ಶನಿವಾರ, ನವೆಂಬರ್ 23, 2019
17 °C

ಕನ್ನಡ ಭಾಷಾ ದಿವಸ ಏಕಿಲ್ಲ? ಹಿಂದಿ ರಾಷ್ಟ್ರ ಭಾಷೆಯಲ್ಲ: ರಾಜಕೀಯ ನಾಯಕರ ಟ್ವೀಟ್‌

Published:
Updated:

ಬೆಂಗಳೂರು: ಇಂದು ಕೇಂದ್ರ ಸರ್ಕಾರದ ವತಿಯಿಂದ ಆಚರಣೆಯಾಗುತ್ತಿರುವ ‘ಹಿಂದಿ ದಿವಸ್‌ಗೆ’ ರಾಜ್ಯದ ರಾಜಕೀಯ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದು, ಹಿಂದಿಯನ್ನು ಹೇರದಂತೆ ಒತ್ತಾಯಿಸಿದ್ದಾರೆ. 

‘ಸಂವಿಧಾನದಲ್ಲಿ ಹಿಂದಿಯೊಂದಿಗೆ ಅಧಿಕೃತ ಭಾಷೆ ಎಂದು ಪರಿಗಣಿತವಾಗಿರುವ ಕನ್ನಡದ ಭಾಷಾ ದಿವಸವನ್ನು ಎಂದು ಆಚರಿಸುತ್ತೀರಿ?’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪ್ರಶ್ನೆ ಮಾಡಿದ್ದಾರೆ. ‘ಹಿಂದಿ ರಾಷ್ಟ್ರ ಭಾಷೆಯಲ್ಲ. ಅದನ್ನು ಹೇರಬೇಡಿ,’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ. 

ಯಾರ ಟ್ವೀಟ್‌ನಲ್ಲಿ ಏನಿದೆ?   

‘ಇಂದು ದೇಶದಾದ್ಯಂತ ಕೇಂದ್ರ ಸರ್ಕಾರ ‘ಹಿಂದಿ ದಿವಸ್’ ಆಚರಿಸುತ್ತಿದೆ. ಸಂವಿಧಾನದಲ್ಲಿ ಹಿಂದಿಯೊಂದಿಗೆ ಅಧಿಕೃತ ಭಾಷೆ ಎನಿಸಿಕೊಂಡಿರುವ ಕನ್ನಡದ ಭಾಷಾ ದಿವಸವನ್ನು ದೇಶಾದ್ಯಂತ ಯಾವಾಗ ಆಚರಿಸುತ್ತೀರಿ ನರೇಂದ್ರ ಮೋದಿಯವರೇ? ಕನ್ನಡಿಗರೂ ಈ ಒಕ್ಕೂಟ ವ್ಯವಸ್ಥೆಯ ಭಾಗವಾಗಿದ್ದಾರೆ ನೆನಪಿರಲಿ,’ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಟ್ವೀಟ್‌ ಜತೆಗೇ #StopHindiImposition #HindiDiwas #ಕನ್ನಡದಿನ ಎಂಬ ಟ್ಯಾಗ್‌ಗಳನ್ನು ಸೇರಿಸಿದ್ದಾರೆ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ. 
 

ಹಿಂದಿ ರಾಷ್ಟ್ರಭಾಷೆ ಎಂಬ ಸುಳ್ಳು ಪ್ರಚಾರ ನಿಲ್ಲಲಿ, ಅದು ಕನ್ನಡದಂತೆಯೇ 22 ಅಧಿಕೃತ ಭಾಷೆಗಳಲ್ಲಿ ಒಂದು ಎನ್ನುವುದು ತಿಳಿದಿರಲಿ. ಸುಳ್ಳು-ತಪ್ಪುಮಾಹಿತಿ ಮೂಲಕ ಭಾಷೆಯನ್ನು ಬೆಳೆಸಲಾಗದು. ಭಾಷೆ ಪರಸ್ಪರ ಪ್ರೀತಿ ಮತ್ತು ಕೊಡು-ಕೊಳ್ಳುವಿಕೆಯಿಂದ ಬೆಳೆಯುತ್ತದೆ. ಭಾಷೆಗಳು ಜ್ಞಾನದ ಕಿಂಡಿಗಳು, ಅದನ್ನು ಪ್ರೀತಿಯಿಂದ ಬೆಳೆಸಬೇಕೇ ಹೊರತು ಒತ್ತಡ-ಒತ್ತಾಯದ ಮೂಲಕ ಅಲ್ಲ. ನಮ್ಮ ವಿರೋಧ ಹಿಂದಿ ಎಂಬ ಭಾಷೆ ಬಗ್ಗೆ ಅಲ್ಲ, ಅದರ ಬಲವಂತದ ಹೇರಿಕೆ ಬಗ್ಗೆ. ಹಿಂದಿ ದಿವಸದ ಆಚರಣೆಗೆ ನನ್ನ ವಿರೋಧವೂ ಇದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.  ಈ ಟ್ವೀಟ್‌ನೊಂದಿಗೆ #HindiDiwas #HindiImposition ಟ್ಯಾಗ್‌ಗಳನ್ನೂ ಅವರು ಸೇರಿಸಿದ್ದಾರೆ. 

ಪ್ರತಿಕ್ರಿಯಿಸಿ (+)