ಶುಕ್ರವಾರ, ಸೆಪ್ಟೆಂಬರ್ 20, 2019
21 °C
ಐಎಎಸ್‌

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ 

Published:
Updated:

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್(ಐಎಎಸ್‌) ಅವರು ಹುದ್ದೆಗೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಅವರು, ‘ನನ್ನ ರಾಜೀನಾಮೆ ವೈಯಕ್ತಿಕ ನಿರ್ಧಾರ. ಇದಕ್ಕೆ ನೇರವಾಗಿ ಯಾರೊಬ್ಬರೂ ಕಾರಣವಲ್ಲ. ಇಷ್ಟು ದಿನ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಹುದ್ದೆಯಲ್ಲಿದ್ದೆ. ಈ ಹಂತದಲ್ಲಿ ಹುದ್ದೆ ತೊರೆದು ಹೋಗುತ್ತಿರುವುದಕ್ಕೆ ಜನರ ಕ್ಷಮೆ ಯಾಚಿಸುತ್ತೇನೆ’ ಎಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ‘ಸರ್ಕಾರ, ಶಾಸಕರಿಂದ ಒತ್ತಡ ಇರಲಿಲ್ಲ‘– ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್

‘ಪ್ರಜಾಪ್ರಭುತ್ವದ ಮೂಲ ಆಧಾರ ಸ್ತಂಭಗಳು ಹಿಂದೆಂದೂ ಕಾಣದ ರೀತಿಯಲ್ಲಿ ರಾಜಿ ಮಾಡಿಕೊಳ್ಳುತ್ತಿವೆ. ದೇಶದ ಬಹುತ್ವದ ಎಳೆಗಳಿಗೆ ಭವಿಷ್ಯದಲ್ಲಿ ಹೆಚ್ಚು ಅಪಾಯ ಇದ್ದಂತೆ ಭಾಸವಾಗುತ್ತಿದೆ. ಭವಿಷ್ಯದ ದಿನಗಳಲ್ಲಿ ಅಧಿಕಾರಿಗಳಿಗೆ ದೊಡ್ಡ ಪ್ರಮಾಣದ ಸವಾಲುಗಳು ಎದುರಾಗಬಹುದು. ಈ ಹಂತದಲ್ಲಿ ಭಾರತೀಯ ಆಡಳಿತ ಸೇವೆಯಿಂದ (ಐಎಎಸ್‌) ಹೊರಗಿರುವುದೇ ಲೇಸು ಎನಿಸುತ್ತದೆ. ಸೇವೆಯಿಂದ ಹೊರಗಿದ್ದು ಎಲ್ಲ ಜನರ ಒಳಿತಿಗಾಗಿ ದುಡಿಯುತ್ತೇನೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ತಮಿಳುನಾಡಿನವರಾದ ಸಸಿಕಾಂತ್ ಸೆಂಥಿಲ್ 2009ರ ವೃಂದದ ಐಎಎಸ್‌ ಅಧಿಕಾರಿಯಾಗಿದ್ದು, 2017ರ ಅಕ್ಟೋಬರ್ 10ರಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹುದ್ದೆಯಲ್ಲಿದ್ದಾರೆ.

Post Comments (+)