ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಮಹಿಳೆಯರ ‘ಚೇತನ’ದಿಂದ ಮಾಸ್ಕ್ ಸಿದ್ಧ

ಪುನರ್ ಬಳಕೆ ಮಾಡಬಹುದಾದ ಕಾಟನ್ ಬಟ್ಟೆಯಲ್ಲಿ ತಯಾರಿಕೆ
Last Updated 24 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಶಿರಸಿ: ಕೋವಿಡ್–19 ಭೀತಿಯಿಂದ ಎಲ್ಲೆಡೆ ಮಾಸ್ಕ್‌ಗಳ (ಮುಖಗವಸು) ಬೇಡಿಕೆ ಹೆಚ್ಚಿದೆ. ಅಂಗಡಿ ಅಲೆದಾಡಿದರೂ ಮಾಸ್ಕ್‌ಗಳು ಸಿಗುತ್ತಿಲ್ಲ. ಇಂತಹ ಕಠಿಣ ಸಂದರ್ಭದಲ್ಲಿ ಸಾಮಾಜಿಕ ಸಮಸ್ಯೆಗೆ ಸ್ಪಂದಿಸುವ ಉದ್ದೇಶದಿಂದ ಮಹಿಳೆಯರು ಮಾಸ್ಕ್ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಇಲ್ಲಿನ ಪ್ರಶಾಂತಿ ಫೌಂಡೇಷನ್‌ನ ಚೇತನಾ ಸಂಸ್ಥೆಯ ವಿದ್ಯಾ ನಾಯ್ಕ, ಲಲಿತಾ ಇಳಿಗಾರ, ಯಶೋದಾ ನಾಯ್ಕ, ಗಾಯತ್ರಿ ರಾಯಕರ ಅವರು ಎರಡು ದಿನಗಳಿಂದ ಹಗಲಿರುಳೆನ್ನದೇ, ಹೊಲಿಗೆ ಯಂತ್ರದ ಎದುರು ಕುಳಿತು ಮುಖಗವಸುಗಳನ್ನು ತಯಾರು ಮಾಡುತ್ತಿದ್ದಾರೆ. ಈಗಾಗಲೇ 200ಕ್ಕೂ ಹೆಚ್ಚು ಮುಖಗವಸುಗಳನ್ನು ತಯಾರಿಸಿ, ಪೊಲೀಸ್, ಕಂದಾಯ ಮೊದಲಾದ ಇಲಾಖೆಗಳಿಗೆ ಪೂರೈಕೆ ಮಾಡಿದ್ದಾರೆ.

‘ನಗರದ ಎಲ್ಲೆಡೆ, ಆಸ್ಪತ್ರೆಗಳಲ್ಲಿ ಮುಖಗವಸು ಬೇಡಿಕೆ ಇರುವುದು ಗಮನಕ್ಕೆ ಬಂತು. ಇದೇ ವೇಳೆ ಎರಡು ದಿನಗಳ ಹಿಂದೆ ಅಧಿಕಾರಿಗಳ ಸಭೆಯಲ್ಲಿ ಜನರು, ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರ ಸುರಕ್ಷತೆಯ ಬಗ್ಗೆ ಚರ್ಚೆಯೂ ನಡೆಯಿತು. ಅಲ್ಲಿ ಮಾಸ್ಕ್‌ಗಳ ಕೊರತೆಯಿರುವ ಬಗ್ಗೆ ಮತ್ತು ಕೆಲವು ಕಡೆಗಳಿಂದ ಕಳಪೆ ಗುಣಮಟ್ಟದ ಮುಖಗವಸುಗಳು ಬರುತ್ತಿರುವ ವಿಷಯ ಪ್ರಸ್ತಾಪವಾಯಿತು. ಆಗ ನಮಗೆ ಜನರಿಗೆ ನೆರವಾಗುವ ಯೋಚನೆ ಬಂತು’ ಎನ್ನುತ್ತಾರೆ ಮಾಸ್ಕ್ ತಯಾರಿಸುವ ಮಹಿಳೆಯರು.

‘ನಾವು ತಯಾರಿಸಿರುವ ಮುಖಗವಸುಗಳು ಬಳಸಿ ಎಸೆಯುವಂತಹವುಗಳಲ್ಲ. ಇವನ್ನು ಪುನರ್ ಬಳಕೆ ಮಾಡಬಹುದು. ಒಂದಿಡೀ ದಿನ ಮುಖಕ್ಕೆ ಹಾಕಿಕೊಂಡರೆ, ಮರುದಿನ ತೊಳೆದು, ಬಿಸಿಲಿನಲ್ಲಿ ಒಣಗಿಸಿ, ಮತ್ತ ಬಳಸಬಹುದು. ಮೆತ್ತಗಿನ ಕಾಟನ್ ಬಟ್ಟೆಯಲ್ಲಿ ತಯಾರಿಸಿರುವ ಮುಖಗವಸೊಂದಕ್ಕೆ ₹ 20 ದರ ನಿಗದಿಪಡಿಸಲಾಗಿದೆ. ಆಸಕ್ತರು ಇದ್ದರೆ ಅವರಿಗೂ ಇದನ್ನು ಕಲಿಸಿಕೊಡಲು ಸಿದ್ಧರಿದ್ದೇವೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಮುಖಗವಸುಗಳನ್ನು ತಯಾರಿಸುವಾಗ ನಾವು ಸ್ವಚ್ಛತೆಗೆ ಹೆಚ್ಚು ಗಮನಕೊಡುತ್ತೇವೆ. ಹೊಲಿಗೆ ಮಾಡುವಾಗಲೂ ಸಹ, ನಿರ್ದಿಷ್ಟ ಅಂತರ ಕಾಪಾಡಿಕೊಂಡು ಕುಳಿತುಕೊಳ್ಳುತ್ತೇವೆ. ಹಗಲಿನಲ್ಲಿ ‘ಚೇತನಾ’ದಲ್ಲಿ ಕುಳಿತು, ರಾತ್ರಿ ಮನೆಯಲ್ಲಿ ಹೀಗೆ ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT