ಮಂಗಳವಾರ, ಮೇ 18, 2021
24 °C

ಮತ್ತಷ್ಟು ಬಲಗೊಂಡ ವಾಯುಭಾರ ಕುಸಿತ: ಕರಾವಳಿ, ಕೊಡಗಿನಲ್ಲಿ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು/ ಮಡಿಕೇರಿ: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಮಂಗಳೂರು ಮತ್ತು ಕೊಡಗು ಜಿಲ್ಲೆಯಲ್ಲಿ ಮಳೆ ಆಗಿದೆ. ಕೊಡಗಿನಲ್ಲಿ ಸೋಮವಾರ ಇಡೀ ದಿನ ಜಡಿ ಮಳೆ ಸುರಿಯಿತು. ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದ್ದು, ಶೀತ ಗಾಳಿಯೂ ಬೀಸುತ್ತಿದೆ.

ಮಡಿಕೇರಿ ನಗರ, ನಾಪೋಕ್ಲು, ಭಾಗಮಂಡಲ, ತಲಕಾವೇರಿ, ಕಕ್ಕಬ್ಬೆ, ಹೊದ್ದೂರು, ಮೂರ್ನಾಡು, ಪಾರಾಣೆ, ವಿರಾಜಪೇಟೆ, ಬಲಮುರಿ, ಮೇಕೇರಿ, ಕುಶಾಲನಗರ, ಸುಂಟಿಕೊಪ್ಪ, ಸಿದ್ದಾಪುರದಲ್ಲಿ ಮಧ್ಯಾಹ್ನದ ನಂತರ ಮಳೆ ಹನಿಯಾಗಿ ಸುರಿಯಲು ಆರಂಭಿಸಿತು. ಸಂಜೆ ನಂತರ ಚುರುಕು ಪಡೆಯಿತು. 

ಇನ್ನೆರಡು ದಿನ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದ್ದು, ಕೊಡಗು ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.

ಜಿಟಿಜಿಟಿ ಮಳೆ: ಮುಂಗಾರು ಮಾರುತದ ಪ್ರವೇಶದ ನಿರೀಕ್ಷೆಯಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಸಂಜೆಯಿಂದ ಜಿಟಿಜಿಟಿ ಮಳೆ ಆಯಿತು. ಸೋಮವಾರ ಇಡೀ ದಿನ ಮೋಡ ಕವಿದ ವಾತಾವರಣವಿದ್ದು, ಆಗಾಗ ಮಳೆ ಸುರಿಯಿತು.

ಲಕ್ಷದ್ವೀಪದ ಸಮೀಪದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಕರಾವಳಿಯುದ್ದಕ್ಕೂ ಜೋರಾಗಿ ಗಾಳಿ ಬೀಸುತ್ತಿದೆ. ಆಗಾಗ ಬಿರುಸಿನ ಮಳೆಯಾಗುತ್ತಿದೆ. ಬಿಸಿಲ ಹೊಡೆತದಿಂದ ತತ್ತರಿಸಿಹೋಗಿದ್ದ ಕರಾವಳಿ ಪ್ರದೇಶದಲ್ಲಿ ಭಾನುವಾರ ಸಂಜೆಯಿಂದ ತುಸು ತಣ್ಣನೆಯ ವಾತಾವರಣವಿದೆ.

ವಾಯುಭಾರ ಕುಸಿತವು ಸೋಮವಾರ ಮಧ್ಯಾಹ್ನದ ವೇಳೆಗೆ ಮತ್ತಷ್ಟು ಬಲಗೊಂಡಿದೆ. ಈಗ ಅದು ಉತ್ತರ ಈಶಾನ್ಯ ಕರಾವಳಿಯತ್ತ ಚಲಿಸುತ್ತಿದೆ. ಮುಂದಿನ 24 ಗಂಟೆಗಳಲ್ಲಿ ಅದು ಚಂಡಮಾರುತವಾಗಿ ಪರಿವರ್ತನೆ ಹೊಂದುವ ಸಾಧ್ಯತೆ ಇದೆ. ನಂತರದ ಎರಡು ದಿನಗಳಲ್ಲಿ ಅತಿವೇಗದ ಚಂಡಮಾರುತವಾಗಿ ಸೌರಾಷ್ಟ್ರ ಮತ್ತು ಕಛ್‌ನತ್ತ ಸಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ ಮಧ್ಯಾಹ್ನ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ.

ಕೇರಳ, ಲಕ್ಷದ್ವೀಪ ಮತ್ತು ಕರ್ನಾಟಕದ ಕರಾವಳಿ ಭಾಗದಲ್ಲಿ ಶುಕ್ರವಾರದವರೆಗೂ ಭಾರಿ ಮಳೆಬೀಳುವ ಸಂಭವವಿದೆ. ಕರ್ನಾಟಕದ ದಕ್ಷಿಣ ಒಳನಾಡಿನ ಹಲವೆಡೆ ಮಂಗಳವಾರದವರೆಗೂ ಭಾರಿ ಮಳೆಯಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.

ಲಕ್ಷದ್ವೀಪ, ಕೇರಳ ಮತ್ತು ಕರ್ನಾಟಕದ ಕರಾವಳಿಯಲ್ಲಿ ಮಂಗಳವಾರದವರೆಗೂ ಪ್ರತಿ ಗಂಟೆಗೆ 55ರಿಂದ 60 ಕಿಲೋಮೀಟರ್‌ ವೇಗದಲ್ಲಿ ಗಾಳಿ ಬೀಸಲಿದೆ. ಈ ಅವಧಿಯಲ್ಲಿ ಕೇರಳ ಮತ್ತು ಕರ್ನಾಟಕದ ಮೀನುಗಾರರು ಕಡಲಿಗೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ತೀರದಲ್ಲಿ ಕಟ್ಟೆಚ್ಚರ

ಮಂಗಳೂರಿನ ಪಣಂಬೂರು, ತಣ್ಣೀರುಬಾವಿ, ಉಳ್ಳಾಲ ಸೇರಿದಂತೆ ಎಲ್ಲ ಕಡೆಗಳಲ್ಲೂ ಕಡಲ ತೀರಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಪ್ರವಾಸಿಗರು ಸಮುದ್ರಕ್ಕೆ ಇಳಿಯುವುದನ್ನು ನಿರ್ಬಂಧಿಸಲಾಗಿದೆ. ಪೊಲೀಸರು, ತಟ ರಕ್ಷಕ ದಳ ಮತ್ತು ಜೀವ ರಕ್ಷಕ ಪಡೆಯನ್ನು ಎಲ್ಲ ಕಡೆಗಳಲ್ಲೂ ನಿಯೋಜಿಸಲಾಗಿದೆ.

ಉಡುಪಿ ಜಿಲ್ಲೆಯಲ್ಲೂ ಕಡಲ ತೀರಗಳಲ್ಲಿ ಕಟ್ಟೆಚ್ಚರ ವಹಿಸಿದ್ದು, ಮಲ್ಪೆ, ಬೈಂದೂರು, ಕಾಪು ಸೇರಿದಂತೆ ಹಲವು ಬೀಚ್‌ಗಳಲ್ಲಿ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದೆ.

ಸಿಡಿಲಿಗೆ ರೈತ ಸಾವು: (ರಾಯಚೂರು) ಜಿಲ್ಲೆಯ ಹಟ್ಟಿ ಚಿನ್ನದಗಣಿ ಸಮೀಪದ ಬೆಂಚಲದೊಡ್ಡಿ ಗ್ರಾಮದಲ್ಲಿ ಭಾನುವಾರ ರಾತ್ರಿ ಸಿಡಿಲು ಬಡಿದು ಸೋಮಣ್ಣ ಆದಪ್ಪ (25) ಎಂಬ ರೈತ ಮೃತಪಟ್ಟಿದ್ದಾರೆ.

ಕಲಬುರ್ಗಿ ನಗರ ಹಾಗೂ ಜಿಲ್ಲೆಯ ವಿವಿಧೆಡೆ, ಬೀದರ್‌ ಜಿಲ್ಲೆಯ ಭಾಲ್ಕಿಯಲ್ಲಿ ಸೋಮವಾರ ಸಂಜೆ ಸಾಧಾರಣ ಮಳೆ ಸುರಿಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು