ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ಬಂಧನ ವಿರೋಧಿಸಿ ಬೃಹತ್‌ ಪ್ರತಿಭಟನಾ ರ‍್ಯಾಲಿ

ಐ.ಟಿ, ಇ.ಡಿ ಸಂಸ್ಥೆಗಳ ದುರ್ಬಳಕೆ ಆರೋಪ
Last Updated 11 ಸೆಪ್ಟೆಂಬರ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕಾಂಗ್ರೆಸ್‌ ಶಾಸಕ ಡಿ.ಕೆ.ಶಿವಕುಮಾರ್‌ಗೆ ಕಿರುಕುಳ ನೀಡುತ್ತಿದೆ ಎಂದು ಆಪಾದಿಸಿ ವಿವಿಧ ಪಕ್ಷ ಹಾಗೂ ಒಕ್ಕಲಿಗ ಸಂಘಟನೆಗಳ ನೇತೃತ್ವದಲ್ಲಿ ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯಿತು.

‘ಒಕ್ಕಲಿಗ ಸಮುದಾಯದ ನಾಯಕರಿಗೆ ಘಾಸಿಯಾಗುವ ಪ್ರಸಂಗಗಳು ಇನ್ನಷ್ಟು ನಡೆದರೆಇಡೀ ಸಮಾಜವೇ ಎದ್ದು ನಿಂತು ಹೋರಾಟಕ್ಕೆ ಇಳಿಯಬೇಕಾದೀತು’ ಎಂಬ ಎಚ್ಚರಿಕೆಯನ್ನೂ ಕೇಂದ್ರ ಸರ್ಕಾರಕ್ಕೆ ರವಾನಿಸಲಾಯಿತು.

ಒಕ್ಕಲಿಗ ಸಂಘ–ಸಂಸ್ಥೆಗಳ ಒಕ್ಕೂಟವು ಕಾಂಗ್ರೆಸ್‌, ಜೆಡಿಎಸ್‌, ಕರ್ನಾಟಕ ರಕ್ಷಣಾ ವೇದಿಕೆಗಳ ಬೆಂಬಲದೊಂದಿಗೆ ಹಮ್ಮಿಕೊಂಡಿದ್ದ ಬೃಹತ್‌ ಪ್ರತಿಭಟನಾರ‍್ಯಾಲಿಗೆ 12 ಜಿಲ್ಲೆಗಳಿಂದ ಒಕ್ಕಲಿಗ ಸಂಘಟನೆಗಳ ಪ್ರತಿನಿಧಿಗಳು, ಕಾಂಗ್ರೆಸ್‌, ಜೆಡಿಎಸ್‌ ಕಾರ್ಯಕರ್ತರ ದಂಡೇ ಹರಿದು ಬಂದಿತ್ತು. ಆದರೆ, ಸಮುದಾಯದ ಪ್ರಮುಖ ಧಾರ್ಮಿಕ ಮುಖಂಡರು, ರಾಜಕೀಯ ನಾಯಕರು ಪಾಲ್ಗೊಳ್ಳಲಿಲ್ಲ.

ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಿಂದ ಆರಂಭವಾದ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಾಗಿ ಸ್ವಾತಂತ್ರ್ಯ ಉದ್ಯಾನದ ಸಮೀಪ ಕೊನೆಗೊಂಡಿತು. ಮೆರವಣಿಗೆಯ ಉದ್ದಕ್ಕೂ ಒಕ್ಕಲಿಗ ವಿರೋಧಿ ನೀತಿ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರದ ಗೃಹ ಸಚಿವ ಅಮಿತ್ ಶಾ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು.

‘ಇದೊಂದು ಸಾಂಕೇತಿಕ ಪ್ರತಿಭಟನೆ ಮಾತ್ರ. ಒಕ್ಕಲಿಗರನ್ನೇ ಗುರಿಯಾಗಿಟ್ಟುಕೊಂಡು ತುಳಿಯುವ ಪ್ರಯತ್ನ ನಡೆದರೆ ಚಿನ್ನಪ್ಪ ರೆಡ್ಡಿ ಆಯೋಗದ ವಿರುದ್ಧ ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ನೇತೃತ್ವದಲ್ಲಿ ನಡೆದಿದ್ದ ಹೋರಾಟಕ್ಕಿಂತ ನಾಲ್ಕು ಪಟ್ಟು ದೊಡ್ಡ ಹೋರಾಟ ನಡೆಯಲಿದೆ’ ಎಂದು ಶ್ರೀ ಗುರುಗುಂಡಾ ಬ್ರಹ್ಮೇಶ್ವರಸ್ವಾಮಿ ಮಹಾ ಸಂಸ್ಥಾನದ ಪೀಠಾಧಿಪತಿ ನಂಜಾವಧೂತ ಸ್ವಾಮೀಜಿ ಎಚ್ಚರಿಸಿದರು.

ಬೆಂಗಳೂರಿನ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಬುಧವಾರ ಆರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾತನಾಡಿದರು. ಮುಖಂಡರಾದ ಪಿ.ನರೇಂದ್ರ ಸ್ವಾಮಿ, ವಿ.ಎಸ್‌.ಉಗ್ರಪ್ಪ, ಕೃಷ್ಣ ಬೈರೇಗೌಡ, ಸೌಮ್ಯಾ ರೆಡ್ಡಿ ಇದ್ದರು. ಪ್ರಜಾವಾಣಿ ಚಿತ್ರ
ಬೆಂಗಳೂರಿನ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಬುಧವಾರ ಆರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾತನಾಡಿದರು. ಮುಖಂಡರಾದ ಪಿ.ನರೇಂದ್ರ ಸ್ವಾಮಿ, ವಿ.ಎಸ್‌.ಉಗ್ರಪ್ಪ, ಕೃಷ್ಣ ಬೈರೇಗೌಡ, ಸೌಮ್ಯಾ ರೆಡ್ಡಿ ಇದ್ದರು. ಪ್ರಜಾವಾಣಿ ಚಿತ್ರ

‘ಇಲ್ಲಿ ಇಂದು ಬಂದವರು ಒಕ್ಕಲಿಗ ಪ್ರತಿನಿಧಿಗಳು ಮಾತ್ರ. ಒಕ್ಕಲಿಗರೆಲ್ಲರೂ ಬಂದರೆ ಮತ್ತು ಅವರು ಎದ್ದು ನಿಂತರೆಅವರನ್ನು ತಡೆಗಟ್ಟುವುದು ಯಾರಿಂದಲೂ ಸಾಧ್ಯವಿಲ್ಲ. ಯಾವ ಒಕ್ಕಲಿಗರೂ ಇನ್ನು ಆತಂಕಪಡುವ ಅಗತ್ಯವಿಲ್ಲ. ಶಿವಕುಮಾರ್‌ ಅವರಷ್ಟೇ ಅಲ್ಲ, ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಅನ್ಯಾಯವಾದರೂ ಅವರ ಹಿತ ಕಾಪಾಡುವುದಕ್ಕೆ ಸಮಾಜ, ಧಾರ್ಮಿಕ ಕೇಂದ್ರಗಳೂ ಧಾವಿಸುತ್ತವೆ’ ಎಂದರು.

‘ಕಾನೂನಿಗೆ ಸದಾ ಗೌರವ ನೀಡುತ್ತಿರುವ ಶಿವಕುಮಾರ್‌ಅವರನ್ನು ನಡೆಸಿಕೊಂಡ ಕ್ರಮ ಸರಿಯಲ್ಲ. ಉದ್ಯಮಿ ವಿ.ಜಿ.ಸಿದ್ಧಾರ್ಥ ಅವರಿಗೆ ಒದಗಿದ ಗತಿ ಶಿವಕುಮಾರ್‌ಗೂ ಬರಬಾರದು. ಸಮಾಜ ಅವರೊಂದಿಗೆ ಇದೆ ಎಂಬುದನ್ನು ನೆನಪಿಸಲು ಈ ಬೃಹತ್ ಪ್ರತಿಭಟನಾ ಪ್ರದರ್ಶನ ನಡೆದಿದೆ’ ಎಂದು ಗುಡುಗಿದರು.

ಪ್ರತಿಭಟನಾರ‍್ಯಾಲಿ ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ‘3 ತಿಂಗಳಲ್ಲಿ ಬ್ಯಾಂಕುಗಳಿಂದ 32 ಸಾವಿರ ಕೋಟಿ ಲೂಟಿಯಾಗಿದೆ. ಅದನ್ನು ತಡೆಯಲು ಏನು ಕ್ರಮ ಕೈಗೊಂಡಿದ್ದೀರಿ’ ಎಂದು ಪ್ರಶ್ನಿಸಿದರಲ್ಲದೇ,ವಿರೋಧ ಪಕ್ಷದವರನ್ನು ಮುಗಿಸುವ ತಂತ್ರವನ್ನು ಸಹಿಸಲು ಸಾಧ್ಯವಿಲ್ಲ. ಜನ ಇದರ ವಿರುದ್ಧ ಎದ್ದು ನಿಂತಿದ್ದಾರೆ. ಇದನ್ನು ತಡೆಯಲು ಕೇಂದ್ರಕ್ಕೆಸಾಧ್ಯವಿಲ್ಲ’ ಎಂದರು.

‘ಕೇಂದ್ರ ಸರ್ಕಾರ ಹೇಡಿ ರಾಜಕಾರಣಮಾಡುತ್ತಿದ್ದು, ಐಟಿ, ಇಡಿಯಂತಹ ಸಂಸ್ಥೆಗಳನ್ನು ನಾಯಿಗಳಂತೆ ಬಳಸಿಕೊಳ್ಳುತ್ತಿದೆ’ ಎಂದು ಶಾಸಕ ಕೃಷ್ಣ ಬೈರೇಗೌಡ ಟೀಕಿಸಿದರು.

ಶಾಸಕರಾದ ರಾಮಲಿಂಗಾರೆಡ್ಡಿ, ಸೌಮ್ಯಾ ರೆಡ್ಡಿ, ಟಿ.ಡಿ. ರಾಜೇಗೌಡ, ನಾರಾಯಣ ಸ್ವಾಮಿ, ಮಾಜಿ ಸಂಸದ ಎಲ್‌. ಶಿವರಾಮೇಗೌಡ, ಒಕ್ಕಲಿಗ ಸಂಘ ಸಂಸ್ಥೆಗಳ ಒಕ್ಕೂಟದರವಿಶಂಕರ್‌ ಇದ್ದರು.

*ಡಿಕೆಶಿ ವಿಷಯದಲ್ಲಿ ಜಾತಿ, ಸಮುದಾಯದ ನಡುವೆ ಗೊಂದಲ ಮಾಡಬಾರದು. ಅವರವರು ಮಾಡಿದ್ದು ಅವರವರು ಅನುಭವಿಸುತ್ತಾರೆ

-ಬಿ. ಎನ್‌. ಬಚ್ಚೇಗೌಡ, ಬಿಜೆಪಿ ಸಂಸದ

*ತಮಗೆ ಶಾಂತವೇರಿ ಗೋಪಾಲಗೌಡ, ಕುವೆಂಪು, ಕೆಂಗಲ್ ಹನುಮಂತಯ್ಯ ಅವರಂಥ ಮಹನೀಯರು ಆದರ್ಶರಾಗಬೇಕೋ ಅಥವಾ ಇನ್ಯಾರೋ ಆದರ್ಶರಾಗಬೇಕೋ ಎಂಬುದನ್ನು ಒಕ್ಕಲಿಗರು ನಿರ್ಧರಿಸಲಿ

-ಸಿ. ಟಿ. ರವಿ, ಪ್ರವಾಸೋದ್ಯಮ ಸಚಿವ

‘ಡಿಕೆಶಿಗಾಗಿ ಕಾನೂನು ಬದಲಿಸಲಾಗದು’

ಶಾಸಕ ಡಿ.ಕೆ.ಶಿವಕುಮಾರ್ ಬಂಧನ ವಿಚಾರವನ್ನು ಕಾಂಗ್ರೆಸ್ ಮುಖಂಡರು ಜಾತಿ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಈ ರೀತಿಯ ಹೋರಾಟಕ್ಕೆ ಮುಂದಾಗಿದ್ದು ಸರಿಯಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ ಅಸಮಾಧಾನ ವ್ಯಕ್ತಪಡಿಸಿದರು.

ಶಿವಕುಮಾರ್ ಅವರಿಗಾಗಿ ದೇಶದ ಕಾನೂನು ಬದಲಿಸಲು ಸಾಧ್ಯವಿಲ್ಲ. ದೆಹಲಿಯ ಮನೆಯಲ್ಲಿ ಸಿಕ್ಕಿರುವ ಹಣದ ಬಗ್ಗೆ ಸರಿಯಾದ ಮಾಹಿತಿ ಕೊಟ್ಟಿದ್ದರೆ ಇಡಿ ಬಂಧಿಸುತ್ತಿರಲಿಲ್ಲ ಎಂದರು.

