ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಪ್ರವಾಸೋದ್ಯಮ, ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ ನಿರೀಕ್ಷೆ: ಸಿಎಂ ಯಡಿಯೂರಪ್ಪ

ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ಚಾಲನೆ | ರಾಷ್ಟ್ರೀಯ ಹೆದ್ದಾರಿ ವಿಭಾಗೀಯ ಕಚೇರಿ ಉದ್ಘಾಟನೆ
Last Updated 15 ಜೂನ್ 2020, 8:34 IST
ಅಕ್ಷರ ಗಾತ್ರ

ಬೆಂಗಳೂರು: ‘ಶಿವಮೊಗ್ಗ ಜಿಲ್ಲೆ ಜನತೆಯ ಬಹುದಿನಗಳ ಕನಸಾಗಿದ್ದ ವಿಮಾನ ನಿಲ್ದಾಣ ನಿರ್ಮಾಣದಿಂದಾಗಿ ಜಿಲ್ಲೆ ಮತ್ತು ಸುತ್ತಮುತ್ತ ಪ್ರವಾಸೋದ್ಯಮ ಮತ್ತು ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಉತ್ತೇಜನ ದೊರೆಯುವ ನಿರೀಕ್ಷೆಯಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ವಿಮಾನ ನಿಲ್ದಾಣ ಕಾಮಗಾರಿಗೆ ಗೃಹ ಕಚೇರಿ ಕೃಷ್ಣಾದಿಂದ ಆನ್‍ಲೈನ್ ಮೂಲಕ ಸೋಮವಾರ ಚಾಲನೆ ನೀಡಿ ಮುಖ್ಯಮಂತ್ರಿ ಮಾತನಾಡಿದರು. ಇದೇ ವೇಳೆ ಅವರು ಶಿವಮೊಗ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ ವಿಭಾಗೀಯ ಕಚೇರಿಯನ್ನೂ ಉದ್ಘಾಟಿಸಿದರು.

‘ಶಿವಮೊಗ್ಗ ತಾಲ್ಲೂಕಿನ ಸೋಗಾನೆ ಗ್ರಾಮದಲ್ಲಿ ₹ 220 ಕೋಟಿ ವೆಚ್ಚದಲ್ಲಿ 662.38 ಎಕರೆ ಪ್ರದೇಶದಲ್ಲಿ ಸುಸಜ್ಜಿತ ವಿಮಾನ ನಿಲ್ದಾಣ ನಿರ್ಮಿಸಲಾಗುತ್ತಿದೆ. ಕಾಮಗಾರಿಯನ್ನು ಎರಡು ಹಂತಗಳಲ್ಲಿ ಕೈಗೊಳ್ಳಲಾಗುತ್ತಿದ್ದು, ಒಂದು ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲದೆ ನಿಗದಿತ ಸಮಯದ ಒಳಗಾಗಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಬೇಕು. ಉಡಾನ್ ಯೋಜನೆಯಿಂದ ಜನಸಾಮಾನ್ಯರೂ ವಿಮಾನಯಾನ ಕೈಗೊಳ್ಳುವ ವಾತಾವರಣವಿದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ನೀರಾವರಿ ಯೋಜನೆಗಳು, ಶಾಲೆಗಳಿಗೆ ಮೂಲಸೌಲಭ್ಯ, ಕುಡಿಯುವ ನೀರು, ರಸ್ತೆ ಸಂಪರ್ಕ ಅನುಷ್ಟಾನಗೊಳಿಸಲಾಗುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಗೆ ವೇಗ ದೊರೆತಿದೆ. ಶಿವಮೊಗ್ಗ-ಶಿಕಾರಿಪುರ ರೈಲು ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ’ ಎಂದೂ ಮುಖ್ಯಮಂತ್ರಿ ತಿಳಿಸಿದರು.

‘ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ನೂತನ ವಿಭಾಗ ಕಚೇರಿ ಆರಂಭಿಸಿರುವುದರಿಂದ ರಸ್ತೆ ಹಾಗೂ ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ವೇಗ ದೊರೆಯಲಿದೆ. ಸಿಗಂದೂರು ಬಳಿ ಶರಾವತಿ ಹಿನ್ನೀರಿಗೆ ಸೇತುವೆ ನಿರ್ಮಾಣ ಕಾರ್ಯ ಆರಂಭಿಸುವ ಮೂಲಕ ಜಿಲ್ಲೆಯ ಆ ಭಾಗದ ಜನರ ಬಹುವರ್ಷಗಳ ಕನಸು ನನಸಾಗುತ್ತಿದೆ’ ಎಂದರು.

ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ‘ಇದೊಂದು ಐತಿಹಾಸಿಕ ಕಾರ್ಯಕ್ರಮ. ಶಿವಮೊಗ್ಗದಲ್ಲಿ ಮುಖ್ಯ ಎಂಜಿನಿಯರ್ ಕೇಂದ್ರ ವಲಯ ಮತ್ತು ರಾಷ್ಟ್ರೀಯ ಹೆದ್ದಾರಿ ವಿಭಾಗ ಕಚೇರಿಗಳನ್ನು ಆರಂಭಿಸುವ ಮೂಲಕ ಈ ಭಾಗದಲ್ಲಿ ಅಭಿವೃದ್ಧಿಗೆ ಇನ್ನಷ್ಟು ವೇಗ ದೊರೆಯಲಿದೆ. ಗುಣಮಟ್ಟದ ಕೆಲಸ ಇದರಿಂದ ಸಾಧ್ಯವಾಗಲಿದೆ’ ಎಂದರು.

ವಿಮಾನ ನಿಲ್ದಾಣ ಕಾಮಗಾರಿ ವಿವರ: ಕಾಮಗಾರಿಯನ್ನು ಎರಡು ಹಂತಗಳಲ್ಲಿ ಕೈಗೊಳ್ಳಲಾಗುತ್ತಿದ್ದು, ಪ್ರಥಮ ಹಂತದಲ್ಲಿ ರನ್‍ವೇ, ಟ್ಯಾಕ್ಸಿ ವೇ, ಏಪ್ರಾನ್, ಅಪ್ರೋಚ್ ರಸ್ತೆ, ಪೆರಿಫೆರಲ್ ರಸ್ತೆ ಹಾಗೂ ಕಂಪೌಂಡ್ ಗೋಡೆ ನಿರ್ಮಾಣ ಕೈಗೊಳ್ಳಲಾಗಿದೆ. ಎರಡನೇ ಹಂತದಲ್ಲಿ ಟರ್ಮಿನಲ್ ಕಟ್ಟಡ, ಎಟಿಸಿ ಟವರ್, ಫೈರ್ ಸ್ಟೇಷನ್ ಕಟ್ಟಡ ಇತ್ಯಾದಿ ಕೈಗೊಳ್ಳಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT