ಉಪ ಚುನಾವಣೆ: ಬಿಜೆಪಿ ಪಟ್ಟಿ ಅಂತಿಮ,‘ಮೈತ್ರಿಕೂಟ’ದಲ್ಲಿ ಭಿನ್ನಧ್ವನಿ

7

ಉಪ ಚುನಾವಣೆ: ಬಿಜೆಪಿ ಪಟ್ಟಿ ಅಂತಿಮ,‘ಮೈತ್ರಿಕೂಟ’ದಲ್ಲಿ ಭಿನ್ನಧ್ವನಿ

Published:
Updated:
Deccan Herald

ಬೆಂಗಳೂರು: ಮೂರು ಲೋಕಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಬಿಜೆಪಿ ಒಂದು ಹೆಜ್ಜೆ ಮುಂದಿದ್ದರೆ, ಮೈತ್ರಿ ಕೂಟದ ಪಕ್ಷಗಳಾದ ಜೆಡಿಎಸ್‌ ಹಾಗೂ ಕಾಂಗ್ರೆಸ್ ಗೊಂದಲದಲ್ಲೇ ಮುಳುಗಿವೆ.

ಉಪಚುನಾವಣೆಗೆ ಮಂಗಳವಾರ ಅಧಿಸೂಚನೆ ಹೊರಬಿದ್ದಿದೆ. ಆ ಬೆನ್ನಲ್ಲೆ, ಮೂರೂ ಪಕ್ಷಗಳಲ್ಲಿ ‘ಗೆಲ್ಲುವ ಅಭ್ಯರ್ಥಿ’ಗೆ ಹುಡುಕಾಟ ಚುರುಕುಗೊಂಡಿದೆ. ಆದರೆ, ‘ಮೈತ್ರಿ’ ರಾಜಕೀಯಕ್ಕೆ ಕಾಂಗ್ರೆಸ್‌ನಲ್ಲಿ ಒಡಕಿನ ಧ್ವನಿಯೂ ಕೇಳಿಬಂದಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಬಿ.ಎಸ್‌. ಯಡಿಯೂರಪ್ಪ ‍ಪುತ್ರ ಬಿ.ವೈ. ರಾಘವೇಂದ್ರ, ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಶಾಸಕ ಬಿ. ಶ್ರೀರಾಮುಲು ಸಹೋದರಿ ಶಾಂತಾ ಹಾಗೂ ಜಮಖಂಡಿ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಹೆಸರನ್ನು ರಾಜ್ಯ ಪ್ರಮುಖರ ಸಭೆಯಲ್ಲಿ ಮಂಗಳವಾರ ಅಂತಿಮಗೊಳಿಸಲಾಗಿದೆ. ಈ ಹೆಸರುಗಳನ್ನು ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಲಾಗುತ್ತದೆ.

ಮಂಡ್ಯ ಹಾಗೂ ರಾಮನಗರ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಜವಾಬ್ದಾರಿಯನ್ನು ಯಡಿಯೂರಪ್ಪ ಅವರಿಗೆ ವಹಿಸಲಾಗಿದೆ.

ಎರಡೂ ಕ್ಷೇತ್ರಗಳಲ್ಲಿ ಸ್ಥಳೀಯವಾಗಿ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಇವುಗಳನ್ನು ಗಮನಿಸಿ ರಾಜ್ಯ ಘಟಕದ ಅಧ್ಯಕ್ಷರು 2–3 ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ’ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಸುದ್ದಿಗಾರರಿಗೆ ತಿಳಿಸಿದರು.

ಜಮಖಂಡಿ ಕ್ಷೇತ್ರದಲ್ಲಿ ತಮ್ಮ ಸಹೋದರ ಸಂಗಮೇಶ ನಿರಾಣಿ ಅವರಿಗೆ ಟಿಕೆಟ್‌ ಕೊಡಬೇಕು ಎಂದು ಶಾಸಕ ಮುರುಗೇಶ ನಿರಾಣಿ ಪಟ್ಟು ಹಿಡಿದಿದ್ದರು. ಶ್ರೀಕಾಂತ ಕುಲಕರ್ಣಿ ಅವರನ್ನು ಕಣಕ್ಕೆ ಇಳಿಸಬೇಕು ಎಂದು ಸಂಘ ಪರಿವಾರದ ಮುಖಂಡರು ಒತ್ತಾಯಿಸಿದ್ದರು.

ರಾಮನಗರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಇದೇ 11ರಂದು ಬೆಳಿಗ್ಗೆ 10ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ಮಂಡ್ಯದಿಂದ ಲಕ್ಷ್ಮಿ ಅ‌ಶ್ವಿನ್‌ ಗೌಡ ಕಣಕ್ಕೆ ಇಳಿಯುವುದು ಬಹುತೇಕ ಖಚಿತ.

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ದಿನವಿಡೀ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌ ನಾಯಕರು ಚರ್ಚೆ ನಡೆಸಿದರು. ರಸ್ತೆ ಅಪಘಾತದಲ್ಲಿ ಮೃತಪಟ್ಟ ಶಾಸಕ ಸಿದ್ದು ನ್ಯಾಮಗೌಡ ಅವರ ‍ಪುತ್ರ ಆನಂದ ಸಿದ್ದು ನ್ಯಾಮಗೌಡ ಅವರನ್ನು ಜಮಖಂಡಿ ಕ್ಷೇತ್ರದ ಅಭ್ಯರ್ಥಿಯಾಗಿ ಪಕ್ಷ ಆಯ್ಕೆ ಮಾಡಿದೆ. ಅವರು ಇದೇ 16ರಂದು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು.

ರಾಮನಗರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ವಿಷಯದಲ್ಲಿ ಉಂಟಾಗಿದ್ದ ಗೊಂದಲಕ್ಕೆ ತೆರೆಬಿದ್ದಿದೆ. ವರಿಷ್ಠರ ತೀರ್ಮಾನಕ್ಕೆ ಬದ್ಧ ಎಂದು ವಿಧಾನಪರಿಷತ್‌ ಸದಸ್ಯ ಸಿ.ಎಂ. ಲಿಂಗಪ್ಪ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದ ಹುಸೇನ್‌ ತಿಳಿಸಿದ್ದಾರೆ. ಸಂಸದ ಡಿ.ಕೆ. ಸುರೇಶ್ ಕೂಡಾ ಅದಕ್ಕೆ ಧ್ವನಿಗೂಡಿಸಿದ್ದಾರೆ.

ಶಿವಮೊಗ್ಗ ಕ್ಷೇತ್ರದಲ್ಲಿ ಜೆಡಿಎಸ್‌ ಜೊತೆ ಮೈತ್ರಿ ವಿಷಯದಲ್ಲಿ ಕಾಂಗ್ರೆಸ್‌ನಲ್ಲಿ ಅಪಸ್ವರ ಕೇಳಿಸಿದೆ. ‘ಜಿಲ್ಲೆಯಲ್ಲಿ ಪಕ್ಷಕ್ಕೆ ನೆಲೆ ಇದೆ. ಯಾವುದೇ ಕಾರಣಕ್ಕೂ‌ ಕ್ಷೇತ್ರ ಬಿಟ್ಟುಕೊಡಬೇಡಿ’ ಎಂದು ಕೆಲವರು ವಾದಿಸಿದರು. ಒಮ್ಮತ ಮೂಡದ ಕಾರಣ ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಹೊಣೆಯನ್ನು ಜಿಲ್ಲೆಯ ‘ಉಸ್ತುವಾರಿ’ ಡಿ.ಕೆ. ಶಿವಕುಮಾರ್ ಹೆಗಲಿಗೆ ‘ಕೈ’ ನಾಯಕರು ವಹಿಸಿದ್ದಾರೆ.

ಮಂಡ್ಯ‌ ಲೋಕಸಭಾ ಕ್ಷೇತ್ರದಲ್ಲೂ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ಸ್ಥಳೀಯ ಕಾಂಗ್ರೆಸ್‌ ನಾಯಕರು ಒತ್ತಾಯಿಸಿದ್ದಾರೆ. ‘ಜಿಲ್ಲೆಯಲ್ಲಿ ಕ್ಷೇತ್ರದಲ್ಲಿ ಜೆಡಿಎಸ್‌ನದ್ದೇ ದರ್ಬಾರು‌. ಇದರಿಂದ ಕಾರ್ಯಕರ್ತರ ಸ್ಥೈರ್ಯ ಕುಗ್ಗುವಂತಾಗಿದೆ’ ಎಂದು ಅಹವಾಲು ಸಲ್ಲಿಸಿದ್ದಾರೆ. ‘ಮೈತ್ರಿಗೆ ವಿರೋಧ ಇಲ್ಲ. ಆದರೆ, ನಮ್ಮಲ್ಲೂ ಆಕಾಂಕ್ಷಿ ಅಭ್ಯರ್ಥಿಗಳಿದ್ದಾರೆ’ ಎಂದು ಸಭೆಯ ಬಳಿಕ ಮಾಜಿ ಸಚಿವ ಚೆಲುವರಾಯಸ್ವಾಮಿ ಪ್ರತಿಕ್ರಿಯಿಸಿದರು.

ಬಿಜೆಪಿ

ಶಿವಮೊಗ್ಗ: ಬಿ.ವೈ.ರಾಘವೇಂದ್ರ

ಬಳ್ಳಾರಿ: ಜೆ.ಶಾಂತಾ

ಜಮಖಂಡಿ: ಶ್ರೀಕಾಂತ ಕುಲಕರ್ಣಿ

ಮಂಡ್ಯ ಹಾಗೂ ರಾಮನಗರ ಅಭ್ಯರ್ಥಿ ಆಯ್ಕೆ ಹೊಣೆ ಬಿ.ಎಸ್‌.ಯಡಿಯೂರಪ್ಪ ಹೆಗಲಿಗೆ.

 
ಜೆಡಿಎಸ್‌

ರಾಮನಗರ: ಅನಿತಾ ಕುಮಾರಸ್ವಾಮಿ

ಮಂಡ್ಯ: ಲಕ್ಷ್ಮಿ ಅಶ್ವಿನ್‌ ಗೌಡ/ಎಲ್‌.ಆರ್‌.ಶಿವರಾಮೇಗೌಡ

 
ಕಾಂಗ್ರೆಸ್‌

ಶಿವಮೊಗ್ಗ: ಕಾಡಾ ಮಾಜಿ ಅಧ್ಯಕ್ಷ ಸುಂದರೇಶ್‌ ಅಥವಾ ಮಾಜಿ ಸಚಿವ ಕಿಮ್ಮನೆ ರತ್ನಾಕರ

ಬಳ್ಳಾರಿ: ಗ್ರಾಮಾಂತರ ಶಾಸಕ ನಾಗೇಂದ್ರ ಅವರ ಅಣ್ಣ ವೆಂಕಟೇಶ ಪ್ರಸಾದ್‌, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ನೆಟ್ಟಕಲ್ಲಪ್ಪ, ಕೂಡ್ಲಿಗಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದಿದ್ದ ಲೋಕೇಶ್‌.

ಜಮಖಂಡಿ: ಆನಂದ ನ್ಯಾಮಗೌಡ

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !