ಬುಧವಾರ, ಜುಲೈ 28, 2021
29 °C

ಡಿಎಸ್‌ಇಆರ್‌ಟಿ ಎಡವಟ್ಟು: ‘ಚಂದನ’ದ ಮುಂದೆ ಕಾದು ಸುಸ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ (ಡಿಎಸ್‌ಇಆರ್‌ಟಿ) ವತಿಯಿಂದ ದೂರದರ್ಶನದ ಚಂದನ ವಾಹಿನಿಯಲ್ಲಿ ಸೋಮವಾರ ಬೆಳಿಗ್ಗೆಯಿಂದ ಪಾಠಗಳು ಪ್ರಸಾರವಾಗುತ್ತವೆ ಎಂದು ನಂಬಿ ಸಾವಿರಾರು ಮಂದಿ ಚಂದನದ ಮುಂದೆ ಕಾದು ಕುಳಿತು ಮೂರ್ಖರಾಗಿದ್ದಾರೆ.

ಸೋಮವಾರ ಬೆಳಿಗ್ಗೆ 9.30ರಿಂದ 10 ಗಂಟೆಯವರೆಗೆ ಗಣಿತ, 10ರಿಂದ ಇಂಗ್ಲಿಷ್, 10.30ರಿಂದ ವಿಜ್ಞಾನ.. ಹೀಗೆ ಸಂಜೆ 5 ಗಂಟೆಯವರೆಗೆ ವೇಳಾಪಟ್ಟಿ ಸಿದ್ಧವಾಗಿದ್ದು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಇದು ರಾಜ್ಯವ್ಯಾಪಿ ಶಾಲೆಗಳಿಗೆ ತಲುಪಿ, ಪೋಷಕರನ್ನೂ ತಲುಪಿತ್ತು.

ಹೀಗಾಗಿ ಸೋಮವಾರ ಬೆಳಿಗ್ಗೆಯಿಂದಲೇ ಪೋಷಕರು, ಮಕ್ಕಳು ದೂರದರ್ಶನದ ಮುಂದೆ ಪಾಠಗಳನ್ನು ಆಲಿಸಲು ಕಾದು ಕುಳಿತಿದ್ದರು.‌

ಸೋಮವಾರ ಬೆಳಿಗ್ಗೆ 9.30 ಕಳೆದರೂ ಪಾಠಗಳು ಶುರುವಾಗುವ ಲಕ್ಷಣ ಕಾಣಿಸಲಿಲ್ಲ. ಮತ್ತೆ ಅರ್ಧ ಗಂಟೆ ಕಾದರು. ಆಗಲೂ ಕಾರ್ಯಕ್ರಮ ಆರಂಭವಾಗಲಿಲ್ಲ. ಗಲಬಿಲಿಗೊಂಡ ಜನರು ದೂರದರ್ಶನ ಕಚೇರಿಗೇ ಕರೆ ಮಾಡಲಾರಂಭಿಸಿದರು. ಬೆಳಿಗ್ಗೆ 11 ಗಂಟೆ ವೇಳೆಗೆ ನೂರಾರು ಕರೆಗಳು ಬಂದು ರಾದ್ದಾಂತವೇ ಸೃಷ್ಟಿಯಾಯಿತು.

ಯಾರೋ ಮಾಡಿದ ತಪ್ಪು: ‘ಕಾರ್ಯಕ್ರಮ ಪ್ರಸಾರ ಮಾಡುವ ನಿಟ್ಟಿನಲ್ಲಿ ವೇಳಾಪಟ್ಟಿ ಸಿದ್ಧವಾದುದು ನಿಜ. ಆದರೆ ಇದು ನಮ್ಮ ಆಂತರಿಕ ಚಲಾವಣೆಗೆ ಮಾತ್ರ. ನಾವು ಸಿದ್ಧಪಡಿಸಿದ್ದು ಒಂದು ಕಾಲ್ಪನಿಕ ವೇಳಾಪಟ್ಟಿ ಮಾತ್ರವಾಗಿತ್ತು. ಇದಕ್ಕೆ ಶಿಕ್ಷಣ ಇಲಾಖೆಯಿಂದ ಮೊದಲಾಗಿ ಒಪ್ಪಿಗೆ ಪಡೆಯಬೇಕಿದ್ದು, ಬಳಿಕವಷ್ಟೇ ದೂರದರ್ಶನಕ್ಕೆ ತಿಳಿಸಬೇಕಿತ್ತು. ಈ ಯಾವುದೇ ಪ್ರಕಿಯೆ ಆಗಿಲ್ಲ. ಆದರೆ ಯಾರೋ ಈ ವೇಳಾಪಟ್ಟಿಯನ್ನು ಯೂಟ್ಯೂಬ್‌ಗೆ ಹಾಕಿಬಿಟ್ಟಿದ್ದಾರೆ. ಅದರಿಂದಾಗಿ ಇಷ್ಟೆಲ್ಲ ಗೊಂದಲ ಉಂಟಾಗಿದೆ. ಮುಂದೆ ಈ ತರಗತಿ ನಡೆಯಲಿಕ್ಕಿದೆ. ಆದರೆ ಅದಕ್ಕೆ ಮೊದಲಾಗಿ ಎಲ್ಲ ಒಪ್ಪಿಗೆ ಪಡೆದು, ಸಾರ್ವಜನಿಕವಾಗಿ ಪ್ರಕಟಣೆ ನೀಡಲಾಗುತ್ತದೆ’ ಎಂದು ಡಿಎಸ್‌ಇಆರ್‌ಟಿ ನಿರ್ದೇಶಕ ಎಂ.ಆರ್.ಮಾರುತಿ ‘ಪ್ರಜಾವಾಣಿ’ಗೆ ತಿಳಿಸಿದರು.

8–9ಕ್ಕೂ ತರಗತಿ
ಡಿಎಸ್ಇಆರ್‌ಟಿ ವತಿಯಿಂದ ಕಳೆದ ಸಾಲಿನಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಪುನರ್‌ಮನನ ಕಾರ್ಯಕ್ರಮಗಳು ಚಂದನದ ಮೂಲಕ ಯಶಸ್ವಿಯಾಗಿ ನಡೆದಿದ್ದವು. ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ವಿದ್ಯಾರ್ಥಿಗಳು ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು, ಕಳೆದ ವಾರ ಕೊನೆಗೊಂಡು ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿದ್ದರು. ಈ ವರ್ಷ ಶಾಲೆ ಯಾವಾಗ ಆರಂಭವಾಗುತ್ತದೆ ಎಂಬ ಅನಿಶ್ಚಿತತೆ ಇರುವುದರಿಂದ ಈ ವರ್ಷ ಎಸ್ಸೆಲ್ಸಿಸ್ಸಿ ಜತೆಗೆ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳೂ ಆನುಕೂಲ ಆಗುವ ರೀತಿಯಲ್ಲಿ ಪಾಠ ಮಾಡಲು ಇಲಖೆ ಮುಂದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು