‘ದುಡಿದ ತಾಯಂದಿರ ಕಾಲುಗಳನ್ನು ಮತ್ತಷ್ಟು ದಣಿಸದಿರಿ’

7
ಮುಖ್ಯಮಂತ್ರಿಗೆ ದೇವನೂರ ಮಹಾದೇವ, ಎಸ್.ಆರ್.ಹಿರೇಮಠರ ತುರ್ತು ಬಹಿರಂಗ ಪತ್ರ

‘ದುಡಿದ ತಾಯಂದಿರ ಕಾಲುಗಳನ್ನು ಮತ್ತಷ್ಟು ದಣಿಸದಿರಿ’

Published:
Updated:

ಬೆಂಗಳೂರು: ‘ಮದ್ಯಪಾನ ನಿಷೇಧಿಸಿ ನಮ್ಮ ಸಂಸಾರಗಳನ್ನು ಉಳಿಸಿ’ ಎಂಬ ಅಹವಾಲಿನೊಂದಿಗೆ ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿನತ್ತ ಬರಿಗಾಲಲ್ಲಿ ಇಲ್ಲವೆ ಹರಿದ ಚಪ್ಪಲಿಗಳಲ್ಲಿ ನಡೆದು ಬರುತ್ತಿರುವ ಮಹಿಳೆಯರ ನೋವಿಗೆ ಕಿವಿಗೊಟ್ಟು, ಸಮಸ್ಯೆಗೆ ಪರಿಹಾರ ಸೂಚಿಸಿ’ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಹಾಗೂ ಸಮಾಜ ಪರಿವರ್ತನಾ ಸಮುದಾಯದ ಸಂಚಾಲಕ ಎಸ್‌.ಆರ್‌. ಹಿರೇಮಠ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ. 

‘ದುಡಿದ ಗ್ರಾಮೀಣ ಮಹಿಳೆಯರ ಕಾಲುಗಳನ್ನು ಮತ್ತಷ್ಟು ದಣಿಸದಿರಿ, ಬೆಂದಿರುವ ಮನಸುಗಳನ್ನು ಮತ್ತಷ್ಟು ಬಳಲಿಸದಿರಿ. ಮೊದಲು ಅವರ ಜೊತೆ ಕೂತು ಮಾತನಾಡಿ’ ಎಂದು ಅವರು ಪತ್ರದಲ್ಲಿ ಕಳಕಳಿಯ ಮನವಿ ಮಾಡಿದ್ದಾರೆ. 

‘ಮದ್ಯಪಾನ ನಿಷೇಧ ತುರ್ತು ಸಾಮಾಜಿಕ ಬೇಡಿಕೆ ಆಗಿರುವು ದರಿಂದ ಈ ಬಹಿರಂಗ ಪತ್ರ ಬರೆಯುತ್ತಿದ್ದೇವೆ. ನಮ್ಮ ಗ್ರಾಮೀಣ ಮಹಿಳೆಯರು ರಸ್ತೆಯಲ್ಲಿ ನಡೆಯಲು ಪ್ರಾರಂಭಿಸಿ 5 ದಿನಗಳಾಗಿವೆ. ಇದೇ 19ರಂದು ಚಿತ್ರದುರ್ಗದಿಂದ ಅವರು ಪಾದಯಾತ್ರೆ ಹೊರಟಾಗ ಅನೇಕ ಸ್ವಾಮೀಜಿಗಳು ಹಾಗೂ ಸಂಘ ಸಂಸ್ಥೆಗಳ ಮುಂದಾಳುಗಳು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ’ ಎಂದು ವಿವರಿಸಿದ್ದಾರೆ. 


ರಾಜ್ಯದಲ್ಲಿ ಮದ್ಯಪಾನ ಸಂಪೂರ್ಣ ನಿಷೇಧಕ್ಕೆ ಒತ್ತಾಯಿಸಿ ‘ಮದ್ಯ ನಿಷೇಧ ಆಂದೋಲನ’ ಸಮಿತಿಯು ಚಿತ್ರದುರ್ಗದಿಂದ ಬೆಂಗಳೂರಿಗೆ ಹಮ್ಮಿಕೊಂಡಿರುವ ಪಾದಯಾತ್ರೆ ಬುಧವಾರ ಶಿರಾ ತಲುಪಿದ್ದು ಪಾದಯಾತ್ರಿಗಳು ನಗರದಲ್ಲಿ ಬಹಿರಂಗ ಸಭೆ ನಡೆಸಿದರು.

‘ವಿಶ್ವಾಸವನ್ನು ಸೆರಗಲ್ಲಿ ಕಟ್ಟಿಕೊಂಡು, ನಿರೀಕ್ಷೆಗಳನ್ನು ಕಣ್ಣುಗಳಲ್ಲಿ ತುಂಬಿಕೊಂಡು ಈ ಪಾದಯಾತ್ರೆಯಲ್ಲಿ ಹೆಜ್ಜೆಹಾಕುತ್ತಿರುವವರು ಬಹುತೇಕ ಕೂಲಿ ಮಾಡುವ ಹೆಣ್ಣು ಮಕ್ಕಳು. ಯಾವ ರಾಜಕೀಯ ಪಕ್ಷಕ್ಕೂ ಸೇರಿದವರಲ್ಲ, ಯಾವುದೇ ಸಂಘಟನೆ ಒತ್ತಡದಿಂದ ಬೀದಿಗಿಳಿದವರಲ್ಲ. ಮಿತಿಮೀರಿ ಹೋಗಿರುವ ಕುಡಿತದ ಹಾವಳಿಯಿಂದ ನಲುಗಿ, ಕಣ್ಣೀರಿಟ್ಟು, ಕೈ ಸೋತು, ಕೊನೆಗೆ ಕೊನೆ ಆಸೆಯಾಗಿ ಹೋರಾಟಕ್ಕೆ ಇಳಿದವರು’ ಎಂದು ಸ್ಪಷ್ಟಪಡಿಸಿದ್ದಾರೆ.

‘ಅಧಿಕಾರದಲ್ಲಿ ಕೂತವರ ಇಕ್ಕಟ್ಟುಗಳೂ ನಮಗೆ ಅರ್ಥವಾಗುತ್ತವೆ. ಕುಡುಕರು ಕುಡಿತದ ಚಟಕ್ಕೆ ಬಲಿಯಾಗಿರುವಂತೆ, ಸರ್ಕಾರಗಳು ಹೆಂಡದ ತೆರಿಗೆ ಚಟಕ್ಕೆ ಬಲಿಯಾಗಿವೆ. ಹೆಂಡ ಮಾರಿದ ಹಣ ಇಲ್ಲವೆಂದರೆ ಸರ್ಕಾರದ ಕೈಕಾಲುಗಳು ನಡುಗುತ್ತವೆ. ಹಾಗಂತ ಮದ್ಯದ ವ್ಯಸನದ ದಾಸ್ಯದಲ್ಲೇ ಸರ್ಕಾರ ಇರಿಸಲು ಸಾಧ್ಯವಿಲ್ಲ. ತಕ್ಷಣವೇ ಪರಿಪೂರ್ಣ ಪರಿಹಾರ ಲಭ್ಯವಿಲ್ಲವಾದರೂ ಆ ನಿಟ್ಟಿನಲ್ಲಿ ನಿಷ್ಠುರ ಹೆಜ್ಜೆ ಹಾಕುವುದು  ಜನ ಒಳಿತನ್ನು  ಸರ್ಕಾರದ ಕರ್ತವ್ಯ’ ಎಂದು ಹೇಳಿದ್ದಾರೆ.

 ‘ಸರ್ಕಾರದ ಇಕ್ಕಟ್ಟುಗಳು ಏನೇ ಇದ್ದರೂ ಇದುವರೆಗಿನ ಸರ್ಕಾರಗಳು ಮಾಡಿದಂತೆಯೇ ನೀವೂ ಮೌನದ ಮೊರೆ ಹೋಗುವುದಿಲ್ಲ ಎಂಬ ವಿಶ್ವಾಸ ವಿದೆ’ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಿಗೂ ಪತ್ರ ಕಳುಹಿಸಲಾಗಿದೆ.

ಪತ್ರದ ಪೂರ್ಣಪಾಠ ಇಲ್ಲಿದೆ-

**

ಮಾನ್ಯ ಮುಖ್ಯಮಂತ್ರಿ ಶ್ರೀ ಎಚ್.ಡಿ.ಕುಮಾರಸ್ವಾಮಿಯವರೇ,

ತುರ್ತು ಸಾಮಾಜಿಕ ಅಳಲೊಂದನ್ನು ತಮ್ಮ ಗಮನಕ್ಕೆ ತರಲೇಬೇಕಿರುವುದರಿಂದ ನಾವು ಈ ಬಹಿರಂಗ ಪತ್ರ ಬರೆಯುತ್ತಿದ್ದೇವೆ. ನಮ್ಮ ಗ್ರಾಮೀಣ ತಾಯಂದಿರು ಬರಿಗಾಲಲ್ಲಿ ಅಥವಾ ಹರಿದ ಚಪ್ಪಲಿಗಳಲ್ಲಿ, “ಮಧ್ಯಪಾನವನ್ನು ನಿಷೇಧಿಸಿ - ನಮ್ಮ ಸಂಸಾರಗಳನ್ನು ಉಳಿಸಿ” ಎಂಬ ಅಹವಾಲಿನೊಂದಿಗೆ ಸಾವಿರಾರು ಸಂಖ್ಯೆಯಲ್ಲಿ ನಿಮ್ಮನ್ನು ಕಾಣಲು ಬೆಂಗಳೂರಿನತ್ತ ನಡೆದು ಬರುತ್ತಿದ್ದಾರೆ. ಅವರು ನಡೆಯಲು ಪ್ರಾರಂಭಿಸಿ ಇಂದಿಗೆ 5 ದಿನಗಳಾದುವು. ಇದೇ 19ರಂದು ಚಿತ್ರದುರ್ಗದಿಂದ ಅವರು ಪಾದಯಾತ್ರೆ ಹೊರಟಾಗ ಅನೇಕ ಸ್ವಾಮೀಜಿಗಳು ಹಾಗೂ ಸಂಘ ಸಂಸ್ಥೆಗಳ ಮುಂದಾಳುಗಳು, ರಾಜ್ಯದ ಬೇರೆ ಬೇರೆ ಮೂಲೆಗಳಿಂದ ಬಂದಿದ್ದ ಆ ತಾಯಂದಿರ ದಿಟ್ಟತನವನ್ನು ಶ್ಲಾಘಿಸಿ, ಅವರ ಹೋರಾಟಕ್ಕೆ ಶುಭ ಹಾರೈಸಿ ಬೀಳ್ಕೊಟ್ಟಿದ್ದರು. ಎಲ್ಲಾ ಪತ್ರಿಕೆಗಳಲ್ಲೂ ಇದು ದೊಡ್ಡ ಸುದ್ದಿಯೇ ಆಗಿತ್ತು. ಇದು ತಮ್ಮ ಗಮನಕ್ಕೆ ಬಂದಿರಲೇಬೇಕಿತ್ತು. ಸರ್ಕಾರ ಪ್ರತಿಕ್ರಿಯಿಸಬಹುದೆಂಬ ನಿರೀಕ್ಷೆಯೂ ಹಲವರಿಗಿತ್ತು. ಆದರೆ ಅಂತಹುದೇನೂ ಆಗದಿರುವುದು ಅಚ್ಚರಿ ಮೂಡಿಸಿದೆ. ಅದೇ ದಿನಗಳಲ್ಲಿ ಶಾಸಕರಿಬ್ಬರು ರೆಸಾರ್ಟ್‍ನಲ್ಲಿ ಕುಡಿದ ಅಮಲಿನಲ್ಲಿ ಹೊಡೆದಾಡಿಕೊಂಡರೆಂಬ ಸುದ್ದಿ ನಮಗೆ ಆಘಾತವನ್ನುಂಟು ಮಾಡಿದೆ.

ವಿಶ್ವಾಸವನ್ನು ಸೆರಗಲ್ಲಿ ಕಟ್ಟಿಕೊಂಡು, ನಿರೀಕ್ಷೆಗಳನ್ನು ಕಣ್ಣುಗಳಲ್ಲಿ ತುಂಬಿಕೊಂಡು ನಡೆಯುತ್ತಿರುವ ಈ ತಾಯಂದಿರ ಕುರಿತು ಒಂದಷ್ಟು ಮಾಹಿತಿಯನ್ನು ತಮ್ಮ ಗಮನಕ್ಕೆ ತರಲೇಬೇಕಿದೆ. ಈ ಪಾದಯಾತ್ರೆಯಲ್ಲಿ ಹೆಜ್ಜೆಹಾಕುತ್ತಿರುವವರೆಲ್ಲಾ ಬಹುತೇಕ ಕೂಲಿ ಮಾಡುವ ಹೆಣ್ಣು ಮಕ್ಕಳು. ಇವರು ಯಾವ ರಾಜಕೀಯ ಪಕ್ಷಕ್ಕೂ ಸೇರಿದವರಲ್ಲ, ಯಾವುದೋ ಸಂಘಟನೆಯ ಪ್ರಲೋಭನೆಯ ಮೇರೆಗೆ ಬೀದಿಗಿಳಿದವರಲ್ಲ. ಮಿತಿಮೀರಿ ಹೋಗಿರುವ ಕುಡಿತದ ಹಾವಳಿಯಿಂದ ನಲುಗಿ, ಕಣ್ಣೀರಿಟ್ಟು, ಕೈ ಸೋತು, ಕೊನೆಗೆ ಕೊನೆ ಆಸೆಯಾಗಿ ಹೋರಾಟಕ್ಕೆ ಇಳಿದವರು. ಮೂರು ವರ್ಷಗಳ ಹಿಂದೆ ರಾಯಚೂರಿನಲ್ಲಿ ಮದ್ಯಪಾನ ನಿಷೇಧಕ್ಕೆ ಆಗ್ರಹಿಸಿ 40 ಸಾವಿರ ಮಹಿಳೆಯರು ಸಮಾವೇಶಗೊಂಡು ನಮ್ಮೆಲ್ಲರನ್ನೂ ಚಕಿತಗೊಳಿಸಿದ್ದರು. ಆಗ ಸರ್ಕಾರ ಪ್ರತಿಕ್ರಿಯಿಸಲಿಲ್ಲ. ಆದರೆ ಈ ತಾಯಂದಿರು ವಿಶ್ವಾಸ ಕಳೆದುಕೊಳ್ಳಲಿಲ್ಲ. ಸರ್ಕಾರ ಮತ್ತೆ ಕಿವಿಗೊಡಲಿಲ್ಲ. ಇವರೂ ಹಟ ಬಿಡಲಿಲ್ಲ.

ಕಳೆದ ಚುನಾವಣೆ ಸಂದರ್ಭದಲ್ಲಿ ಬರೋಬ್ಬರಿ 70 ದಿನ ಧರಣಿ ನಡೆಸಿದರು. ಓಟು ಕೇಳಲು ಬಂದ ರಾಜಕೀಯ ನಾಯಕರುಗಳ ಕಾರುಗಳನ್ನೆಲ್ಲಾ ಅಡ್ಡಗಟ್ಟಿದರು. ತಮ್ಮನ್ನೂ ಸಹ ಅವರು ಬೀದಿಯಲ್ಲಿ ಎದುರಾಗಿದ್ದರು. ‘ಖಂಡಿತ ಏನಾದರೂ ಮಾಡೋಣ’ ಎಂದು ನೀವೂ ಮಾತುಕೊಟ್ಟಿದ್ದಿರಿ. ಹೊಸ ಸರ್ಕಾರವೂ ಬಂತು, ಆದರೆ ಅವರ ಬದುಕಿನಲ್ಲಿ ನೆಮ್ಮದಿ ಮೂಡಲಿಲ್ಲ. ತಮ್ಮ ಸಂಸಾರಗಳನ್ನು ಉಳಿಸಿಕೊಳ್ಳುವ ದೃಢ ಸಂಕಲ್ಪ ಮಾಡಿರುವ ಈ ತಾಯಂದಿರು ಕೈ ಚೆಲ್ಲಲು ಸಿದ್ಧರಿಲ್ಲ. ಸರ್ಕಾರಕ್ಕೆ ನಮ್ಮ ಅಳಲು ಕೇಳಿಸುವಂತೆ ಮಾಡೇಮಾಡುತ್ತೇವೆ ಎಂಬ ದೃಢತೆಯೊಂದಿಗೆ ಅವರು ನಡಿಗೆ ಆರಂಭಿಸಿದ್ದಾರೆ. ಇವರೆಲ್ಲಾ ಯಾರೋ ಟೆಂಪೋ ಹತ್ತಿಸಿಕೊಂಡು ಬಂದ ಜನರಲ್ಲ ಅಥವ ಯಾರದೋ ಪ್ರಲೋಭನೆಯ ಮಾತಿಗೆ ಮರುಳಾಗಿರುವ ಮಹಿಳೆಯರಲ್ಲ. ಬದಲಿಗೆ ಸಂಸಾರಗಳನ್ನು ಉಳಿಸಿಕೊಳ್ಳಲು ಬೀದಿಗಿಳಿದಿರುವ ನಮ್ಮ ರಾಜ್ಯದ ಹೆಮ್ಮೆಯ ಬಡ ತಾಯಂದಿರು ಎಂಬುದನ್ನು ಮತ್ತೊಮ್ಮೆ ಒತ್ತಿ ತಮ್ಮ ಗಮನಕ್ಕೆ ತರಲು ಬಯಸುತ್ತೇವೆ.

ಅಧಿಕಾರದಲ್ಲಿ ಕೂತವರ ಇಕ್ಕಟ್ಟುಗಳೂ ನಮಗೆ ಅರ್ಥವಾಗುತ್ತವೆ. ಕುಡುಕರು ಕುಡಿತದ ಚಟಕ್ಕೆ ಬಲಿಯಾಗಿರುವಂತೆ, ಈ ದೇಶದ ಸರ್ಕಾರಗಳು ಹೆಂಡದ ತೆರಿಗೆಯ ಚಟಕ್ಕೆ ಬಲಿಯಾಗಿವೆ. ಹೆಂಡ ಮಾರಿದ ಹಣ ಇಲ್ಲವೆಂದರೆ ಸರ್ಕಾರದ ಕೈಕಾಲುಗಳು ನಡುಗುತ್ತವೆ. ಹಾಗಂತ ಮದ್ಯದ ವ್ಯಸನದ ದಾಸ್ಯದಲ್ಲೇ ಸರ್ಕಾರ ಇರಲು ಸಾಧ್ಯವಿಲ್ಲ. ತಕ್ಷಣವೇ ಪರಿಪೂರ್ಣ ಪರಿಹಾರ ಲಭ್ಯವಿಲ್ಲವಾದರೂ ಆ ನಿಟ್ಟಿನಲ್ಲಿ ನಿಷ್ಠುರ ಹೆಜ್ಜೆ ಇಡಬೇಕಿರುವುದು ಜನ ಒಳಿತನ್ನು ಬಯಸುವ ಎಲ್ಲಾ ಸರ್ಕಾರಗಳ ಕರ್ತವ್ಯ. ಕನಿಷ್ಟ ಮದ್ಯಪಾನ ನಿಯಂತ್ರಣವಾಗಬೇಕು, ಕುಡುಕರ ಸಂಖ್ಯೆ ತಗ್ಗುವಂತೆ ಮಾಡಲು ಕ್ರಮಕೈಗೊಳ್ಳಬೇಕು. ತಮ್ಮ ಹಳ್ಳಿಯಲ್ಲಿ ಮದ್ಯ ಮಾರಾಟ ಆಗಬೇಕೋ ಬೇಡವೋ ಎಂಬುದನ್ನು ತೀರ್ಮಾನ ಮಾಡುವ ಹಕ್ಕು ಗ್ರಾಮ ಸಭೆಗಳಿಗೆ ಇರಬೇಕು. ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟವಾಗಲು, ಸರ್ಕಾರವೇ ಮದ್ಯ ಮಾರಾಟದ ಟಾರ್ಗೆಟ್ ಹಿಗ್ಗಿಸುತ್ತಿರುವುದೇ ಕಾರಣ ಎಂಬುದಕ್ಕೆ ಆಧಾರಗಳಿವೆ.

ಜನರು ನಮ್ಮ ಊರಿಗೆ ‘ಹೆಂಡ’ ಬೇಡ ಎಂದು ತೀರ್ಮಾನಿಸಿದರೂ ಮಾರುತ್ತೇವೆ ಎಂಬುದು ಯಾವ ನ್ಯಾಯ? ಪ್ರತಿ ವರ್ಷ ಕುಡಿತದ ಟಾರ್ಗೆಟ್ ಹೆಚ್ಚಿಸಿ ಮದ್ಯಪಾನವನ್ನು ಪ್ರಚೋದಿಸುತ್ತಿರುವ ಅಬಕಾರಿ ಇಲಾಖೆಯ ಧೋರಣೆಯನ್ನು ಏನೆನ್ನಬೇಕು? ಬಡಜನರ ದುಡಿಮೆಯೆಲ್ಲಾ ಬಾಚಿಹೋಗುತ್ತಿದ್ದರೂ, ಕುಟುಂಬಗಳ ಗೌರವ ಗಟಾರದ ಪಾಲಾಗುತ್ತಿದ್ದರೂ, ಮನೆಯ ನೆಮ್ಮದಿ ಬೀದಿಪಾಲಾಗುತ್ತಿದ್ದರೂ ‘ನಾವೇನು ಮಾಡಲಾಗುತ್ತದೆ?’ ಎನ್ನುವ ಜನ ಪ್ರತಿನಿಧಿಗಳು ಜನರ ಪ್ರತಿನಿಧಿಗಳು ಹೇಗಾದಾರು? ಕುಡಿತ ಒಂದು ಪಿಡುಗಾಗಿ ಸಮಾಜದ ಆರೋಗ್ಯವನ್ನು ನಾಶ ಮಾಡುತ್ತಿರುವುದು ಕಣ್ಣಿಗೆ ರಾಚುತ್ತಿರುವಾಗ ಸುಮ್ಮನಿರುವುದು ಜನಪರ ಸರ್ಕಾರದ ಲಕ್ಷಣವಲ್ಲ. ಸುಮ್ಮನಿದ್ದರೆ ಅದು ಜನಪರ ಸರ್ಕಾರವೇ ಅಲ್ಲ.

ನಾವು ತಮ್ಮಲ್ಲಿ ಕೇಳಿಕೊಳ್ಳುವುದು ಇಷ್ಟೆ - ಮೊದಲು ಹಗಲಿರುಳೆನ್ನದೆ ನಡೆಯುತ್ತಿರುವ ಆ ತಾಯಂದಿರ ಬಳಿ ಹೋಗಿ, ಅವರ ಛಿದ್ರಗೊಂಡ ಬದುಕಿನ ವೇದನೆಗೆ ಕಿವಿಗೊಡಿ, ಅವರ ಜೊತೆ ಕೂತು ಪರಿಹಾರದ ಮಾರ್ಗಗಳ ಕುರಿತು ಚರ್ಚಿಸಿ, ಅನುಭವಿ ಸಾಮಾಜಿಕ ಕಾರ್ಯಕರ್ತರ, ತಜ್ಞರ ಸಲಹೆಗಳನ್ನು ಪಡೆದುಕೊಳ್ಳಿ, ಎಲ್ಲರ ನೆರವಿನೊಂದಿಗೆ ಈ ಪಿಡುಗಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಒಂದು ಒಳ್ಳೆಯ ಹೆಜ್ಜೆಯನ್ನಿಡಿ. ಸರ್ಕಾರದ ಇಕ್ಕಟ್ಟುಗಳು ಏನೇ ಇರಲಿ ಮೊದಲು ದುಡಿದ ತಾಯಂದಿರ ಕಾಲುಗಳನ್ನು ಮತ್ತಷ್ಟು ದಣಿಸದಿರಿ, ಬೆಂದಿರುವ ತಾಯಂದಿರ ಮನಸುಗಳನ್ನು ಮತ್ತಷ್ಟು ಬಳಲಿಸದಿರಿ. ಮೊದಲು ಅವರ ಜೊತೆ ಕೂತು ಮಾತನಾಡಿ ಎಂಬುದು ನಮ್ಮ ಮನವಿ.

ಇದುವರೆಗಿನ ಸರ್ಕಾರಗಳು ಮಾಡಿದಂತೆಯೇ ನೀವೂ ದಿವ್ಯ ಮೌನದ ಮೊರೆ ಹೋಗುವುದಿಲ್ಲ ಎಂಬ ವಿಶ್ವಾಸದೊಂದಿಗೆ,

ನಿಮ್ಮ ವಿಶ್ವಾಸಿಗಳು
–ಎಸ್.ಆರ್. ಹಿರೇಮಠ
–ದೇವನೂರು ಮಹಾದೇವ

[ಜನಾಂದೋಲನಗಳ ಮಹಾಮೈತ್ರಿಯ ಹಾಗೂ ಈ ನಾಡಿನ ಪ್ರಜ್ಞಾವಂತ ನಾಗರಿಕರ ಪರವಾಗಿ]

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !