ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಟೋಬರ್‌ 1ರ ವರೆಗೆ ಡಿಕೆಶಿಗೆ ನ್ಯಾಯಾಂಗ ಬಂಧನ

Last Updated 25 ಸೆಪ್ಟೆಂಬರ್ 2019, 3:54 IST
ಅಕ್ಷರ ಗಾತ್ರ

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿ ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್‌ ಶಾಸಕ ಡಿ.ಕೆ. ಶಿವಕುಮಾರ್‌ ಅವರ ಜಾಮೀನು ಅರ್ಜಿಯ ವಿಚಾರಣೆ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಕ್ಷಣಕ್ಷಣದ ಮಾಹಿತಿ ಇಲ್ಲಿದೆ.

06:19 – ಕಾಂಗ್ರೆಸ್‌ ನಾಯಕ ಡಿಕೆ ಶಿವಕುಮಾರ್‌ ಅವರನ್ನು ಅಕ್ಟೋಬರ್‌1ರ ವರಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ದೆಹಲಿಯ ವಿಶೇಷ ನ್ಯಾಯಾಲಯವು ಮಂಗಳವಾರ ರಾತ್ರಿ ಆದೇಶಿಸಿದೆ.

05:31 –ಸದ್ಯ ಡಿಕೆಶಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ನ್ಯಾಯಾಧೀಶರ ಸೂಚನೆ. ವೈದ್ಯರ ಸಲಹೆ ಮೇರೆಗೆ ಮುಂದಿನ ನಿರ್ಧಾರ. ಆಸ್ಪತ್ರೆಯಲ್ಲೇ ಉಳಿಯುವಂತೆ ವೈದ್ಯರು ಸೂಚಿಸಿದರೆ ಅದುವೇ ಅಂತಿಮ. ಇಲ್ಲವಾದಲ್ಲಿ ತಿಹಾರ್ ಜೈಲಿಗೆ ಹೋಗಬೇಕಾಗಬಹುದು

05:29–ಡಿಕೆಶಿ ಕಸ್ಟಡಿ ಅವಧಿ ಪೂರ್ಣಗೊಂಡಿದ್ದರಿಂದ ಅವರನ್ನು ಯಾರ‌ ವಶದಲ್ಲಿ ಇರಿಸಬೇಕು‌‌ ಎಂಬುದನ್ನು ನಿರ್ಧರಿಸಲು ನ್ಯಾಯಾಲಯಕ್ಕೆ ಮನವಿ ಮಾಡಿದ ಸಿಂಘ್ವಿ

05:24–ವಾದ–ಪ್ರತಿವಾದ ಆಲಿಸಿದ ನ್ಯಾಯಾಧೀಶರಿಂದ ವಿಚಾರಣೆ ನಾಳೆಗೆ ಮುಂದೂಡಿಕೆ. ನಾಳೆವರೆಗೆ ಡಿಕೆಶಿ ನ್ಯಾಯಾಂಗ ವಶಕ್ಕೆ. ನಾಳೆ ಮಧ್ಯಾಹ್ನ 3 ಗಂಟೆಗೆ ಮತ್ತೆ ವಿಚಾರಣೆ

05:20–ಡಿಕೆಶಿಗೆ ಅನೇಕ ವ್ಯವಹಾರಗಳಿವೆ. ಈಎಲ್ಲ ವ್ಯವಹಾರಗಳಿಗೆ ಆದಾಯದ‌ ಮೂಲ ಯಾವುದು ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ. ಈ ಹಣ ‌ಎಲ್ಲಿಂದ‌ ಬಂತು ಎಂಬುದನ್ನೂ ಆರೋಪಿ ತಿಳಿಸಿಲ್ಲ.₹ 800 ಕೋಟಿಯಷ್ಟು ಅವ್ಯವಹಾರ‌‌ ನಡೆದಿದೆ. ಹಾಗಾಗಿ ಜಾಮೀನು‌ ನೀಡದೆ‌ ಮತ್ತಷ್ಟು ವಿಚಾರಣೆಗೆ ಅವಕಾಶ ‌ನೀಡಿ’ಎಂದು ಕೋರಿದ ನಟರಾಜ್

05:15 –23 ವರ್ಷ ವಯಸ್ಸಿನ ಇವರ‌ ಮಗಳು ₹ 108 ಕೋಟಿ ಆಸ್ತಿ ಹೊಂದಿದ್ದಾರೆ‌ ಎಂಬುದು ನಂಬಲಸಾಧ್ಯವಾದದ್ದು– ಇ.ಡಿ. ವಕೀಲ ನಟರಾಜ್ ವಾದ

05:15 –ನಾವು ಈ ಹಿಂದೆ‌ ತಿಳಿಸಿದಂತೆ‌ 20 ಬ್ಯಾಂಕ್‌ಗಳ 317 ಖಾತೆಗಳಿಂದ ₹ 200 ಕೋಟಿ ಹಣ‌ ಅಕ್ರಮವಾಗಿ ವರ್ಗಾವಣೆಯಾಗಿದೆ. ಚಾರ್ಟರ್ಡ್ ಅಕೌಂಟೆಂಟ್ ಸಹ ಈ‌ ಕುರಿತು ಹೇಳಿಕೆ‌ ನೀಡಿದ್ದಾರೆ –ಇ.ಡಿ.ಪರ ವಕೀಲರಿಂದ ವಾದ

05:11 –‘ನಾವು ವಿಚಾರಣೆಗೆ ಒಂಭತ್ತು ಜನರ ಹೇಳಿಕೆ ದಾಖಲಿಸಿಕೊಂಡಿದ್ದೇವೆ. ತನಿಖೆ ವೇಳೆ ಸಾಕಷ್ಟು ದಾಖಲೆ ವಶಪಡಿಸಿಕೊಳ್ಳಲಾಗಿದೆ. ಅಕ್ರಮ ವ್ಯವಹಾರಗಳ ಎಲ್ಲ ಮಾಹಿತಿ ಪಡೆಯಲಾಗಿದೆ. ಅಪರಾಧ ಪಿತೂರಿಯ ಹಿನ್ನೆಲೆಯಲ್ಲೇ ₹ 143 ಕೋಟಿ ಬಳಕೆಯಾದ ಬಗ್ಗೆ ನಮಗೆ ಮಾಹಿತಿ ದೊರೆತಿದೆ. ಇದೆಲ್ಲವೂ ಅನ್ ಅಕೌಂಟೆಡ್ ನಗದು ವ್ಯವಹಾರವಾಗಿದೆ. ಆದರೆ ವಿಚಾರಣೆ ಸಂದರ್ಭ ಡಿಕೆಶಿ‌ ಹಾಗೂ ಇತರರು ಸಮರ್ಪಕ ಉತ್ತರ ‌ನೀಡಿಲ್ಲ‌’ ಇ.ಡಿ.ಪರ ವಕೀಲರಿಂದ ವಾದ

05:08 –ಡಿಕೆಶಿಗೆ ಜಾಮೀನು ನೀಡಬಾರದು:ನಟರಾಜ್ ಅವರಿಂದ ಮನವಿ

05:03 –ಇ.ಡಿ.‌ಪರ‌ ವಕೀಲ ನಟರಾಜ್ ಅವರಿಂದ ವಾದ‌ ಮಂಡನೆ ಆರಂಭ

05:00 –ಯಾವುದೇ ಷರತ್ತು ಬೇಕಾದರೂ ಹಾಕಿ, ಆದರೆ ಜಾಮೀನು ನೀಡಿ: ರೋಹ್ಟಗಿ ಮನವಿ

04:59 –ಬಾಯಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ವ್ಯಕ್ತಿಗೆ ನಿನ್ನೆಯಷ್ಟೇ ಸುಪ್ರೀಂ ಕೋರ್ಟ್ ಜಾಮೀನು‌ ನೀಡಿ ಮನೆಗೆ ಕಳುಹಿಸಿದೆ. ಅವರ ಮನೆಯೆದುರು ಒಬ್ಬ ಪೊಲೀಸ್ ಕಾನ್‌ಸ್ಟೆಬಲ್ ನಿಯುಕ್ತಿಗೆ ಸೂಚಿಸಿದೆ. ಆರೋಗ್ಯ ಮುಖ್ಯ‌ ಆಗಬೇಕು ಎಂದೂ ಹೇಳಿದೆ. ಅವರದ್ದು ಗರಿಷ್ಠ 7 ವರ್ಷ ಶಿಕ್ಷೆಗೆ ಅರ್ಹವಾದ ಅಪರಾಧ ಆಗಲಿದ್ದರೂ ಅವರಿಗೆ ರಿಯಾಯಿತಿ ನೀಡಲಾಗಿದೆ. ಡಿಕೆಶಿ ಅಂಥ ಗುರುತರ ಅಪರಾಧ‌ ಮಾಡಿಲ್ಲ. ಅವರಿಗೆ ಜಾಮೀನು‌ ನೀಡಿ ಎಂದು ರೋಹ್ಟಗಿ ‌ಮನವಿ

04:57 –ಕರ್ನಾಟಕ‌ ಹೈಕೋರ್ಟ್ ಈ ಪ್ರಕರಣಗಳ ವಿಚಾರಣೆಗೆ ಆದಾಯ ತೆರಿಗೆ ಇಲಾಖೆಗೆ ತಡೆ‌ ನೀಡಿದೆ. ಆದರೂ ಅವರ ಮೇಲೆ ಆರೋಪ ಮಾಡುವುದು ಸರಿಯಲ್ಲ.‌ಆರೋಗ್ಯ ಸ್ಥಿತಿ ಹದಗೆಟ್ಟರೂ ಆರೋಪಿ ಹೇಳಿದರೂ ತನಿಖಾಧಿಕಾರಿಗಳು ಕಿವಿಗೊಡುತ್ತಿಲ್ಲ–ರೋಹ್ಟಗಿ ವಾದ

04:54 –‘ಡಿಕೆಶಿ ಅವರು ಏಳು ಬಾರಿ ಶಾಸಕರಾಗಿ ಸಾರ್ವಜನಿಕ ಸೇವೆಯಲ್ಲಿದ್ದು, ಯಾವುದೇ ಲಾಭ ಬಯಸಿಲ್ಲ. ಸಮಾಜದಲ್ಲಿ ಅನೇಕ ಸ್ಥಾನಮಾನ ‌ಹೊಂದಿದ್ದವರು. ₹ 41 ಲಕ್ಷ ಮಾತ್ರ ಅವರ ಮನೆಯಲ್ಲಿ ದೊರೆತಿದೆ. ಅದಕ್ಕೆ ತೆರಿಗೆಯ‌ನ್ನೂ ಕಟ್ಟಲಾಗಿದೆ. ಆದರೂ ಅವರ ವಿರುದ್ಧ ಇಲ್ಲಸಲ್ಲದ ಪ್ರಕರಣ ದಾಖಲಿಸಲಾಗಿದೆ. ಅದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಬಾರದು. ಆದಾಯ ತೆರಿಗೆ ಕಾಯ್ದೆಯು ಶೆಡ್ಯೂಲ್‌ ನಲ್ಲಿ ಇಲ್ಲವೆಂಬ ಕಾರಣದಿಂದ ಹಣ ಅಕ್ರಮ ವರ್ಗಾವಣೆ ತಡೆ‌ ಕಾಯ್ದೆಯನ್ನು ದಾಖಲಿಸಲಾಗಿದೆ. ಇದು ಸರಿಯಲ್ಲ. ಕಾಯ್ದೆಯ ಸೆಕ್ಷನ್ 120 'ಬಿ' ಅಡಿ ಇ.ಡಿ.ಯು ಪ್ರಕರಣ ದಾಖಲಿಸಿದೆ. ಹಣಕಾಸಿನ ಅವ್ಯವಹಾರ ‌ನಡೆಯದಿದ್ದಾಗ ಇದನ್ನು ದಾಖಲಿಸಲು ಆಗದು’; ರೋಹ್ಟಗಿ ವಾದ

04:52 –ಏಳು ಬಾರಿ ಶಾಸಕರಾಗಿರುವ, ಒಂದು ಪಕ್ಷದ ನಾಯಕರಾಗಿರುವ ಡಿ.ಕೆ.ಶಿವಕುಮಾರ್ ಅವರನ್ನು ಇ.ಡಿ. ವಿಚಾರಣೆ ನಡೆಸುತ್ತಿರುವ ರೀತಿ ಸರಿಯಿಲ್ಲ: ರೋಹ್ಟಗಿ ವಾದ ಮಂಡನೆ

04:50 –ಡಿ.ಕೆ.ಶಿವಕುಮಾರ್ ಪರ ಹಿರಿಯ ವಕೀಲ ಮುಕುಲ್‌ ರೋಹ್ಟಗಿವಾದ ಮಂಡನೆ ಆರಂಭ

04:49 –15 ದಿನ ಕಸ್ಟಡಿಗೆ ನೀಡಲಾಗಿದೆ. ಕಸ್ಟಡಿಯಲ್ಲಿ ದೊರೆಯದ ಮಾಹಿತಿಯು ನ್ಯಾಯಾಂಗ ಬಂಧನದ‌ ಅವಧಿಯಲ್ಲಿ ಸಿಗಲು ಸಾಧ್ಯವೇ? ಕೂಡಲೇ ಡಿಕೆಶಿ ಅವರಿಗೆ ಜಾಮೀನು ನೀಡಿ ಎಂದು ಕೋರಿದ ಸಿಂಘ್ವಿ

04:47 –‘2017ರಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಅನ್ವಯ ಕ್ರಮ ‌ಕೈಗೊಳ್ಳದ ಇ.ಡಿ. ಸುಳ್ಳು ಪ್ರಕರಣ ದಾಖಲಿಸಿದೆ.ಹಣ ಅಕ್ರಮ ‌ವರ್ಗಾವಣೆ ತಡೆ ಕಾಯ್ದೆಯ ತಿದ್ದುಪಡಿ ಕುರಿತು ಸುಪ್ರೀಂ ಕೋರ್ಟ್ ಈ ‌ಆದೇಶ ‌ನೀಡಿತ್ತು. ದೆಹಲಿ ಹೈಕೋರ್ಟ್‌ನಲ್ಲೂ ಕೆಲವೇ ದಿನಗಳ ಹಿಂದೆ ಈ‌ ತಿದ್ದುಪಡಿ ಬಗ್ಗೆ ಸುದೀರ್ಘ ಚರ್ಚೆ ನಡೆಸಿದೆ‌’– ಸಿಂಘ್ವಿ

04:40 –‘ಇ.ಡಿ. ದಾಖಲಿಸಿರುವ ಪ್ರಕರಣಗಳಲ್ಲಿ ನಮೂದಿಸಲಾದ ಸೆಕ್ಷನ್‌ಗಳೂ ಸಾಕಷ್ಟು ಗೊಂದಲಕಾರಿ ಆಗಿವೆ. ಇಂಥ ಪ್ರಕರಣಗಳನ್ನು ದಾಖಲಿಸಲು ಪೂರಕ ದಾಖಲೆಗಳೂ, ಸಾಕ್ಷ್ಯಗಳೂ ಇಲ್ಲ.‌ ಆದರೂ ಅನೇಕ ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ’– ಸಿಂಘ್ವಿ ವಾದ ಮಂಡನೆ

04:36 –‘ಡಿ.ಕೆ.‌ಸುರೇಶ ಹಾಗೂ ಶಿವಕುಮಾರ್ ಅವರು ಚುನಾವಣೆಯಲ್ಲಿ ಘೋಷಿಸಿರುವ ಆಸ್ತಿ ವಿವರವು ನಿಖರವಾಗಿದೆ. ಐದು ವರ್ಷಗಳಲ್ಲಿ ಸಾಮಾನ್ಯವಾಗಿ ಮಾರುಕಟ್ಟೆ ಬೆಲೆ‌ ಹೆಚ್ಚಿದೆ. ಅದನ್ನು ಮರೆ‌ಮಾಚಿದ್ದರೆ ತಪ್ಪಾಗುತ್ತಿತ್ತು. ಸರಿಯಾಗಿಯೇ ಆಸ್ತಿ ಮೌಲ್ಯ ದಾಖಲಿಸಲಾಗಿದೆ. ಆಸ್ತಿಯ ಪ್ರಮಾಣ ಹೆಚ್ಚಿಲ್ಲ.‌ಬದಲಿಗೆ ಮೌಲ್ಯ ಮಾತ್ರ ಹೆಚ್ಚಿದೆ. ಅವರ ತಂದೆಯ ಸಾವಿನ ನಂತರ ಬಂದ ಆಸ್ತಿಯಿಂದಾಗಿ ಪಿತ್ರಾರ್ಜಿತವಾಗಿ ಬಂದ ಆಸ್ತಿ ಪ್ರಮಾಣ‌ ಹೆಚ್ಚಿದೆ. ಅದನ್ನೇ ಹಣ‌ ಅಕ್ರಮ ವರ್ಗಾವಣೆ ಎಂದೇ ಕರೆಯಲಾಗಿದೆ’– ಸಿಂಘ್ವಿ

04:35 –ಕಳೆದ 10ವರ್ಷಗಳ ಅವಧಿಯ ಡಿಕೆಶಿಬ್ಯಾಂಕ್ ವ್ಯವಹಾರಗಳ ದಾಖಲೆ ನ್ಯಾಯಾಲಯಕ್ಕೆ ನೀಡಿದ ಸಿಂಘ್ವಿ

04:33 –‘ಡಿಕೆಶಿ ತಾಯಿ ತಾಯಿ ಗೌರಮ್ಮ ಅವರು 10 ವರ್ಷಗಳ ಅವಧಿಯಲ್ಲಿ ಮಾಡಿರುವ ವ್ಯವಹಾರದ ಬಗ್ಗೆಯೂ ತಪ್ಪು ಆರೋಪ ಮಾಡಲಾಗಿದೆ. ಹಣವು ಮರದಿಂದ ದೊರೆಯುವ ಹಣ್ಣುಗಳಂತೆ ದೊರೆತಿದೆ‌ ಎಂಬಂತೆ ದೂರಲಾಗಿದೆ’: ಸಿಂಘ್ವಿ ವಾದ

04:30 –ಕಳೆದ 10ವರ್ಷಗಳ ಅವಧಿಯಲ್ಲಿ 20 ಬ್ಯಾಂಕ್ ಖಾತೆಗಳಿಂದ ₹ 200 ಕೋಟಿ ವ್ಯವಹಾರ ನಡೆಸಿದ್ದಾಗಿ ಆರೋಪಿಸಿರುವುದೂ ಸತ್ಯಕ್ಕೆ ದೂರವಾದದ್ದು: ಸಿಂಘ್ವಿ

04:28 –ಯಾವುದೇ ರೀತಿಯ ಮಾಹಿತಿ ದೊರೆಯದಿದ್ದರೂ ಇ.ಡಿ.ಯಿಂದ ಸುಳ್ಳು ಆರೋಪ. ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಬೇನಾಮಿ ಆಸ್ತಿ ಬಗ್ಗೆ ಮಾಡಿರುವ ಆರೋಪಗಳೂ‌ ಹುರುಳಿಲ್ಲದಂಥವು: ಡಿಕೆಶಿ ಪರ ಅಭಿಷೇಕ್ ಮನು ಸಿಂಘ್ವಿ ವಾದ ಮಂಡನೆ

04:25 –ಅನೇಕರಿಗೆ ಸಮನ್ಸ್ ನೀಡಿದ್ದರೂ ಯಾವ ಹೇಳಿಕೆ‌ ದಾಖಲಿಸಿಕೊಳ್ಳಲಾಗಿದೆ ಎಂಬುದನ್ನು ತಿಳಿಸಬೇಕು. 53 ಜನರು ಪ್ರಕರಣದಲ್ಲಿ ಭಾಗಿ ಎಂದು ತಿಳಿಸಲಾಗಿದೆ. ಆದರೆ ನಾಲ್ವರ ‌ಹೆಸರೂ ತನಿಖೆಯ ‌ವರದಿಗಳಲ್ಲಿ ಇಲ್ಲ. ಶಿವಕುಮಾರ್ ಹೆಸರಲ್ಲಿ 317 ಬ್ಯಾಂಕ್ ಖಾತೆ ಇವೆ ‌ಎಂದು ಹೇಳಲಾಗುತ್ತಿದೆ.‌ ವಿವರ ನೀಡಲು ಹೇಳಿ‌ ಎಂದು ನ್ಯಾಯಪೀಠವನ್ನು ಕೋರಿದ ಸಿಂಘ್ವಿ

04:24 –‘ಮೊದಲು ಕೇವಲ ₹ 41ಲಕ್ಷ ವಶಪಡಿಸಿಕೊಂಡಿದ್ದರೂ ಈಗ ಆ ಮೊತ್ತವನ್ನು ₹ 143 ಕೋಟಿಗೆ ಹೆಚ್ಚಿಸಲಾಗಿದೆ. ಅಜಯ್ ಖನ್ನಾ ಎಂಬುವವರು ₹ 3.50 ಕೋಟಿ ಮೊತ್ತದ ಆಸ್ತಿ ಮಾರಿದ್ದಾರೆ. ಅದರ ಈಗಿನ ದರ ₹ 7.50 ಕೋಟಿ ಆಗಿದೆ. ಮೊದಲು ಈ‌ ಬಗ್ಗೆ ಆರೋಪ‌ ಮಾಡದೆ ಈಗ ಒಮ್ಮೆಲೇ ಈ ರೀತಿಯ ಆರೋಪ ಹೊರಿಸಲಾಗುತ್ತಿದೆ’ – ಸಿಂಘ್ವಿ ವಾದ ಮಂಡನೆ

04:20 –‘ಕಸ್ಟಡಿಯಲ್ಲಿ ಇದ್ದಾಗಲೇ ಪಡೆಯದ ಹೇಳಿಕೆಯನ್ನು ನ್ಯಾಯಾಂಗ ಬಂಧನದ ಅವಧಿಯಲ್ಲಿ ಪಡೆಯುವುದಕ್ಕೆ ಹೇಗೆ‌ ಸಾಧ್ಯ? ಪ್ರತಿ ಬಾರಿಯೂ ಆರೋಪಿಗೆ ಹೊಸ ವಿಷಯ ಕೇಳುತ್ತ ಗೊಂದಲಕ್ಕೆ ಈಡು ಮಾಡಲಾಗುತ್ತಿದೆ‌. ಕೂಡಲೇ ಆರೋಪಿಗೆ ಜಾಮೀನು ನೀಡಿ. ಆರೋಗ್ಯ ಸುಧಾರಣೆಗೆ ಅನುವು ಮಾಡಿ ಕೊಡಿ. ಅವರ ಆರೋಗ್ಯ ಏರುಪೇರಾಗಿದ್ದು, ಪ್ರಾಣಕ್ಕೆ ಏನಾದರೂ ಸಮಸ್ಯೆ ಆಗಬಹುದು’ ಡಿಕೆಶಿ ಪರ ವಕೀಲ ಅಭಿಷೇಕ್ ಮನುಸಿಂಘ್ವಿ ವಾದ

04:18 –15ದಿನಗಳ ಕಾಲ ಇ.ಡಿ. ‌ವಶದಲ್ಲಿ ಇರುವಾಗ ಡಿಕೆಶಿ ಅವರಿಗೆ ಸಾಕಷ್ಟು ತೊಂದರೆ‌ ನೀಡಲಾಗಿದೆ. ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು ಅವರನ್ನು ನ್ಯಾಯಾಂಗ ಬಂಧನಕ್ಕೆ ಸಲ್ಲಿಸಬೇಡಿ ಎಂದು ಸಿಂಘ್ವಿ ಮನವಿ

04:17–‘ಡಿ.ಕೆ.ಶಿವಕುಮಾರ್ ರಕ್ತದ ಒತ್ತಡದಲ್ಲಿ ಏರುಪೇರಾಗುತ್ತಿದೆ. ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಬೇಕಾದ ಅನಿವಾರ್ಯತೆ ಇದೆ. ಇಂತಹ ಸಂದರ್ಭದಲ್ಲಿ ರೋಗಿಗೆ ಹೃದಯಾಘಾತವಾಗುವ ಸಾಧ್ಯತೆ ಇದೆ’: ಅಭಿಷೇಕ್ ಮನು ಸಿಂಘ್ವಿ ಅವರಿಂದ ವಾದ ಮಂಡನೆ

04:12–‘ಕಳೆದ ನಾಲ್ಕು ದಿನಗಳ ಕಾಲ ಸಮರ್ಪಕ ಹೇಳಿಕೆ ಪಡೆಯುವುದಕ್ಕೆ‌ ಸಾಧ್ಯವಾಗದ ಕಾರಣ ವಿಚಾರಣೆಗೆ‌ ಮತ್ತಷ್ಟು ಕಾಲಾವಕಾಶ ಬೇಕು. ಪ್ರಕರಣದಲ್ಲಿ ಡಿಕೆಶಿ ಚಾರ್ಟರ್ಡ್ ಅಕೌಂಟೆಂಟ್ ಅವರಿಗೂ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗಲು‌ ಸೂಚಿಸಲಾಗಿದೆ. ಹೀಗಾಗಿ ಆರೋಪಿಯನ್ನು ನಮ್ಮ ವಶಕ್ಕೇ ನೀಡಿ. ಆರೋಗ್ಯ ಸ್ಥಿತಿ ಏನೇ‌ ಇರಲಿ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರೂ ನಮಗೆ ವಿಚಾರಣೆಗೆ ಅನುಮತಿ ನೀಡಿ’ ಎಂದು ಇ.ಡಿ. ಪರ‌ ವಕೀಲರ ಮನವಿ

04:11–ಕಳೆದ‌ ಬಾರಿ ಕಸ್ಟಡಿಗೆ‌ ನೀಡಿದ್ದರೂ ಅನಾರೋಗ್ಯದಿಂದಾಗಿಶಿವಕುಮಾರ್ ವಿಚಾರಣೆಗೆ ಲಭ್ಯವಾಗಿಲ್ಲ:ಇ.ಡಿ.ಪರ ವಕೀಲರಿಂದ ನ್ಯಾಯಾಲಯಕ್ಕೆ ಮಾಹಿತಿ

04:09–ಡಿ.ಕೆ.ಶಿ ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಇ.ಡಿ.ಪರ ವಕೀಲ ಕೆ.ಎಂ.ನಟರಾಜ್ ನ್ಯಾಯಾಲಯಕ್ಕೆ ಮನವಿ

04:07–ಇ.ಡಿ‌‌.‌ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್‌ ಕುಹಾರ್ ಆಗಮನ. ವಿಚಾರಣೆ ಆರಂಭ.

04:05–ಡಿ.ಕೆ. ಶಿವಕುಮಾರ್ ಅವರನ್ನುಕೋರ್ಟ್‌ ಹಾಲ್‌ಗೆ ಕರೆತಂದ ಇ.ಡಿ. ಅಧಿಕಾರಿಗಳು

04:00–ಕೋರ್ಟ್‌ ಆವರಣ ತಲುಪಿದಇ.ಡಿ. ಪರ ವಕೀಲ ಕೆ.ಎಂ.ನಟರಾಜ್

03:59–ಡಿಕೆಶಿ ಪರ ವಾದ ಮಂಡನೆಗೆ ಈ ಬಾರಿ ಮೂವರು ವಕೀಲರು. ಅಭಿಷೇಕ್ ಮನು ಸಿಂಘ್ವಿ, ಕಪಿಲ್ ಸಿಬಲ್ ಜತೆ ಮುಕುಲ್ ರೋಹ್ಟಗಿ

03:54–ಡಿ.ಕೆ. ಶಿವಕುಮಾರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಜತೆ ಡಿ.ಕೆ.ಸುರೇಶ್ ಮಾತುಕತೆ

03:52–ರಾಮಮನೋಹರ್ ಲೋಹಿಯಾ ಆಸ್ಪತ್ರೆಯಿಂದನ್ಯಾಯಾಲಯದ ಆವರಣಕ್ಕೆ ಡಿಕೆಶಿ ಅವರನ್ನು ಕರೆತಂದ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು

03:50–ನ್ಯಾಯಾಲಯದ ಆವರಣ ತಲುಪಿದ ಡಿ.ಕೆ.ಶಿವಕುಮಾರ್ ಮತ್ತು ಅವರ ಪರ ವಕೀಲರು

03:48– ನ್ಯಾಯಾಲಯದ ಆವರಣಕ್ಕೆ ಆಗಮಿಸಿದ ತನಿಖಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT