ಸುದೀರ್ಘ ಬರಹ: ಹೀಗಿದೆ ನೋಡಿ ನಮ್ಮ ಅಣೆಕಟ್ಟುಗಳ ಸ್ಥಿತಿ ಮತ್ತು ಗತಿ

7

ಸುದೀರ್ಘ ಬರಹ: ಹೀಗಿದೆ ನೋಡಿ ನಮ್ಮ ಅಣೆಕಟ್ಟುಗಳ ಸ್ಥಿತಿ ಮತ್ತು ಗತಿ

Published:
Updated:

‘ತಮಿಳುನಾಡಿನ ಮುಲ್ಲಪೆರಿಯಾರ್ ಅಣೆಕಟ್ಟೆಯಿಂದ ಒಮ್ಮೆಲೆ ನೀರು ಹೊರಬಿಟ್ಟುದು ಪ್ರವಾಹ ಪರಿಸ್ಥಿತಿ ಉಲ್ಬಣಿಸಲು ಕಾರಣವಾಯಿತು, ಮುಲ್ಲಪೆರಿಯಾರ್ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹಕ್ಕೆ ಮಿತಿ ಹೇರಬೇಕು’ ಎಂದು ಕೇರಳ ಸರ್ಕಾರ ಈಚೆಗಷ್ಟೇ ಸುಪ್ರಿಂಕೋರ್ಟ್ ಮೆಟ್ಟಿಲೇರಿದ್ದು ನಿಮಗೆ ನೆನಪಿರಬಹುದು.

‘ಕೇರಳದ ಅಣೆಕಟ್ಟೆಗಳಿಂದ ನೀರು ಹೊರಬಿಡುವ ಸಂಬಂಧ ಸಕಾಲಕ್ಕೆ ಅಲ್ಲಿನ ಎಂಜಿನಿಯರ್‌ಗಳು ನಿರ್ಧಾರ ತೆಗೆದುಕೊಳ್ಳದಿದ್ದುದೇ ಪ್ರವಾಹ ಪರಿಸ್ಥಿತಿ ಉಲ್ಬಣಿಸಲು ಕಾರಣ’ ಎಂದು ನಂತರ ನಾಸಾದ ವಿಜ್ಞಾನಿಗಳು ಹಳೆಯದೊಂದು, ಹೊಸದೊಂದು ಫೋಟೊ ಹಾಕಿ ಷರಾ ಬರೆದದ್ದು ನಿಮಗೆ ನೆನಪಿರಬಹುದು. 

ಇದನ್ನೂ ಓದಿ: ಮತ್ತೆ ಮೇಲೆದ್ದಿದೆ ಮುಲ್ಲಪೆರಿಯಾರ್‌ ವಿವಾದ

ಜಲಾಶಯಗಳ ನೀರು ನಿರ್ವಹಣೆ ಕುರಿತು ಕೇಂದ್ರ ಭೂವಿಜ್ಞಾನ ಇಲಾಖೆಯ ಕಾರ್ಯದರ್ಶಿ ಮಾಧವನ್ ನಾಯರ್ ರಾಜೀವನ್ ಅವರ ಹೇಳಿಕೆಯೊಂದನ್ನು ಇಲ್ಲಿ ಪ್ರಸ್ತಾಪಿಸಲೇಬೇಕು.

‘ಕಳೆದ ಹತ್ತು ವರ್ಷಗಳಿಂದ ಹಿಂದೂ ಮಹಾಸಾಗರದಲ್ಲಿ ಅರಬ್ಬಿ ಸಮುದ್ರದ ಕಡೆ ನೀರಿನ ಉಷ್ಣತೆ ಏರುತ್ತಲೇ ಇದೆ. ಇದರ ಪರಿಣಾಮವಾಗಿ ಮುಂದಿನ ಕೆಲ ವರ್ಷಗಳಲ್ಲಿ ಕೇರಳ ಮತ್ತು ಕರ್ನಾಟಕ ಸಾಕಷ್ಟು ಚಂಡಮಾರುತ (ಅತಿವೃಷ್ಟಿ) ಎದುರಿಸಬೇಕಾಗಬಹುದು. ಜಲಾಶಯಗಳಲ್ಲಿ ನೀರು ನಿರ್ವಹಣೆಗೆ ಅನುಸರಿಸುತ್ತಿರುವ ವಿಧಾನಗಳನ್ನು ಮರುಪರಿಶೀಲಿಸಬೇಕಾದ ಅಗತ್ಯವಿದೆ.

‘ನದಿಯ ಜಲಾನಯನ ಪ್ರದೇಶದಲ್ಲಿ ಆಗುತ್ತಿರುವ ಮಳೆ, ಜಲಾಶಯದ ಹಾಲಿ ನೀರಿನ ಸಂಗ್ರಹ, ಒಳಹರಿವನ್ನು ವೈಜ್ಞಾನಿಕವಾಗಿ ಲೆಕ್ಕ ಹಾಕಿ ಜಲಾಶಯಗಳಿಂದ ನೀರು ಬಿಡುವ ನಿರ್ಧಾರ ತೆಗೆದುಕೊಳ್ಳಬೇಕು. ಆದರೆ ಭಾರತದ ಯಾವುದೇ ದೊಡ್ಡ ಅಣೆಕಟ್ಟೆ ಇಂಥ ವ್ಯವಸ್ಥೆ ಅಳವಡಿಸಿಕೊಂಡಿಲ್ಲ. ಹೀಗಾಗಿ ಯಾವಾಗ ನೀರು ಬಿಡಬೇಕು, ಎಷ್ಟು ಬಿಡಬೇಕು, ಹೇಗೆ ಬಿಡಬೇಕು ಎನ್ನುವ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿದ್ದೇವೆ. ನಾವು ಇನ್ನಾದರೂ ಇತ್ತ ಗಮನಕೊಡಬೇಕಿದೆ’ ಎಂದು ತಿರುವನಂತಪುರದಲ್ಲಿ ಚಂಡಮಾರುತ ಎಚ್ಚರಿಕೆ ಘಟಕಕ್ಕೆ ಚಾಲನೆ ನೀಡಿದ ನಂತರ ಅವರು ನುಡಿದಿದ್ದರು.

ಇದನ್ನೂ ಓದಿ: ನಾಸಾ ಚಿತ್ರಗಳಲ್ಲಿ ಪ್ರವಾಹದ ಅನಾಹುತ

ಮೇಲಿನ ಮೂರೂ ಬೆಳವಣಿಗೆಗಳನ್ನು ಹಿನ್ನೆಲೆಯಾಗಿರಿಸಿಕೊಂಡು ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರು ನಿರ್ವಹಣೆಗೆ ಅನುಸರಿಸುತ್ತಿರುವ ವ್ಯವಸ್ಥೆ ಪರಿಚಯಿಸುವ ಪ್ರಯತ್ನ ಇಲ್ಲಿದೆ.

*** 

ಕೃಷ್ಣಾ ಯೋಜನೆ: ನಿತ್ಯವೂ ಮಾಹಿತಿ ವಿನಿಮಯ

ವಿಜಯಪುರ: ಮಹಾರಾಷ್ಟ್ರದ ಪಶ್ಚಿಮಘಟ್ಟಗಳಲ್ಲಿ ಹೆಚ್ಚು ಮಳೆಯಾದರೆ ಕೃಷ್ಣಾ ನದಿಗೆ ನೀರು ಹರಿದುಬರುತ್ತದೆ. ಮಹಾರಾಷ್ಟ್ರದಲ್ಲಿ ಕೃಷ್ಣಾನದಿಗೆ ನಿರ್ಮಿಸಿರುವ ಜಲಾಶಯಗಳ ನೀರಿನ ಸ್ಥಿತಿಗತಿ, ಸುರಿಯುತ್ತಿರುವ ಮಳೆಯ ಬಗ್ಗೆ ನಿತ್ಯವೂ ನಿಗಾ ಇಡಲಾಗುತ್ತದೆ. ಕೃಷ್ಣಾ ನದಿ ಮಹಾರಾಷ್ಟ್ರದಿಂದ ಹೊತ್ತು ತರುವ ನೀರು ರಾಜಾಪುರ ಬ್ಯಾರೇಜ್‌ನಲ್ಲಿ ಲೆಕ್ಕಕ್ಕೆ ಸಿಗುತ್ತದೆ. ರಾಜಾಪುರ ಬ್ಯಾರೇಜ್‌ನಿಂದ 86 ಕಿ.ಮೀ. ದೂರದಲ್ಲಿ ಹಿಪ್ಪರಗಿ ಬ್ಯಾರೇಜ್‌ ಇದೆ. ಹಿಪ್ಪರಗಿಯಿಂದ 126 ಕಿ.ಮೀ. ದೂರದ ಆಲಮಟ್ಟಿಗೆ ನೀರು ಬರಲು 24 ಗಂಟೆ ಬೇಕು.

‘ಈ ಎರಡೂ ಬ್ಯಾರೇಜ್‌ಗಳ ನೀರನ್ನು ಲೆಕ್ಕಹಾಕಿ ನೀರು ಬಿಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ಅರ್ಧ ಗಂಟೆಯೊಳಗೆ ಅನುಷ್ಠಾನಕ್ಕೆ ತರುತ್ತೇವೆ. ನೀರು ಬಿಡಲು ತೀರ್ಮಾನಿಸಿದ ತಕ್ಷಣ ನಾರಾಯಣಪುರ ಹಾಗೂ ಆಂಧ್ರಪ್ರದೇಶದ ಅಧಿಕಾರಿಗಳಿಗೂ ಮಾಹಿತಿ ನೀಡುತ್ತೇವೆ. ಮಹಾಪೂರದ ಅವಧಿಯಲ್ಲಿ ಜಲಾಶಯವನ್ನು ಪೂರ್ತಿ ಭರ್ತಿ ಮಾಡದೇ, ಸುರಕ್ಷಿತ ಅಂತರ ಇರಿಸಿಕೊಂಡಿರುತ್ತೇವೆ’ ಎಂದು ಆಲಮಟ್ಟಿ ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಎಸ್.ಎಸ್. ಮಂಜಪ್ಪ ಮಾಹಿತಿ ನೀಡಿದರು.

ಆಲಮಟ್ಟಿ ಜಲಾಶಯದ ಸಂಗ್ರಹ ಸಾಮರ್ಥ್ಯದ ಮೂರು ಪಟ್ಟು (ಪ್ರತಿ ವರ್ಷ ಅಂದಾಜು 400 ಟಿಎಂಸಿ ಅಡಿ) ಹೆಚ್ಚಿನ ನೀರು ಜೂನ್‌ನಿಂದ ಸೆಪ್ಟಂಬರ್ ಅವಧಿಯಲ್ಲಿ ಹರಿದು ಬರುತ್ತಿದ್ದರೂ; ನೆರೆಯ ಹಾವಳಿ ಸೃಷ್ಟಿಯಾಗಿಲ್ಲ. ಇದಕ್ಕೆ ಜಲಾಶಯದ ಅಧಿಕಾರಿಗಳ ನಿರಂತರ ನಿಗಾ, ಮಾಹಿತಿಯ ಕರಾರುವಕ್ಕಾದ ವಿಶ್ಲೇಷಣೆ, ಇದಕ್ಕಾಗಿ ನೆರೆಯ ಮಹಾರಾಷ್ಟ್ರದ ವಿವಿಧ ಜಲಾಶಯಗಳ ಅಧಿಕಾರಿಗಳ ನಡುವೆ ಇರುವ ಸಂಯೋಜನೆಯೇ ಕಾರಣ.

2002ರಿಂದ ಆಲಮಟ್ಟಿ ಜಲಾಶಯದಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಸಂಗ್ರಹ ಆರಂಭಗೊಂಡಿದೆ. 2005ರಲ್ಲಿ ಜಲಾಶಯದಿಂದ 4 ಲಕ್ಷ ಕ್ಯುಸೆಕ್‌ ನೀರು ಬಿಟ್ಟಿರುವುದು ಇಲ್ಲಿಯವರೆಗಿನ ಗರಿಷ್ಠ ಹೊರ ಹರಿವು. ಆಗ ಎರಡು ದಿನ ಕೃಷ್ಣಾ ನದಿ ದಂಡೆಯ ಜಮೀನು ಜಲಾವೃತಗೊಂಡಿದ್ದು ಬಿಟ್ಟರೇ, ಯಾವುದೇ ರೀತಿಯ ನೆರೆ ಹಾನಿ ಸಂಭವಿಸಿರಲಿಲ್ಲ. ಜೂನ್‌ನಿಂದ ಆಗಸ್ಟ್‌ವರೆಗೆ ನೀರು ಹರಿವಿನ ಉತ್ತುಂಗದ ಅವಧಿ. 24 ಗಂಟೆಯೂ ಜಲಾಶಯದ ಅಧಿಕಾರಿಗಳು, ತಾಂತ್ರಿಕ ಪರಿಣಿತರು ಹೈ ಅಲರ್ಟ್‌ ಆಗಿರುತ್ತಾರೆ. ಪ್ರತಿ ಎರಡು ಗಂಟೆಗೊಮ್ಮೆ ಜಲಾಶಯದ ಮಟ್ಟವನ್ನು ದಾಖಲಿಸಿ, ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

‘ಪ್ರತಿ ವರ್ಷದ ಮೇ ಅಂತ್ಯಕ್ಕೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳ ನದಿಗೆ ಸಂಬಂಧಿಸಿದ ಅಧಿಕಾರಿಗಳ ಸಭೆ ಮುಂಬೈನಲ್ಲಿ ನಡೆಯುತ್ತದೆ. ಅಲ್ಲಿ ಮಾಹಿತಿ, ಅಂಕಿ–ಅಂಶಗಳ ವಿನಿಮಯದ ಜತೆಗೆ ಅಧಿಕಾರಿಗಳ ಪರಸ್ಪರ ಸಂಪರ್ಕ ಏರ್ಪಡುತ್ತದೆ. ಇದರಿಂದ ನಿತ್ಯವೂ ಎಲ್ಲಾ ಜಲಾಶಯಗಳ ನೀರಿನ ಮಾಹಿತಿಯ ಪರಸ್ಪರ ವಿನಿಮಯಕ್ಕೆ ಸುಲಭವಾಗಿದೆ’ ಎನ್ನುತ್ತಾರೆ 2002ರಿಂದಲೂ ಆಲಮಟ್ಟಿ ಜಲಾಶಯದ ನೀರಿನ ಮೇಲ್ವಿಚಾರಣೆ ತಂಡದಲ್ಲಿರುವ ಸಹಾಯಕ ಎಂಜಿನಿಯರ್ ಶರಣಪ್ಪ ಚಲವಾದಿ.

ತುಂಗಭದ್ರಾ ಜಲಾಶಯ: ವೈಜ್ಞಾನಿಕ ನಿರ್ವಹಣೆ ಇಲ್ಲಿಲ್ಲ

ಬಳ್ಳಾರಿ: ತುಂಗಭದ್ರಾ ಜಲಾಶಯ ಭರ್ತಿಯಾದರೆ ನೀರನ್ನು ಎಷ್ಟು ಪ್ರಮಾಣದಲ್ಲಿ ಯಾವಾಗ ಹರಿಸಬೇಕು ಎಂಬುದಕ್ಕೆ ನಿರ್ದಿಷ್ಟ ವೈಜ್ಞಾನಿಕ ವಿಧಾನಗಳನ್ನು ಅನುಸರಿಸುತ್ತಿಲ್ಲ. ನೀರಿನ ಒಳ ಹರಿವು ಹೆಚ್ಚಾಗುತ್ತಿದ್ದಂತೆಯೇ ತುಂಗಭದ್ರಾ ಮಂಡಳಿಯ ಅಧೀಕ್ಷಕ ಎಂಜಿನಿಯರ್‌ ನೇತೃತ್ವದಲ್ಲಿ ಕರ್ನಾಟಕ ಮತ್ತು ಆಂಧ್ರದ ಎಂಜಿನಿಯರುಗಳ ಸಮಿತಿಯು ಸಭೆ ಕರೆದು, ಸಭೆಯಲ್ಲಿ ಅಗತ್ಯ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಸಮಿತಿಯಲ್ಲಿ ಆಂಧ್ರಪ್ರದೇಶದ ಅನಂತಪುರ, ಗದ್ವಾಲದ ಎಂಜಿನಿಯರುಗಳೂ ಇದ್ದಾರೆ. ಜಲಾಶಯದ ನೀರನ್ನು ಎರಡೂ ರಾಜ್ಯಗಳು ಹಂಚಿಕೊಳ್ಳುತ್ತಿವೆ.

ನೀರು ಹರಿಸುವ ನಿರ್ಧಾರ ಎರಡು ದಿನ ಮುಂಚೆಯೇ ಏರ್ಪಡುತ್ತದೆ. ಕೂಡಲೇ ಜಿಲ್ಲಾಧಿಕಾರಿಯಿಂದ ತಳವಾರರವರೆಗೆ ಕ್ಷಿಪ್ರ ಸಂದೇಶವೂ ಹೊರಟುಬಿಡುತ್ತದೆ. ನೀರು ಹರಿಯುವ ಅಕ್ಕಪಕ್ಕದ ಪ್ರದೇಶದ ಜನರಿಗೆ ಎಚ್ಚರಿಕೆಯೂ ರವಾನೆಯಾಗುತ್ತದೆ.

ಚಾರ್ಟ್‌ ಉಂಟು: ‘ಭರ್ತಿಯಾದ ಜಲಾಶಯದಿಂದ ಯಾವಾಗ ಎಷ್ಟು ಪ್ರಮಾಣದಲ್ಲಿ ನೀರನ್ನು ಹೊರಕ್ಕೆ ಹರಿಸಬೇಕು ಎಂಬ ಚಾರ್ಟ್‌ ನಮ್ಮ ಬಳಿ ಇದೆ. ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಎಷ್ಟಾಗಬಹುದು ಎಂಬ ಮಾಹಿತಿಯು ದೊರಕುತ್ತದೆ. ಜಲಾಶಯದ ನೀರಿನ ಮಟ್ಟವನ್ನು ಕಾಪಾಡಿಕೊಳ್ಳಲು ಎಷ್ಟು ಬೇಕೋ ಅಷ್ಟನ್ನು ಉಳಿಸಿಕೊಂಡು ಉಳಿದಿದ್ದನ್ನು ಮಾತ್ರ ಹರಿಸುತ್ತೇವೆ’ ಎಂದು ಜಲಾಶಯದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ವಿಶ್ವನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಅಷ್ಟನ್ನೂ ಹರಿಸಲ್ಲ: ‘ಜಲಾಶಯದಿಂದ ಏಕಕಾಲಕ್ಕೆ 6.50 ಲಕ್ಷ ಕ್ಯುಸೆಕ್‌ ನೀರನ್ನು ಹರಿಸಬಹುದು. ಆದರೆ ಏಕಕಾಲಕ್ಕೆ ಅಷ್ಟು ನೀರನ್ನೂ ಒಮ್ಮೆಲೆ ಹರಿಸುವುದಿಲ್ಲ. ಮೊದಲಿಗೆ 2ರಿಂದ 3 ಸಾವಿರ ಕ್ಯುಸೆಕ್‌, ನಂತರ 50 ಸಾವಿರ ಕ್ಯುಸೆಕ್‌ ನೀರನ್ನು ಹರಿಸುತ್ತೇವೆ. ಮೂರನೇ ಹಂತದಲ್ಲಿ 50 ಸಾವಿರದಿಂದ 1.50 ಲಕ್ಷ ಕ್ಯುಸೆಕ್‌, ನಂತರ 2.50 ಲಕ್ಷ ಕ್ಯುಸೆಕ್‌ ನೀರನ್ನು ಹರಿಸಲಾಗುವುದು’ ಎಂದರು.

ಕೆಆರ್‌ಎಸ್: ನಿರ್ವಹಣೆ ಇಲ್ಲದೆ ಹಾಳಾದ ಸ್ವಯಂಚಾಲಿತ ಗೇಟ್‌ಗಳು

ಮಂಡ್ಯ: ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ 103 ಅಡಿ ತಲುಪಿದೊಡನೆ ಎಂಟು ಸ್ವಯಂಚಾಲಿತ ಗೇಟ್‌ಗಳು ತಮ್ಮಷ್ಟಕ್ಕೆ ತಾವೇ ತೆರದುಕೊಳ್ಳುತ್ತಿದ್ದವು. ನೀರಿನ ಒತ್ತಡದಿಂದ ಜಲಾಶಯ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳುತ್ತಿತ್ತು. ಆದರೆ ಇಂದು ಆ ಗೇಟ್‌ಗಳು ನಿರ್ವಹಣೆ ಕಾಣದೆ ಪಾಳು ಬಿದ್ದಿವೆ. ಸರ್‌ ಎಂ.ವಿಶ್ವೇಶ್ವರಯ್ಯ ಅವರ ಐತಿಹಾಸಿಕ ಅನ್ವೇಷಣೆ ಹಳ್ಳ ಹಿಡಿದಿದೆ.

ದೇಶದಲ್ಲಿ ಮೊದಲ ಬಾರಿಗೆ ವಿಶ್ವೇಶ್ವರಯ್ಯ ಅವರು ಕೆಆರ್‌ಎಸ್‌ ಜಲಾಶಯಕ್ಕೆ ಸ್ವಯಂಚಾಲಿತ ಗೇಟ್‌ಗಳನ್ನು ಅಳವಡಿಸಿದ್ದರು. ದಶಕಗಳ ಕಾಲ ಈ ಗೇಟ್‌ಗಳು ಕಾರ್ಯನಿರ್ವಹಿಸಿದವು. ಆದರೆ ಅವುಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳದ ಕಾರಣ ಈಗ ಅವುಗಳು ಕೇವಲ ಪಳೆಯುಳಿಕೆಗಳಾಗಿವೆ. ಈಗ ವಿದ್ಯುತ್‌ಚಾಲಿತ ಗೇಟ್‌ಗಳ ಮೂಲಕ ನೀರನ್ನು ನದಿಗೆ, ಕಾಲುವೆಗೆ ಹರಿಸಲಾಗುತ್ತಿದೆ. ಜಲಾಶಯದ ವಿವಿಧ ಮಟ್ಟದಲ್ಲಿ ಒಟ್ಟು 171 ಗೇಟ್‌ಗಳಿವೆ. 60 ಅಡಿಯಿಂದ 110 ಅಡಿಯವರೆಗೆ ವಿವಿಧ ಮಟ್ಟಗಳಲ್ಲಿ ಗೇಟ್‌ಗಳನ್ನು ಅಳವಡಿಸಲಾಗಿದೆ.

ಪುನರ್‌ಬಲನ ಕಾಮಗಾರಿ: 2011ರಲ್ಲಿ ಜಲಾಶಯ ಸುರಕ್ಷಾ ತಂಡವು ಕೆಆರ್‌ಎಸ್‌ ಜಲಾಶಯದಲ್ಲಿ ಕೆಲವೆಡೆ ಬಿರುಕು ಮತ್ತು ಸೋರುವಿಕೆಯನ್ನು ಗುರುತಿಸಿತ್ತು. ₹40 ಕೋಟಿ ವೆಚ್ಚದಲ್ಲಿ ಪುನರ್‌ಬಲನ (ರೀಫಿಲ್ಲಿಂಗ್‌) ಕಾಮಗಾರಿ ನಡೆಸಿ, ಬಿರುಕುಗಳನ್ನು ಮುಚ್ಚಲಾಯಿತು. ಇದೇ ಸಂದರ್ಭ 18 ಕ್ರಸ್ಟ್‌ಗೇಟ್‌ಗಳನ್ನು ಬದಲಾಯಿಸಲಾಯಿತು. ಇತ್ತೀಚೆಗೆ ಜಲಾಶಯ ಪರಿಶೀಲಿಸಿದ ಸುರಕ್ಷಾ ತಂಡ ಸಹ ಕೆಲ ಕಾಮಗಾರಿಗಳನ್ನು ಸೂಚಿಸಿದೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ ಎಂದು ನಿಗಮದ ಮೂಲಗಳು ತಿಳಿಸಿವೆ.

ಜಲಾಶಯದ ಸುರಕ್ಷತೆ ಕಾಪಾಡಿಕೊಳ್ಳಲು ಜಲಾಶಯಕ್ಕೆ ಸಮನಾಂತರವಾಗಿ ತಡೆಗೋಡೆ ನಿರ್ಮಾಣ ಮಾಡಬೇಕು ಎಂದು ತಜ್ಞರು ಹೇಳುತ್ತಾರೆ. ಕೆಆರ್‌ಎಸ್‌ ಜಲಾಶಯದಲ್ಲಿ ತಡೆಗೋಡೆ ಇಲ್ಲ. ಆದರೆ ನೀರಿನ ಒತ್ತಡ ತಡೆಯಲು ಅಲ್ಲಲ್ಲಿ ರಾಶಿಗಟ್ಟಲೆ ಕಲ್ಲುಗಳನ್ನು ಹಾಕಲಾಗಿದೆ. ಕಲ್ಲಿನ ರಾಶಿಗಳು ನೀರಿನ ಒತ್ತಡ ತಡೆಯುತ್ತವೆ ಎಂದು ನಿಗಮದ ಅಧಿಕಾರಿಗಳು ಹೇಳುತ್ತಾರೆ.

ಐಸಿಸಿ ಸಭೆ ನಡೆಸಿ ನೀರು ಬಿಡುಗಡೆ: ಕೆಆರ್‌ಎಸ್‌ ಜಲಾಶಯದಿಂದ ನೀರು ಹರಿಸುವಾಗ ಜಲಚರಗಳ ಸುರಕ್ಷತೆ, ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ತಮಿಳುನಾಡಿನ ಪಾಲಿನ ಬಗ್ಗೆಯೂ ಕಾಳಜಿ ವಹಿಸಲಾಗುತ್ತದೆ. ನಂತರ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲಾಧಿಕಾರಿ, ಕಾವೇರಿ ನೀರಾವರಿ ನಿಗಮದ ಅಧಿಕರಿಗಳು ಹಾಗೂ ರೈತ ಮುಖಂಡರು ಈ ಎಲ್ಲಾ ವಿಷಯಗಳನ್ನು ಚರ್ಚಿಸಿ ನೀರು ಹರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ.

ಗೊರೂರು: ಸರ್ಕಾರದ ಸುತ್ತೋಲೆಯೇ ಆಧಾರ

ಹಾಸನ: ಗೊರೂರಿನ ಹೇಮಾವತಿ ಜಲಾಶಯದ ಸಂಗ್ರಹ ಸಾಮರ್ಥ್ಯ 37.10 ಟಿಎಂಸಿ. 2922 ಅಡಿ ಗರಿಷ್ಠ ಮಟ್ಟದ ಅಣೆಕಟ್ಟೆಯಲ್ಲಿ 2919 ಅಡಿ ವರೆಗೆ ಮಾತ್ರ ನೀರು ಸಂಗ್ರಹ ಮಾಡಲಾಗುತ್ತದೆ. ಸುರಕ್ಷತೆ ದೃಷ್ಟಿಯಿಂದ ಗರಿಷ್ಠ ಮಟ್ಟದವರೆಗೂ ನೀರು ಸಂಗ್ರಹಿಸುವುದಿಲ್ಲ.

ಅಣೆಕಟ್ಟೆಯಿಂದ ನೀರು ಯಾವ ಸಂದರ್ಭದಲ್ಲಿ ಬಿಡಬೇಕು ಎಂಬುದರ ಕುರಿತು ಸರ್ಕಾರ ಸುತ್ತೋಲೆ ಹೊರಡಿಸಿದೆ. ಜಲಾನಯನ ಪ್ರದೇಶಗಳಾದ ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವ್ಯಾಪ್ತಿಯಲ್ಲಿ ನಿರಂತರವಾಗಿ ಮಳೆಯಾದರೆ ಅಧಿಕ ಪ್ರಮಾಣದಲ್ಲಿ ನೀರು ಜಲಾಶಯಕ್ಕೆ ಹರಿದು ಬರುತ್ತದೆ. ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದ್ದರೆ ಹೊರ ಹರಿವಿನ ಪ್ರಮಾಣ ಹೆಚ್ಚಿಸಲಾಗುತ್ತದೆ. ಏಕಾಏಕಿ ಕ್ರಸ್ಟ್‌ಗೇಟ್‌ ತೆಗೆದು ಹೆಚ್ಚು ನೀರು ಬಿಡುವುದಿಲ್ಲ. ಮುಂಜಾಗ್ರತಾ ಕ್ರಮವಾಗಿ ನದಿ ಪಾತ್ರದ ಜನರನ್ನು ಸ್ಥಳಾಂತರಿಸಲಾಗುತ್ತದೆ.

ಲಕ್ಕವಳ್ಳಿ ಭದ್ರಾ ಡ್ಯಾಂ: ನೀರು ಬಿಡಲು ನಿಖರ ಲೆಕ್ಕಾಚಾರ

ಶಿವಮೊಗ್ಗ: ಚಿಕ್ಕಮಗಳೂರು ಜಿಲ್ಲೆ ಲಕ್ಕವಳ್ಳಿಯಲ್ಲಿರುವ ಭದ್ರಾ ಜಲಾಶಯಕ್ಕೆ ಹರಿದು ಬರುವ ನೀರನ್ನು ನಿಖರವಾಗಿ ಲೆಕ್ಕಹಾಕಲು ನೆದರ್‌ಲೆಂಡ್ ಮೂಲದ ಕಂಪೆನಿ ಸಿದ್ಧಪಡಿಸಿದ (ಪ್ರವಾಹ ಪತ್ತೆ ಸಾಧನ) ಮಾಪನವನ್ನು ಈಚೆಗೆ ಅಳವಡಿಸಲಾಗಿದೆ. ಇದು ಒಳ ಹರಿವಿನ ನಿಖರ ಮಾಹಿತಿ ಒದಗಿಸುತ್ತಿದೆ. ಈ ಲೆಕ್ಕಾಚಾರದ ಆಧಾರದಲ್ಲಿ ಜಲಾಶಯದ ಒಳಹರಿವು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುವ ಮೊದಲೇ, ಜಲಾಶಯದ ಹೊರಹರಿವು ಹೆಚ್ಚಿಸಲಾಗುತ್ತದೆ. 186 ಅಡಿ ಗರಿಷ್ಠಮಟ್ಟ ಹೊಂದಿರುವ ಭದ್ರಾ ಜಲಾಶಯ 71.53 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ.

‘ನೆದರ್‌ಲೆಂಡ್‌ನ ಕಂಪನಿಯು ಒದಗಿಸಿರುವ ಮಾಪನ ಸೇರಿದಂತೆ ಮಾಪನ ಸೇರದಿಂತೆ ನೀರಾವರಿ ನಿಗಮ ಅಳವಡಿಸಿದ ಸಾಧನಗಳು ಮಳೆಗಾಲದಲ್ಲೂ ಸೋಲಾರ್ ಸಹಾಯದಿಂದ ಕಾರ್ಯನಿರ್ವಹಿಸುವ ಕ್ಷಮತೆ ಹೊಂದಿವೆ. ಇದರಿಂದ ನಿಖರವಾಗಿ ಒಳ ಹರಿವು ಅಳೆಯಲು ಅನುಕೂಲವಾಗಿದೆ. ಮಳೆಗಾಲ ಆರಂಭದ ಸಮಯದಲ್ಲೇ ಎರಡೂ ನಾಲೆಗಳಿಗೆ ನೀರು ಹರಿಸುವ ಕಾರಣ ನದಿಗೆ ಹರಿಸುವ ನೀರು ನಿಯಂತ್ರಣಕ್ಕೆ ಬರುತ್ತದೆ. ಹೀಗಾಗಿ ನದಿಪಾತ್ರದಲ್ಲಿ ಪ್ರವಾಹದ ಸ್ಥಿತಿ ತಲೆದೋರುವುದು ಅಪರೂಪ. ಜಲಾಶಯ ಭರ್ತಿಯಾದ ನಂತರ ನಿರಂತರ ಮಳೆಯಾದಾಗ ಮಾತ್ರ ಭಾರಿ ಪ್ರಮಾಣದ ಒಳ ಹರಿವು ಸಮಸ್ಯೆ ಸೃಷ್ಟಿಸುತ್ತದೆ’ ಎನ್ನುತ್ತಾರೆ ಜಲಾಶಯದ ನಿರ್ವಹಣೆ ನೋಡಿಕೊಳ್ಳುವ ಎಂಜಿನಿಯರ್ ರಾಜ್‌ಕುಮಾರ್.

ಗಾಜನೂರು ತುಂಗಾ ಜಲಾಶಯ

ಶಿವಮೊಗ್ಗ ಜಿಲ್ಲೆ ಗಾಜನೂರು ಬಳಿ ಇರುವ ತುಂಗಾ ಜಲಾಶಯ 3.24 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ನಿರಂತರ ಮಳೆಯ ಸಮಯದಲ್ಲಿ ಒಳ ಹರಿವು ಒಂದು ಲಕ್ಷ ಕ್ಯುಸೆಕ್‌ನಷ್ಟು ನೀರು ಹರಿದು ಬರುತ್ತದೆ. ಈ ಜಲಾಶಯ ಒಂದೆರಡು ಮಳೆಗೆ ಭರ್ತಿಯಾಗಿ ಬಿಡುತ್ತದೆ. ಹಾಗಾಗಿ, ಜಲಾಶಯಕ್ಕೆ ಬರುವ ನೀರನ್ನು ಎಲ್ಲ 20 ಕ್ರಸ್ಟ್‌ಗೇಟ್‌ಗಳ ಮೂಲಕ ನದಿಗೆ ಹರಿಸಲಾಗುತ್ತದೆ. ಅಣೆಕಟ್ಟೆಯಿಂದ ನದಿಗೆ ನೀರು ಹರಿಸಲು ವಿದ್ಯುತ್ ಚಾಲಿತ ಕ್ರಸ್ಟ್‌ಗೇಟ್ ಗೇಟ್‌ಗಳಿಗೆ. 

ಜೋಗದ ಸಿರಿಯ ಲಿಂಗನಮಕ್ಕಿ

ಶರಾವತಿ ನದಿಗೆ 1964ರಲ್ಲಿ ನಿರ್ಮಿಸಿದ ಈ ಜಲಾಶಯ 1,992 ಚದರ ಕಿ.ಮೀ ಜಲಾನಯನ ಪ್ರದೇಶ ಹೊಂದಿದೆ. 151 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿದೆ. ಜಲಾಶಯದ ನೀರು ಬಲಸಿಕೊಂಡು ಮಹಾತ್ಮಗಾಂಧಿ, ಶರಾವತಿ, ಲಿಂಗನಮಕ್ಕಿ ಹಾಗೂ ಗೇರುಸೊಪ್ಪ ಘಟಕಗಳಲ್ಲಿ ಒಟ್ಟು 1469.8 ಮೆಗಾವ್ಯಾಟ್‌ ವಿದ್ಯುತ್ ಉತ್ಪಾದಿಸಲಾಗುತ್ತದೆ. 1818 ಅಡಿ ಗರಿಷ್ಠಮಟ್ಟ ಇರುವ ಈ ಜಲಾಶಯ ಭರ್ತಿಯಾದ ನಂತರ ಹೊರಗೆ ಹರಿಸುವ ನೀರು ಕಾರ್ಗಲ್‌ ಜಲಾಶಯದ ಮೂಲಕ ವಿಶ್ವ ಪ್ರಸಿದ್ಧ ಜೋಗ ಜಲಪಾತದ ಮೂಲಕ ಧುಮ್ಮಿಕ್ಕುವ ದೃಶ್ಯ ಮನಮೋಹಕ. 

ಒಳಹರಿವಿನ ಪ್ರವಾಹ ಅಣೆಕಟ್ಟೆಯ ಸುರಕ್ಷತೆ ಮತ್ತು ನದಿತೀರದ ಜನರ ಸುರಕ್ಷತೆ ನಿಯಂತ್ರಿಸುವಲ್ಲಿ 11 ರೇಡಿಯಲ್ ಗೇಟ್‌ಗಳು ಪ್ರಮುಖ ಪಾತ್ರ ವಹಿಸುತ್ತಿದೆ. ಅಣೆಕಟ್ಟು ನಿರ್ಮಾಣ ಕಾಲದಲ್ಲಿ ಸಮುದ್ರ ಮಟ್ಟದಿಂದ 1795 ಅಡಿ ಎತ್ತರದಲ್ಲಿ ಕಾಂಕ್ರೀಟ್ ಡ್ಯಾಂ ಮೇಲ್ಭಾಗದಲ್ಲಿ 50 ಅಡಿ ಅಗಲ ಮತ್ತು 24 ಅಡಿ ಎತ್ತರದ ಬೃಹತ್ ಕಬ್ಬಿಣದ ರೇಡಿಯಲ್ ಗೇಟ್‌ಗಳನ್ನು ಅಳವಡಿಸಲಾಗಿದೆ. ಎಷ್ಟೇ ಶಕ್ತವಾಗಿ ಪ್ರವಾಹ ಹರಿದು ಬಂದರೂ ಆ ಪ್ರವಾಹವನ್ನು ಅರ್ಧ ಗೋಲಾಕಾರದಲ್ಲಿ ಬಾಗಿ ನಿಂತಿರುವ ಉಕ್ಕಿನ ಗೇಟ್‌ಗಳು ತಡೆದು ನಿಲ್ಲಿಸುವ ಸಾಮರ್ಥ್ಯ ಹೊಂದಿವೆ.

‘ಎಲ್ಲಾ 11 ಗೇಟ್‌ಗಳನ್ನು ಮೆಕ್ಯಾನಿಕಲ್ ವ್ಯವಸ್ಥೆಯಲ್ಲಿ ತೆರೆಯುವ ಮತ್ತು ಮುಚ್ಚುವ ತಾಂತ್ರಿಕತೆ ಅಳವಡಿಸಲಾಗಿದೆ. ಈ ಎಲ್ಲಾ ಗೇಟ್‌ಗಳನ್ನು ಇಳಿಸಲು ಮತ್ತು ಮೇಲೆತ್ತಲು ವಿಶೇಷ ತಂತ್ರಜ್ಞಾನ ಹೊಂದಿರುವ ಚೈನ್ ಅಳವಡಿಸಿ, ಮೋಟಾರು ಯಂತ್ರಗಳಿಗೆ ಸಂಪರ್ಕ ಕಲ್ಪಿಸಲಾಗಿದೆ’ ಎಂದು ಅಣೆಕಟ್ಟು ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಅಧೀಕ್ಷಕ ಎಂಜಿನಿಯರ್ ಆರ್. ಶಿವಕುಮಾರ್ ತಿಳಿಸಿದ್ದಾರೆ.

ಅಣೆಕಟ್ಟೆಯಲ್ಲಿ 156 ಟಿಎಂಸಿ ನೀರು ಸಂಗ್ರಹಿಸಲಾಗುತ್ತಿದ್ದು, ಸಂಗ್ರಹವಾದ ಶೇ 50ರಷ್ಟು ಪ್ರಮಾಣದ ನೀರಿನ ಒತ್ತಡ ಈ ರೇಡಿಯಲ್ ಗೇಟಿನ ಮೇಲೆ ಇರುತ್ತದೆ. ಮಳೆಗಾಲದಲ್ಲಿ ಪ್ರತಿ ಗಂಟೆಗೊಮ್ಮೆ ಎಂಜಿನಿಯರ್‌ಗಳ ತಂಡ ನೀರಿನ ಒಳಹರಿವು ಪರಿಶೀಲಿಸಿ, ಹೆಚ್ಚುವರಿ ನೀರನ್ನು ಹೊರಗೆ ಬಿಡುತ್ತಾರೆ.

ರಾಜ್ಯಕ್ಕೆ ಬೆಳಕುಕೊಡುವ ಕಾಳಿ ಜಲಾಶಯಗಳು

ಕಾರವಾರ: ಕಾಳಿ ನದಿಗೆ ಗಣೇಶಗುಡಿಯಲ್ಲಿ (ಸೂಪಾ) ಕಟ್ಟಲಾಗಿರುವ ಅಣೆಕಟ್ಟೆ ದೇಶದಲ್ಲೇ 564 ಮೀಟರ್ ಎತ್ತರವಿದ್ದು, 147.54 ಟಿಎಂಸಿ ಅಡಿ ನೀರು ಸಂಗ್ರಹಣ ಸಾಮರ್ಥ್ಯವಿದೆ. 331.29 ಮೀಟರ್ ಉದ್ದವಿರುವ ಅಣೆಕಟ್ಟೆಯನ್ನು ಎತ್ತರದ ಎರಡು ಗುಡ್ಡಗಳ ನಡುವೆ ನಿರ್ಮಿಸಲಾಗಿದೆ.

124 ಚದರ ಕಿಲೋಮೀಟರ್ ಜಲಾನಯ ಪ್ರದೇಶ ಹೊಂದಿರುವ ಈ ಅಣೆಕಟ್ಟೆಯು ನಿರ್ಮಾಣವಾದ 31 ವರ್ಷಗಳಲ್ಲಿ ಕೇವಲ ಎರಡು ಬಾರಿ (1994 ಮತ್ತು 2006) ಭರ್ತಿಯಾಗಿತ್ತು. ಈ ವರ್ಷ ಉತ್ತಮ ಮಳೆಯಾಗಿರುವ ಪರಿಣಾಮ ಒಳಹರಿವು ಹೆಚ್ಚಿದ್ದು, ಆ.30ರಂದು ಜಲಾಶಯದಲ್ಲಿ 562.75 ಮೀಟರ್ ನೀರು ತುಂಬಿತ್ತು. 563 ಮೀಟರ್‌ಗೆ ನೀರು ತಲುಪುತ್ತಿದ್ದಂತೆ ಅಣೆಕಟ್ಟೆಯ ಮೂರೂ ಕ್ರಸ್ಟ್‌ಗೇಟ್‌ಗಳನ್ನು ತೆರೆಯಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.

ಇಷ್ಟೊಂದು ಪ್ರಮಾಣದಲ್ಲಿ ತುಂಬಿರುವ ನೀರನ್ನು ಹರಿಸಿದಾಗ ಕೆಳಗಿನ ನಾಲ್ಕು ಜಲಾಶಯಗಳೂ ಭರ್ತಿಯಾಗಲಿವೆ. ಅವುಗಳಿಂದ ಕೂಡ ಕಾಳಿ ನದಿಗೆ ಸಾವಿರಾರು ಕ್ಯುಸೆಕ್ ನೀರನ್ನು ಹರಿಸಲಾಗುತ್ತದೆ. ಆಗ ನದಿಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆಯಿದೆ. ಆದರೆ, ಇದು ಮುಲ್ಲಪೆರಿಯಾರ್ ಅಣೆಕಟ್ಟೆಯಿಂದ ತಮಿಳುನಾಡು ಹರಿಸಿದ ನೀರಿನಿಂದ ಕೇರಳದಲ್ಲಿ ಉಂಟಾದ ನೆರೆಯ ಮಾದರಿಯಲ್ಲಿ ಆಗಲು ಸಾಧ್ಯವೇ ಇಲ್ಲ ಎಂದು ಕಾಳಿ ಜಲವಿದ್ಯುತ್ ಯೋಜನೆಯ ಮುಖ್ಯ ಎಂಜಿನಿಯರ್ ನಂಜುಂಡೇಶ್ವರ ವಿಶ್ವಾಸ ವ್ಯಕ್ತಪಡಿಸುತ್ತಾರೆ.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಕಾಳಿ ನದಿಗೆ ಸೂಪಾ ಅಣೆಕಟ್ಟೆ ಮತ್ತು ಕದ್ರಾ ಅಣೆಕಟ್ಟೆ ಪ್ರಮುಖವಾದವು. ಕೊಡಸಳ್ಳಿ, ತಟ್ಟಿಹಳ್ಳ ಮತ್ತು ಬೊಮ್ಮನಹಳ್ಳಿ ಅಣೆಕಟ್ಟೆಗಳು ನೀರಿನ ಸಮತೋಲನ (ಬ್ಯಾಲೆನ್ಸಿಂಗ್ ರಿಸಾರ್ವಯರ್ಸ್‌) ಕಾಯ್ದುಕೊಳ್ಳುವ ಅಣೆಕಟ್ಟೆಗಳು. ಸೂಪಾದಿಂದ ನದಿಗೆ ನೀರು ಹರಿಸಿದಾಗ ಕೆಳಗಿನ ಅಣೆಕಟ್ಟೆಗಳು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಸಂಗ್ರಹಿಸಿಕೊಳ್ಳುತ್ತವೆ. ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತದೆ’ ಎಂದು ವಿವರಿಸಿದರು.

ಅಣೆಕಟ್ಟೆಗಳಲ್ಲಿ ಹಾಲಿ ಇರುವ ನೀರಿನ ಮಟ್ಟ, ಜಲಾನಯ ಪ್ರದೇಶದಲ್ಲಿ ಬೀಳುತ್ತಿರುವ ಮಳೆಯ ಪ್ರಮಾಣ ಹಾಗೂ ಒಳಹರಿವು ನದಿಗೆ ನೀರು ಹರಿಸಲು ಇರುವ ಪ್ರಮುಖ ಮಾನದಂಡವಾಗಿದೆ. ವಿದ್ಯುತ್ ಉತ್ಪಾದನೆಯ ಸಲುವಾಗಿಯೇ ಜಿಲ್ಲೆಯಲ್ಲಿ ಅಣೆಕಟ್ಟೆಗಳನ್ನು ನಿರ್ಮಿಸಲಾಗಿದೆ. ಹೀಗಾಗಿ ದಕ್ಷಿಣದ ಪವರ್ ಗ್ರಿಡ್‌ನಿಂದ ಬರುವ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಇದು ಕೂಡ ನೀರು ಹರಿಸಲು ಇರುವ ಮಾನದಂಡಗಳಲ್ಲಿ ಒಂದಾಗಿದೆ. ಜಲಾಶಯಗಳಲ್ಲಿ ನೀರಿನ ಮಟ್ಟದ ಮೇಲೆ ನಿರಂತರ ನಿಗಾ ಇರುತ್ತದೆ ಎಂದು ಅವರು ತಿಳಿಸುತ್ತಾರೆ.

ಮೂರು ಬಾರಿ ಸೂಚನೆ: ಅಣೆಕಟ್ಟೆಗಳ ಕ್ರಸ್ಟ್‌ಗೇಟ್‌ಗಳನ್ನು ಏಕಾಏಕಿ ತೆರೆಯುವುದಿಲ್ಲ. ನೀರಿನ ಒಳಹರಿವು ಹೆಚ್ಚಿ ಜಲಾಶಯವು ಗರಿಷ್ಠಮಟ್ಟಕ್ಕೆ ಸಮೀಪಿಸುತ್ತಿರುವಾಗ ಮೊದಲನೇ ಎಚ್ಚರಿಕೆ ರವಾನೆ ಮಾಡಲಾಗುತ್ತದೆ. ಕೆಲವು ದಿನಗಳ ಬಳಿಕ ಎರಡನೇ ಮತ್ತು ಸಂಪೂರ್ಣ ಭರ್ತಿಗೆ ಇನ್ನೇನು ಒಂದೆರಡು ಮೀಟರ್ ಬೇಕು ಎನ್ನುವಾಗ ಮೂರನೇ ಎಚ್ಚರಿಕೆ ರವಾನಿಸಲಾಗುತ್ತದೆ. ಇದಕ್ಕೆ ಪತ್ರಿಕಾ ಪ್ರಕಟಣೆಗಳು, ಧ್ವನಿವರ್ಧಕಗಳನ್ನು ಬಳಕೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಜಲಾಶಯಗಳ ಕೆಳಭಾಗದ ಗ್ರಾಮಸ್ಥರು ತಮ್ಮ ಜಾನುವಾರು ಜತೆಗೆ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ತಿಳಸಲಾಗುತ್ತದೆ. ನಂತರವೇ ನದಿಗೆ ನೀರು ಹರಿಸಲಾಗುತ್ತದೆ.

ಸೂಪಾ ಅಣೆಕಟ್ಟೆಯಿಂದ ಈಗಾಗಲೇ ಮೂರನೇ ಮತ್ತು ಅಂತಿಮ ಎಚ್ಚರಿಕೆ ರವಾನೆಯಾಗಿದೆ. ಮಳೆಯ ಪ್ರಮಾಣ ಉತ್ತಮವಾಗಿ ಮುಂದುವರಿದರೆ ನದಿಗೆ ನೀರು ಹರಿಸುವ ಸಾಧ್ಯತೆಯಿದೆ.

ಅದರ ಕೆಳಭಾಗದಲ್ಲಿರುವ ಬೊಮ್ಮನಹಳ್ಳಿ ಜಲಾಶಯ 438.38 ಮೀಟರ್ ಗರಿಷ್ಠಮಟ್ಟ ಹೊಂದಿದ್ದು, ಆ.25ರಂದು 437.47 ಮೀಟರ್‌ಗೆ ತಲುಪಿದೆ. ಈ ಅಣೆಕಟ್ಟೆಯಿಂದ ನೀರು ಹೊರಬಿಡುವ ಬಗ್ಗೆ ಆ.24ರಂದು ಮೊದಲ ಎಚ್ಚರಿಕೆ ರವಾನೆಯಾಗಿದೆ.

ಎಲ್ಲ ಅಣೆಕಟ್ಟೆಗಳಲ್ಲೂ ಸ್ವಯಂ ಚಾಲಿತ ಕ್ರೆಸ್ಟ್‌ಗೇಟ್‌ಗಳಿದ್ದು, ಅನಿವಾರ್ಯ ಸಂದರ್ಭಗಳಲ್ಲಿ ಸಿಬ್ಬಂದಿಯೂ ತೆರೆಯುವ (ಮ್ಯಾನ್ಯುಯೆಲ್) ರೀತಿಯಲ್ಲಿ ವಿನ್ಯಾಸ ಹೊಂದಿವೆ. ಇದು ಅಣೆಕಟ್ಟೆಯ ಸುರಕ್ಷತೆಯ ದೃಷ್ಟಿಯಿಂದ ಸಹಕಾರಿಯಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಗೇರುಸೊಪ್ಪ ಭರ್ತಿ: ಹೊನ್ನಾವರ ತಾಲ್ಲೂಕಿನ ಶರಾವತಿ ನದಿಗೆ 2002ರಲ್ಲಿ ನಿರ್ಮಿಸಲಾಗಿರುವ ಗೇರುಸೊಪ್ಪ ಅಣೆಕಟ್ಟೆ ಈಗಾಗಲೇ ಭರ್ತಿಯಾಗಿದೆ. ಒಟ್ಟು 4.5 ಟಿಎಂಸಿ ಅಡಿ ಸಾಮರ್ಥ್ಯ ಹೊಂದಿರುವ ಈ ಜಲಾಶಯವು 56 ಮೀಟರ್ ಎತ್ತರವಿದ್ದು, 545 ಮೀಟರ್ ಉದ್ದವಿದೆ. ಲಿಂಗನಮಕ್ಕಿ ಅಣೆಕಟ್ಟೆಯಿಂದ ನೀರು ಹೊರಬಿಟ್ಟಾಗಲೆಲ್ಲ ಈ ಅಣೆಕಟ್ಟೆಯಿಂದಲೂ ಹೊರಹರಿವು ಹೆಚ್ಚುತ್ತದೆ. ಒಂದು ವಾರದ ಹಿಂದೆ ಗರಿಷ್ಠ 73 ಸಾವಿರ ಕ್ಯುಸೆಕ್ ನೀರನ್ನು ಹರಿಸಲಾಗಿತ್ತು. ಆಗ, ಕೆಳಭಾಗದ ಕೆಲವು ಗ್ರಾಮಗಳ ರಸ್ತೆಗಳು, ತೋಟಗಳು ಜಲಾವೃತವಾಗಿದ್ದವು. ಆದರೆ, ತೀರಾ ಗಂಭೀರವಾದ ಪರಿಸ್ಥಿತಿ ಉಂಟಾಗಿರಲಿಲ್ಲ.

**

ಮಾಹಿತಿ: ಡಿ.ಬಿ.ನಾಗರಾಜ (ವಿಜಯಪುರ), ಕೆ.ಎಸ್.ಸುನಿಲ್ (ಹಾಸನ), ಯೋಗೇಶ ಮಾರೇನಹಳ್ಳಿ (ಮಂಡ್ಯ), ಕೆ.ನರಸಿಂಹಮೂರ್ತಿ (ಬಳ್ಳಾರಿ), ಚಂದ್ರಹಾಸ ಹಿರೇಮಳಲಿ (ಶಿವಮೊಗ್ಗ), ಎಂ.ಎಸ್.ಸದಾಶಿವ (ಕಾರವಾರ)

ಬರಹ ಇಷ್ಟವಾಯಿತೆ?

 • 26

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !