ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಕುಮಾರ್‌ ಜಾಮೀನು ಅರ್ಜಿ: ವಾದ ಪ್ರತಿವಾದದ ಸಂಪೂರ್ಣ ವಿವರ

ಹಣ ಅಕ್ರಮ ವರ್ಗಾವಣೆ ಹಗರಣ: ಡಿ.ಕೆ. ಶಿವಕುಮಾರ್‌ ಜಾಮೀನು ಅರ್ಜಿ ವಿಚಾರಣೆ
Last Updated 25 ಸೆಪ್ಟೆಂಬರ್ 2019, 10:46 IST
ಅಕ್ಷರ ಗಾತ್ರ

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿ ನ್ಯಾಯಾಂಗಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್‌ ಶಾಸಕ ಡಿ.ಕೆ. ಶಿವಕುಮಾರ್‌ ಅವರ ಜಾಮೀನುಅರ್ಜಿ ವಿಚಾರಣೆಜಾರಿ ನಿರ್ದೇಶನಾಲಯ (ಇ.ಡಿ)ದ ವಿಶೇಷ ನ್ಯಾಯಾಲಯದಲ್ಲಿ ಮುಕ್ತಾಯವಾಗಿದು ಆದೇಶವನ್ನು ಸೆ.25ರಂದು ಪ್ರಕಟಿಸುವುದಾಗಿ ನ್ಯಾಯಪೀಠ ಹೇಳಿದೆ.

02.28:ಡಿ.ಕೆ. ಶಿವಕುಮಾರ್‌ ಅವರ ಜಾಮೀನು ಅರ್ಜಿ ವಿಚಾರಣೆಆದೇಶವನ್ನು ಬುಧವಾರ (ಸೆ. 25) ಮಧ್ಯಾಹ್ನ 3.30ಕ್ಕೆ ನೀಡುವುದಾಗಿ ನ್ಯಾಯಪೀಠ ಹೇಳಿದೆ.

01.28:ಡಿ.ಕೆ.ಶಿವಕುಮಾರ್‌ ಜಮೀನು ಅರ್ಜಿ ವಿಚಾರಣೆ ಅಂತ್ಯವಾಗಿದ್ದು ನ್ಯಾಯಾಧೀಶರು ಆದೇಶ ಕಾಯ್ದಿರಿಸಿದ್ದಾರೆ. ಭೋಜನ ವಿರಾಮದ ನಂತರ ಆದೇಶದ ದಿನ‌ ಪ್ರಕಟಿಸುವುದಾಗಿ ನ್ಯಾಯಾಧೀಶರು ಹೇಳಿದ್ದಾರೆ.

01.28:ಅಭಿಷೇಕ್‌ ಮನುಸಿಂಘ್ವಿ ವಾದ ಮಂಡನೆ ಮುಕ್ತಾಯ. ಶಿವಕುಮಾರ್‌ ಪರ ಮುಕುಲ್‌ ರೋಹಟ್ಗಿವಾದ ಮಂಡನೆ ಆರಂಭ..

01.10:₹ 41 ಲಕ್ಷ ವಶಕ್ಕೆ ಪಡೆದಿರುವುದು ಒಮ್ಮೆಲೇ ಅದನ್ನು₹ 8.59 ಕೋಟಿ ಮಾಡಲಾಗಿದೆ. ಮಗಳ ಆಸ್ತಿಯನ್ನು ಸಹ‌‌ ಇದೇ ರೀತಿ ಅತಿಶಯೋಕ್ತಿ‌ ಎಂಬಂತೆ‌ ಬಿಂಬಿಸಲಾಗಿದೆ. ಅದು ಹಣ ಅಕ್ರಮ ವರ್ಗಾವಣೆ‌ ಹೇಗೆ ಆಗಲಿದೆ ಎಂಬುದೇ ಆಶ್ಚರ್ಯಕರ.

12.52:ಪುತ್ರಿ ಐಶ್ವರ್ಯಾ ಮೂವರ ಬಳಿ‌ ತಲಾ‌ ₹ 10 ಕೋಟಿ ಸಾಲ ಪಡೆದಿದ್ದಾರೆ. ಇತರರ ಖಾತೆಗಳನ್ನೂ ಶಿವಕುಮಾರ್ ಅವರಿಗೆ ಸೇರಿದ ಖಾತೆ ಎಂದೇ ಪರಿಗಣಿಸಲಾಗಿದೆ. ಶಿವಕುಮಾರ್ ಅವರ ಸಂಬಂಧಿಗಳ ಎಲ್ಲರ ಖಾತೆಗಳನ್ನು ಒಟ್ಟುಗೂಡಿಸಿ 317 ಖಾತೆ ಎಂದು ಹೇಳಲಾಗಿದೆ–ಸಿಂಘ್ವಿ

12.18:ಘೋಷಿತವಲ್ಲದ ಹಣವನ್ನು ಅಥವಾ ಯಾವುದೇ ಮೂಲದಿಂದ ಬಂದ ಹಣವನ್ನು ಅಕ್ರಮ‌‌ ಎಂದು ಕರೆದರೆ ಹೇಗೆ? ಸೆಕ್ಷನ್ 45 ಎರಡು ಷರತ್ತು ಒಳಗೊಂಡಿದೆ. ಒಂದು ಪ್ರಕರಣ‌‌ ದಾಖಲಿಸಲು ಅವಕಾಶ ನೀಡಿದರೆ ಇನ್ನೊಂದು ನ್ಯಾಯಾಲಯದ ತೀರ್ಪುಗಳನ್ನು ಆಧರಿಸಿದ್ದಾಗಿದೆ. ಹಾಗಾಗಿ ಇಂಥ ಅಪರಾಧಗಳನ್ನು ಈ ಕಾಯ್ದೆ‌ ಅಡಿ ಪರಿಗಣಿಸುವುದು ಸೂಕ್ತವಲ್ಲ.

12.12:ಮಾಡದಿರುವ ತಪ್ಪನ್ನು ಪತ್ತೆ ಮಾಡಲೇಬೇಕು ಎಂಬ ಪೂರ್ವಗ್ರಹ ಹೊಂದಿರುವ ತನಿಖಾಧಿಕಾರಿಗಳು ಇಲ್ಲಸಲ್ಲದ ಆರೋಪ ಹೊರಿಸಿದ್ದಾರೆ. ಕಿಸೆ‌ಕಳ್ಳತನವನ್ನೂ ಇವರು ಉದಾಹರಿಸುತ್ತಿದ್ದಾರೆ. ಹಫ್ತಾ ವಸೂಲಿಯು ದರೋಡೆ ಅಡಿ ಪರಿಗಣಿತವಾಗುತ್ತದೆ. ಅದು ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಬರುತ್ತದೆ. ಹಣವನ್ನು ಒಬ್ಬರಿಂದ ಒಬ್ಬರಿಗೆ ನೀಡಿದರೆ ಅದು ವರ್ಗಾವಣೆಯೇ. ಕಿಸೆ‌ಕಳ್ಳತನವನ್ನು ಘೋಷಿತ ಅಪರಾಧ ಎಂಬಂತೆ ಬಿಂಬಿಸುವ ‌ಮೂಲಕ ಇಲ್ಲಸಲ್ಲದ ಬಣ್ಣ ಬಳಿಯಲಾಗುತ್ತಿದೆ. ಆದಾಯ ತೆರಿಗೆ ಕಾಯ್ದೆ ಅಡಿ ಕೇವಲ ಸಕ್ರಮ ಹಣವನ್ನು ಪರಿಗಣಿಸಲಾಗುತ್ತದೆ ಎಂಬುದುಸರಿ ಅಲ್ಲ.

12.05:ಒಂದು‌ ಮರವೇ ಘೋಷಿತ‌ ಅಪರಾಧದಂತೆ ಪರಿಗಣಿತವಾದರೆ, ಅದರ ಎಲ್ಲ ಟೊಂಗೆಗಳಲ್ಲಿರುವ ಹಣ್ಣುಗಳು ಅಕ್ರಮ‌ ಫಲಗಳು. ತುದಿಯಲ್ಲೇ ಇರಲಿ, ಮಧ್ಯದಲ್ಲೇ ಇರಲಿ, ಬೊಡ್ಡೆಯ ಬಳಿ ಇರಲಿ ಅಂಥ ಎಲ್ಲ ಹಣ್ಣುಗಳೂ ಅಕ್ರಮವಾಗುತ್ತವೆ. ಆದರೆ ಮರ ಎಲ್ಲಿದೆ ಎಂಬುದನ್ನು ತೋರಿಸಬೇಕಲ್ಲವೇ? ಇ.ಡಿ. ಈಗ ಇಲ್ಲದ‌ ಮರದಿಂದ ಹಣ್ಣು ಪಡೆದಿರುವ ಆರೋಪ ಮಾಡುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಪರವಾಗಿ ಸಿಂಘ್ವಿ ವಾದ ಮಂಡಿಸಿದರು.

12.00:2017ರ ಜನವರಿಯಲ್ಲಿ ಆದಾಯ ತೆರಿಗೆ ಪ್ರಕರಣ ದಾಖಲಾಗುತ್ತದೆ. 2019ರ ಜನವರಿಯಲ್ಲಿ ಸಮನ್ಸ್ ಜಾರಿ ಮಾಡಿ‌ ಹೇಳಿಕೆ ದಾಖಲು ಮಾಡಲು ಕೇಳಲಾಗುತ್ತದೆ. ಒಂದೊಮ್ಮೆ ಇದು ಘೋಷಿತ ಅಪರಾಧ ಆದರೆ ಯಾಕೆ ಇಷ್ಟು ವಿಳಂಬ ಮಾಡಲಾಗಿದೆ, ಇದು ಎಷ್ಟು ಸೂಕ್ತ- ಸಿಂಘ್ವಿ

11.56:ಸೆಕ್ಷನ್ 120 ಬಿ ಪ್ರಕಾರ ಇದು ಘೋಷಿತ ‌ಅಪರಾಧ ಎಂದು ಹೇಳಲಾಗುತ್ತಿದೆ. ಯಾವುದೇ ಹಣ್ಣು ಮರದಲ್ಲಿ ನೇತಾಡುತ್ತಿರುತ್ತಿದೆ. ಇವರು ತಪ್ಪಿತಸ್ಥರ ಮೇಲೆ ಹಣ್ಣಿನ ಉದಾಹರಣೆ ಸಮೇತ ಆರೋಪ ಹೊರಿಸಲಾಗುತ್ತಿದೆ. ಆದರೆ ಇವರು ಉದಾಹರಿಸಿದ ಹಣ್ಣು ತ್ರಿಶಂಕು ಸ್ಥಿತಿಯಲ್ಲಿದೆ. ಮರವೇ ಇಲ್ಲದ ಹಣ್ಣು ಅದು. ನಾಯಿ ಬಾಲವನ್ನು ಅಲುಗಾಡಿಸೋದು ಸಾಮಾನ್ಯ. ಆದರೆ ಇಲ್ಲಿ ಬಾಲವೇ ನಾಯಿಯನ್ನು ಅಲುಗಾಡಿಸುವಂತಿದೆ.

11.53:ಇ.ಡಿ ಹೇಳಿಕೆಗಳನ್ನು ತಿರುಚುತ್ತಿದೆ. ಇದು ಪೂರ್ವಗ್ರಹದಿಂದ ಕೂಡಿರುವ ತನಿಖೆ, ವಿಚಾರಣಾಧೀನ ಕೈದಿಯ ಮೇಲೆ ಸಾಕ್ಷ್ಯ ನಾಶದ ಆರೋಪ ಮಾಡುತ್ತಿರುವ ಇ.ಡಿ. ತಾನೇ ಹೇಳಿಕೆ ತಿರುಚುತ್ತಿರುವುದು ಸರಿಯಲ್ಲ–ಸಿಂಘ್ವಿ

11.50:ವಶದಲ್ಲಿ ಇರುವ ಆರೋಪಿಯ ವಿಚಾರಣೆ ಸುಲಭ, ಯಾವುದೇ ರೀತಿಯ ಅಪರಾಧ ಮಾಡದ‌ ವ್ಯಕ್ತಿಯಿಂದ ಸತ್ಯ ಹೊರಬರುತ್ತಿಲ್ಲ ಎಂದು ಹೇಳಿದರೆ‌ ಹೇಗೆ? ಕಳೆದ 22 ದಿನಗಳಿಂದ ವಿಚಾರಣೆ ನಡೆಸಿದರೂ ಹೇಳಿಕೆ ದೊರೆತಿಲ್ಲ ಎನ್ನಲಾಗುತ್ತಿದೆ. 162 ಗಂಟೆ ವಿಚಾರಣೆ ನಡೆಸಿದರೂ ತನಿಖಾಧಿಕಾರಿಗಳು ಸಫಲ ಆಗಲಿಲ್ಲ. ಇದರ‌ ಅರ್ಥ ಆರೋಪಿ ಅಕ್ರಮದಲ್ಲಿ ಭಾಗಿ ಆಗಿಲ್ಲ. ಸತತ 18 ದಿನ ನೇರವಾಗಿ ವಶಕ್ಕೆ‌ ಪಡೆದು ವಿಚಾರಣೆ ನಡೆಸಲಾಗಿದೆ. ಆ ಪೈಕಿ ಆಸ್ಪತ್ರೆಯಲ್ಲಿ 4 ದಿನ ಇರಿಸಲಾಗಿದೆ. ನಾನು ಏನೂ ತಪ್ಪು ಮಾಡಿಲ್ಲ ಎಂದರೂ ಕಿರುಕುಳ ನೀಡುವುದು ಹೇಯ ‌ಕೃತ್ಯವೇ ಸರಿ ಎಂದು ಶಿವಕುಮಾರ್ ಪರ ಸಿಂಘ್ವಿ ವಾದ ಮಂಡಿಸಿದರು.

11.44:ಡಿ.ಕೆ.ಶಿವಕುಮಾರ್ಪರ ಅಭಿಷೇಕ್‌ ಮನುಸಿಂಘ್ವಿ ವಾದ ಆರಂಭ

11.42:ಕೋಟೆ ಕಟ್ಟಲು ಕಲ್ಲು ಬೇಕು, ನೋಟುಗಳಿಂದ ಕಟ್ಟಲಾಗದು. ಆದಾಯದ ಮೂಲ ತೋರಿಸದೆ ಆಸ್ತಿ ಮಾಡಿರುವುದು ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದಂತೆ ಆಗಿದೆ. ಕಳ್ಳತನದಿಂದ ಹಾಲು ಕುಡಿದಿದ್ದನ್ನು ಯಾರೂ ನೋಡಿಲ್ಲ ಎಂದು ಭಾವಿಸುವ ಬೆಕ್ಕು ಏನೇ ಸಬೂಬು ನೀಡಿದರೂ ನಂಬಲಾಗದು.. ನಟರಾಜ್ ವಾದ ಮಂಡನೆ ಮುಕ್ತಾಯ.

11.40:ಇಂತಹ ಗಂಭೀರ ಆರ್ಥಿಕ ಅಪರಾಧವು ರಾಷ್ಟ್ರೀಯ ‌ಆರ್ಥಿಕತೆಗೆ ಹೊಡೆತ ನೀಡಲಿದೆ. ರಾಷ್ಟ್ರೀಯ ‌ಹಿತಾಸಕ್ತಿಗೆ ಪೂರಕವಾಗಿ ಇವರಿಗೆ ಜಾಮೀನು ನೀಡಕೂಡದು- ನಟರಾಜ್

11.39:ಅರ್ಧ ಗಂಟೆಯೊಳಗೆ ವಾದ ಪೂರ್ಣಗೊಳಿಸುವಂತೆ ನಟರಾಜ್ ಅವರಿಗೆ ಸೂಚಿಸಿದ ನ್ಯಾಯಾಧೀಶರು.

11.38:ಜಾರಿ ನಿರ್ದೇಶನಾಲಯದ ವಶದಲ್ಲಿ ಇರುವಾಗ ಸೂಕ್ತ ‌ಹೇಳಿಕೆ‌ ನೀಡಲು ಆರೋಪಿ ವಿಫಲವಾಗಿದ್ದು, ಬಂಧನವು ಅವ‌ರ ಮೇಲೆ ಯಾವುದೇ ಪರಿಣಾಮವನ್ನೂ ಬೀರಿಲ್ಲ ಎನ್ನಿಸುತ್ತದೆ. ಸೆಕ್ಷನ್ 45ಕ್ಕೆ ತಿದ್ದುಪಡಿ ತಂದ‌ ನಂತರ ಜಾಮೀನು ಕುರಿತು ಸ್ಪಷ್ಟಪಡಿಸಲಾಗಿದೆ. ಪಿ.ಚಿದಂಬರಂ ಅವರಿಗೂ ಇದೇ ಸೆಕ್ಷನ್ ಅಡಿ ಜಾಮೀನು ನಿರಾಕರಿಸಲಾಗಿದೆ ಎಂದು ನಟರಾಜ್‌ ಹೇಳಿದರು.

11.35:ಕೆಲವು‌ ಸಾಕ್ಷ್ಯಗಳು ನೀಡಿರುವ ಹೇಳಿಕೆಗಳು ಸತ್ಯ. ಆ ಬಗ್ಗೆ ಅವರೆಲ್ಲ ‌ಸಹಿ ಮಾಡಿದ್ದಾರೆ. ಹೇಳಿಕೆಗಳ‌ ಅನ್ವಯ ಪಿಎಂಎಲ್ ಕಾಯ್ದೆ ಅಡಿ ಅಕ್ರಮ‌ ನಡೆದಿರುವುದು ಸ್ಪಷ್ಟವಾಗಿದೆ. ಇವರು ‌ಹೊಂದಿದ ಆಸ್ತಿ ಕೇವಲ ₹ 800 ಕೋಟಿಯೇ ಅಥವಾ ಅದಕ್ಕಿಂತ ಹೆಚ್ಚೇ ಎಂಬುದನ್ನು ಪತ್ತೆ ಮಾಡಲು ತನಿಖೆ ಸಹಕಾರಿಯಾಗಿದೆ. ಪ್ರಭಾವಿಯಾದ ಇಂಥ ವ್ಯಕ್ತಿಯ‌ ವಿಚಾರಣೆಗೆ ಈಗಲೇ ಅವಕಾಶ ನೀಡಬೇಕು. ಸೆಕ್ಷನ್ 45ರ ಅಡಿ ಇವರಿಗೆ ಜಾಮೀನು ನೀಡಬಾರದು ಎಂದು ನಟರಾಜ್ ಪ್ರಬಲ ವಾದ ಮಂಡಿಸಿದರು.

11.33:ಆದಾಯ ತೆರಿಗೆ ತನಿಖೆಯ ಸಂದರ್ಭ ಕೆಲವು‌ ಸಾಕ್ಷ್ಯಗಳ‌ನ್ನು ತಿರುಚಲಾಗಿದೆ. ಅಕ್ರಮ ಹಣದ ಬಗ್ಗೆ ಯಾವುದೇ ರೀತಿಯ ಮಾಹಿತಿ ನೀಡಲು ನಿರಾಕರಿಸಿವೆ. ಸಾಕ್ಷ್ಯಗಳ ಮೇಲೆ‌ ಆರೋಪಿಯು ಪ್ರಭಾವ‌ ಬೀರುವ ಎಲ್ಲ ‌ಸಾಧ್ಯತೆಗಳೂ ಇವೆ.

11.30:ಸಣ್ಣ ಪ್ರಮಾಣದ ವಿಚಾರಣೆಯ ಈ ‌ಸಂದರ್ಭದಲ್ಲಿ ಸೂಕ್ತವಲ್ಲ, ನಮಗೆ ಯಾವುದೇ ರೀತಿಯ ಸ್ಪಷ್ಟನೆ ಅಗತ್ಯವಿಲ್ಲ. ಎಲ್ಲ ದಾಖಲೆಗಳನ್ನೂ ನಾವು ಹೊಂದಿದ್ದೇವೆ. ಜಾಮೀನು‌ ನೀಡಿದಲ್ಲಿ ಭಾರಿ ಪಿತೂರಿ ನಡೆಸುವ ಸಾಧ್ಯತೆ ಇದೆ.ಸಾಕ್ಷ್ಯಗಳನ್ನು ತಿರುಚಬಹುದು ಎಂದು ನಟರಾಜ್‌ ಹೇಳಿದರು.

11.28:ಕೃಷಿ ಭೂಮಿ ಮಾತ್ರವಲ್ಲದೆ ಕೃಷಿಯೇತರ ಭೂಮಿಗಳ ಕುರಿತೂ ಅವರನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಬೇಕಿದೆ. ಸಹೋದರ ಡಿ.ಕೆ.ಸುರೇಶ ಅವರು 27 ಕೃಷಿ ಭೂಮಿ ಹೊಂದಿದ್ದು, ಕೆಲವು ಆಸ್ತಿ ನಗದಿನ ಮೂಲಕವೇ ಖರೀದಿಸಿದ್ದಾರೆ. ಆ‌ ಕುರಿತೂ ತನಿಖೆ ನಡೆಯಬೇಕಿದೆ.ಅಕ್ರಮ ಹಣ‌ ವರ್ಗಾವಣೆ ಕುರಿತ ವಿಚಾರಣೆಗಾಗಿ ಈಗಾಗಲೇ ಇನ್ನು ಕೆಲವರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಎಲ್ಲ ದಾಖಲೆಗಳನ್ನು ಇದಕ್ಕೆ ಪೂರಕವಾಗಿ ಹೊಂದಿಸಲಾಗಿದೆ.

11.22:ನಿಮ್ಮ ತಿಳಿವಳಿಕೆ ಪ್ರಕಾರ ತನಿಖೆ ವೇಳೆ ಅಸಹಕಾರ ತೋರುವಂಥ ವ್ಯಕ್ತಿಯ ನಡವಳಿಕೆ ಸೂಕ್ತವೇ ಎಂದು ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್ ಅವರನ್ನು ಪ್ರಶ್ನಿಸಿದ ನಟರಾಜ್. ಕೃಷಿ ಆದಾಯದ ಬಗ್ಗೆಯೂ ಡಿಕೆಶಿ ಅಪ್ರಸ್ತುತ ಉತ್ತರ ನೀಡಿದ್ದಾರೆ. ಸಾಮಾನ್ಯ ಪ್ರಶ್ನೆಗೂ‌ ಅವರ ಉತ್ತರಗಳು ಅಪ್ರಸ್ತುತವೇ ಆಗಿವೆ ಎಂದು ಬಲವಾದ ವಾದ ಮಂಡಿಸಿದರು.

11.20:ಡಿ.ಕೆ.ಶಿವಕುಮಾರ್ ವಿಚಾರಣೆ ವೇಳೆ ಸತತ ನಾಲ್ಕು ಗಂಟೆವರೆಗೆ ಅಕ್ರಮ ಆಸ್ತಿ ಹಾಗೂ ಆದಾಯದ ಮೂಲದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಹಾಗೂಅಸಹಕಾರ‌ ತೋರಿದ್ದಾರೆ.

11.18:ರಾಷ್ಟ್ರೀಯ ಸಂಪನ್ಮೂಲವು ಪ್ರತಿಯೊಬ್ಬರ ಆಸ್ತಿಯಾಗಿದೆ, ಹಾಗಾಗಿ ಪ್ರತಿ ವ್ಯಕ್ತಿಯ ಪರವಾಗಿ ಅದನ್ನು ಜಪ್ತಿ ಮಾಡಿಕೊಳ್ಳಲು ಅವಕಾಶ ಇದೆ.ಅಕ್ರಮವಾಗಿ ಗಳಿಸಿದ ಆಸ್ತಿ ರಾಷ್ಟ್ರೀಯ ಸಂಪನ್ಮೂಲವೇ ಆಗಿದೆ ಎಂದು ವಾದಿಸಿದ ಇ.ಡಿ ಪರ ವಕೀಲ.

11.16:ಈ ಬಗ್ಗೆ ಪಿಎಂಎಲ್ ಕಾಯ್ದೆ ಅಡಿ ತನಿಖೆ ನಡೆಸಲಾಗುತ್ತಿದೆ. ಈ ಕಾಯ್ದೆಯ ಸೆಕ್ಷನ್ 9ರ ಅಡಿ ಜಪ್ತಿ ಮಾಡಿ ಕ್ರಮ ಕೈಗೊಳ್ಳಲು ಅವಕಾಶ ಇದೆ.ಈ ‌ರೀತಿ ಗಳಿಸಿದ ಆಸ್ತಿಯು ಸರ್ಕಾರಕ್ಕೆ ಸೇರಿದ ಆಸ್ತಿಯಾಗಿದೆ‌. ಅದನ್ನು ಆತ ಅನುಭವಿಸಲು ಅವಕಾಶ ಇಲ್ಲ.ಸೆಕ್ಷನ್ 5ರ ಉಪ ಸೆಕ್ಷನ್‌ 5ರ ಪ್ರಕಾರ ಆದಾಯದ‌ ಮೂಲ ಅಥವಾ ಆಸ್ತಿ ಗಳಿಕೆಯನ್ನು ಘೋಷಿಸಿಕೊಂಡರೂ‌ ಸರ್ಕಾರದ ನಿಬಂಧನೆಗಳಿಗೆ ಒಳಪಡುತ್ತದೆ.

11.12:ಕಾನೂನು ಬಾಹಿರವಾಗಿ ಗಳಿಸಿರುವ ಆಸ್ತಿಗೆ ಆದಾಯ ತೆರಿಗೆ ಪಾವತಿಸಿದ್ದಾಗಿ ಹೇಳುತ್ತಾರೆ. ಆದರೆ ಆದಾಯ ತೆರಿಗೆ ಕಾಯ್ದೆಯು ಅಕ್ರಮವಾಗಿ ಗಳಿಸಿದ ಆಸ್ತಿಯನ್ನು ಸಕ್ರಮಗೊಳಿಸಲು ಅವಕಾಶ ನೀಡುವುದಿಲ್ಲ.ಹಾಗಾಗಿ ಆದಾಯ ತೆರಿಗೆ ಕಾಯ್ದೆ ಅಡಿ ಘೋಷಣೆ ಮಾಡಲಾದ ಆಸ್ತಿಯನ್ನು ಸಕ್ರಮ ಮಾಡಲಾಗದು. ಅಕ್ರಮವಾಗಿ ಗಳಿಸಿದ ಹಣಕ್ಕೆ ಆದಾಯ ತೆರಿಗೆ ಕಟ್ಟಿ ಅದನ್ನು ಸಕ್ರಮ ಎಂದು ಬಿಂಬಿಸಿಕೊಳ್ಳುವುದು ಸರಿಯಲ್ಲ. ಕಪ್ಪು ಹಣ ಕಪ್ಪು ಹಣವೇ ಆಗುತ್ತದೆ ಎಂದು ನಟರಾಜ್‌ ವಾದ ಮಂಡನೆ.

11.09: ಇ.ಡಿ.ಪರ ವಕೀಲ ಕೆ.ಎಂ. ನಟರಾಜ್ ವಾದ ಮಂಡನೆ

11.07:ರೋಸ್‌ ಅವೆನ್ಯೂ ನ್ಯಾಯಾಲಯದಲ್ಲಿ ವಿಚಾರಣೆ ಆರಂಭ

11.02:ರೋಸ್‌ ಅವೆನ್ಯೂ ನ್ಯಾಯಾಲಯಕ್ಕೆ ಆಗಮಿಸಿರುವ ಶಿವಕುಮಾರ್ ಹಾಗೂ ಇ.ಡಿ.ಪರ ವಕೀಲರು

11.00:ದೆಹಲಿಯ ರೋಸ್‌ ಅವೆನ್ಯೂನ್ಯಾಯಾಲಯದಲ್ಲಿ ಡಿ.ಕೆ.ಶಿವಕುಮಾರ್‌ ಜಾಮೀನು ಅರ್ಜಿ ವಿಚಾರಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT