ಸೋಮವಾರ, ಆಗಸ್ಟ್ 8, 2022
21 °C

ಧಾರವಾಡ: ತಾಳಿ ಕಟ್ಟಬೇಕಿದ್ದ ಪಿಎಸ್‌ಐಗೆ ಕೋವಿಡ್‌–19 ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಇನ್ನೆರಡು ದಿನಗಳಲ್ಲಿ ಹಸೆಮಣೆ ಏರಿ ಹೊಸ ಬದುಕಿಗೆ ಕಾಲಿಡುವ ಸಂಭ್ರಮದಲ್ಲಿದ್ದ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ ಒಬ್ಬರಿಗೆ ಕೋವಿಡ್–19 ದೃಢಪಟ್ಟ ಹಿನ್ನೆಲೆಯಲ್ಲಿ ಹಸೆಮಣೆ ಬದಲು ನೇರವಾಗಿ ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಗೆ ಗುರುವಾರ ದಾಖಲಾಗಿದ್ದಾರೆ.

ಬೆಂಗಳೂರಿನ ಶಂಕರಪುರಂ ಪೊಲೀಸ್‌ ಠಾಣೆಯ ಪಿಎಸ್‌ಐ ಮದುವೆ ಇನ್ನೆರಡು ದಿನಗಳಲ್ಲಿ ಬೆಳಗಾವಿಯ ಅಥಣಿಯಲ್ಲಿ ನಿಶ್ಚಯವಾಗಿತ್ತು. ಇದೇ ಸಂಭ್ರಮದಲ್ಲಿದ್ದ ಅವರು, ಹುಬ್ಬಳ್ಳಿ ಹಾಗೂ ಧಾರವಾಡದ ವಿವಿಧ ಠಾಣೆಗಳಲ್ಲಿರುವ ತಮ್ಮ ಸ್ನೇಹಿತರನ್ನು ಭೇಟಿ ಮಾಡಿ ಆಮಂತ್ರಣ ಪತ್ರ ನೀಡಲು ಬಂದಿದ್ದರು.

ಮದುವೆ ಸಂಬಂಧ ಒಂದು ತಿಂಗಳ ರಜೆಯನ್ನೂ ಪಡೆದಿದ್ದರು. ಬೆಂಗಳೂರಿನಿಂದ ಹೊರಡುವ ಮೊದಲು ರಾಜೀವ್‌ಗಾಂಧಿ ಆಸ್ಪತ್ರೆಯಲ್ಲಿ ಕೋವಿಡ್–19 ತಪಾಸಣೆಗೆ ಒಳಪಟ್ಟಿದ್ದರು. ಅವಳಿ ನಗರದಲ್ಲಿ ಓಡಾಡಿದ ಇವರು, ಸ್ನೇಹಿತರನ್ನು ಭೇಟಿ ಮಾಡಿ ಆಹ್ವಾನಿಸಿದ್ದರು. ಆದರೆ ಬೆಳಗಾವಿಗೆ ಹೊರಡುವ ಸಂದರ್ಭದಲ್ಲಿ ಬೆಂಗಳೂರು ಆಸ್ಪತ್ರೆಯಿಂದ ಬಂದ ಕರೆಯೊಂದು, ಇವರಲ್ಲಿ ಸೋಂಕು ಇರುವುದನ್ನು ದೃಢಪಡಿಸಿತು. ಹೀಗಾಗಿ ಹುಬ್ಬಳ್ಳಿ ಕಿಮ್ಸ್‌ನಲ್ಲಿ ದಾಖಲಾಗುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. 

ಜೊತೆಗೆ, ಇವರೊಂದಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದ ಅವಳಿ ನಗರದ ಐದು ಜನರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಜಿಲ್ಲಾಡಳಿತ ಸೂಚಿಸಿದೆ. ಈ ನಿಟ್ಟಿನಲ್ಲಿ ಪಿಎಸ್‌ಐ ಭೇಟಿ ನೀಡಿದ್ದ ಇಲ್ಲಿನ ಉಪನಗರ ಠಾಣೆಯನ್ನು ಪಾಲಿಕೆ ಸಿಬ್ಬಂದಿ ಗುರುವಾರ ಸ್ಯಾನಿಟೈಸ್‌ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು