ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹305 ಕೋಟಿ ಮೌಲ್ಯದ ಆಸ್ತಿಯ ಒಡೆಯ! : ಡಿ.ಕೆ. ಸುರೇಶ್‌ಗೂ ಇ.ಡಿ. ಸಮನ್ಸ್‌

Last Updated 30 ಸೆಪ್ಟೆಂಬರ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ ಶಾಸಕ ಡಿ.ಕೆ.ಶಿವಕುಮಾರ್‌ ಕೊರಳಿಗೆ ಸುತ್ತಿಕೊಂಡಿರುವ ಜಾರಿ ನಿರ್ದೇಶನಾಲಯದ ಉರುಳು ದಿನೇ ದಿನೇ ಬಿಗಿಯಾಗುತ್ತಿರುವುದರ ಮಧ್ಯೆಯೇ ಅವರ ತಮ್ಮ, ಸಂಸದ ಡಿ.ಕೆ.ಸುರೇಶ್‌ ಅವರಿಗೂ ಇ.ಡಿ ಸಮನ್ಸ್‌ ಜಾರಿ ಮಾಡಿದೆ.

ಇದರಿಂದಾಗಿ ಶಿವಕುಮಾರ್ ಅವರ ಕುಟುಂಬಕ್ಕೆ ಇನ್ನಷ್ಟು ಸಂಕಷ್ಟ ಎದುರಾಗಿದೆ. ಅಕ್ಟೋಬರ್ 3ರಂದು ಗುರುವಾರ ಬೆಳಿಗ್ಗೆ 11ಕ್ಕೆ ದೆಹಲಿಯ ಇ.ಡಿ ಕಚೇರಿಗೆ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ. ಈ ಪ್ರಕರಣದಲ್ಲಿವಿಚಾರಣೆ ಎದುರಿಸುತ್ತಿರುವ ಶಿವಕುಮಾರ್‌ ಕುಟುಂಬದ ಸದಸ್ಯರಲ್ಲಿ ಸುರೇಶ್‌ ಮೂರನೆಯವರು. ಇದಕ್ಕೂ ಮುನ್ನ ಶಿವಕುಮಾರ್‌ ಅವರ ಪುತ್ರಿ ಐಶ್ವರ್ಯಾ ಅವರೂ ವಿಚಾರಣೆ ಎದುರಿಸಿದ್ದರು.

ಶಿವಕುಮಾರ್ ಹಾಗೂ ಅವರ ಆಪ್ತರಿಗೆ ಸೇರಿದ ದೆಹಲಿ ಮನೆಗಳಲ್ಲಿ 2017ರ ಆಗಸ್ಟ್‌ 2ರಂದು ಆದಾಯ ತೆರಿಗೆ ಅಧಿಕಾರಿಗಳು₹ 8.60 ಕೋಟಿ ಅಕ್ರಮ ಹಣ ವಶಪಡಿಸಿಕೊಂಡ ಬಳಿಕ ಇ.ಡಿ ತನಿಖೆ ನಡೆಯುತ್ತಿದೆ. ಆ ಸಮಯದಲ್ಲಿ ಸುರೇಶ್‌ ಅವರ ಮನೆಯಲ್ಲೂ ₹ 21 ಲಕ್ಷ ನಗದು ಸಿಕ್ಕಿತ್ತು.

ಶಿವಕುಮಾರ್‌ ಅವರ ಜಾಮೀನು ಅರ್ಜಿ ವಿಚಾರಣೆ ವೇಳೆ ದೆಹಲಿ ಕೋರ್ಟ್‌ಗೆ ಹಾಜರಾಗಿದ್ದ ಇ.ಡಿ ಪರ ವಕೀಲ ನಟರಾಜ್‌ ಅವರು, ಸುರೇಶ್‌ ಅವರ ಹೆಸರಿನಲ್ಲಿ 27ಅಸ್ತಿಗಳಿದ್ದು, ಕೆಲವು ಮಾತ್ರ ಪಿತ್ರಾರ್ಜಿತವಾಗಿ ಬಂದಿವೆ. ಉಳಿದವನ್ನು ಹಣ ನೀಡಿ ಖರೀದಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯಬೇಕಿದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸುರೇಶ್‌ಗೂ ನೋಟಿಸ್‌ ನೀಡಲಾಗಿದೆ ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.

2019ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿ ಚುನಾಯಿತರಾಗಿರುವ ಸುರೇಶ್‌, ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ₹ 305 ಕೋಟಿ ಮೌಲ್ಯದ ಸ್ಥಿರಾಸ್ತಿ, ₹ 51 ಕೋಟಿ ಸಾಲ ಇರುವುದಾಗಿ ಘೋಷಿಸಿದ್ದರು. ಕೃಷಿಯೇತರ ಜಮೀನು ₹ 248 ಕೋಟಿ, ಕೃಷಿ ಜಮೀನು ₹ 4.19 ಕೋಟಿ, ₹ 35 ಕೋಟಿ ಬಾಳುವ ಏಳು ವಾಣಿಜ್ಯ ಕಟ್ಟಡಗಳು, ₹ 16 ಕೋಟಿ ಮೌಲ್ಯದ ಎರಡು ವಸತಿ ಕಟ್ಟಡಗಳು ಇರುವುದಾಗಿ ಹೇಳಿದ್ದರು.

ಉಷಾ ಶಿವಕುಮಾರ್‌ ಅವರಿಂದ ₹ 11 ಕೋಟಿ ಸಾಲ ಪಡೆಯಲಾಗಿದೆ. ಐಶ್ವರ್ಯಾ ಅವರಿಗೆ ₹ 6.87 ಕೋಟಿ, ಡಿಕೆಶಿ ಅವರಿಗೆ ₹ 1.03 ಕೋಟಿ, ತಾಯಿ ಗೌರಮ್ಮ ಅವರಿಗೆ ₹ 4.86 ಕೋಟಿ ಸಾಲ ನೀಡಲಾಗಿದೆ. ಹೊಸಕೆರೆ ಹಳ್ಳಿ ಆಸ್ತಿ ಮಾರಾಟ ಸಂಬಂಧ ಶೋಭಾ ಡೆವಲಪರ್ಸ್‌ನಿಂದ ₹ 16ಕೋಟಿ ಮುಂಗಡ ಪಡೆದಿರುವುದಾಗಿ ಮಾಹಿತಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT