ಸೋಮವಾರ, ಜನವರಿ 20, 2020
25 °C
ಪ್ರತ್ಯೇಕ ಸಚಿವಾಲಯ, ಹಂಪಿ ವಿ.ವಿ.ಗೆ ವಾಲ್ಮೀಕಿ ಹೆಸರಿಗೆ ಆಗ್ರಹ

ಉಪಮುಖ್ಯಮಂತ್ರಿ ಸ್ಥಾನಕ್ಕೆ ವಾಲ್ಮೀಕಿ ಸಮುದಾಯ ಪಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ವಾಲ್ಮೀಕಿ ಸಮುದಾಯಕ್ಕೆ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕು. ಮೀಸಲಾತಿ ಪ್ರಮಾಣವನ್ನು ಶೇ 7.5ಕ್ಕೆ ಹೆಚ್ಚಳ ಮಾಡಬೇಕು’ ಎಂದು ಸಮುದಾಯದ ಸ್ವಾಮೀಜಿ, ಶಾಸಕರು ಪಟ್ಟುಹಿಡಿದಿದ್ದಾರೆ.

ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಸಚಿವ ಬಿ.ಶ್ರೀರಾಮುಲು ಹಾಗೂ ಸಮುದಾಯದ ಶಾಸಕರ ನೇತೃತ್ವದ ನಿಯೋಗ ಸೋಮವಾರ ಭೇಟಿಮಾಡಿ ಚರ್ಚಿಸಿತು.

‘ನಮ್ಮ ಸಮಾಜಕ್ಕೆ ಉಪಮುಖ್ಯಮಂತ್ರಿ ಹುದ್ದೆ ನೀಡುವ ಭರವಸೆ ಕೊಟ್ಟಿದ್ದೀರಿ. ಈಗ ಆ ಭರವಸೆ ಈಡೇರಿಸಬೇಕು. ಸಮುದಾಯದ ಒಬ್ಬರಿಗೆ ಅವಕಾಶ ಕಲ್ಪಿಸಬೇಕು’ ಎಂದು ಸ್ವಾಮೀಜಿ ಸಭೆಯಲ್ಲಿ ಬೇಡಿಕೆ ಸಲ್ಲಿಸಿದ್ದಾರೆ.

‘ವಾಲ್ಮೀಕಿ ಸಮುದಾಯಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು. ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರಿಡಬೇಕು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಮುನ್ನ ಮಹರ್ಷಿ ವಾಲ್ಮೀಕಿ ಮಂದಿರ ನಿರ್ಮಾಣ ಮಾಡಬೇಕು. ಪರಿಶಿಷ್ಟ ವರ್ಗದ ಮೀಸಲಾತಿ ಹೆಚ್ಚಳ ಸಂಬಂಧ ರಚಿಸಲಾಗಿರುವ ನಾಗಮೋಹನ ದಾಸ್ ನೇತೃತ್ವದ ಸಮಿತಿಗೆ ಆದಷ್ಟು ಬೇಗ ವರದಿ ನೀಡುವಂತೆ ನಿರ್ದೇಶನ ನೀಡಬೇಕು’ ಎಂದು ಸಭೆಯಲ್ಲಿ ಮುಖಂಡರು ಆಗ್ರಹಿಸಿದ್ದಾರೆ.

‘ಆಯೋಗ ಕೇಳಿರುವ ಎಲ್ಲಾ ಮಾಹಿತಿಗಳನ್ನು ಕೊಡುವಂತೆ ಸಂಬಂಧಿಸಿದ ಇಲಾಖೆಗಳಿಗೆ ಆದೇಶಿಸಲಾಗಿದೆ. ವರದಿ ಸಲ್ಲಿಸಲು ಆರು ತಿಂಗಳು ಕಾಲಾವಕಾಶ ಕೊಡಲಾಗಿದೆ. ವರದಿ ಕೊಟ್ಟ ತಕ್ಷಣ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಶೀಘ್ರ ವರದಿ ಸಲ್ಲಿಸುವಂತೆ ಕೋರಲಾಗುವುದು. ಈ ವಿಚಾರದಲ್ಲಿ ಸರ್ಕಾರ ವಿಳಂಬ ಮಾಡುವುದಿಲ್ಲ’ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು ಎನ್ನಲಾಗಿದೆ.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಶಾಸಕರಾದ ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ, ಬಿ.ನಾಗೇಂದ್ರ, ರಾಜೂಗೌಡ, ಶಿವನಗೌಡ ನಾಯಕ್, ಸಂಸದ ದೇವೇಂದ್ರಪ್ಪ ಸೇರಿದಂತೆ ಸಮುದಾಯದ ಶಾಸಕರು ನಿಯೋಗದಲ್ಲಿ ಇದ್ದರು.

ಶ್ರೀರಾಮುಲು– ರಮೇಶ್ ಮುಖಾಮುಖಿ

ಉಪಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿರುವ ಸಚಿವ ಬಿ.ಶ್ರೀರಾಮುಲು ಹಾಗೂ ಶಾಸಕ ರಮೇಶ್ ಜಾರಕಿಹೊಳಿ ‘ಕೃಷ್ಣಾ’ದಲ್ಲಿ ಮುಖಾಮುಖಿಯಾದರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಡಿಸಿಎಂ ಹುದ್ದೆಗೆ ಇಬ್ಬರ ನಡುವೆ ಪೈಪೋಟಿ ಏರ್ಪಟ್ಟಿದ್ದು, ಅಂತರ ಕಾಯ್ದುಕೊಂಡಿದ್ದರು.

ಸಹೋದರ ಶಾಸಕರಾದ ಸತೀಶ್ ಹಾಗೂ ರಮೇಶ್ ಜಾರಕಿಹೊಳಿ ಸಭೆಯಲ್ಲಿ ಭಾಗವಹಿಸಿದ್ದರೂ ಪರಸ್ಪರರ ಮುಖವನ್ನು ನೋಡದೆ ಕುಳಿತಿದ್ದರು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು