ಮಂಗಳವಾರ, ಮಾರ್ಚ್ 9, 2021
29 °C

ಮಣಿವಣ್ಣನ್‌ಗೆ ಹೊಸ ಹುದ್ದೆ: ಮುಗಿಯದ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾರ್ಮಿಕ ಇಲಾಖೆಯಿಂದ ಎತ್ತಂಗಡಿಯಾಗಿದ್ದ ಪಿ.ಮಣಿವಣ್ಣನ್‌ ಅವರನ್ನು ಮಂಗಳವಾರ ಪಶುಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.

ಮಣಿವಣ್ಣನ್ ಅವರ ಎತ್ತಂಗಡಿ ಬಗ್ಗೆ ಮಂಗಳವಾರವೂ ಚರ್ಚೆ ಮುಂದುವರಿದಿದ್ದು, ಉದ್ಯಮಿಗಳ ಒತ್ತಡ ಮೇರೆಗೆ ಕಾರ್ಮಿಕ ಇಲಾಖೆಯಿಂದ ವರ್ಗಾವಣೆ ಮಾಡಲಾಗಿದೆ. ಕೈಗಾರಿಕೋದ್ಯಮಿಗಳು ಕಾರ್ಮಿಕರಿಗೆ ಸಂಬಳ ನೀಡಿಲ್ಲ ಮತ್ತು ಇತರ ವ್ಯವಸ್ಥೆ ಮಾಡಲಿಲ್ಲ ಎಂಬ ಕಾರಣಕ್ಕೆ ಉದ್ಯಮಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದೇ ಈ ನಿರ್ಧಾರಕ್ಕೆ ಕಾರಣ ಎಂದೂ ಹೇಳಲಾಗಿದೆ.

ಆರಂಭದಲ್ಲಿ ಕಾರ್ಮಿಕ ಸಚಿವ ಶಿವರಾಮ್‌ ಹೆಬ್ಬಾರ್ ಅವರು ಕೈಗಾರಿಕೋದ್ಯಮಿಗಳು ಸಂಬಳ ನೀಡಿದಿದ್ದರೆ ಮತ್ತು ಕಾರ್ಮಿಕರಿಗೆ ಸೂಕ್ತ ವ್ಯವಸ್ಥೆ ಮಾಡಿದ್ದರೆ ಕ್ರಮ ತೆಗೆದುಕೊಳ್ಳಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡದ್ದೂ ಅಲ್ಲದೆ, ದೂರುಗಳಿದ್ದರೆ ತಮಗೆ ಮಾಹಿತಿ ನೀಡುವಂತೆಯೂ ಸೂಚಿಸಿದ್ದರು.

ಈ ಹಿನ್ನೆಲೆಯಲ್ಲಿ 1,000 ಕ್ಕೂ ಹೆಚ್ಚು ದೂರುಗಳು ಬಂದಿದ್ದವು. ಇದರಿಂದ ಉದ್ಯಮಿಗಳು ಅಸಮಾಧಾನಗೊಂಡು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ದೂರು ನೀಡಿದ್ದರು. ಆ ಬಳಿಕ ಕಾರ್ಮಿಕ ಸಚಿವರ ವರಸೆ ಬದಲಾಯಿತು. ದೂರುಗಳನ್ನು ತೆಗೆದುಕೊಳ್ಳಬೇಡಿ ಎಂದು ತಿಳಿಸಿದ್ದಾಗಿ ಮೂಲಗಳು ಹೇಳಿವೆ.

‘ಮಣಿವಣ್ಣನ್‌ ಅವರು ಏಕಪಕ್ಷೀಯವಾಗಿ ವರ್ತಿಸುತ್ತಿದ್ದರು. ಕೈಗಾರಿಕೆ, ಕಾರ್ಮಿಕರು ಮತ್ತು ಸರ್ಕಾರದ ಕೊಂಡಿಯಾಗಿ ಕೆಲಸ ಮಾಡಬೇಕಿತ್ತು. ಆದರೆ ತಮಗೆ ತೋಚಿದಂತೆ ಎಲ್ಲರಿಗೂ ಒಪ್ಪಿತವಾಗದ ರೀತಿಯಲ್ಲಿ ನಿರ್ಣಯ ತೆಗೆದುಕೊಳ್ಳುತ್ತಿದ್ದರು’ ಎಂದೂ ಉದ್ಯಮಿಗಳು ದೂರಿದ್ದಾರೆ.

ಮಣಿವಣ್ಣನ್ ಅವರನ್ನು ಕಾರ್ಮಿಕ ಇಲಾಖೆಯಲ್ಲೇ ಮುಂದುವರಿಸಬೇಕು ಎಂದು ಕಾರ್ಮಿಕ ಸಂಘಟನೆಗಳು ಆಗ್ರಹಿಸಿವೆ. 

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ಕಾರ್ಮಿಕ ಸಂಘಟನೆಗಳ ಪ್ರಮುಖರು, ಮಣಿವಣ್ಣನ್ ಅವರನ್ನು ಅಲ್ಲಿಗೆ ವಾಪಸ್ ಕಳುಹಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದೂ ಆಗ್ರಹಿಸಿದ್ದಾರೆ.

ರಾವ್‌ಗೆ ಕೈಗಾರಿಕೆ–ಕಾರ್ಮಿಕ ಜವಾಬ್ದಾರಿ?: ಮಣಿವಣ್ಣನ್‌ ವರ್ಗಾವಣೆಯಿಂದ ತೆರವಾಗಿರುವ ಕಾರ್ಮಿಕ ಇಲಾಖೆಯ ಜವಾಬ್ದಾರಿಯನ್ನು ಮಹೇಶ್ವರರಾವ್ ಅವರಿಗೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

ರಾವ್ ಅವರು ಕೈಗಾರಿಕೆ ಇಲಾಖೆ (ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಮತ್ತು ಗಣಿ) ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ. ಉದ್ಯಮಿಗಳ ಜತೆ ಉತ್ತಮ ಬಾಂಧವ್ಯ ಹೊಂದಿ ಇಲಾಖೆ ಮುನ್ನಡೆಸಬೇಕಾದ ಅವರಿಗೆ ಕಾರ್ಮಿಕ ಇಲಾಖೆ ಉಸ್ತುವಾರಿ ವಹಿಸಿರುವುದು ಎಷ್ಟು ಸರಿ. ಕಾರ್ಮಿಕರಿಗೆ ನ್ಯಾಯ ಒದಗಿಸಲು ಅವರಿಂದ ಹೇಗೆ ಸಾಧ್ಯವಾಗುತ್ತದೆ ಎಂಬ ಪ್ರಶ್ನೆಯನ್ನೂ ಕಾರ್ಮಿಕ ಸಂಘಟನೆಗಳ ಪ್ರಮುಖರು ಎತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು