ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಲ ದಿಢೀರ್ ಕುಸಿತ; ನೀರಿಗೆ ಹಾಹಾಕಾರ

ಪಶ್ವಿಮಘಟ್ಟದ ಆಗುಂಬೆ, ಹುಲಿಕಲ್‌ ಪ್ರದೇಶದಲ್ಲೇ ಬರದ ಸ್ಥಿತಿ
Last Updated 27 ಮಾರ್ಚ್ 2019, 19:56 IST
ಅಕ್ಷರ ಗಾತ್ರ

ಶಿವಮೊಗ್ಗ:ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಬೀಳುವ ಪಶ್ಚಿಮಘಟ್ಟದ ಸಹ್ಯಾದ್ರಿ ಪರ್ವತ ಶ್ರೇಣಿಯ ವ್ಯಾಪ್ತಿಯಲ್ಲಿ ಅಂತರ್ಜಲ ದಿಢೀರ್ ಕುಸಿತ ಕಂಡಿದೆ. ಪರಿಣಾಮ ಆ ಭಾಗದ ನೂರಾರು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ.

ಕರ್ನಾಟಕದ ಚಿರಾಪುಂಜಿ ಎಂದೇ ಖ್ಯಾತಿ ಪಡೆದ ಆಗುಂಬೆ, ದಶಕದಿಂದ ಈಚೆಗೆ ದಾಖಲೆ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಹುಲಿಕಲ್, ಮಾಸ್ತಿಕಟ್ಟೆ ಪ್ರದೇಶದ ಗ್ರಾಮಗಳಲ್ಲೂ ನೀರಿಗೆ ಬರ ಎದುರಾಗಿದೆ.

ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಹರಿಯುವ ಮಲಪಹಾರಿ, ನಾಬಳ, ನಾಲೂರು, ಮಾಲತಿ ನದಿಗಳ ಹರಿವು ನಿಂತಿದೆ. ಜಿಲ್ಲೆಯ ಜೀವನದಿಗಳಾದ ಶರಾವತಿ, ತುಂಗಾ ನದಿಗಳ ಹರಿವೂ ಕ್ಷೀಣಿಸಿದೆ. ತೆರೆದ ಬಾವಿಗಳಲ್ಲಿ ನೀರು ಪಾತಾಳ ಕಂಡಿದೆ. ಚಕ್ರ, ವರಾಹಿ, ಸಾವೆಹಕ್ಲು, ಮಾಣಿ ಜಲಾಶಯಗಳು ಬರಿದಾಗುತ್ತಿವೆ. ಹೊಸನಗರ, ತೀರ್ಥಹಳ್ಳಿ, ಸಾಗರ ತಾಲ್ಲೂಕು ವ್ಯಾಪ್ತಿಯ ನೂರಾರು ಗ್ರಾಮಗಳ ಕೊಳವೆಬಾವಿಗಳು ಒಂದು ವಾರದ ಒಳಗೆ ಬತ್ತಿಹೋಗಿವೆ.

ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ, ಮಲ್ಲಂದೂರು, ಕೋಣಂದೂರು, ಕಲ್ಲುಕೊಪ್ಪ, ಸಿಂಗನಬಿದರೆ, ಮುತ್ತೂರು, ಹೊಸನಗರ ತಾಲ್ಲೂಕಿನ ಮಾವಿನಹೊಳೆ, ಬ್ರಹ್ಮೇಶ್ವರ, ತ್ರಿಣಿವೆ, ಹೆಬ್ಬಳ ಬೈಲು, ನೇರಲಮನೆ, ಕುಕ್ಕಳಲೆ, ಜೇನಿ ಮೊದಲಾದ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಾಕಷ್ಟು ತೊಂದರೆಯಾಗಿದೆ. ಹಲವು ಹಳ್ಳಿಗಳಲ್ಲಿ ನಾಲ್ಕೈ ಕಿ.ಮೀ. ದೂರದ ಖಾಸಗಿ ಜಮೀನುಗಳ ಕೊಳವೆ ಬಾವಿಗಳಿಂದ ನೀರು ಹೊತ್ತು ತರುತ್ತಿದ್ದಾರೆ. ಕುಡುಮಲ್ಲಿಗೆ ಹೋಬಳಿ ವ್ಯಾಪ್ತಿಯ ಕುಮ್ಮನಹಳ್ಳಿಯಲ್ಲಿ ಎರಡು ವರ್ಷಗಳಿಂದ ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ.

ಗುರುತಿಸಿದ್ದಕ್ಕಿಂತ ಹೆಚ್ಚು ಸಮಸ್ಯೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಸಾಕಷ್ಟು ಮೊದಲೇ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾದ 216 ಗ್ರಾಮಗಳನ್ನು ಗುರುತಿಸಿದ್ದರು. ಇದರಲ್ಲಿ ಶಿವಮೊಗ್ಗದ 16, ಭದ್ರಾವತಿಯ 44, ಸಾಗರದ 69, ಹೊಸನಗರದ 12, ಶಿಕಾರಿಪುರದ 32 ಹಾಗೂ ಸೊರಬ ತಾಲ್ಲೂಕಿನ 43 ಗ್ರಾಮಗಳಿವೆ. ಬೇಸಿಗೆಯಲ್ಲಿ ಅಗತ್ಯ ನೀರು ಪೂರೈಸಲು ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು. ಇದರ ಮಧ್ಯೆ ದಿಢೀರ್ ಅಂತರ್ಜಲ ಕುಸಿತವಾಗಿ ಗ್ರಾಮಗಳಲ್ಲಿನ ಕೊಳವೆಬಾವಿಗಳು, ತೆರೆದ ಬಾವಿಗಳು ಬತ್ತಿ ಹೋಗುತ್ತಿವೆ. 15 ದಿನಗಳಲ್ಲೇ 150ಕ್ಕೂ ಹೆಚ್ಚು ಗ್ರಾಮಗಳಲ್ಲಿ ಇಂತಹ ಸ್ಥಿತಿ ತಲೆದೋರಿದೆ. ಚುನಾವಣಾ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳು, ಸಿಬ್ಬಂದಿ ಹೊಸ ಸಂಕಷ್ಟ ಎದುರಿಸಲು ಪರದಾಡುತ್ತಿದ್ದಾರೆ.

* ಆಗುಂಬೆ ಭಾಗದ ಎಲ್ಲ ಜಲಮೂಲಗಳು ಬರಿದಾಗಿವೆ. ಕೊಳವೆಬಾವಿಗಳು ಬತ್ತಿದ ಕಾರಣ ಮೇಗರವಳ್ಳಿ, ಕೊರನಕೋಟೆ ಬಳಿಯ ಚಕ್ರ ಹಿನ್ನೀರಿನಿಂದ ನೀರು ತರಬೇಕಿದೆ

- ಹಸಿರುಮನೆ ನಂದನ್, ಗುಂಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT