ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರವಾದಿಗಳಿಗೆ ಭೈರಪ್ಪ ಟೀಕೆಯ ಚಾಟಿ

ದೇವರಿಲ್ಲ ಎಂಬುದು ದಾರ್ಷ್ಟ್ಯದ ಮಾತು: ಭೈರಪ್ಪ
Last Updated 29 ಸೆಪ್ಟೆಂಬರ್ 2019, 19:51 IST
ಅಕ್ಷರ ಗಾತ್ರ

ಮೈಸೂರು: ’ದೇವರಿಲ್ಲ ಎನ್ನುವುದು ದಾರ್ಷ್ಟ್ಯದ ಮಾತಾಗುತ್ತದೆ’ ಎಂದು ಸಾಹಿತಿ ಎಸ್‌.ಎಲ್‌. ಭೈರಪ್ಪ ಭಾನುವಾರ ಇಲ್ಲಿ ಹೇಳಿದರು.

ಚಾಮುಂಡಿ ಬೆಟ್ಟದಲ್ಲಿ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇದೇ ವಿಷಯವಾಗಿ ವಿಚಾರವಾದಿಗಳು, ಪ್ರಗತಿಪರರು, ಕಮ್ಯುನಿಸ್ಟರು, ಸ್ತ್ರೀವಾದಿಗಳು, ಪ್ರತ್ಯೇಕ ಧರ್ಮ ಹೋರಾಟಗಾರರನ್ನು ಏಕಕಾಲಕ್ಕೇ ಟೀಕೆಗೆ ಗುರಿ ಮಾಡಿದರು. ರಾಜಕಾರಣಿಗಳನ್ನೂ ತರಾಟೆಗೆ ತೆಗೆದುಕೊಂಡರು.

‘ದೇವರು ಎಂಬುದು ಇಲ್ಲ. ಅದರಲ್ಲಿ ನಂಬಿಕೆ ಇಲ್ಲದಿದ್ದರಷ್ಟೆ ನೀವು ಪ್ರಗತಿಪರರು, ವಿಚಾರವಂತರು’ ಎಂಬ ಭಾವನೆಯನ್ನು ಕೆಲವರು ಹರಡಿದ್ದಾರೆ. ಸಾಹಿತಿಗಳಾದವರು ದೇವರನ್ನು ನಂಬಕೂಡದು ಎಂಬ ಅಭಿಪ್ರಾಯ ಮೂಡಿಸಲಾಗುತ್ತಿದೆ. ಆ ಪ್ರಕಾರವಾಗಿ ನೋಡಿದರೆ ನಾನು ಸಾಹಿತಿಯಲ್ಲ’ ಎಂದರು.

‘ನಾನು ಮೈಸೂರಿನಲ್ಲಿ ವಿದ್ಯಾರ್ಥಿಯಾಗಿದ್ದಾಗ, ವಾರಕ್ಕೊಂದು ಸಲ ಬೆಟ್ಟದ ಮೆಟ್ಟಿಲು ಹತ್ತಿ ಬಂದು ಚಾಮುಂಡಿ ದರ್ಶನ ಮಾಡುತ್ತಿದ್ದೆ. ಈಗ ವರ್ಷಕ್ಕೊಂದು ಸಲವಾದರೂ ಬರುತ್ತೇನೆ. ನನ್ನ ಮೂವರೂ ಮೊಮ್ಮಕ್ಕಳನ್ನು ಅವರಿಗೆ ಮೂರು ತಿಂಗಳು ತುಂಬುವ ಮೊದಲು ಕರೆದುಕೊಂಡು ಬಂದು, ದೇವಸ್ಥಾನದ ಹೊಸ್ತಿಲ ಮೇಲೆ ಮಲಗಿಸಿ ತೀರ್ಥ ಹಾಕಿಸಿಕೊಂಡು ಹೋಗಿದ್ದೆ. ಹೀಗಾಗಿ ನನಗೆ ದೇವರ ಮೇಲೆ ನಂಬಿಕೆ ಇಲ್ಲ ಎಂದು ಹೇಳಲಾಗದು’ ಎಂದರು.

ದೇವರ ಅಸ್ತಿತ್ವದ ನಂಬಿಕೆ ವಿಚಾರವಾಗಿ ಸಣ್ಣ ಕಥೆಯೊಂದನ್ನು ಪ್ರಸ್ತಾಪಿಸಿದ ಅವರು, ತನ್ನ ದೊಡ್ಡದಾದ ಮನೆಯಲ್ಲಿನ ಸೂಜಿ ಹುಡುಕುವಲ್ಲಿ ಸೋತ ಬಾಲಕನೊಬ್ಬ ತನ್ನ ಮನೆಯಲ್ಲಿ ಸೂಜಿಯೇ ಇಲ್ಲ ಎಂಬ ನಿರ್ಧಾರಕ್ಕೆ ಬರುತ್ತಾನೆ. ದೇವರ ಅಸ್ತಿತ್ವವನ್ನು ಅಲ್ಲಗಳೆಯುವವರೂ ಅದೇ ಸ್ಥಿತಿಯಲ್ಲಿ ಇದ್ದಾರೆ ಎಂದು ಕುಟುಕಿದರು.

‘ಪ್ರಪಂಚವು ಮಹಾಸ್ಫೋಟದ ಒಂದು ಸ್ಥಿತಿ. ಆ ಸ್ಥಿತಿಯಲ್ಲಿ ಕಾಲ–ದೇಶ ಎಂಬುದು ಯಾವುದೂ ಇಲ್ಲ ಅನ್ನುವುದಷ್ಟೇ ನಮಗೆ ತಿಳಿದಿರುವುದು ಎಂದು ವಿಜ್ಞಾನಿಗಳೇ ಸುಮ್ಮನಾಗಿದ್ದಾರೆ. ಅಂಥದರಲ್ಲಿ ವಿಚಾರವಾದಿಗಳು ತಮಗೆಲ್ಲ ಗೊತ್ತಿದೆ ಎಂದು ಹೇಳುತ್ತಾರೆ’ ಎಂದು ಲೇವಡಿ ಮಾಡಿದರು.

ಮುಟ್ಟಾಗುವ ವಯಸ್ಸಿನ ಮಹಿಳೆಯರಿಗೆ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪ್ರವೇಶ ನಿರ್ಬಂಧಿಸುವ ವಿಚಾರವಾಗಿ ನಡೆದ ಮಹಿಳಾ ಪ್ರತಿಭಟನೆಯನ್ನೂ ಟೀಕಿಸಿದ ಅವರು, ‘ದೇವತೆಗಳ ಮನವಿ ಮೇರೆಗೆ ಶಕ್ತಿದೇವತೆಯು ಚಾಮುಂಡಿಯಾಗಿ ಮಹಿಷಾಸುರನನ್ನು ಕೊಲ್ಲುತ್ತಾಳೆ. ಆದರೆ, ಇದರಿಂದ ಪುರುಷ ವರ್ಗಕ್ಕೆ ಅವಮಾನವಾಯಿತು ಎಂದು ಯಾರಾದರೂ ನ್ಯಾಯಾಲಯಕ್ಕೆ ಹೋದರೆ ಏನು ಮಾಡುವುದು?’ ಎಂದು ಕೇಳಿದರು.

‘ಜನರ ನಂಬಿಕೆಗಳಿಗೆ ಸಂಬಂಧಪಟ್ಟ ಇಂಥ ವಿಚಾರಗಳಲ್ಲಿ, ಕಮ್ಯುನಿಸ್ಟ್‌ ಸರ್ಕಾರ ಯಾಕೆ ತಲೆಹಾಕಬೇಕು’ ಎಂದೂ ಪ್ರಶ್ನಿಸಿದರು.

ಬಸವಣ್ಣನ ‘ಜಾತಿ ವಿನಾಶ’ತತ್ವ ಅನುಷ್ಠಾನಕ್ಕೆ ಈಗ ಪಕ್ವಕಾಲ

ಮೈಸೂರು: ಬಸವಣ್ಣ ಅವರು ಪ್ರತಿಪಾದಿಸಿದ ‘ಜಾತಿ ವಿನಾಶದ’ ತತ್ವದ ಅನುಷ್ಠಾನಕ್ಕೆ ಈಗ ಕಾಲ ಪಕ್ವವಾಗಿದೆ ಎಂದು ಸಾಹಿತಿ ಎಸ್‌.ಎಲ್‌. ಭೈರಪ್ಪ ಅಭಿಪ್ರಾಯಪಟ್ಟರು.

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಆಗ್ರಹಿಸಿ ನಡೆದ ಚಳವಳಿಯನ್ನು ವಿಮರ್ಶೆಗೆ ಒಳಪಡಿಸಿದ ಅವರು, ರಾಜಕಾರಣಿಗಳೊಂದಿಗೆ ಸಾಹಿತಿಗಳೂ ಆ ಚಳವಳಿಯಲ್ಲಿ ಮುಗುಮ್ಮಾಗಿ ಭಾಗಿಯಾಗಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

‘ಬ್ರಾಹ್ಮಣ ಹುಡುಗಿಯನ್ನು ದಲಿತ ಹುಡುಗನೊಂದಿಗೆ ಮದುವೆ ಮಾಡಿಸಿದ ಬಸವಣ್ಣನನ್ನು ಆಗ ಸಮಾಜ ಒಪ್ಪಲಿಲ್ಲ. ಈ ಮನುಷ್ಯನನ್ನು ಹೀಗೇಯೇ ಬಿಟ್ಟರೆ ತಮ್ಮ ಪದ್ಧತಿ ಹಾಳಾಗುತ್ತದೆ ಎಂದು ಜನ ದಂಗೆ ಎದ್ದರು. ಮುಂದೇನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದ ಅವರು, ಈ ತತ್ವವನ್ನು ಒಪ್ಪಿಕೊಳ್ಳುವಷ್ಟು ಆಗಿನ ಸಮಾಜ ಪಕ್ವವಾಗಿರಲಿಲ್ಲ ಎಂದು ವಿಶ್ಲೇಷಿಸಿದರು.

‘ಜಾತಿ ವಿನಾಶ’ ತತ್ವ ಬಹಳ ಒಳ್ಳೆಯದು ಆದರೆ, ಅದು ಆ ಕಾಲ, ಸಮಾಜ, ಆರ್ಥಿಕತೆಯು ಒಪ್ಪಿಕೊಳ್ಳುವಂಥದ್ದಾಗಿರಲಿಲ್ಲ. ಏಕೆಂದರೆ ಅದು ಕೃಷಿ ಆರ್ಥಿಕತೆಯಾಗಿತ್ತು. ಮನೆಯ ಯಜಮಾನಿಕೆ, ತುಂಬು ಕುಟುಂಬದ ಹಿರಿಯನ ಕೈಯಲ್ಲಿ ಇರುತ್ತಿತ್ತು. ಇಳಿ ವಯಸ್ಸಿನ ಹಿರೀಕ, ಜಾತಿ ಬಿಟ್ಟು ಹೆಣ್ಣು ತರುವ ಅಥವಾ ಕೊಡುವ ಮನಸ್ಥಿತಿಯಲ್ಲಿ ಇರಲು ಸಾಧ್ಯವಿಲ್ಲ. ನಿಶ್ಚಲ ಸ್ಥಿತಿಯಲ್ಲಿದ್ದ ಸಮಾಜದಲ್ಲಿ ಅಂಥ ಕ್ರಾಂತಿಕಾರಿ ಬದಲಾವಣೆಯನ್ನು ತರಲು ಬಸವಣ್ಣ ಮುಂದಾದಾಗ, ಸಹಜವಾಗಿ ಪ್ರತಿರೋಧ ವ್ಯಕ್ತವಾಯಿತು. ಆದರೆ, ಈಗಿನ ಪರಿಸ್ಥಿತಿ ಬೇರೆ. ಈಗ ಗಂಡಿಗಾಗಲೀ ಹೆಣ್ಣಿಗಾಗಲೀ ಆರ್ಥಿಕ ಸ್ವಾತಂತ್ರ್ಯ ಬಂದಿದೆ. ಈ ಸ್ವಾತಂತ್ರ್ಯದಿಂದಾಗಿ ಜಾತಿಯನ್ನು ಮೀರಿದ ಮದುವೆಗಳು ನಡೆಯುತ್ತಿವೆ. ಹೀಗಾಗಿ ಬಸವಣ್ಣನ ತತ್ವ ಅನುಷ್ಠಾನಕ್ಕೆ ಇದು ಸಕಾಲವಾಗಿದೆ’ ಎಂದರು.

ಬಸವಣ್ಣನ ಹೆಸರು ಹೇಳುವವರು, ಇಂಥ ಸಾಮಾಜಿಕ ಬದಲಾವಣೆಯನ್ನು ಗಮನಿಸಬೇಕು. ಸಮಾಜ, ವಿವಾಹ ಪದ್ಧತಿ, ಆರ್ಥಿಕ ಸ್ವಾತಂತ್ರ್ಯ, ವ್ಯಕ್ತಿ ಸಂಬಂಧ, ಸ್ವಾತಂತ್ರ್ಯವನ್ನು ಸಮಾಜಶಾಸ್ತ್ರೀಯವಾಗಿ ಅಧ್ಯಯನ ಮಾಡಬೇಕು. ಕಾಲ ಪಕ್ವವಾಗಿದೆ ಎಂದುಕೊಂಡು ಬಲವಂತದಿಂದ ಅಂತರರ್ಜಾತಿ ವಿವಾಹ ಮಾಡುತ್ತೇನೆಂಬುದೂ ಸರಿ ಅಲ್ಲ. ಜಾತಿ ಬಿಟ್ಟು, ಬಲವಂತದಿಂದ ಯಾರೂ ಮದುವೆಯಾಗುವುದಿಲ್ಲ. ಸಾಹಿತಿಗಳಾದವರು ಸಮಾಜದ ಬದಲಾವಣೆಯನ್ನು ಗಮನಿಸಬೇಕು. ಅದು ಬಿಟ್ಟು ಜೈಕಾರ, ಧಿಕ್ಕಾರ ಕೂಗುವುದಲ್ಲ’ ಎಂದು ಕಿವಿಮಾತು ಹೇಳಿದರು.

‘ಬಸವಣ್ಣನವರು ಪ್ರತಿಪಾದಿಸಿದ ಕಾಯಕದ ಪಾವಿತ್ರ್ಯ, ಜಾತಿ ವಿನಾಶ ವಿಚಾರವು ಅದು ಎಲ್ಲ ಕಾಲಕ್ಕೂ ಎಲ್ಲ ದೇಶಕ್ಕೂ ಅನ್ವಯವಾಗುವಂಥದ್ದು. ಈ ಕಾಯಕ ನಿಷ್ಠೆ ಪಶ್ಚಿಮದೇಶಗಳಲ್ಲಿದೆ. ನಮ್ಮಲ್ಲಿ ಸಂಪೂರ್ಣ ಹಾಳಾಗಿದೆ’ ಎಂದು ಭೈರಪ್ಪ ವಿಷಾದಿಸಿದರು. ಅದನ್ನು ಹಾಳು ಮಾಡಿದವರು ರಾಜಕಾರಣಿಗಳು ಎಂದು ಆರೋಪಿಸಿದ ಅವರು, ಕೃಷಿಯ ಕಾಯಕ ನಿಷ್ಠೆಯನ್ನು ಹಾಳು ಮಾಡಿದವರೂ ಇದೇ ರಾಜಕಾರಣಿಗಳು ಎಂದು ತಿವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT