ಕಲಬುರ್ಗಿ: ‘ಮುತ್ತಾತನ ಕಾಲದಿಂದಲೂ ಊರಿನಲ್ಲಿ ನಮ್ಮದು ದೊಡ್ಡ ಒಕ್ಕಲುತನದ ಮನೆ. ಮೂರು ಜೋಡಿ ಎತ್ತು, ಮೂರು ಚಕ್ಕಡಿ ಇದ್ದವು. ಬೆಳೆದ ತೊಗರಿ, ಜೋಳದ ಚೀಲಗಳನ್ನು ಎಣಿಸುವುದಕ್ಕೇ ಸಾಕಷ್ಟು ಸಮಯ ಬೇಕಾಗಿತ್ತು. ಬರಬರುತ್ತ ಬರಗಾಲ ಬಿದ್ದ ಕಾರಣ, ನೀರು– ಮೇವಿನ ಅಭಾವ ಉಂಟಾಯಿತು. ಈ ಬಾರಿ ಹೇಳಿಕೊಳ್ಳಲಾಗದ ಸ್ಥಿತಿ. ಸಾಕಲಾಗದೇ ಎರಡು ಎತ್ತುಗಳನ್ನು ಕಡಿಮೆ ದರಕ್ಕೆ ಮಾರಿದ್ದೇನೆ...’
ಆಳಂದ ತಾಲ್ಲೂಕಿನ ಧುತ್ತರಗಾಂವ್ ಗ್ರಾಮದ ರೈತ ಅಮೃತ ನಾವದಗಿ ಅವರ ನೋವಿನ ಮಾತುಗಳಿವು. ಮೇವು, ನೀರಿನ ಕೊರತೆಯಿಂದಾಗಿ ಜಾನುವಾರುಗಳನ್ನು ಮಾರಾಟ ಮಾಡಿದ ಗ್ರಾಮದ ಹಲವರಲ್ಲಿ ಇವರೂ ಒಬ್ಬರು. ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಜಾನುವಾರುಗಳನ್ನು ಸಾಕುವುದು ಹೇಗೆ ಎಂಬ ಚಿಂತೆ ಈ ಊರಿನವರನ್ನು ಕಾಡುತ್ತಿದೆ. ಒಬ್ಬರ ಹಿಂದೊಬ್ಬರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ.
‘ನಮಗೆ 60 ಎಕರೆ ಜಮೀನಿದೆ. ತೊಗರಿ, ಜೋಳ, ಕಬ್ಬು ಬೆಳೆಯುತ್ತೇವೆ. ಯಾವಾಗಲೂ 10 ಜನರು ನಮ್ಮ ಹೊಲದಲ್ಲಿ ದುಡಿಯುತ್ತಿದ್ದರು. ಮನೆ ತುಂಬ ದನಗಳಿದ್ದವು. ಈಗ ನಾಲ್ಕು ಎತ್ತು ಮಾತ್ರ ಇಟ್ಟುಕೊಂಡಿದ್ದೇವೆ. ಕುಂಟಿ– ರೆಂಟಿ ಎಲ್ಲ ಮನೆ ಮೂಲೆ ಸೇರಿವೆ. ಇಲ್ಲಿ ಜನರಷ್ಟೇ ತೊಂದರೆಯನ್ನು ಜಾನುವಾರುಗಳೂ ಅನುಭವಿಸುತ್ತಿವೆ’ ಎಂದು ನೊಂದುಕೊಂಡರು ಅಮೃತ. ಇವರ ಹಾಗೆಯೇ ಯಶವಂತರಾವ ಯಳವಂತಗಿ, ಅಣ್ಣಾರಾವ ರೆಡ್ಡಿ, ಮನೋಹರ ದುದನಾಳ, ಅಶೋಕ ತಳವಾರ ಸೇರಿ ಹಲವರು ಎತ್ತು– ಚಕ್ಕಡಿ ತೆಗೆದು ‘ಕೈ ತೊಳೆದುಕೊಂಡಿದ್ದಾರೆ’. ಅಫಜಲಪುರ ತಾಲ್ಲೂಕಿನ ಅತನೂರ, ವಿಜಯಪುರ ಜಿಲ್ಲೆಯ ಆಲಮೇಲ, ಮಹಾರಾಷ್ಟ್ರದ ಕೋಸಗಿ ಸಂತೆಗಳಲ್ಲಿ ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ.
ಎಂಟು ಸಾವಿರಕ್ಕೂಹೆಚ್ಚು ಜನಸಂಖ್ಯೆ ಹೊಂದಿರುವ ಈ ಊರಿನಲ್ಲಿ 200ಕ್ಕೂ ಹೆಚ್ಚು ಕೃಷಿ ಮನೆತನಗಳಿವೆ. 20 ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಅದರಲ್ಲಿ 12ರಲ್ಲಿ ನೀರು ಸಿಕ್ಕಿಲ್ಲ. ಉಳಿದವು ಮಳೆಗಾಲದಲ್ಲಿ ಮಾತ್ರ ಉಪಯೋಗಕ್ಕೆ ಬರುತ್ತವೆ. ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ಅಂತರ್ಜಲ ಕುಸಿದು ಎಲ್ಲ ಕೊಳವೆಬಾವಿಗಳೂ ಬತ್ತಿವೆ. ಸದ್ಯಕ್ಕೆ ಎರಡರಲ್ಲಿ ಮಾತ್ರ ಅಲ್ಪ–ಸ್ವಲ್ಪ ನೀರು ಜಿನುಗುತ್ತಿದೆ. ಒಂದೊಂದು ಓಣಿಯ ಜನ, ಒಂದೊಂದು ಸಮಯ ನಿಗದಿ ಮಾಡಿಕೊಂಡು ನೀರು ಪಡೆಯುತ್ತಿದ್ದಾರೆ.
ಬೆಳಿಗ್ಗೆ 6ರಿಂದ ಮಧ್ಯರಾತ್ರಿ 1 ಗಂಟೆಯವರೆಗೂ ಜನ ನೀರಿಗಾಗಿ ಪಾಳಿ ಹಚ್ಚುತ್ತಿದ್ದಾರೆ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರಣ್ಣ ಮಂಗಾಣಿ ಅವರ ಹೊಲದಲ್ಲಿರುವ ಕೊಳವೆಬಾವಿಯಿಂದ ನೀರು ಪೂರೈಸಲಾಗುತ್ತಿದೆ.
‘ಗ್ರಾಮಸ್ಥರು ದಿನಕ್ಕೆ 120 ಲೀಟರ್ ಹಾಲನ್ನು ಡೇರಿಗೆ ಮಾರಾಟ ಮಾಡುತ್ತಿದ್ದರು. ಅದು ಈಗ 40 ಲೀಟರ್‌ಗೆ ಇಳಿದಿದೆ. ನೀರಿನ ಕೊರತೆಯಿಂದ ಹಾಲು ಉತ್ಪಾದನೆಯೂ ಕುಸಿದಿದೆ. ಹಲವರು ಕುರಿಗಳನ್ನೂ ಮಾರಾಟ ಮಾಡುತ್ತಿದ್ದಾರೆ’ ಎನ್ನುತ್ತಾರೆ ಗ್ರಾಮಸ್ಥ ಸಿದ್ದು ಕ್ಯಾರಿ.
ಮಾರಾಟ ಬೇಡ:‘ಜಿಲ್ಲೆಯಲ್ಲಿ 5.83ಲಕ್ಷ ಜಾನುವಾರುಗಳು ಇವೆ. ಏಪ್ರಿಲ್ 4ರಿಂದಲೇ 14 ಮೇವು ಬ್ಯಾಂಕ್ ತೆರೆಯಲಾಗಿದೆ. ರೈತರು ಬೇಡಿಕೆ ಇಟ್ಟರೆ ಎಲ್ಲಿ ಬೇಕೋ ಅಲ್ಲಿ ಮೇವು ಬ್ಯಾಂಕ್ ತೆರೆಯಲಾಗುವುದು. ಮೇವಿನ ಕೊರತೆಯಿಂದಾಗಿಯೇ ಜಾನುವಾರು ಮಾರುವುದು ಬೇಡ’ ಎನ್ನುತ್ತಾರೆ ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ.ನಾಮದೇವ ರಾಠೋಡ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.