ಆಹ್ವಾನ ನೀಡಿದ್ದರೆ ಹೋಗುತ್ತಿದ್ದೆ: ಕುಮಾರಸ್ವಾಮಿ

ರಾಮನಗರ: ‘ಶಿವಕುಮಾರ್ ಬಂಧನ ಖಂಡಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಗೆ ಮೊದಲೇ ಆಹ್ವಾನ ನೀಡಿದ್ದರೆ ಹೋಗುತ್ತಿದ್ದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ. ಕುಮಾರಸ್ವಾಮಿ ಹೇಳಿದರು.

ಚನ್ನಪಟ್ಟಣದಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ‘ಸಂಘಟಕರು ತರಾತುರಿಯಲ್ಲಿ ಕಾರ್ಯಕ್ರಮ ನಿಗದಿ ಮಾಡಿದ್ದಾರೆ. ನನ್ನ ಗಮನಕ್ಕೆ ತಂದಿಲ್ಲ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಜೆಡಿಎಸ್ ಕಾರ್ಯಕರ್ತರಿಗೆ ತಿಳಿಸಿದ್ದೇನೆ’ ಎಂದರು. ‘ಬಿಜೆಪಿಯವರು ನನ್ನನ್ನು ಪ್ರಕರಣಗಳಲ್ಲಿ ಸಿಲುಕಿಸಲು ಸಾಧ್ಯವಿಲ್ಲ. ನನ್ನ ಜೀವನದಲ್ಲಿ ನಾನೆಂದೂ ತಪ್ಪುಗಳಿಗೆ ಅವಕಾಶ ಕೊಟ್ಟಿಲ್ಲ’ ಎಂದರು.

ಮೇಲ್ಮನವಿ: ಸೆ.16ಕ್ಕೆ ವಿಚಾರಣೆ

ಬೆಂಗಳೂರು: ನವದೆಹಲಿಯ ನಿವಾಸಗಳಲ್ಲಿ ₹ 8.60 ಕೋಟಿ ಮೊತ್ತದ ದಾಖಲೆ ಇಲ್ಲದ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ನೀಡಿದ್ದ ಸಮನ್ಸ್ ರದ್ದುಪಡಿಸಲು ಕೋರಿದ ಮೇಲ್ಮನವಿ ವಿಚಾರಣೆಯನ್ನು ಹೈಕೋರ್ಟ್‌ ಇದೇ 16ಕ್ಕೆ ಮುಂದೂಡಿದೆ.

ಈ ಸಂಬಂಧ ಡಿ.ಕೆ. ಶಿವಕುಮಾರ್ ಸಲ್ಲಿಸಿದ್ದ ಮೇಲ್ಮನವಿ, ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್. ಓಕಾ ಹಾಗೂ ನ್ಯಾಯಮೂರ್ತಿ ಪಿ.ಎಂ. ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ ಪೀಠದ ಮುಂದೆ ಬುಧವಾರ ವಿಚಾರಣೆಗೆ ನಿಗದಿಯಾಗಿತ್ತು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಪ್ರಕರಣದ ಉಳಿದ ಆರೋಪಿಗಳ ಮೇಲ್ಮನವಿಗಳು
ಇದೇ 16ರಂದು ವಿಚಾರಣೆಗೆ ನಿಗದಿಯಾಗಿವೆ.

ಕಾನೂನು ಎಲ್ಲರಿಗೂ ಅನ್ವಯವಾಗಲಿ: ಡಿ.ಕೆ. ಸುರೇಶ

ನವದೆಹಲಿ: ‘ಅಪ್ಪನ ಆಸ್ತಿ ಮಗನಿಗೆ, ಗಂಡನ ಆಸ್ತಿ ಹೆಂಡತಿಗೆ, ತಾಯಿಯ ಆಸ್ತಿ ಮಗಳಿಗೆ, ಅಣ್ಣನ ಆಸ್ತಿ ತಮ್ಮನಿಗೆ ನೀಡುವುದನ್ನು ಬೇನಾಮಿ ಎಂದು ಕರೆಯುವುದಾದರೆ ಬಹುತೇಕ ರಾಜಕಾರಣಿಗಳು ಮತ್ತು ಅಧಿಕಾರಿಗಳು ಗಳಿಸಿರುವ ಆಸ್ತಿಯು ಅವರವರ ಮಕ್ಕಳು, ಸಂಬಂಧಿಗಳ ಹೆಸರಲ್ಲಿ ನೋಂದಣಿ ಆಗಿರುವುದನ್ನೂ ಪ್ರಶ್ನಿಸುವ ಅಗತ್ಯವಿದೆ’ ಎಂದು ಸಂಸದ ಡಿ.ಕೆ. ಸುರೇಶ ಅಭಿಪ್ರಾಯವಿದು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜಕೀಯ ಕಾರಣಗಳಿಂದಲೇ ಸೋದರನನ್ನು ಬಂಧಿಸಲಾಗಿದೆ. ಸಂಬಂಧಿಗಳ ಹೆಸರಲ್ಲಿ ಹಣ, ಆಸ್ತಿ ಇದೆ ಎಂಬ ಕಾರಣಕ್ಕೆ ತನಿಖೆ ನಡೆಸಲಾಗುತ್ತಿದೆ. ಕಾನೂನು ಕ್ರಮಗಳು ಕೇವಲ ನಮ್ಮ ಕುಟುಂಬದ ವಿರುದ್ಧ ಮಾತ್ರವಲ್ಲ; ಎಲ್ಲರಿಗೂ ಅನ್ವಯವಾಗಬೇಕಿದೆ. ಇಂತಹ ಬೆಳವಣಿಗೆಯು ಇತರರ ವಿರುದ್ಧದ ತನಿಖೆಗೂ ನಾಂದಿಯಾಗಬೇಕು’ ಎಂದು ಹೇಳಿದರು.

‘ಒಕ್ಕಲಿಗ ಸಮುದಾಯದವರಿಗೆ ಯಾರು ಆದರ್ಶ?’

ಮೈಸೂರು: ‘ತಮಗೆ ಶಾಂತವೇರಿ ಗೋಪಾಲಗೌಡ, ಕುವೆಂಪು, ಕೆಂಗಲ್ ಹನುಮಂತಯ್ಯ ಅವರಂಥ ಮಹನೀಯರು ಆದರ್ಶರಾಗಬೇಕೋ ಅಥವಾ ಇನ್ಯಾರೋ ಆದರ್ಶರಾಗಬೇಕೋ ಎಂಬುದನ್ನು ಒಕ್ಕಲಿಗ ಸಮುದಾಯದವರೇ ನಿರ್ಧರಿಸಲಿ’ ಎಂದು ಸಚಿವ ಸಿ.ಟಿ.ರವಿ ಬುಧವಾರ ಇಲ್ಲಿ ಹೇಳಿದರು.

ಡಿ.ಕೆ.ಶಿವಕುಮಾರ್‌ ಬಂಧನ ಖಂಡಿಸಿ ಪ್ರತಿಭಟನೆ ನಡೆಸುತ್ತಿರುವವರಿಗೆ ಮಾರ್ಮಿಕವಾಗಿ ತಿರುಗೇಟು ನೀಡಿದ ಅವರು, ‘ಸತ್ಯವಂತರಿಗೆ ಇದು ಕಾಲವಲ್ಲ. ಕೆಲ ಸಂದರ್ಭಗಳಲ್ಲಿ ಸತ್ಯ ಹೇಳಿದರೆ ಅದು ಅಪಥ್ಯವಾಗುತ್ತದೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು; ಉಪ್ಪು ತಿಂದವರು ನೀರು ಕುಡಿಯಬೇಕು. ಅದರಲ್ಲಿ ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ ಎಂಬುದು ಇಲ್ಲ’ ಎಂದರು.

‘ಜಾರಿ ನಿರ್ದೇಶನಾಲಯಕ್ಕೆ ಯಾವ ಜಾತಿ ಇದೆ? ಅದು ಯಾವ ಪಕ್ಷಕ್ಕೆ ಸೇರಿದೆ? ಈ ಸಂಸ್ಥೆಯನ್ನು ಹುಟ್ಟುಹಾಕಿದವರು ಯಾರು? ತನಿಖೆ ಮಾಡುವುದು ತಪ್ಪು ಎಂದರೆ ಹೇಗೆ’ ಎಂದು ಪ್ರಶ್ನಿಸಿದರು.

ಹೊಸ ನಿಯಮದಿಂದಾಗಿ ಸಂಚಾರ ಪೊಲೀಸರು ಭಾರಿ ದಂಡ ವಸೂಲಿ ಮಾಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ‘ತಪ್ಪು ಮಾಡದವರಿಗೆ ದಂಡದ ಪ್ರಶ್ನೆಯೇ ಬರುವುದಿಲ್ಲ. ನಾನೂ ಈ ಮೊದಲು ಸೀಟ್ ಬೆಲ್ಟ್ ಹಾಕಿಕೊಳ್ಳುತ್ತಿರಲಿಲ್ಲ. ದಂಡ ಹೆಚ್ಚಾದ ಮೇಲೆ ಕಡ್ಡಾಯವಾಗಿ ಹಾಕುತ್ತಿದ್ದೇನೆ. ತಪ್ಪು ಮಾಡಿದರೆ ಮೊದಲು ನನ್ನಂಥವರಿಗೆ ದಂಡ ಹಾಕಬೇಕು. ಅದು ಮಂತ್ರಿ ಆಗಿರಬಹುದು, ಮುಖ್ಯಮಂತ್ರಿ ಇರಬಹುದು’ ಎಂದರು.

ಹಗರಣದಲ್ಲಿ ಸಿಲುಕಿಸಲು ಅಸಾಧ್ಯ: ಎಚ್‌ಡಿಕೆ

ಚನ್ನಪಟ್ಟಣ: ‘ನನ್ನನ್ನು ಯಾವುದೇ ಹಗರಣಗಳಲ್ಲಿ ಸಿಲುಕಿಸಲು ಸಾಧ್ಯವಿಲ್ಲ’ ಎಂದು ಶಾಸಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನನ್ನು ಹಗರಣಗಳಲ್ಲಿ ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ. ಆದರೆ, ಅದು ಸಾಧ್ಯವಾಗುವುದಿಲ್ಲ. ನನ್ನ ಜೀವನದಲ್ಲಿ ತಪ್ಪುಗಳಿಗೆ ಅವಕಾಶ ಕೊಟ್ಟಿಲ್ಲ. ಇಂತಹ ಪ್ರಯತ್ನಗಳೂ ಸಫಲವಾಗುವುದಿಲ್ಲ. ಇದಕ್ಕೆಲ್ಲ ನಾನು ಹೆದರುವುದಿಲ್ಲ’ ಎಂದು ಹೇಳಿದರು.

ಆಹ್ವಾನ ನೀಡಿಲ್ಲ: ಬೆಂಗಳೂರಿನಲ್ಲಿ ನಡೆದ ಒಕ್ಕಲಿಗರ ಪ್ರತಿಭಟನಾ ರ‍್ಯಾಲಿಗೆ ನನಗೆ ಆಹ್ವಾನ ನೀಡಿರಲಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರ ನೀಡಿದರು.

‘ರ‍್ಯಾಲಿಯ ಬಗ್ಗೆ ನನಗೆ ತಿಳಿಸದೆ ತರಾತುರಿಯಲ್ಲಿ ಕಾರ್ಯಕ್ರಮ ರೂಪಿಸಿದ್ದಾರೆ. ನನಗೆ ಮೊದಲೇ ತಿಳಿಸಿ, ಆಹ್ವಾನ ನೀಡಿದ್ದರೆ ಭಾಗಿಯಾಗುತ್ತಿದ್ದೆ. ಚನ್ನಪಟ್ಟಣದಲ್ಲಿ ನನ್ನ ಕಾರ್ಯಕ್ರಮ ಮೊದಲೇ ನಿಗದಿಯಾಗಿದ್ದದಿಂದ ಕಾರ್ಯಕರ್ತರಿಗೆ ರ‍್ಯಾಲಿಯಲ್ಲಿ ಭಾಗವಹಿಸಲು ಹೇಳಿದ್ದೇನೆ’ ಎಂದರು.

ಋಣಮುಕ್ತ ಕಾಯ್ದೆಯನ್ನು ಬಡವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಜಾರಿಗೆ ತಂದಿದ್ದೇನೆ. ಜಮೀನು ಇಲ್ಲದವರು, ಬಡವರು ಉಪ ವಿಭಾಗಾಧಿಕಾರಿ (ಎ.ಸಿ) ಕಚೇರಿಗೆ ಮಾಹಿತಿ ನೀಡಿದರೆ ಒಂದು ವರ್ಷದಲ್ಲಿ ಸಾಲ ಮನ್ನಾ ಆಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT