ಬುಧವಾರ, ಮಾರ್ಚ್ 22, 2023
21 °C
ಈ ಮಳೆಗಾಲದಲ್ಲೇ ನೀರು ಹರಿಸಲು ಸಿದ್ಧತೆ

ವಾಣಿ ವಿಲಾಸ ಸಾಗರಕ್ಕೆ ಎತ್ತಿನಹೊಳೆ ನೀರು!

ಮಂಜುನಾಥ ಹೆಬ್ಬಾರ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎತ್ತಿನಹೊಳೆ ಯೋಜನೆಯಿಂದ ಲಭ್ಯವಾಗುವ ನೀರನ್ನು ಈ ವರ್ಷ ಚಿತ್ರದುರ್ಗ ಜಿಲ್ಲೆಯ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಹರಿಸಲು ಜಲಸಂಪನ್ಮೂಲ ಇಲಾಖೆ ತಯಾರಿ ನಡೆಸಿದೆ.

ಎತ್ತಿನಹೊಳೆ ಯೋಜನೆಯ ಜಲಾನಯನ ಪ್ರದೇಶದಲ್ಲಿ 24 ಟಿಎಂಸಿ ಅಡಿ ನೀರು ಲಭ್ಯ ಇದೆ ಹಾಗೂ ನೀರನ್ನು ಮೇಲಕ್ಕೆತ್ತಿ (ಐದು ಕಡೆ ಪಂಪ್‌ ಮಾಡಿ) ಹರಿಸಲು ಸಾಧ್ಯ ಎಂಬುದನ್ನು ತೋರಿಸಲು ವಿ.ವಿ. ಸಾಗರಕ್ಕೆ ಹರಿಸಲು ಸಿದ್ಧತೆ ನಡೆಸಲಾಗಿದೆ. ಈ ಮೂಲಕ ಬಯಲುಸೀಮೆ ಜಿಲ್ಲೆಗಳ ಜನರಲ್ಲಿ ವಿಶ್ವಾಸ ಮೂಡಿಸುವುದು ಇಲಾಖೆಯ ಉದ್ದೇಶಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

ಬಯಲುಸೀಮೆಯ ಏಳು ಜಿಲ್ಲೆಗಳ ಜಲದಾಹ ನೀಗಿಸುವ ಉದ್ದೇಶದಿಂದ ಎತ್ತಿನಹೊಳೆ ಯೋಜನೆ ರೂಪಿಸಲಾಗಿದೆ. ಎತ್ತಿನಹೊಳೆಯಲ್ಲಿ ಸಂಗ್ರಹವಾಗುವ ನೀರುವ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ತಲುಪಬೇಕಾದರೆ ತುಮಕೂರು ಜಿಲ್ಲೆಯ ಬೈರಗೊಂಡ್ಲುವಿನಲ್ಲಿ 5.87 ಟಿಎಂಸಿ ಅಡಿ ನೀರು ಸಂಗ್ರಹಿಸುವ ಕಿರು ಜಲಾಶಯ ನಿರ್ಮಾಣವಾಗಬೇಕಿದೆ. ಭೂಸ್ವಾಧೀನ ಕಗ್ಗಂಟು ಎದುರಾಗಿರುವುದರಿಂದ ಈ ಕಾಮಗಾರಿ ನನೆಗುದಿಗೆ ಬಿದ್ದಿದೆ. ಈ ಹಂತದಲ್ಲಿ ಯೋಜನೆಗೆ ಅಗತ್ಯ ನೀರು ಸಿಗುವ ಬಗ್ಗೆಯೇ ರಾಜಕಾರಣಿಗಳು ಹಾಗೂ ವಿಜ್ಞಾನಿಗಳು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ, ಅವರಲ್ಲಿ ವಿಶ್ವಾಸ ಮೂಡಿಸಲು ಈ ಮಳೆಗಾಲದಲ್ಲೇ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ನೀರು ಹರಿಸಲು ಯೋಜಿಸಲಾಗಿದೆ ಎಂದು ಅವರು ಹೇಳಿದರು.

ಎತ್ತಿನಹೊಳೆ (ಸಕಲೇಶಪುರ ತಾಲ್ಲೂಕು) ಯೋಜನೆಯ ಮೂಲ ಸ್ಥಳದಿಂದ 37 ಕಿ.ಮೀ.ವರೆಗೆ ಕಾಲುವೆ ನಿರ್ಮಾಣ, ಪೈಪ್‌ಲೈನ್‌ ಅಳವಡಿಕೆ ಸೇರಿದಂತೆ ಶೇ 95ರಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ. ಈ ಭಾಗದಲ್ಲಿ ವೇದಾವತಿ ನದಿ ಅಡ್ಡ ಬರುತ್ತದೆ. ಎತ್ತಿನಹೊಳೆ ನೀರನ್ನು ಅರಸೀಕೆರೆ ಮಾರ್ಗವಾಗಿ ತುಮಕೂರು ಕಡೆಗೆ ಸದ್ಯಕ್ಕೆ ಹರಿಸಲು ಸಾಧ್ಯವಾಗುವುದಿಲ್ಲ. ಅದರ ಬದಲು, ವೇದಾವತಿ ನದಿ ಅಡ್ಡ ಬರುವ ಜಾಗದಲ್ಲಿ ನೀರನ್ನು ಎಡಕ್ಕೆ ತಿರುಗಿಸಿ ಗುರುತ್ವಾಕರ್ಷಣೆ ಮೂಲಕ ಸುಮಾರು 140 ಕಿ.ಮೀ ದೂರದಲ್ಲಿರುವ ವಿ.ವಿ. ಸಾಗರಕ್ಕೆ ಹರಿಸುವುದು ಸದ್ಯದ ಲೆಕ್ಕಾಚಾರ.

ಹಿರಿಯೂರು ತಾಲ್ಲೂಕಿನ ಮಾರಿಕಣಿವೆಯಲ್ಲಿ ವೇದಾವತಿ ನದಿಗೆ 108 ವರ್ಷದ ಹಿಂದೆ ನಿರ್ಮಿಸಿರುವ ವಾಣಿ ವಿಲಾಸ ಸಾಗರವು ಒಂದು ಸಲವಷ್ಟೇ ತುಂಬಿದೆ. 36 ಟಿಎಂಸಿ ಅಡಿ ಸಾಮರ್ಥ್ಯದ ಈ ಜಲಾಶಯಕ್ಕೆ ಭದ್ರಾ ಮೇಲ್ದಂಡೆ ಯೋಜನೆಯಿಂದ ಕಳೆದ ವರ್ಷ ನೀರು ಹರಿಸಲಾಗಿತ್ತು. ಎತ್ತಿನಹೊಳೆಯಿಂದ 24 ಟಿಎಂಸಿ ಅಡಿಯಷ್ಟು ನೀರನ್ನು ಹರಿಸಿದರೆ ಅಚ್ಚುಕಟ್ಟು ಪ್ರದೇಶದ ಜನರಿಗೆ ಅನುಕೂಲವಾಗಲಿದೆ.

‘ಎತ್ತಿನಹೊಳೆಯಿಂದ ನಾಲ್ಕು ಟಿಎಂಸಿ ಅಡಿಯಷ್ಟೇ ನೀರು ಸಿಗಲಿದೆ. ಇಷ್ಟು ಕಡಿಮೆ ಪ್ರಮಾಣದ ನೀರಿಗೆ ₹13 ಸಾವಿರ ಕೋಟಿ ವ್ಯರ್ಥ ಮಾಡಲಾಗುತ್ತಿದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಟಿ.ವಿ.ರಾಮಚಂದ್ರ ಹೇಳಿದ್ದರು. ಅನೇಕ ರಾಜಕಾರಣಿಗಳು ಸಹ ನೀರಿನ ಲಭ್ಯತೆ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಎತ್ತಿನಹೊಳೆಯಲ್ಲಿ ಟೆಲಿಮ್ಯಾಟ್ರಿ ಮಾಪಕ ಅಳವಡಿಸಿ, ಜೂನ್‌– ಅಕ್ಟೋಬರ್‌ ಅವಧಿಯಲ್ಲಿ ನೀರಿನ ಮಾಪನ ಮಾಡಲಾಗಿದೆ. ಮಳೆಗಾಲದಲ್ಲಿ 25 ಟಿಎಂಸಿ ಅಡಿಯಿಂದ 30 ಟಿಎಂಸಿ ಅಡಿಯಷ್ಟು ನೀರು ಸಿಗುವುದು ಖಚಿತವಾಗಿದೆ’ ಎಂದು ಇಲಾಖೆಯ ಅಧಿಕಾರಿ ವಿವರ ನೀಡಿದರು.

ಫಲಾನುಭವಿ ಜಿಲ್ಲೆಗಳು
ಚಿಕ್ಕಮಗಳೂರು, ತುಮಕೂರು, ಹಾಸನ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು