ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಂಬೂಸವಾರಿಗೆ ಅಂಬಾರಿ ಕಟ್ಟುವುದು ಮುಸ್ಲಿಮರು: ಇದು ಸೌಹಾರ್ದದ ದಸರೆ

Last Updated 17 ಅಕ್ಟೋಬರ್ 2018, 1:59 IST
ಅಕ್ಷರ ಗಾತ್ರ

ಮೈಸೂರು: ಸಾವಿರಾರು ಪ್ರವಾಸಿಗರನ್ನು ಸೆಳೆಯುವ ದಸರಾ ಜಂಬೂಸವಾರಿಗೆ ಗಜಪಡೆ ಸಿದ್ಧಗೊಳಿಸುವ ಶ್ರಮದ ಹಿಂದೆ ಮುಸ್ಲಿಂ ಸಮುದಾಯದ ಸ್ಪರ್ಶವೂ ಇದೆ. ಇದು ಧಾರ್ಮಿಕ ದಸರೆಗೆ ಸೌಹಾರ್ದತೆಯ ಮೆರುಗು ತುಂಬಿದೆ.

ಅಕ್ರಂ, ನವೀದ್‌, ಕಲೀಂ, ಪಾಷಾ, ಜಕಾವುಲ್ಲಾ ಗಜಪಡೆಯ ಆರೈಕೆ ಜೊತೆಗೆ ಅಂಬಾರಿ ಕಟ್ಟಲು ಸಿದ್ಧತೆಯಲ್ಲಿ ತೊಡಗಿದ್ದಾರೆ. ಧರ್ಮದ ಹಂಗಿಲ್ಲದೆ ಧಾರ್ಮಿಕ ಕಾರ್ಯಕ್ರಮಗಳಿಗೆ ಕೈಜೋಡಿಸಿದ್ದಾರೆ.

ಕಾಡಿನಲ್ಲಿ ಮಾತ್ರವಲ್ಲದೆ ದಸರೆಯಲ್ಲೂ 19 ವರ್ಷಗಳಿಂದ ಗಜಪಡೆ ಜೊತೆಗೆ ಅಕ್ರಂ ಇದ್ದಾರೆ. ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ 12 ಆನೆಗಳಿಗೆ ಆಹಾರ ಸಿದ್ಧಪಡಿಸುವ ಜವಾಬ್ದಾರಿಯಿಂದ ಹಿಡಿದು, ಅವುಗಳ ಆರೈಕೆ, ಅಲಂಕಾರ, ಹಗ್ಗ ನೇಯುವುದು, ಚಿಕಿತ್ಸೆ ನೀಡುವಾಗ ಪಶುವೈದ್ಯರಿಗೆ ಸಹಕರಿಸುವ ಕೆಲಸ ಮಾಡುತ್ತಿದ್ದಾರೆ. ಆನೆಗಳ ಜೊತೆ ಆತ್ಮೀಯತೆ ಬೆಳೆಸಿಕೊಂಡಿದ್ದಾರೆ.

ಅರ್ಜುನ ಆನೆಯು 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹಾಗೂ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಸರಾಗವಾಗಿ ಹೊರುವುದಕ್ಕೆ ಗಾದಿ ಹಾಗೂ ನಮ್ದಾ ಪ್ರಮುಖ ಪಾತ್ರ ವಹಿಸುತ್ತವೆ. ಈ ಗಾದಿ, ನಮ್ದಾ ತಯಾರಿಕೆ ಹಿಂದೆ ಪಾಷಾ ಹಾಗೂ ಜಕಾವುಲ್ಲಾ ಕೈಚಳಕ ಅಡಗಿದೆ. ಅಕ್ರಂ ಅವರು ಚಾಣಾಕ್ಷತನದಿಂದ ಅಂಬಾರಿ ಕಟ್ಟುತ್ತಾರೆ.

‘ನನ್ನ ಪಾಲಿಗೆ ದಸರೆಯೇ ದೊಡ್ಡ ಹಬ್ಬ. ಖುಷಿಯಿಂದ ಈ ಜವಾಬ್ದಾರಿ ನಿಭಾಯಿಸುತ್ತಿದ್ದೇನೆ. ಮನೆ ಕೆಲಸವೆಂದು ತಿಳಿದು ದುಡಿಯುತ್ತಿದ್ದೇನೆ. ಅಷ್ಟೇ ಅಲ್ಲ; ನಾವೆಲ್ಲಾ ಸೇರಿ ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತಿಭಾವದಿಂದ ನೆರವೇರಿಸುತ್ತೇವೆ. ಎಲ್ಲರೂ ಸೇರಿ ಕೆಲಸ ಮಾಡಿದರೆ ದಸರೆ ಯಶಸ್ವಿಯಾಗುತ್ತದೆ. ಪ್ರವಾಸಿಗರೂ ಖುಷಿಪಡುತ್ತಾರೆ’ ಎಂದು ಅಕ್ರಂ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ನವೀದ್‌ ಎರಡು ವರ್ಷಗಳಿಂದ ಗೋಪಿ ಆನೆಯ ಮಾವುತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅರಮನೆ ಆನೆಗಳಾದ ಚಂಚಲಾ, ಸೀತಾ, ಜೆಮಿನಿ, ಪ್ರೀತಿ, ರಾಜೇಶ್ವರಿ, ರೂಬಿ ಕಾಳಜಿಯನ್ನು ದಸ್ತಗಿರಿ ಪಾಷಾ ನೋಡಿಕೊಳ್ಳುತ್ತಿದ್ದಾರೆ.

ಈ ಆರು ಆನೆಗಳು ಅಲ್ಲದೆ, ದಸರಾ ಆನೆಗಳಾದ ವಿಕ್ರಂ, ಗೋಪಿ ಅರಮನೆ ಆವರಣದಲ್ಲಿ ರಾಜವಂಶಸ್ಥರು ನಡೆಸುವ ನವರಾತ್ರಿ ಪೂಜಾ ಕಾರ್ಯಗಳಲ್ಲಿ ಭಾಗವಹಿಸುತ್ತವೆ. ಅವುಗಳಿಗೆ 9 ದಿನ ಅಲಂಕಾರ ಮಾಡಿ ಪೂಜೆಗೆ ಕರೆದುಕೊಂಡು ಹೋಗುವ ಜವಾಬ್ದಾರಿಯನ್ನು ಪಾಷಾ ನಿಭಾಯಿಸುತ್ತಿದ್ದಾರೆ. ವಿಜಯದಶಮಿ ದಿನ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಬೆಳ್ಳಿ ರಥದಲ್ಲಿ ಸಾಗಿ ಭುವನೇಶ್ವರಿ ದೇಗುಲದ ಬಳಿ ಬನ್ನಿಮರಕ್ಕೆ ಪೂಜೆ ಸಲ್ಲಿಸುತ್ತಾರೆ. ಆಗ ಈ ಆನೆಗಳು ಮುಂದೆ ಸಾಗುತ್ತವೆ.

‘ಧಾರ್ಮಿಕ ಕಾರ್ಯಕ್ರಮಗಳಿಗೆ ರಕ್ತದ ಹಂಗಿಲ್ಲ. ಮನುಷ್ಯರ ಜಾತಿ, ಧರ್ಮದ ಬಗ್ಗೆ ಆನೆಗಳಿಗೆ ಗೊತ್ತಿಲ್ಲ. ಅನ್ನ ನೀಡುವ ಕೆಲಸವೇ ನನಗೆ ದೇವರು’ ಎನ್ನುತ್ತಾರೆ ದಸ್ತಗಿರಿ.

***

ಎಲ್ಲಾ ದೇವರು ಒಂದೇ ಎಂಬುದು ನನ್ನ ಭಾವನೆ. ಗಜಪಡೆ ಕೆಲಸ, ಧಾರ್ಮಿಕ ಕಾರ್ಯಕ್ರಮ ನನಗೆ ನೆಮ್ಮದಿ, ಖುಷಿ ನೀಡಿವೆ. ಅದಕ್ಕಿಂತ ಇನ್ನೇನು ಬೇಕು?

ಅಕ್ರಂ, ಗಜಪಡೆ ಸಹಾಯಕ

‌ದೇವರ ಪೂಜಾ ಕಾರ್ಯಕ್ರಮಗಳಲ್ಲಿ ಆನೆ ಜೊತೆ ನಾನೂ ಶ್ರದ್ಧೆಯಿಂದ ಭಾಗವಹಿಸುತ್ತೇನೆ. ಜಾತಿ, ಧರ್ಮಗಳಿಗಿಂತ ಕರ್ತವ್ಯ, ಕೆಲಸ ಮುಖ್ಯ

ನವೀದ್‌,ಗೋಪಿ ಆನೆ ಮಾವುತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT