ್ಶನ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಪಿಯು ತರಗತಿಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ಕಾಲೇಜುಗಳು ಕಟ್‌ಆಫ್‌ ಅಂಕವನ್ನು ಪ್ರದರ್ಶಿಸುವುದು ಕಡ್ಡಾಯ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

ಪಿಯು ಪ್ರವೇಶಾತಿ ಅರ್ಜಿ ಶುಲ್ಕ ₹ 25 ಮೀರುವಂತಿಲ್ಲ. ಕಾಲೇಜುಗಳು ಇದೇ 6ರವರೆಗೆ ಅರ್ಜಿ ವಿತರಿಸಬೇಕು. ಹೀಗೆ ವಿತರಿಸಿದ ಅರ್ಜಿಗಳನ್ನು ಭರ್ತಿ ಮಾಡಿ ಪಡೆಯಲು ಇದೇ 8ರವರೆಗೆ ಅವಕಾಶ ನೀಡಬೇಕು ಎಂದು ತಿಳಿಸಲಾಗಿದೆ.

ಕಾಲೇಜುಗಳು ಸ್ವೀಕರಿಸಿದ ಅರ್ಜಿಗಳ ವಿವರಗಳನ್ನು ಇದೇ 10ರಂದು ಪ್ರದರ್ಶಿಸಬೇಕು. 13ರಂದು ಪ್ರವೇಶಕ್ಕೆ ಅರ್ಹತೆ ಪಡೆದ ವಿದ್ಯಾರ್ಥಿಗಳ ಪ್ರಥಮ ಪಟ್ಟಿಯನ್ನು ಪ್ರಕಟಿಸಬೇಕು. ಇಂತಹ ವಿದ್ಯಾರ್ಥಿಗಳು ಶುಲ್ಕ ಪಾವತಿಸಲು 16 ಕೊನೆಯ ದಿನವಾಗಿರುತ್ತದೆ. ಕಾಲೇಜುಗಳು ವಿದ್ಯಾರ್ಥಿಗಳ ಎರಡನೇ ಪಟ್ಟಿಯನ್ನು 17ರಂದು ಪ್ರಕಟಿಸುವುದು ಕಡ್ಡಾಯವಾಗಿದ್ದು, 20ರೊಳಗೆ ಅವರಿಂದ ಶುಲ್ಕ ಪಡೆಯಬೇಕು. ಮುಂದಿನ ಮೂರು ದಿನಗಳ ಒಳಗೆ 3ನೇ ಪಟ್ಟಿಯನ್ನು ಪ್ರಕಟಿಸಬೇಕು. ಕಾಲೇಜು ಪ್ರವೇಶಕ್ಕೆ ಅರ್ಹತೆ ಪಡೆದ ಕೊನೆಯ ವಿದ್ಯಾರ್ಥಿಯ ಕಟ್‌ಆಫ್‌ ಅಂಕವನ್ನು ಕಾಲೇಜುಗಳು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಇಲಾಖೆ ಸೂಚಿಸಿದೆ.

ವಾಣಿಜ್ಯ ವಿಭಾಗಕ್ಕೆ ಬೇಡಿಕೆ: ಈ ಮಧ್ಯೆ, ಕಾಲೇಜುಗಳ ಪ್ರವೇಶಕ್ಕೆ ರಾಜ್ಯದ ಎಲ್ಲೆಡೆ ನೂಕುನುಗ್ಗಲು ಕಾಣಿಸಿದ್ದು, ಕಳೆದ ವರ್ಷದಂತೆ ಈ ವರ್ಷವೂ ವಾಣಿಜ್ಯ ವಿಭಾಗಕ್ಕೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ.

ಭಾರಿ ಬೇಡಿಕೆಯಿಂದಾಗಿ ಕಾಲೇಜುಗಳು ಕಟ್‌ ಆಫ್‌ ಅಂಕವನ್ನು ಹೆಚ್ಚಿಸುವ ಅನಿವಾರ್ಯತೆಗೆ ಬಿದ್ದಿದ್ದು, ಅಂಕ ಕಡಿಮೆ ಪಡೆದ ವಿದ್ಯಾರ್ಥಿಗಳು ತಮಗೆ ಇಷ್ಟವಾದ ಕಾಲೇಜುಗಳಲ್ಲಿ ಶಿಕ್ಷಣದ ಅವಕಾಶ ತಪ್ಪಿ ಹೋಗಬಹುದೇ ಎಂಬ ಆತಂಕದಲ್ಲಿದ್ದಾರೆ.

‘ಕಳೆದ ವರ್ಷ ನಮ್ಮ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಕಟ್‌ಆಫ್‌ ಅಂಕ ಶೇ 94 ಆಗಿತ್ತು. ಈ ವರ್ಷದ ಬೇಡಿಕೆ ನೋಡಿದರೆ ಕಟ್‌ ಆಫ್‌ ಅಂಕವನ್ನು ಶೇ 95 ಅಥವಾ 96ಕ್ಕೆ ಹೆಚ್ಚಿಸಬೇಕಾಗಬಹುದು’ ಎಂದು ನ್ಯಾಶನಲ್‌ ಎಜುಕೇಶನ್‌ ಸೊಸೈಟಿಯ ಅಧ್ಯಕ್ಷ ಎ.ಎಚ್‌.ರಾಮರಾವ್ ತಿಳಿಸಿದರು.

ವಿಜ್ಞಾನ ವಿಭಾಗದಲ್ಲಿ ಕಂಪ್ಯೂಟರ್ ಸೈನ್ಸ್‌ಗೆ ಅಧಿಕ ಬೇಡಿಕೆ ಇರುವುದು ನಗರದ ಹಲವು ಕಾಲೇಜುಗಳಲ್ಲಿ ಸರದಿಯಲ್ಲಿ ನಿಂತಿದ್ದ ಮಕ್ಕಳು ಮತ್ತು ಅವರ ಪೋಷಕರನ್ನು ಮಾತನಾಡಿಸಿದಾಗ ಕಂಡುಬಂತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು