ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರತ್ವ ಕಿಚ್ಚು: ಮಕ್ಕಳ ಪ್ರವಾಸ ಮೊಟಕು

ಶೈಕ್ಷಣಿಕ ಪ್ರವಾಸಕ್ಕೆ ನೀಡಿದ್ದ ಕಾಲಾವಕಾಶ ಡಿಸೆಂಬರ್‌ ಅಂತ್ಯಕ್ಕೆ ಮುಕ್ತಾಯ
Last Updated 1 ಜನವರಿ 2020, 21:59 IST
ಅಕ್ಷರ ಗಾತ್ರ

ಚಿತ್ರದುರ್ಗ: ಪೌರತ್ವ (ತಿದ್ದುಪಡಿ) ಕಾಯ್ದೆಗೆ ವರ್ಷಾಂತ್ಯದಲ್ಲಿ ವ್ಯಕ್ತವಾದ ವಿರೋಧದಿಂದ ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸ ಮೊಟಕುಗೊಂಡಿದೆ. ಪ್ರವಾಸಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ನೀಡಿದ್ದ ಅವಧಿ ಡಿಸೆಂಬರ್‌ ಅಂತ್ಯಕ್ಕೆ ಕೊನೆಗೊಂಡಿದ್ದು, ಪ್ರವಾಸಿ ತಾಣ ಕಣ್ತುಂಬಿಕೊಳ್ಳುವ ಬಹುತೇಕ ಮಕ್ಕಳ ಕನಸು ಕೈಗೂಡಲಿಲ್ಲ.

ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿರುವ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ಪ್ರವಾಸಕ್ಕೆ ಜನವರಿಯಲ್ಲಿ ಕೂಡ ಅವಕಾಶ ಕಲ್ಪಿಸಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಶಾಲಾ–ಕಾಲೇಜು ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತೆ ಕಾಲಾವಕಾಶ ನೀಡಿಲ್ಲ.

ಸರ್ಕಾರಿ, ಖಾಸಗಿ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳು ಸಾಮಾನ್ಯವಾಗಿ ಪ್ರತಿ ಡಿಸೆಂಬರ್‌ನಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ತೆರಳುತ್ತಾರೆ. 2019ರ ಡಿಸೆಂಬರ್‌ ಎರಡನೇ ವಾರದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆಗೆ ಸಂಬಂಧಿಸಿದ ಹೋರಾಟ ರಾಜ್ಯದಲ್ಲಿ ಭುಗಿಲೆದ್ದಿತು. ಹಲವು ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಾಗಿ ಪ್ರವಾಸಕ್ಕೆ ತೆರಳಿದ್ದ ಮಕ್ಕಳು ಸಮಸ್ಯೆಗೆ ಸಿಲುಕಿದ್ದರು. ಹೀಗಾಗಿ, ಪ್ರವಾಸಕ್ಕೆ ಅನುಮತಿ ನಿರಾಕರಿಸಲಾಗಿತ್ತು.

‘ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶೈಕ್ಷಣಿಕ ಪ್ರವಾಸ ತೆರಳುವುದು ಸಮಂಜಸವಲ್ಲ. ಪರಿಸ್ಥಿತಿ ತಿಳಿಯಾಗುವವರೆಗೂ ಪ್ರವಾಸ ರದ್ದುಪಡಿಸಿ’ ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಸೂಚನೆ ನೀಡಿತ್ತು.

ರಾಜ್ಯದ ಬಹುತೇಕ ಜಿಲ್ಲೆಗಳು ಸಹಜ ಸ್ಥಿತಿಗೆ ಮರಳಿದ್ದರಿಂದ ವಸತಿ ಶಾಲೆ ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಮತ್ತೆ ಅವಕಾಶ ಸಿಕ್ಕಿದೆ. ಆದರೆ, ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯಾಪ್ತಿಯ ಮಕ್ಕಳು ಮಾತ್ರ ಪ್ರವಾಸದಿಂದ ವಂಚಿತರಾಗಿದ್ದಾರೆ.

‘ರಾಜ್ಯದ ಹಲವೆಡೆ ಪ್ರತಿಭಟನೆ ಆರಂಭವಾಗಿದ್ದರಿಂದ ಶೈಕ್ಷಣಿಕ ಪ್ರವಾಸಕ್ಕೆ ತೆರಳದಂತೆ ಸೂಚನೆ ನೀಡಲಾಗಿತ್ತು. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಹೀಗೆ ಮಾಡಲಾಗಿತ್ತು. ಪ್ರವಾಸಕ್ಕೆ ತೆರಳಲು ಇಲಾಖೆ ನಿಗದಿಪಡಿಸಿದ ಕಾಲಮಿತಿ ಡಿ.31ಕ್ಕೆ ಅಂತ್ಯವಾಗಿದೆ. ಹೀಗಾಗಿ, ಪ್ರವಾಸಕ್ಕೆ ಅನುಮತಿ ನೀಡುತ್ತಿಲ್ಲ’ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ ರೆಡ್ಡಿ.

ಪ್ರವಾಸಕ್ಕೆ ಸಂಬಂಧಿಸಿದಂತೆ ಇಲಾಖೆ ಕೆಲ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪೋಷಕರ ಒಪ್ಪಿಗೆ, ಸರ್ಕಾರಿ ಬಸ್ಸಿನಲ್ಲೇ ಪ್ರವಾಸಕ್ಕೆ ತೆರಳುವಂತೆ ನಿರ್ಬಂಧ ವಿಧಿಸಲಾಗಿದೆ. ಪೋಷಕರ ಸಭೆ ಕರೆದು ಸ್ಥಳ ನಿಗದಿ ಮಾಡುವಂತೆ ನಿಯಮ ರೂಪಿಸಿದೆ. ಹೀಗೆ, ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದ ಶಿಕ್ಷಕರು ಪರಿಸ್ಥಿತಿಯ ಕಾರಣಕ್ಕೆ ಈಗ ಕೈಚೆಲ್ಲಿದ್ದಾರೆ.

‘ಡಿಸೆಂಬರ್‌ ಮೂರನೇ ವಾರದಲ್ಲಿ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಲು ಸಿದ್ಧತೆ ಮಾಡಿಕೊಂಡಿದ್ದೆವು. ಮೈಸೂರು, ಶ್ರೀರಂಗಪಟ್ಟಣ, ಬೇಲೂರು, ಹಳೆಬೀಡಿಗೆ ಭೇಟಿ ನೀಡಲು ಯೋಜನೆ ರೂಪಿಸಿಕೊಂಡಿದ್ದೆವು. ಆದರೆ, ಅದೇ ಸಮಯಕ್ಕೆ ನಿಷೇಧಾಜ್ಞೆ ಜಾರಿಯಾಗಿದ್ದರಿಂದ ಪ್ರವಾಸ ರದ್ದುಪಡಿಸಿದೆವು. ಪರಿಸ್ಥಿತಿ ತಿಳಿಯಾಗಿದ್ದರಿಂದ ಮಕ್ಕಳು ಮತ್ತೆ ಪ್ರವಾಸದ ಪ್ರಸ್ತಾವ ಮುಂದಿಡುತ್ತಿದ್ದಾರೆ. ಆದರೆ, ಇಲಾಖೆ ಅನುಮತಿ ನೀಡುತ್ತಿಲ್ಲ’ ಎಂದು ಹಿರಿಯೂರು ತಾಲ್ಲೂಕಿನ ಶಿಕ್ಷಕರೊಬ್ಬರು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT