ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ: ಆನ್‌ಲೈನ್‌ ಇನ್ನು ಅನಿವಾರ್ಯ –ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ

ಸಾಂಪ್ರದಾಯಿಕ ತರಗತಿಗೆ ಪರ್ಯಾಯವಂತೂ ಅಲ್ಲ, ಪೂರಕ ಅಷ್ಟೇ
Last Updated 3 ಜೂನ್ 2020, 20:00 IST
ಅಕ್ಷರ ಗಾತ್ರ

ಲಾಕ್‌ಡೌನ್‌ ಕಾರಣಕ್ಕೆ ಬಹುತೇಕ ಎಲ್ಲ ವಿಶ್ವವಿದ್ಯಾಲಯಗಳೂ ಅನ್‌ಲೈನ್‌ನಲ್ಲೇ ಪಾಠ ಮಾಡತೊಡಗಿವೆ. ಅಗತ್ಯದ ಮೂಲಸೌಕರ್ಯ ಸುಧಾರಿಸದೆ ಇಂತಹ ಆನ್‌ಲೈನ್ ತರಗತಿಗಳನ್ನು ನಡೆಸುವುದು ಎಷ್ಟು ಸರಿ ಎಂಬ ಚರ್ಚೆಯೂ ನಡೆಯುತ್ತಿದೆ. ಇಂತಹ ಹೊತ್ತಿನಲ್ಲಿ ಉನ್ನತ ಶಿಕ್ಷಣ ಇಲಾಖೆಯ ಯೋಚನೆ, ಯೋಜನೆಗಳು ಏನು? ಈ ಕುತೂಹಲದಿಂದ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನ ಇಲ್ಲಿದೆ

* ಕೊರೊನಾ ಬಿಕ್ಕಟ್ಟಿನ ನಂತರದ ಕಾಲಘಟ್ಟದಲ್ಲಿ ಆನ್‌ಲೈನ್‌ ಶಿಕ್ಷಣ ಅನಿವಾರ್ಯಎನ್ನುವುದು ಸರ್ಕಾರದ ಅಭಿಮತವಾಗಿದೆ. ಆದರೆ, ಅದಕ್ಕೆ ಅಗತ್ಯವಾದ ಇಂಟರ್ನೆಟ್‌ನಂತಹ ಮೂಲಸೌಕರ್ಯ‌ವನ್ನು ರಾಜ್ಯದ ಎಲ್ಲ ಭಾಗಗಳಲ್ಲಿ ಒದಗಿಸಲು ಏನು ಕ್ರಮ ಕೈಗೊಂಡಿದೆ?

ತಂತ್ರಜ್ಞಾನವೇನೂ ನಿಂತ ನೀರಲ್ಲ. ರಾಜ್ಯದ ಶೇ 90ರಷ್ಟು ಪ್ರದೇಶದಲ್ಲಿ 2ಜಿ ತರಂಗಾಂತರದ ಇಂಟರ್ನೆಟ್‌ ಸೇವೆ ಲಭ್ಯ ಇದೆ. ಹಲವಾರು ಕಡೆಗಳಲ್ಲಿ ಇಂಟರ್ನೆಟ್‌ ಸೇವೆ ಸಿಗದೆ ಇರುವುದೂ ವಿದ್ಯುತ್‌ನ ಸಮಸ್ಯೆ ಇರುವುದೂ ಗೊತ್ತಿದೆ. ಈ ಕುರಿತು ಸಾಕಷ್ಟು ಮಾತುಕತೆಗಳು ನಡೆಯುತ್ತಿದ್ದು, ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನವೂ ನಡೆದಿದೆ. ಎಲ್ಲೆಲ್ಲಿ ಸುಧಾರಣೆ ಮಾಡಲು ಸಾಧ್ಯವಿದೆಯೋ ಅದನ್ನು ಖಂಡಿತ ಮಾಡುತ್ತೇವೆ. 4ಜಿ, 5ಜಿ ಕಾಲದಲ್ಲಿ ಇರುವ ನಮಗೆ ನಮ್ಮವರೇ ನೆಟ್‌ವರ್ಕ್‌ನಿಂದ ವಂಚಿತರಾಗಿದ್ದಾರೆ ಎಂದು ದುಃಖಿಸುವುದು ಶೋಭೆ ತರುವುದಿಲ್ಲ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲೂ ನೆಟ್‌ವರ್ಕ್‌ ದೊರಕಿಸುವ ಪ್ರಯತ್ನ ಸಾಗಿದೆ.

* ನೆಟ್‌ವರ್ಕ್ ಸಿಗದೆ ಪಾಠದಿಂದ ವಂಚಿತರಾಗುವ, ಸ್ಮಾರ್ಟ್‌ಫೋನ್‌ ಕೊಳ್ಳಲು ಶಕ್ತರಿಲ್ಲದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆನ್‌ಲೈನ್‌ ತರಗತಿಗೆ ಹಾಜರಾಗದೆ ಅನುಭವಿಸುವ ‘ಪಾಠಗಳ ನಷ್ಟ’ವನ್ನು ಹೇಗೆ ತುಂಬಿಕೊಡುತ್ತೀರಿ?

ಸರಳ ಪಿಡಿಎಫ್‌ ಫಾರ್ಮ್ಯಾಟ್‌ನಲ್ಲಿ ಕಲಿಕಾ ಸಾಮಗ್ರಿ ಕೊಡುತ್ತಿದ್ದೇವೆ. ಒಂದಿಷ್ಟು ನೆಟ್‌ವರ್ಕ್ ಸಿಗುವಲ್ಲಿಗೆ ಬಂದರೆ ಅದನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಂಡು ಓದಬಹುದು. ಕೋವಿಡ್‌–19 ನಮಗೆ ಏಕಾಏಕಿ ಎದುರಾದ ಸವಾಲು. ಆನ್‌ಲೈನ್‌ ಶಿಕ್ಷಣ ಎಂಬುದು ಆಫ್‌ಲೈನ್‌ ಶಿಕ್ಷಣಕ್ಕೆ ಕಂಡುಕೊಂಡ ಒಂದು ಪರ್ಯಾಯ ಅಷ್ಟೆ. ಶೈಕ್ಷಣಿಕ ವರ್ಷ ವ್ಯರ್ಥವಾಗಬಾರದು. ಸಾಧ್ಯವಿರುವ ಮಟ್ಟಿಗೆ ಪಾಠಗಳನ್ನು ಹೇಗೆ ಪೂರ್ಣಗೊಳಿಸಬಹುದು ಎಂದು ಚಿಂತಿಸಿದಾಗ ಸಿಕ್ಕಿದ ಮಾಧ್ಯಮ ಇದೊಂದೇ. ಲಾಕ್‌ಡೌನ್ ಆಗಿದ್ದ ವೇಳೆ ಪದವಿ ತರಗತಿಗಳ ಶೇ 80ರಷ್ಟು ಹಾಗೂ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಶೇ 30ರಷ್ಟು ತರಗತಿಗಳು ಪೂರ್ಣಗೊಂಡಿದ್ದವು. ಉಳಿದ ತರಗತಿಗಳನ್ನು ಆನ್‌ಲೈನ್‌ನಲ್ಲಿ ನಡೆಸಲಾಗಿದೆ. ಕೆಲವು ವಿದ್ಯಾರ್ಥಿಗಳಿಗೆ ಈ ತರಗತಿಗಳು ಲಭ್ಯವಾಗದೆ ಹೋಗಿರಬಹುದು. ಅವರಿಗಾಗಿ ಪದವಿ ಕಾಲೇಜುಗಳಲ್ಲಿ ಕನಿಷ್ಠ 15 ದಿನ ಹಾಗೂ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಕನಿಷ್ಠ ಒಂದೂವರೆ ತಿಂಗಳ ಆಫ್‌ಲೈನ್ ತರಗತಿಗಳನ್ನು ನಡೆಸಲಾಗುತ್ತದೆ. ಇದರ ಬಗ್ಗೆ ಯಾರಿಗೂ ಸಂಶಯ ಬೇಡ. ಇಂತಹ ತರಗತಿಗೆ ಬರುವುದು ಕಡ್ಡಾಯವಲ್ಲ. ಯಾರಿಗೆ ಪಾಠ ತಪ್ಪಿದೆಯೋ ಅವರು ಬಂದು ತರಗತಿಯಲ್ಲಿ ಪಾಠ ಕೇಳಬಹುದು. ಲಾಕ್‌ಡೌನ್‌ ಸಂಪೂರ್ಣ ತೆರವಾದ ಬಳಿಕವಷ್ಟೇ ತರಗತಿ ನಡೆಸುವುದು, ಪರೀಕ್ಷೆ ನಡೆಸುವ ವಿಚಾರವನ್ನು ನಿರ್ಧರಿಸಲಾಗುವುದು.

* ಗ್ರಾಮೀಣ ಭಾಗವನ್ನು ಅಭಿವೃದ್ಧಿಯ ವೇಗಕ್ಕೆ ತಕ್ಕಂತೆ ಮುಂದೆ ತರದಿದ್ದರೆ ಡಿಜಿಟಲ್‌ ಕಂದಕ ಇನ್ನಷ್ಟು ಹೆಚ್ಚುವ ಅಪಾಯವನ್ನು ನೀವು ಮನಗಂಡಿಲ್ಲವೇ?

ತಂತ್ರಜ್ಞಾನದಿಂದಾಗಿಯೇ ಇಂದು ಡಿಜಿಟಲ್‌ ಅಂತರ ಕಡಿಮೆಯಾಗಿದೆ. ಸಮಾನತೆ ಕಾಣುವುದು ಸಾಧ್ಯವಾಗಿದೆ. ಬಡವರ ಖಾತೆಗೆ ನೇರವಾಗಿ ಹಣ ಜಮೆ ಆಗುವುದು, ಕುಗ್ರಾಮದ ವ್ಯಕ್ತಿಯೂ ಪ್ರಧಾನಿಯೊಂದಿಗೆ ಮಾತನಾಡಲು ಸಾಧ್ಯವಾಗಿರುವುದು ತಂತ್ರಜ್ಞಾನದಿಂದಲೇ. ಗ್ರಾಮೀಣ ಭಾಗಕ್ಕೆ ಇದೀಗ ಗುಣಮಟ್ಟದ ಇಂಟರ್ನೆಟ್ ಸಿಗುವುದಷ್ಟೇ ಬಾಕಿ ಇದ್ದು, ಅದು ಸಹ ಬಹುಬೇಗ ಸಾಧ್ಯವಾಗಲಿದೆ.

* ಆನ್‌ಲೈನ್‌ ತರಗತಿ ಸಾಂಪ್ರದಾಯಿಕ ತರಗತಿಗೆ ನಿಜಕ್ಕೂ ಪರ್ಯಾಯ ಆಗಿದೆಯೇ? ವಿದ್ಯಾರ್ಥಿಗಳ ಸಂಶಯಗಳಿಗೆ ಪರಿಹಾರ ಕೊಡುವವರು ಯಾರು?

ಎಲ್ಲದಕ್ಕೂ ತನ್ನದೇ ಆದ ಇತಿಮಿತಿ ಇದ್ದೇ ಇದೆ. ಆನ್‌ಲೈನ್ ತರಗತಿ ಸಾಂಪ್ರದಾಯಿಕ ತರಗತಿಗೆ ಪರ್ಯಾಯ ಆಗಲು ಸಾಧ್ಯವೇ ಇಲ್ಲ. ವಿಜ್ಞಾನದಲ್ಲಿ ಪ್ರಾಯೋಗಿಕ ತರಗತಿಗಳು ಆನ್‌ಲೈನ್‌ನಲ್ಲಿ ಸಾಧ್ಯವಿದೆಯೇ? ಆದರೆ, ಆನ್‌ಲೈನ್‌ನಲ್ಲೂ ಕೆಲವೊಂದು ಉತ್ತಮ ಅಂಶಗಳಿವೆ. ಅತ್ಯುತ್ತಮ ಗುಣಮಟ್ಟದ ಶಿಕ್ಷಕರ ಬೋಧನೆಯನ್ನು ಕೇಳುವ ಅವಕಾಶ ಎಲ್ಲಾ ವಿದ್ಯಾರ್ಥಿಗಳಿಗೂ ಸಿಗುವುದು ಆನ್‌ಲೈನ್‌ನಲ್ಲಿ ಮಾತ್ರ ಸಾಧ್ಯ. ವಿದ್ಯಾರ್ಥಿಗಳಿಗೆ ಎದುರಾಗುವ ಸಂಶಯಗಳಿಗೆ ಪರಿಹಾರ ನೀಡುವ ವ್ಯವಸ್ಥೆಯನ್ನೂ ಇಲ್ಲಿ ಮಾಡಿಕೊಳ್ಳುವುದು ಕಷ್ಟವೇನಲ್ಲ. ತರಗತಿಯಲ್ಲಿ ಕುಳಿತ ವಿದ್ಯಾರ್ಥಿ ತನ್ನೆಲ್ಲಾ ಸಂಶಯಗಳನ್ನು ಬಗೆಹರಿಸಿಕೊಳ್ಳುತ್ತಾನೆಯೇ ಎಂಬುದೂ ಮುಖ್ಯ.‌

* ಬೋಧನಾ ವೆಚ್ಚ ತಗ್ಗಿಸುವ ಮಾತನ್ನು ಮುಖ್ಯಮಂತ್ರಿ ಆಡಿದ್ದಾರೆ. ಇದರ ಒಳಮರ್ಮ ಪ್ರಾಧ್ಯಾಪಕರ ಹುದ್ದೆ ಕಡಿತ ಹಾಗೂ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮಾಡುವ ಮೂಲಸೌಕರ್ಯದ ವೆಚ್ಚ ಕಡಿತವೇ?

ಖಂಡಿತ ಅಲ್ಲ. ಉನ್ನತ ಶಿಕ್ಷಣ ಕ್ಷೇತ್ರ ಅಗಾಧವಾಗಿ ಬೆಳವಣಿಗೆ ಹೊಂದುತ್ತಿದೆ. ಈಗಾಗಲೇ ವಿವಿಧ ಕೋರ್ಸ್‌ಗಳಿಗೆ ರಾಜ್ಯ ₹ 13 ಸಾವಿರ ಕೋಟಿಗೂ ಅಧಿಕ ವೆಚ್ಚ ಮಾಡುತ್ತಿದೆ. ಇನ್ನಷ್ಟು ವಿಸ್ತರಣೆಗೆ ಅವಕಾಶ ಇರುವ ಈ ಕ್ಷೇತ್ರದಲ್ಲಿ ಲಭ್ಯ ಇರುವ ತಂತ್ರಜ್ಞಾನ ಬಳಸಿಕೊಂಡರಷ್ಟೇ ಬಹುಜನರ ಅಪೇಕ್ಷೆಗಳು, ಬೇಡಿಕೆಗಳನ್ನು ಈಡೇರಿಸುವುದು ಸಾಧ್ಯವಾಗುತ್ತದೆ.

* ವಿಶ್ವವಿದ್ಯಾಲಯಗಳಿಂದ ಹೊರಬಂದ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗುತ್ತಿಲ್ಲವಲ್ಲ? ಒಟ್ಟಾರೆ ಪ್ರಯತ್ನವೇ ವ್ಯರ್ಥವಾಗುತ್ತಿದೆಯಲ್ಲ?

ಬೇಡಿಕೆ ಮತ್ತು ಪೂರೈಕೆಗೆ ಹೊಂದಾಣಿಕೆ ಆಗಬೇಕು. ಜ್ಞಾನಕ್ಕಾಗಿ ಓದುವುದು ಬೇರೆ, ಜೀವನಕ್ಕಾಗಿ ಓದುವುದು ಬೇರೆ. ಇವೆರಡರ ನಡುವೆ ಸ್ಪಷ್ಟ ವ್ಯತ್ಯಾಸ ಗೊತ್ತಿದ್ದರೆ ಸಮಸ್ಯೆ ಆಗುವುದಿಲ್ಲ. ಇಂದಿನ ದಿನಮಾನಕ್ಕೆ ಏನು ಬೇಕೋ ಅದರತ್ತ ನಾವು ಹೆಚ್ಚಿನ ಗಮನ ಕೊಡಬೇಕು. ಏನೇ ಆದರೂ ಮುಂದೆ ಆಫ್‌ಲೈನ್‌ ಜತೆಗೆ ಆನ್‌ಲೈನ್‌ ತರಗತಿಗಳೂ ಇದ್ದೇ ಇರುತ್ತವೆ. ಅವುಗಳನ್ನು ಪೂರಕವಾಗಿ ಬಳಸಿಕೊಂಡರೆ ಅಗಾಧ ಪ್ರಯೋಜನವಂತೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT